Homeಮುಖಪುಟ’ಕಾಂತಾರ’: ಅವೈಚಾರಿಕ-ಪ್ರತಿಗಾಮಿತನದ ಸಮರ್ಥನೆ ಮತ್ತು ಸಂಸ್ಕೃತಿ-ರಾಜಕಾರಣದ ತಪ್ಪು ಅನ್ವಯಿಕೆ

’ಕಾಂತಾರ’: ಅವೈಚಾರಿಕ-ಪ್ರತಿಗಾಮಿತನದ ಸಮರ್ಥನೆ ಮತ್ತು ಸಂಸ್ಕೃತಿ-ರಾಜಕಾರಣದ ತಪ್ಪು ಅನ್ವಯಿಕೆ

- Advertisement -
- Advertisement -

ಸಿನಿಮಾ ಬಹಳ ಆಕರ್ಷಕ ಕಲಾ ಮಾಧ್ಯಮ. ಹಾಗಾಗಿ ಸಮುದಾಯಗಳ ಮೇಲೆ ಅದರ ಪ್ರಭಾವ ಮತ್ತು ಪರಿಣಾಮ ಕೂಡ ಅಷ್ಟೇ ಗಾಢವಾದದ್ದು. ಸಿನಿಮಾ ನೋಡಿ ಯಾರು ಬದಲಾಗುವುದಿಲ್ಲ ಅಥವಾ ಸ್ಪೂರ್ತಿ ಪಡೆಯುವುದಿಲ್ಲ; ಅದು ಕೇವಲ ಕ್ಷಣಿಕ ಮನರಂಜನೆಗೆ ಮಾತ್ರ; ಸಿನಿಮಾದಲ್ಲಿ ಮನರಂಜನೆ ಬಿಟ್ಟು ಬೇರೆ ಯಾವ ಸಂಗತಿಗಳ ಬಗ್ಗೆಯೂ ಹೆಚ್ಚು ವಿಮರ್ಶೆ ಮಾಡಬಾರದು; ಸಿನಿಮಾವನ್ನ ಸಿನಿಮಾ ಆಗಿ ಮಾತ್ರ ನೋಡಬೇಕು; ಸಿನಿಮಾವೊಂದಕ್ಕೆ ಸಾಂಸ್ಕೃತಿಕ ರಾಜಕಾರಣ, ಸಮುದಾಯಗಳ ನಡುವಿನ ಅಸಮಾನತೆ-ತರತಮಗಳ ಸಮರ್ಥನೆ, ಮಹಿಳಾ ವಿರೋಧಿ ಇತ್ಯಾದಿ ಸಂಗತಿಗಳನ್ನೆಲ್ಲಾ ಅರೋಪಿಸಿ ಮಾತನಾಡುವವರನ್ನ ಅಥವಾ ವಿಮರ್ಶೆ ಮಾಡುವವರನ್ನ, ಇವರದ್ದು ’ಕೂದಲು ಸೀಳಿ ನೋಡುವ ಚಾಳಿ’, ’ಮೊಸರಲ್ಲಿ ಕಲ್ಲು ಹುಡುಕುವುದು’ ಅನ್ನುವ ವಿಶೇಷಣಗಳಿಂದ ಪ್ರಾರಂಭವಾಗಿ ಕೊನೆಗೆ ನಾಡದ್ರೋಹಿ, ದೇಶದ್ರೋಹಿ ವಿಶೇಷಣಗಳವರೆಗೂ ಪ್ರಶಂಸೆ ಮಾಡಲಾಗುತ್ತದೆ.

ನಮ್ಮ ನಡುವೆ ಇರುವ ಅಸಾಧ್ಯ ಜಾತಿ ದೌರ್ಜನ್ಯ, ಸಾಂಸ್ಕೃತಿಕ ಯಜಮಾನಿಕೆ-ದಬ್ಬಾಳಿಕೆ, ಅಸಮಾನತೆ-ತರತಮಗಳೆಲ್ಲವನ್ನೂ ಎಷ್ಟೋ ಬಾರಿ ಬಹಳ ಸಹಜವೆಂಬಂತೆ ತಣ್ಣಗೆ ಒಪ್ಪಿಕೊಂಡು ಬದುಕುತ್ತೇವೆ. ಈ ಮಾನಸಿಕ ಜಡತ್ವಕ್ಕೆ ಈ ಕಲಾ ಪ್ರಕಾರಗಳ ಕೊಡುಗೆ ಗಣನೀಯ ಪ್ರಮಾಣದ್ದಾಗಿದೆ. ಈ ದೇಶದಲ್ಲಿ ಪಾಪ್ಯುಲರ್ ಸಿನಿಮಾಗಳು ಬೆಳೆಸಿದ ಅಭಿರುಚಿ ಬಹಳ ಅಪಾಯಕಾರಿಯಾದದ್ದು ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಇವತ್ತಿನ ರಾಜಕೀಯ ಮತ್ತು ಸಾಂಸ್ಕೃತಿಕ ದಬ್ಬಾಳಿಕೆಯ ಚರ್ಚೆಯ ಹಿನ್ನೆಲೆಯಲ್ಲಿ, ಇಂತಹ ಜನಪ್ರಿಯ ಸಿನಿಮಾಗಳು ನಮ್ಮನ್ನು ಪ್ರಭಾವಿಸಿದ, ಆ ಮೂಲಕ ನಮ್ಮ ತಿಳಿವನ್ನು ರೂಪಿಸಿದ ದಾರಿಯನ್ನು ಹಿಂದಿರುಗಿ ನೋಡಿದರೆ ಗಾಬರಿಯಾಗುತ್ತದೆ. ಒಂದು ಕಾಲಕ್ಕೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸಿನಿಮಾಗಳೆಂದರೆ ಎಲ್ಲಿಲ್ಲದ ಪ್ರೀತಿ ಮತ್ತು ಅಭಿಮಾನ. ಅವರ ’ಶುಭಮಂಗಳ’ ಹೆಣ್ಣಿನ ಸ್ವಾಭಿಮಾನವನ್ನು ಕಟ್ಟಿಕೊಡುವ ಸಿನಿಮಾ ಅಂತ ಕೊಂಡಾಡಿದ್ವಿ. ಇಂದು ಆ ಸಿನಿಮಾವನ್ನು ನೋಡಿದರೆ, ಅದು ಕಟ್ಟಿಕೊಟ್ಟಿದ್ದು ’ದುಡಿಯುವ ಮಹಿಳೆಗೆ ಅಹಂಕಾರ ಹೆಚ್ಚು; ಸ್ವಂತ ಬುದ್ಧಿ, ವಿವೇಚನೆ ಯಾವುದೂ ಇರುವುದಿಲ್ಲ’ ಎಂಬುದೆಂದು ಸ್ಪಷ್ಟವಾಗುತ್ತದೆ! ಇನ್ನು ’ಅಮೃತ ಘಳಿಗೆ’ಯಲ್ಲಿ ಹೆಣ್ಣಿನ ಶೀಲದ ಪಾವಿತ್ರತೆ ಬಗ್ಗೆ ಬೋಧನೆಯಿದೆ. ಅದೇ ಸಿನಿಮಾದಲ್ಲಿ ಬರುವ ’ಹಿಂದೂಸ್ಥಾನವು ಎಂದೂ ಮರೆಯದ’ ಹಾಡಿನಲ್ಲಿ ಪುಟ್ಟಣ್ಣ ಕಣಗಾಲ್ ಅವರ ಸಾಂಸ್ಕೃತಿಕ ರಾಜಕಾರಣವನ್ನು ಗಮನಿಸದೇ ಮುಂದೆ ಹೋಗಿರುವ ಸಾಧ್ಯತೆಯೇ ಹೆಚ್ಚು. ಮತ್ತೊಬ್ಬ ಮೆಚ್ಚಿನ ಸಿನಿಮಾ ನಿರ್ಮಾತೃ ಮಣಿರತ್ನಂ; ಇದು ನನ್ನೊಬ್ಬನಿಗಷ್ಟೇ ಅಲ್ಲ, ಭಾಷೆಯ ಗಡಿ ದಾಟಿ ಸಿನಿಮಾಗಳನ್ನು ಆಸ್ವಾದಿಸುವ ಬಹುತೇಕರಿಗೆ ಈತ ಮೆಚ್ಚಿನ ನಿರ್ದೇಶಕನೇ. ಆದರೆ ಇವರಿಗೂ ಪುಟ್ಟಣ್ಣ ಕಣಗಾಲಿಗೂ ಅಂತ ವ್ಯತ್ಯಾಸಗಳಿಲ್ಲ. ಆದರೆ, ತಾಂತ್ರಿಕ ನೈಪುಣ್ಯತೆ, ಇವರ ಸಿನಿಮಾಗಳಲ್ಲಿನ ಕಲಾವಿದರ ನಟನೆ ಮೈಮರೆಸಿಬುಡುತ್ತದೆ!

ಇಂತಹ ನಿರ್ದೇಶಕರು ನಮ್ಮಲ್ಲಿ ಆಳವಾಗಿ ರೂಢಿಸಿರುವ ಅಭಿರುಚಿಗಳಿಗೆ ವಿಮುಖವಾಗಿ ಭಿನ್ನ ಅಭಿರುಚಿಯ ಸಿನಿಮಾಗಳಿಗೆ ಮುಖಮಾಡುವುದು ಬಹಳ ಸವಾಲಿನ ಕೆಲಸ. ಇದು ಅಕಲಿಕೆಯ ಪ್ರಕ್ರಿಯೆ. ಈ ಅಕಲಿಕೆ ಕೆಲವರಿಗೆ ಬೇಗ ದಕ್ಕುತ್ತದೆ. ಕೆಲವರಿಗೆ ನಿಧಾನ. ಮತ್ತೆ ಕೆಲವರಿಗೆ ಇದು ತಮ್ಮ ಸ್ವಾಬಿಮಾನ/ಅಹಂಗೆ ಧಕ್ಕೆಯಾಗುವ ಸಂಗತಿ. ಇರಲಿ. ಇನ್ನು ಈಗ ಭಾಷೆಯ ಗಡಿದಾಟಿ ಎಲ್ಲರನ್ನೂ ಸಮ್ಮೋಹನಗೊಳಿಸುತ್ತಿರುವ ’ಕಾಂತಾರ’ ಸಿನಿಮಾವನ್ನ ಕೇವಲ ಮನರಂಜನೆಯಾಗಿ ಸ್ವೀಕರಿಸಬೇಕೆ? ಈ ಸಿನಿಮಾದ ದೃಶ್ಯವೈಭವಗಳಿಗೆ ಮನಸೋತು ಇದು ಅಂತರಂಗದಲ್ಲಿ ಬಹಳ ನಾಜೂಕಾಗಿ ಮಾಡುವ ರಾಜಕಾರಣವನ್ನು ನಿರ್ಲಕ್ಷಿಸಬೇಕೆ? ಈ ಸಿನಿಮಾದ ಪ್ರಾರಂಭದಲ್ಲಿ, ಒಬ್ಬ ರಾಜ ತನ್ನ ನೆಮ್ಮದಿಯ ಸಲುವಾಗಿ ಭೂರಹಿತ ತಳ ಸಮುದಾಯದ ಕೃಷಿಕರಿಗೆ ದೈವದ ಆಜ್ಞೆಯಂತೆ ಭೂಮಿಯನ್ನು ದಾನವಾಗಿ ಕೊಡುತ್ತಾನೆ. ನಮಗೆ ನೆನಪಿರುವಂತೆ, ಉಳುವವನೇ ಭೂಮಿಯ ಒಡೆಯ ಎಂದು ನಿಜ ಭೂರಹಿತ ಕೃಷಿಕರಿಗೆ ಭೂಮಿ ದಕ್ಕಿದ್ದು ಯಾವುದೋ ರಾಜನ ಔದಾರ್ಯದಿಂದಲೂ ಅಲ್ಲ ಅಥವಾ ಭೂತ/ದೈವದ ಕೃಪೆಯಿಂದಲೂ ಅಲ್ಲ. ತುಂಬಾ ಆಮೂಲಾಗ್ರವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಅದು ದಕ್ಕಿದ್ದಾದರೂ ರಾಜಕೀಯ ಇಚ್ಛಾಶಕ್ತಿಯಿಂದ ಮತ್ತು ಕಾನೂನಿನ ಮೂಲಕ ಎಂಬುದು ಐತಿಹಾಸಿಕ ಸತ್ಯ. ಇದಕ್ಕೆ ಕಾರಣವಾದ ರಾಜಕೀಯ ಬೆಳವಣಿಗೆ ಮತ್ತು ರಾಜಕಾರಣಿಗಳನ್ನು ’ಕಾಂತಾರ’ ಸಿನಿಮಾ ಮರೆಮಾಚುವ ಉದ್ದೇಶ ಹೊಂದಿದೆಯೇ? ಈ ಅನುಮಾನಕ್ಕೆ ಸಿನಿಮಾ ನಿರ್ದೇಶಕ ಒಂದು ಟಿವಿ ಸಂದರ್ಶನದಲ್ಲಿ ಕಾಂಗ್ರೆಸ್ ರಾಜಕಾರಣಿ ರಾಹುಲ್ ಗಾಂಧಿಯವರ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸುವ ‘No Comments’ ಮಾತು ಮತ್ತಷ್ಟು ಪುಷ್ಟಿ ನೀಡುತ್ತದೆ. (ಅದೇ ಸಂದರ್ಭದಲ್ಲಿ ಸದರಿ ಪ್ರಧಾನಿಯವರ ಬಗ್ಗೆ ಮನಬಿಚ್ಚಿ ಪ್ರಶಂಸಿಸುತ್ತಾರೆ.)

ಇದನ್ನೂ ಓದಿ: ‘ಕಾಂತಾರ’ ದೈವಕ್ಕೂ ‘ಕರ್ಣನ್‌’ ದೈವಕ್ಕೂ ಎಷ್ಟೊಂದು ವ್ಯತ್ಯಾಸ!

ಶೂದ್ರರು ತಿನ್ನುವ ಪ್ರಾಣಿಗಳಿಗೆ ದೈವಗಳನ್ನು ಅರೋಪಿಸಿ ಅವರ ಅನ್ನವನ್ನು ಕಿತ್ತುಕೊಂಡ ಸಾಂಸ್ಕೃತಿಕ ರಾಜಕಾರಣವನ್ನ ನಾವು ನೋಡುತ್ತಾ ಬಂದಿದ್ದೇವೆ. ಬದಲಾದ ರಾಜಕಾರಣದಲ್ಲಿ ಇದು ಅಸಂವಿಧಾನಿಕ ಕಾನೂನು ಕೂಡ ಆಗಿಹೋಗಿರುವುದಕ್ಕೂ ಸಾಕ್ಷಿಯಾಗಿದ್ದೇವೆ. ಈ ಪ್ರಾಣಿಗಳ ಪಟ್ಟಿಗೆ ಕಾಂತಾರ ಸಿನಿಮಾದಲ್ಲಿ ’ಹಂದಿ’ಯನ್ನೂ ಸೇರಿಸಲಾಗಿದೆ. ಇನ್ನೂ ನಿರ್ದೇಶಕರು ಟಿವಿ ಸಂದರ್ಶನ ಒಂದರಲ್ಲಿ ’ಸಿನಿಮಾ ಶೂಟಿಂಗ್ ವೇಳೆ ನಾನು ನನ್ನ ಮನಸ್ಸು ಪರಿಶುದ್ಧವಾಗಿರಬೇಕು ಅಂತ ಮಾಂಸಾಹಾರ ತ್ಯಜಿಸಿದ್ದೆ’ ಅಂತ ಹೇಳಿಕೊಂಡಿದ್ದಾರೆ ಈ ತರದ ಆಚರಣೆ ವೈಯಕ್ತಿಕ ಅಂತಲೂ ಪೋಣಿಸಿದ್ದಾರೆ. ಹೌದು ಅದು ವೈಯಕ್ತಿಕ. ಆದರೆ ಈ ’ಪರಿಶುದ್ಧ’ ಅಂದ್ರೆ ಏನು? ಮಾಂಸಾಹಾರ ಸೇವಿಸುವವರು ಅಶುದ್ಧ ಮನಸ್ಸಿನವರು? ಈ ರೀತಿಯ ಮನಸ್ಥಿತಿಯನ್ನ ಹೇಗೆ ಸ್ವೀಕರಿಸುವುದು? ಸಿನಿಮಾದಲ್ಲಿ ಇದು ವ್ಯಕ್ತವಾಗಿಲ್ಲ ಅಂದಿದ್ದರೆ ಚರ್ಚೆ ಬೇಡ. ಆದರೆ, ಇದೇ ಅಲ್ಲವೇ ಅಲ್ಲಿ ಕೂಡ ಅಭಿವ್ಯಕ್ತವಾಗಿರುವುದು.

ಫ್ಯೂಡಲ್ ಸಮುದಾಯದ ಭೂ ಮಾಲಿಕ ಮತ್ತು ಅವನಲ್ಲಿ ಕೆಲಸ ಮಾಡುವ ತಳ ಸಮುದಾಯದ ನಡುವಿನ ಸಂಘರ್ಷ ಮತ್ತು ತಳ ಸಮುದಾಯದ ವ್ಯಕ್ತಿ ಭೂ ಮಾಲಿಕನ ದಬ್ಬಾಳಿಕೆ ವಿರುದ್ಧ ಸಿಡಿದೇಳುವುದು ಬಹಳ ಒಳ್ಳೆಯ ಕಥಾವಸ್ತುವೆ. ಆದರೆ, ಕಾಡಿನ ಆದಿವಾಸಿಗಳು ಮತ್ತು ಕಾಡಂಚಿನ ನಿವಾಸಿಗಳ ಮೇಲೆ ಪ್ರಭುತ್ವದ ನೀತಿಗಳಿಂದಲೂ ಹೆಚ್ಚಿನ ದೌರ್ಜನ್ಯ ಆಗುತ್ತಿದೆ. ಅಲ್ಲಿ ನೇಮಿಸಲ್ಪಟ್ಟಿರುವ ಪೊಲೀಸ್/ಮಿಲಿಟರಿಯಿಂದ ಇದನ್ನು ಮಾಡಿಸಲಾಗುತ್ತದೆ. ಈ ಸಿನಿಮಾದ ಮೊದಲಾರ್ಧದಲ್ಲಿ ಫಾರೆಸ್ಟ್ ಆಫಿಸರ್ ಪಾತ್ರಧಾರಿ ಕಿಶೋರ್ ಕೂಡ ಕಾಡಿನ ಜನಸಮುದಾಯದ ಸ್ವಾಭಾವಿಕ ಹಕ್ಕುಗಳನ್ನು ನಿರಾಕರಿಸುವಂತಹ ಮತ್ತು ಕಾಡಿನ ಜಾಗವನ್ನು ಅತಿಕ್ರಮಿಸಿದ್ದೀರಿ ಎಂದು ಅವರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುವ ದೃಶ್ಯಗಳ ಮೂಲಕ ಪ್ರಭುತ್ವ ಮತ್ತು ಕಾಡಿನ ಸಮುದಾಯದ ಜನರ ನಡುವಿನ ಸಂಘರ್ಷವನ್ನು ಕಟ್ಟಿಕೊಡಲಾಗಿದೆ. ಆದರೆ ಸಿನಿಮಾದ ಕೊನೆಯ ಹಂತದಲ್ಲಿ ಈ ಪ್ರಭುತ್ವದ ಪ್ರತಿನಿಧಿ ಸಮುದಾಯದ ಪರವಾಗಿ ಬದಲಾಗಿಬಿಡುತ್ತಾನೆ. ಈ ಬದಲಾವಣೆಗೆ ಯಾವುದೇ ತಾರ್ಕಿಕ ಅಥವಾ ಸಾವಯವವೆನಿಸುವ ಘಟನೆಗಳನ್ನೇ ಸಿನಿಮಾದಲ್ಲಿ ನಿರೂಪಿಸಿಲ್ಲ.

ಇನ್ನು ಕಾಂತಾರದಲ್ಲಿ ಮಹಿಳಾ ಪಾತ್ರಗಳನ್ನು ಮತ್ತು ಅವರ ಅಂಗಗಳನ್ನು ಅಣಕಿಸುವುದರ ಮುಖಾಂತರ, ಅಶ್ಲೀಲ ಮಾತುಗಳ ಮೂಲಕ ಅಗ್ಗದ ತಮಾಷೆ ದೃಶ್ಯಗಳನ್ನು ಪೋಣಿಸುವ ಅದೇ ಹಳೇ ಚಾಳಿಯನ್ನು ಮುಂದುವರಿಸಲಾಗಿದೆ. ಇಂತಹವುಗಳನ್ನು ಬಹಳ ಹಿಂದಿನಿಂದಲೂ ’ಮನರಂಜನೆ’ ಎಂದು ಬಹಳ ಹಗುರವಾಗಿ ಸಮರ್ಥಿಸಿಕೊಳ್ಳುತ್ತಾ ಬಂದಿದ್ದೇವೆ. ಹಿಂದಿಯ ಖ್ಯಾತ ನಟಿ ’ಶೆಫಾಲಿ ಶಾ’ ಒಂದು ಸಂದರ್ಶನದಲ್ಲಿ ’ಮಹಿಳೆ ಮೇಲಿನ ಅಸಮಾಧಾನ, ಅಸಹನೆ, ತಾರತಮ್ಯ ಅಥವಾ ದೌರ್ಜನ್ಯದ ಪ್ರಾರಂಭದ ಬಿಂದು ಒಂದು ಹಗುರವಾದ ಕಮೆಂಟ್ ಅಥವಾ ಜೋಕ್ ನಿಂದ ಶುರುವಾಗುತ್ತದೆ.’ ಎಂದು ಹೇಳುತ್ತಾರೆ. ಸಿನಿಮಾ ನಿರ್ದೇಶಕನಿಗೆ ಈ ತರದ ಸೂಕ್ಷ್ಮ ಬಹಳ ಅಗತ್ಯವಾಗಿ ಬೇಕಾಗಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಬೃಹತ್ ಬಜೆಟ್ಟಿನ ’ಪ್ಯಾನ್ ಇಂಡಿಯಾ’ ಸಿನಿಮಾ ಮಾಡಿದ ನಿರ್ದೇಶಕನನ್ನು, “ನಿಮ್ಮ ಸಿನಿಮಾದಲ್ಲಿ ಬರುವ ನಾಯಕನಿಗೆ ಯಾವುದೇ ನೈತಿಕ ಕಟ್ಟುಪಾಡು ಇಲ್ಲ, ನಿಮ್ಮ ಸಿನಿಮಾ ಮುಖಾಂತರ ಸಮುದಾಯಕ್ಕೆ ಯಾವ ಸಂದೇಶ ನೀಡುತ್ತೀರಿ?” ಎಂದು ಕೇಳಿದ ಪ್ರಶ್ನೆಗೆ, ಆ ನಿರ್ದೇಶಕ “ನಾನು ಸಿನಿಮಾ ಮಾಡಲು ಬಂದಿರುವುದು ಮನರಂಜಿಸುವುದಕ್ಕೆ, ಸಂದೇಶ ನೀಡಲು ಅಲ್ಲ. ಹಿಟ್ಲರ್ ಬಗ್ಗೆ ಸಿನಿಮಾ ಮಾಡ್ತಿನಿ ಅಂದ್ರೆ ಯಾವ ಸಂದೇಶ ನೀಡಲು ಸಾಧ್ಯ?” ಅಂತ ಮರುಪ್ರಶ್ನೆ ಮಾಡಿದ್ದರು.

ಒಂದು ಪಕ್ಷ ಕಾಂತಾರ ಸಿನಿಮಾ ಕುರಿತ ಮೇಲೆ ಪ್ರಸ್ತಾಪಿಸಲಾದ ಎಲ್ಲಾ ಅಂಶಗಳನ್ನು ’ಕೂದಲು ಸೀಳಿ ನೋಡುವ ಚಾಳಿ’, ’ಮೊಸರಲ್ಲಿ ಕಲ್ಲು ಹುಡುಕುವುದು’, ’ಪೂರ್ವಾಗ್ರಹದಿಂದ ಹುಟ್ಟಿದ್ದು’ ಎಂದೂ ಪಕ್ಕಕ್ಕೆ ತಳ್ಳಿದರೂ ಪರವಾಗಿಲ್ಲ, ಈ ಸಿನಿಮಾ ಬಿಡುಗಡೆಗೊಂಡ ನಂತರದ ಬೆಳವಣಿಗೆಗಳನ್ನಾದರು ಸೂಕ್ಷ್ಮವಾಗಿ ಗಮನಿಸಿ, ಈ ಸಿನಿಮಾ, ಸಿನಿಮಾದ ನಟ ಕಮ್ ನಿರ್ದೇಶಕ ಮತ್ತು ನಿರ್ಮಾಪಕರ ಹಿಂದಿನ ಅಜೆಂಡಾ ಕೇವಲ ಮನರಂಜನೆ ಮಾತ್ರವೇ ಎಂಬ ಪ್ರಶ್ನೆಯನ್ನಾದರೂ ಕೇಳಿಕೊಳ್ಳಬೇಕಿದೆ. ಸಿನಿಮಾ ಬಿಡುಗಡೆಗೊಂಡ ನಂತರ ಯಾವ ರಾಜಕೀಯ ಪಕ್ಷದ ನಾಯಕರೆಲ್ಲಾ ಗುಂಪಾಗಿ ಸಿನಿಮಾ ನೋಡಲು ಹೋಗುತ್ತಾರೆ; ಯಾವ ರಾಜಕೀಯ ಪಕ್ಷದ ಸ್ಥಳೀಯ ಸಣ್ಣ ಘಟಕದಿಂದ ರಾಷ್ಟ್ರಮಟ್ಟದ ಘಟಕದವರೆಗೂ ಈ ಸಿನಿಮಾದಲ್ಲಿ ತೊಡಗಿಸಿಕೊಂಡವರಿಗೆ ಸನ್ಮಾನ ಪ್ರಶಂಸೆಗಳನ್ನ ಕೊಡಮಾಡಲಾಗುತ್ತಿದೆ; ಸನಾತನ ಹಳವಂಡಗಳನ್ನ ಮಕ್ಕಳ ಪಠ್ಯಪುಸ್ತಕದಲ್ಲಿ ಸೇರಿಸಲು ಪ್ರಯತ್ನಿಸಿದವನೊಬ್ಬ ಈ ಸಿನಿಮಾ ಕುರಿತು ಪುಂಖಾನುಪುಂಖವಾಗಿ ಹೊಗಳಿ ಲೇಖನ ಬರೆಯುತ್ತಾನೆ; ಸಿನಿಮಾದ ನಿರ್ದೇಶಕ ಯಾವ ರಾಜಕೀಯ ಪಕ್ಷದ ನಾಯಕನನ್ನ ಅದ್ಭುತ ಅನ್ನುತ್ತಾನೆ ಮತ್ತು ಯಾವ ರಾಜಕೀಯ ಪಕ್ಷದ ನಾಯಕನ ಬಗ್ಗೆ ’ನೊ ಕಾಮೆಂಟ್ಸ್’ ಅನ್ನುತ್ತಾನೆ, ಯಾವ ತರದ ಶಿಕ್ಷಣದ ಬಗ್ಗೆ ಈ ನಿರ್ದೇಶಕ ಮಾತನಾಡುತ್ತಾನೆ, ಯಾರು ತಿನ್ನುವ ಆಹಾರದ ಬಗ್ಗೆ ಅಶುದ್ಧದ ಮಾತನಾಡುತ್ತಾನೆ, ಎಂಬುದನ್ನೆಲ್ಲಾ ಗಮನಿಸಿದರೆ ಒಂದು ಜನಪ್ರಿಯ ಸಿನಿಮಾದ ಹಿಂದೆಯೂ ಅಡಗಿರುವ ರಾಜಕೀಯ ಕಣ್ಣಿಗೆ ರಾಚಬಹುದು.

ಕೊನೆಗೊಂದಿಷ್ಟು:

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಬರುತ್ತಿರುವ ಅದರಲ್ಲೂ ಬೃಹತ್ ಬಜೆಟ್ಟಿನ ಸಿನಿಮಾಗಳು ವೈಚಾರಿಕತೆಗೆ ವಿರುದ್ಧವಾದ ದಿಕ್ಕಿನಲ್ಲಿ ಚಲಿಸಿ ಕಂದಾಚಾರವನ್ನ ಅಪ್ಪಿಕೊಳ್ಳುವುದನ್ನ ಬಹಳ ನಾಜೂಕಾಗಿ ಕಟ್ಟಿಕೊಡಲಾಗುತ್ತಿದೆ. ಇದು ಮೊದಲೆಲ್ಲಾ ಇಲ್ಲವೇ ಇರಲಿಲ್ಲ ಅಂತಲ್ಲ. ಆದರೆ ಈಗ ಇದು ಪ್ರಮಾಣ ಮತ್ತು ವಿಸ್ತಾರದಲ್ಲಿ ಬೃಹತ್ ಆಗಿ ಆವರಿಸಿದೆ. ಇದನ್ನ ತೆಲುಗಿನ ’ರಾಜಮೌಳಿ’ ನಿರ್ದೇಶನದ ’ಬಾಹುಬಲಿ’ ಸಿನಿಮಾದಿಂದ ಬಹಳ ಸ್ಪಷ್ಟವಾಗಿ ಗುರುತಿಸಬಹುದು. ಅದುವರೆಗೂ ತೆಲುಗಿನ ಫ್ಯೂಡಲ್ ಸಮುದಾಯದ ಜಮೀನ್ದಾರರನ್ನ ಸಿನಿಮಾದ ಹೀರೋ ಮಾಡಿ ಅವರ ಹೆಚ್ಚುಗಾರಿಕೆಯನ್ನೆ ಕಟ್ಟಿಕೊಟ್ಟ ಇಂತಹ ನಿರ್ದೇಶಕರು, ಈಗ ರಾಜಪ್ರಭುತ್ವವನ್ನು ಹೊಗಳಿ ಕೊಂಡಾಡುವ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ನಿರ್ದಿಷ್ಟವಾಗಿ ಈಗ ಹಿಂದೂ ಎಂದು ಗುರುತಿಸಿ ಅಂತಹ ’ರಾಜಪ್ರಭುತ್ವ’ವನ್ನ ಸಂಭ್ರಮಿಸುವ ಸಿನಿಮಾ ಮಾಡುವ ಚಾಳಿ ದೊಡ್ಡದಾಗಿದೆ. ಬಾಹುಬಾಲಿ, ಮಣಿಕರ್ಣಿಕಾ, ಸಾಮ್ರಾಟ್ ಪೃಥ್ವಿರಾಜ್ ಅಥವಾ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಇವುಗಳೆಲ್ಲಾ ಸಾಲುಸಾಲಾಗಿ ಹುಟ್ಟಿದ್ದಕ್ಕೆ ಉತ್ತರ ಬಹಳ ಸರಳವಾಗಿದೆ. ಇವರಿಗೆಲ್ಲಾ ಹಿಂದು ರಾಜರ ಕಥೆ ಹೇಳುವುದಷ್ಟೇ ಉದ್ದೇಶವಲ್ಲ. ಹಿಂದುತ್ವದ ಹೆಸರಲ್ಲಿ ಬ್ರಾಹ್ಮಣ್ಯದ ಮೌಲ್ಯಗಳನ್ನ ಬಹಳ ದೊಡ್ಡ ಪ್ರಮಾಣದಲ್ಲಿ ತುಂಬಲಾಗುತ್ತಿದೆ. ಇದು ಮುಂದೆ ಇನ್ನೂ ಚಿಂತಾಜನಕವಾಗಲಿದೆ. ಈಗ ಬಿಡುಗಡೆಗೆ ಸಿದ್ದವಾಗಿರುವ ’ಆದಿಪುರುಷ್’ ಸಿನಿಮಾದ ಟ್ರೇಲರ್ ನೋಡಿದರೆ ಅದು ಸುಲಭವಾಗಿ ತಿಳಿಯುತ್ತದೆ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

5 COMMENTS

  1. ಉದಾಹರಣೆಗೆ ದೋಆಂಕೆಬಾರಾಹಾತ್ ಕನ್ನಡ ದ ಬಂಗಾರದ ಮನುಷ್ಯ ದಂತಹ ಇತರ ಚಿತ್ರಗಳು ಸಾಮಾಜಿಕ ವಾಗಿ ಬೀರಿದ ದೀರ್ಘಾವಧಿ ಪರಿಣಾಮಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಿನಿಮಾ ವನ್ನು ಸಿನಿಮಾ ದಂತೆ ನೋಡಬೇಕಷ್ಟೇ ಎನ್ನುವವರು ಒಂದೋ ಮೂರ್ಖರಿರಬೇಕು ಇಲ್ಲ ಸಿನಿಕರಿರಬೇಕು ಇಲ್ಲ ಹೊಟ್ಟೆ ತುಂಬಿದ ಅಸಡ್ಡೆಯ ಉಢಾಳ ವಿಮರ್ಷ ಕರಿರಬೇಕು ಅಷ್ಟೇ.ಇಂತಹ ಚಿತ್ರ ನಿರ್ಮಾಣಕ್ಕೆ ಎಲ್ಲಿಂದ. ಹಣ ಹರಿದು ಬಂತು ಎನ್ನುವುದರ ಅನ್ವೇಷಣೆ ನಿರ್ಮಾಣದ ಸಮಾಜೋ ಆರ್ಥಿಕ ರಾಜಕೀಯ ಪರಿಣಾಮ ಗಳ ದುರಾಲೋಚನೆ ಯನ್ನು ಸಂವಿಧಾನದ ಕಲಂ ೫೧(ಎ)(ಹೆಚ್) ವಿಧಿಸುವ ವೈಚಾರಿಕ ಜವಾಬ್ದಾರಿಯನ್ನು ಬದಿಗಿಟ್ಟು ಇಂತಹ ಸಿನಿಮಾಗಳ ವಿಮರ್ಶೆ ಬರೆಯುವುದು ಅಕ್ಷರ ವ್ಯಭಿಚಾರವಾಗಿಬಿಡುವ ಅಪಾಯವಿದೆ.

  2. ತುಂಬಾ ನೈಜ ಹಾಗೂ ಒಳ್ಳೆಯ ವಿರ್ಮಶ್ಯೆ ಪ್ರವಾಹ ದೊಂದಿಗೆ ಹೋಗುವದಕ್ಕಿಂತ ಪ್ರವಾಹದ ವಿರುದ್ಧ ಸತ್ಯವನ್ನು ಮನಗಾಣಿಸುವದು ಈ ಗಳಿಗೆಯ ತುರ್ತು ಅವಶ್ಯಕತೆ ಆಗಿದೆ.

  3. ತುಂಬಾ ಸೂಕ್ತ ವಾದ ವಿಶ್ಲೇಷಣೆ. ನೈಜ ಸತ್ಯವನ್ನು ಹೇಳುವವರು ನಿಮ್ಮಂತವರು ಬೇಕು.

  4. This is the handi work of sanathanis mindset, now they have already poisoned ppl with hindutva but they don’t stop there … this is the extension , in future they destroy our culture and history I am sure

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...