Homeಮುಖಪುಟ‘ಕಾಂತಾರ’ ದೈವಕ್ಕೂ ‘ಕರ್ಣನ್‌’ ದೈವಕ್ಕೂ ಎಷ್ಟೊಂದು ವ್ಯತ್ಯಾಸ!

‘ಕಾಂತಾರ’ ದೈವಕ್ಕೂ ‘ಕರ್ಣನ್‌’ ದೈವಕ್ಕೂ ಎಷ್ಟೊಂದು ವ್ಯತ್ಯಾಸ!

- Advertisement -
- Advertisement -

‘ಕಾಂತಾರ’ ಸಿನಿಮಾ ಕುರಿತ ಚರ್ಚೆ ಮುಂದುವರಿದಿದೆ. ನಟ ಚೇತನ್‌ ಅವರು ಸಿನಿಮಾದಲ್ಲಿ ಬಿಂಬಿತವಾಗಿರುವ ಭೂತಾರಾಧನೆಯನ್ನು ಹಿಂದೂ ಧರ್ಮ ಅಪ್ರಾಪ್ರಿಯೇಟ್ ಮಾಡಿಕೊಳ್ಳುವುದರ ವಿರುದ್ಧ ಮಾತಾಡಿರುವುದು ಚರ್ಚೆಯನ್ನು ಇನ್ನಷ್ಟು ಬೆಳೆಸಿದೆ. ಭೂತಾರಾಧನೆಗೆ ಸಿಕ್ಕಿರುವ ಜನಪ್ರಿಯತೆಯನ್ನು ತನ್ನದೆಂದು ಬಿಂಬಿಸಿಕೊಳ್ಳುವ ಬಹುಸಂಖ್ಯಾತವಾದ ಸಕ್ರಿಯವಾಗಿದೆ.

ಸಿನಿಮಾದಲ್ಲಿ ಬಹಳಷ್ಟು ವೀಕ್ಷಕರಿಗೆ ಸೆಳೆದಿರುವ ತಾಂತ್ರಿಕತೆಯ ಮೆರಗಿನಾಚೆಯ ಅವಾಸ್ತವಿಕ ಹಾಗೂ ಅಪಾಯಕಾರಿ ಸಂಗತಿಗಳು ಗಂಭೀರ ಚರ್ಚೆಯಾಗಬೇಕಿತ್ತು. ಆ ನಿಟ್ಟಿನಲ್ಲಿ ಒಂದೆರಡು ಹೋಲಿಕೆಗಳನ್ನು ನಾವು ಮಾಡಬಹುದು..

ಕಾಂತಾರ ಮತ್ತು ಕರ್ಣನ್

ದೈವವನ್ನು ವೈಚಾರಿಕವಾಗಿಸದೆ ಮೌಢ್ಯವಾಗಿಸಿದ ಹೆಗ್ಗಳಿಕೆ ‘ಕಾಂತಾರ’ ಸಿನಿಮಾಕ್ಕೆ ಸಲ್ಲುತ್ತದೆ. ‘ಕಾಂತಾರ- ಒಂದು ದಂತಕಥೆ’ ಎಂದು ರಿಷಬ್ ಹೇಳಿದ್ದಾರೆ. ಆದರೆ ಇದನ್ನು ಸಾಮಾನ್ಯ ಜನಸಮೂಹ ದಂತಕಥೆಯಾಗಿಯೋ, ಕಾಲ್ಪನಿಕವಾಗಿಯೋ ಗ್ರಹಿಸುವುದಕ್ಕಿಂತ ವಾಸ್ತವವೆಂಬಂತೆ ನಂಬಿಬಿಡುವ ಹಾಗೂ ಹಿಂದುತ್ವವಾದಿಗಳು ತಮ್ಮ ರಾಜಕಾರಣಕ್ಕೆ ಬಳಸಿಕೊಳ್ಳುವ ಅಪಾಯವಿರುತ್ತದೆ. ಸಂಸ್ಕೃತಿಯ ನೆಪದಲ್ಲಿ ದೃಶ್ಯ ಮಾಧ್ಯಮವೊಂದು ಮೌಢ್ಯವನ್ನು ರಾರಾಜಿಸುವುದು ಆತಂಕದ ಸಂಗತಿ.

ಸಾಂಸ್ಕೃತಿಕ ಪರಿಕರಗಳನ್ನು ದೃಶ್ಯಮಾಧ್ಯಮಕ್ಕೆ ಒಳಪಡಿಸಿದಾಗ ಕಲಾತ್ಮಕತೆ ಹೆಚ್ಚುತ್ತದೆ ಎಂಬುದು ನೂರಕ್ಕೆ ನೂರರಷ್ಟು ನಿಜ. ಆದರೆ ಆ ಸಾಂಸ್ಕೃತಿಕ ಕಲಾತ್ಮಕತೆ ಮೌಢ್ಯದ ರೂಪವಾಗಿರಬಾರದು‌. ಅದು ರೂಪಕವಾಗಿ ಹೊಮ್ಮಬೇಕು. ಆಗ ಮಾತ್ರ ವಿಶಿಷ್ಟ ಅನುಭೂತಿಯನ್ನು ಕಲಾ ಮಾಧ್ಯಮವೊಂದು ನೀಡಬಲ್ಲದು‌.

ಇದನ್ನೂ ಓದಿರಿ: ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

‘ಕರ್ಣನ್’ ಸಿನಿಮಾವನ್ನು ಉದಾಹರಣೆಯಾಗಿ ನೋಡೋಣ. ನಿರ್ದೇಶಕ ಮಾರಿ ಸೆಲ್ವರಾಜ್ ಅತ್ಯಂತ ಢಾಳಾಗಿ ಸಾಂಸ್ಕೃತಿಕ ಪರಿಕರಗಳನ್ನು ಇಲ್ಲಿ ಬಳಸಿದ್ದಾರೆ. ಬಸ್ ನಿಲ್ಲದ ಕಾರಣಕ್ಕೆ ಬಾಲಕಿ ರಸ್ತೆಯಲ್ಲಿ ಒದ್ದಾಡಿ ಸಾಯುತ್ತಾಳೆ. ಆ ಮಗು ದೈವದ ರೂಪವಾಗಿ ಬದಲಾಗುತ್ತದೆ. ಸಿನಿಮಾ ಮುಗಿಯುವವರೆಗೂ ಅಮೂರ್ತವಾಗಿ ಆ ದೈವ ಬಂದು ಹೋಗುತ್ತಿರುತ್ತದೆ. ಆ ದೈವ ರೂಪಿ ಮಗು ಬರುವ ದೃಶ್ಯಗಳೆಲ್ಲ ತೀವ್ರತರನಾದ ಅನುಭೂತಿಯನ್ನು ಪ್ರೇಕ್ಷಕರಿಗೆ ನೀಡುತ್ತವೆ.

ಕಲಾಮಾಧ್ಯಮವೊಂದು ಮಾತುಗಳಲ್ಲಿ ವ್ಯಕ್ತಪಡಿಸಲಾಗದ, ಅಮೂರ್ತ ಅನುಭವವನ್ನು ನೀಡುವುದನ್ನು ‘ಕರ್ಣನ್’ನಲ್ಲಿ ಕಾಣಬಹುದು. ಆ ಶೋಷಿತ ಸಮುದಾಯದ ನೋವು, ಅಸಹನೆ, ಆಕ್ರೋಶಗಳ ಪ್ರತಿರೂಪವಾಗುವ ಆ ಮಗು ನಮ್ಮನ್ನು ಕೊನೆಯವರೆಗೂ ಕಾಡುತ್ತದೆ. ಒಂದು ವೇಳೆ ಈ ಮಗುವೇ ಕರ್ಣನ್ ಮೈಮೇಲೆ ಬಂದು ಪೊಲೀಸರನ್ನು ಕೊಚ್ಚಿ ಹಾಕಿದ್ದರೆ, ಮಾರಿ ಸೆಲ್ವರಾಜ್ ಮೌಢ್ಯವನ್ನು ಬಿತ್ತಿದ್ದಾರೆಂಬ ನಿರ್ಧಾರಕ್ಕೆ ಬರಬಹುದಿತ್ತು. ಆದರೆ ಅಭಿಜಾತ ನಿರ್ದೇಶಕನಿಗೆ ಕಲಾತ್ಮಕತೆ ಮತ್ತು ಮೌಢ್ಯದ ನಡುವಿನ ಗೆರೆಗಳು ತಿಳಿದಿರುತ್ತವೆ‌. ‘ಕಾಂತಾರ’ ದೈವಕ್ಕೂ, ‘ಕರ್ಣನ್’ ದೈವಕ್ಕೂ ಇರುವ ವ್ಯತ್ಯಾಸವಿದು.

ಒಂದು ಪರಿಸರದ ಸಾಂಸ್ಕೃತಿಕ ಕುರುಹುಗಳು ವೈಚಾರಿಕತೆ ಹಾಗೂ ರೂಪಕತೆಯ ಸೌಂದರ್ಯವಾಗಬೇಕೇ ಹೊರತು, ಮೌಢ್ಯವಾಗಬಾರದು ಅಲ್ಲವೆ?

‘ಕಾಂತಾರ’ ಮತ್ತು ‘ಪಡ’

ಆದಿವಾಸಿಗಳ ಭೂಮಿಯ ಹಕ್ಕಿನ ಕುರಿತು ಬಂದ ಸಿನಿಮಾಗಳ ಪೈಕಿ ಮಲಯಾಳಂನ ‘ಪಡ’ ವಿಶಿಷ್ಟವಾದದ್ದು. ಕೆ.ಎಂ.ಕಮಲ್‌ ನಿರ್ದೇಶನದ ‘ಪಡ’ ನಿಜ ಕಥನಯನ್ನು ಆರಾಧರಿಸಿದೆ, ‘ಪ್ರಭುತ್ವ’ ಹಾಗೂ ‘ಆದಿವಾಸಿ’ ನಡುವಿನ ಸಂಘರ್ಷವನ್ನು ಚಿತ್ರಿಸಿದೆ. ದೀರ್ಘಕಾಲ ಅಧಿಕಾರದಲ್ಲಿರುವ ಮೇಲ್ಜಾತಿ ಪ್ರಣೀತ ಎಡ-ಬಲ ಪಕ್ಷಗಳೆರಡೂ ಆದಿವಾಸಿಗಳನ್ನು ನಿರ್ಲಕ್ಷಿಸಿದ್ದನ್ನು, ಒಕ್ಕಲೆಬ್ಬಿಸಿದ್ದನ್ನು, ನಿರ್ಗತಿಕರನ್ನಾಗಿಸಿ ಕೊನೆಗೆ ಪುನವರ್ಸತಿಗೆ ದೂಡಿದ್ದನ್ನು ‘ಪಡ’ ಮಾತನಾಡುತ್ತದೆ.

ಆದಿವಾಸಿ ಭೂ ಕಾಯಿದೆ 1975ರ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕೆಂಬ ಹೋರಾಟ 1996ರಲ್ಲಿ ಇ.ಕೆ.ನಾಯನಾರ್ ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌‌ (ಎಲ್‌ಡಿಎಫ್‌) ಸರ್ಕಾರದ ವಿರುದ್ಧ ನಡೆದಿತ್ತು. ಅಕ್ಟೋಬರ್ 4, 1996ರಂದು, ಆಗಿನ ಪಾಲಕ್ಕಾಡ್ ಜಿಲ್ಲಾಧಿಕಾರಿಯಾಗಿದ್ದ ಡಬ್ಲ್ಯುಆರ್ ರೆಡ್ಡಿ ಅವರನ್ನು ನಾಲ್ವರು ಆದಿವಾಸಿ ಹಕ್ಕುಗಳ ಕಾರ್ಯಕರ್ತರು ಒತ್ತೆಯಾಳಾಗಿ ಇರಿಸಿಕೊಂಡರು. ಸಾಂವಿಧಾನಿಕ ಹೋರಾಟಕ್ಕೆ ಪ್ರಭುತ್ವ ಯಾವುದೇ ಬೆಲೆ ಕೊಡದಿದ್ದಾಗ, ನೈಜ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು ಹಿಂಸೆಯ ಮಾರ್ಗವನ್ನು ಹೋರಾಟಗಾರರು ಹಿಡಿಯುತ್ತಾರೆ. ಆದರೆ ಅದು ಹಿಂಸೆಯನ್ನು ಪ್ರಚೋದಿಸುವ ಹೋರಾಟವಾಗಿರಲಿಲ್ಲ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿರಿ: ಸಿನಿಮಾ ವಿಮರ್ಶೆ: ಆದಿವಾಸಿ ಭೂ ಹಕ್ಕಿನ ನಿಜ ಕಥನ ‘ಪಡ’

‘ಜನರ ಕೂಗು ಕೇಳದ ಸರ್ಕಾರ ನಿಜವಾದ ಭಯೋತ್ಪಾದನೆ ಮಾಡುತ್ತಿದೆ’ ಎನ್ನುವ ಇವರು ‘ಅಯ್ಯಂಕಾಲಿ ಪಡ’ದ ಸದಸ್ಯರೆಂದು ಹೇಳಿಕೊಳ್ಳುತ್ತಾರೆ. “ಆದಿವಾಸಿಗಳ ಭೂಮಿ ಕಾಯ್ದೆ ಬಂದ ನಂತರ ಎಡ- ಬಲ ಪಕ್ಷಗಳೆರಡೂ ಆಡಳಿತ ನಡೆಸಿವೆ. ಆದಿವಾಸಿಗಳನ್ನು ಶೋಷಿಸಿವೆ. ಮಿಲಿಯನ್‌ಗಟ್ಟಲೆ ಹಣವನ್ನು ಆದಿವಾಸಿಗಳಿಗೆ ಮೀಸಲಿಡುತ್ತಿದ್ದರೂ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ” ಎನ್ನುತ್ತಾರೆ.

ಒತ್ತೆಯಾಳಾಗಿರುವ ಅಧಿಕಾರಿಗೆ ಹೇಳುತ್ತಾರೆ: “ಆದಿವಾಸಿಗಳು ನಿಜವಾದ ಒತ್ತೆಯಾಳುಗಳು. ಅವರನ್ನು ನಿರಾಶ್ರಿತರನ್ನಾಗಿ ಮಾಡಲಾಗಿದೆ. ಅವರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಜಾಪ್ರಭುತ್ವ ಕೆಲವರಿಗೆ ಮಾತ್ರ ಮೀಸಲಾಗಿದೆ. ಇದನ್ನು ನಾವು ಹೇಳಲು ಬಯಸುತ್ತಿದ್ದೇವೆ”.

ಹೀಗೆ ಕ್ರಾಂತಿಯ ಮಾರ್ಗ ಹಿಡಿದವರ ಒತ್ತಾಯಗಳನ್ನು ಸರ್ಕಾರ ಒಪ್ಪಿತೆ? ಆದಿವಾಸಿಗಳ ಸ್ಥಿತಿ ಬದಲಾಯಿತೆ? ಇಲ್ಲ. ಆದಿವಾಸಿಗಳ ನಿತ್ಯದ ನೋವು ಹಾಗೂ ಪ್ರಭುತ್ವ ನೀಡುವ ಭೀಕರ ಪ್ರಕ್ರಿಯೆಗಳಿಗೆ ಅಂತ್ಯವಿಲ್ಲವೇ ಎಂಬ ಪ್ರಶ್ನೆಗಳನ್ನು ಪ್ರೇಕ್ಷಕರ ಮುಂದಿಡುತ್ತದೆ ‘ಪಡ’. “ಓ ಭೂಮಿಯೇ, ಈ ಕಾಡಿನ ಅಳಲು ಕೇಳಿದೆಯಾ? ನೀನು ನೋಡಿದೆಯಾ ಅವರು ನಗುತ್ತಿದ್ದಾರೆ” ಎಂಬ ಹಾಡಿನ ಸಾಲುಗಳು ಪ್ರಭುತ್ವವನ್ನು ಹಾಗೂ ಪಾಲಿಸಿಗಳನ್ನು ಉದ್ದೇಶಿಸುತ್ತವೆ.

ನ್ಯಾಯ ದೊರಕಿಸುವುದಾಗಿ ನಂಬಿಸಿದ ಸರ್ಕಾರ, ಆದಿವಾಸಿ ಹೋರಾಟಗಾರರನ್ನು ಜೈಲಿಗೆ ತಳ್ಳುತ್ತದೆ. ಸರ್ಕಾರದ ಭರವಸೆಯನ್ನು ನಂಬಿ ತಲೆಮರಿಸಿಕೊಳ್ಳಬೇಕಾದ ಸ್ಥಿತಿಗೆ ಹೋರಾಟಗಾರರು ಹೋಗುತ್ತಾರೆ. ಇದು ವಾಸ್ತವ. ಪ್ರಭುತ್ವ ಯೋಚಿಸುವ ರೀತಿ ಇದುವೇ ಆಗಿದೆ. ಆದರೆ ‘ಕಾಂತಾರ’ದಲ್ಲಿ ವಾಸ್ತವಕ್ಕೆ ವಿರುದ್ಧವಾದ, ಪ್ರಭುತ್ವವನ್ನು ಓಲೈಸುವ ನಿರೂಪಣೆಯನ್ನು ಕಟ್ಟಿಕೊಡಲಾಗಿದೆ.

ಇದನ್ನೂ ಓದಿರಿ: ‘ಕಾಂತಾರ’ ವಿಮರ್ಶೆ: ಭೂತಾರಾಧನೆಯ ಆಚೆ-ಈಚೆ ಒಂದಿಷ್ಟು…

ಕಾಂತಾರ ಸಿನಿಮಾದ ಮೊದಲಾರ್ಧದಲ್ಲಿ ಹಾರಾಟ, ಚೀರಾಟ ನಡೆಸುವ ಅರಣ್ಯಾಧಿಕಾರಿ, ಕಾಡಂಚಿನ ಜನರ ಬದುಕನ್ನು ಅಣಕಿಸುತ್ತಾನೆ. ಅವರ ಬದುಕು, ಆಚರಣೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾನೆ. ಆದರೆ ಸಿನಿಮಾದ ಕೊನೆಕ್ಷಣದಲ್ಲಿ ಅಸ್ವಾಭಾವಿಕವಾಗಿ ಬದಲಾಗುತ್ತಾನೆ. ನೊಂದ ಸಮುದಾಯದ ಭೂಮಿ ಹಕ್ಕಿನ ಪರ ನಿಂತು ಮಾತನಾಡುತ್ತಾನೆ. ದಲಿತ ಯುವತಿಗೆ, “ಇನ್‌ಪ್ಲೂಯೆನ್ಸ್‌ ಮೇಲೆ ಬಂದಿದ್ದೀಯ” ಎಂದು ಅಣಕಿಸುವ, “ನೀನು ಮಾಡಿರುವ ಸರ್ವಿಸ್‌ಗೆ ಪ್ರೊಮೊಷನ್‌ ಕೊಡಲು ಆಗಲ್ಲ, ಸೆಸ್ಪೆಂಡ್ ಮಾಡಬಹುದು” ಎಂದು  ಅಶ್ಲೀಲವಾಗಿ ನಿಂದಿಸುವ ಅಧಿಕಾರಿ ಕೊನೆಯಲ್ಲಿ ಸಂವೇದನಾಶೀಲನಾಗಿಬಿಡುತ್ತಾನೆ. ಪ್ರಭುತ್ವವೇ ಆದಿವಾಸಿಗಳನ್ನು ಒಕ್ಕಲೆಬ್ಬಿಸುವಾಗ, ಇಲ್ಲಿ ಸರ್ಕಾರದ ಪ್ರತಿನಿಧಿಯೊಬ್ಬ ಆದಿವಾಸಿಗಳ ಪರ ನಿಲ್ಲುತ್ತಾನೆ ಎಂಬ ನಿರೂಪಣೆಯೇ ಕುಚೋದ್ಯದ ಸಂಗತಿ. ಕೊನೆಯಲ್ಲಿ ದೈವವು ಅಧಿಕಾರಿ ಮತ್ತು ನೊಂದ ಜನರ ನಡುವೆ ಸಾಮರಸ್ಯ ತರುವ ಯತ್ನ ಮಾಡುತ್ತದೆ. ನಿರ್ದೇಶಕ ರಿಷಬ್‌ ಶೆಟ್ಟಿ ಯಾವ ಸಂದೇಶವನ್ನು ಇಲ್ಲಿ ನೀಡುತ್ತಿದ್ದಾರೆಂಬುದನ್ನು ಗಮನಿಸಬೇಕು. ಇಂತಹ ಅನೇಕ ಅಸೂಕ್ಷ್ಮಗಳು ‘ಕಾಂತಾರ’ ಸಿನಿಮಾಗಳಲ್ಲಿ ಕಾಣುತ್ತವೆ. ಆದರೆ ಭೂತಾರಾಧನೆಯ ಆರ್ಭಟದಲ್ಲಿ ಈ ಪ್ರಶ್ನೆಗಳೆಲ್ಲ ಗೌಣವಾಗಿರುವುದು ವಿಷಾದದ ಸಂಗತಿ.

ಒಬ್ಬ ನಿರ್ದೇಶಕನಿಗೆ ಒಂದು ಕಲಾಮಾಧ್ಯಮದ ಬಗ್ಗೆ ಯಾವ ಮಟ್ಟದ ಗ್ರಹಿಕೆ ಇರುತ್ತದೆ ಎಂಬುದು ಈ ಎರಡು ನಿದರ್ಶನಗಳಿಂದ ಸ್ಪಷ್ಟವಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ನಿಮ್ಮ ನಕ್ಸಲ್ ಪರ ಚಿಂತನೆಗಳು ಭಾರತಕ್ಕೆ ಅಪಾಯಕಾರಿ. ನಗರ ನಕ್ಸಲ್ ಗಳಾದ ನೀವುಗಳು ಭಾರತದ ಸಮಾಜಕ್ಕೆ ಕಾಂಡಕೊರಕಗಳು.ನಿಮ್ಮನ್ನು ನಿಗ್ರಹಿಸದಿದ್ದರೇ ನೀವು ಭಾರತವನ್ನು ಚೀನಾ ಮತ್ತು ಪಾಕಿಸ್ತಾನಕ್ಕೆ ಮಾರಿಕೊಂಡು ಬಿಡುತ್ತೀರಿ. ಛೀ ದೇಶದ್ರೋಹಿ ನಾಯಿಗಳೇ ಭಾರತ ಬಿಟ್ಟು ತೊಲಗಿ.

  2. ಏನಪ್ಪ ರಾಜ, ದೈವವು ತಾನಾರಿಸಿಕೊಂಡ ಮನುಷ್ಯನ ಮೂಲಕ ಮಾತನಾಡೋದು ಮೌಢ್ಯತೆ ಎಂದಾದರೆ ಸತ್ತುಹೋದ ಮಗು ಅಮೂರ್ತವಾಗಿ ಕಾಣಿಸಿಕೊಳ್ಳೋದು ಮೌಢ್ಯವೇ. ನಿನ್ನದೇ ವಾದದ ಪ್ರಕಾರ ನೋಡುವುದಾದರೆ ಅಮೂರ್ತವೋ ಮೂರ್ತವೋ ದೈವವಾಗಲೀ, ಮನುಷ್ಯನ ಆತ್ಮವಾಗಲೀ ನಮ್ಮ ಬರಿಗಣ್ಣಿಗೆ ಕಾಣಿಸದ, ವಿಜ್ಞಾನದ ಚೌಕಟ್ಟಿನಲ್ಲಿ ನಿರೂಪಿಸಲಾಗದ ವಿಚಾರಗಳೇ. ಕೆಲವರ ಪ್ರಕಾರ ಕಾಲ್ಪನಿಕ ಕೂಡ. ಹಾಗಾದಮೇಲೆ ಒಂದು ನಿಜ ಇನ್ನೊಂದು ಮೌಢ್ಯತೆ ಅಂತ ಹೇಗೆ ಹೇಳ್ತೀಯ? ಕರ್ಣನ್ ದೈವವು ಕಾಂತಾರದ ದೈವವು ಒಂದೇ ಆಗಬೇಕಿಲ್ಲವಲ್ಲ! ಕಾಂತಾರಾದ ಮುಖ್ಯ ಅಂಶವೇ ಭೂತಕೋಲ. ಅದನ್ನು ನಂಬುವ ಹಾಗೂ ಆಚರಿಸುವ ಜನರು ಅವರ ದೈವವನ್ನು ಕೋಲದ ಆರಾಧಕನಲ್ಲಿ ಕಾಣ್ತಾರೆ ಅಂದರೆ ಅಲ್ಲಿಗೆ ಅವರ ದೈವವನ್ನು ಅವರು ಮೂರ್ತವಾಗೇ ನೋಡಲು ಇಷ್ಟಪಡುತ್ತಾರೆ ಅಂತಲ್ವ? ಅದು ನಮಗೆ ಮೌಢ್ಯದಂತೆ ಕಾಣಬಹುದು ಆದರೆ ಅವರ ಪಾಲಿಗೆ ಅದೇ ಸತ್ಯ. ಒಂದು ಕಡೆ ಕಾಡಿನ ಜನರ ಹಕ್ಕುಗಳ ಬಗ್ಗೆ ಮಾತಾಡೋ ನಿಮಗೆ ಇನ್ನೊಂದೆಡೆ ಅವರ ನಂಬಿಕೆಯನ್ನ ಅಲ್ಲಗಳೆಯೋಕೆ ನಾಚಿಕೆ ಆಗಬೇಕು. ಅಷ್ಟಕ್ಕೂ ಕಾಂತಾರದಲ್ಲಿ ತೋರಿಸಿರುವ ಕಾಡಂಚಿನ ಜನರ ಪರಿಸ್ಥತಿ, ನಂಬಿಕೆಗಳು, ಹೋರಾಟ ತಮಿಳು ನಾಡಿನ, ಕೇರಳದ ಆದಿವಾಸಿಗಳಂಥದ್ದೇ ಆಗಿರಬೇಕಿಲ್ಲ. ಹಾಗೆಯೇ ಪ್ರಭುತ್ವ ಹಾಗೂ ಅದಕ್ಕೆ ಕೆಲಸ ಮಾಡುವವರು ಸದಾ ಜನ ವಿರೋಧಿಗಳಾಗಿರೋದಿಲ್ಲ, ಆದಿವಾಸಿಗಳನ್ನ ಒಕ್ಕಲೆಬ್ಬಿಸುವ ಉದ್ದೇಶವನ್ನೇ ಇಟ್ಟುಕೊಂಡಿರುವುದಿಲ್ಲ. ಕಾಂತಾರದ ಅರಣ್ಯಾಧಿಕಾರಿಯ ಮೊದಮೊದಲಿನ ಸಿಟ್ಟು ಸಮಂಜಸವೇ. ಆದಿವಾಸಿಗಳಾದ ಮಾತ್ರಕ್ಕೆ ಅತಿಯಾಗಿ ಬೇಟೆಗಳನ್ನಾಡಿ ಕಾಡು ಪ್ರಾಣಿಗಳನ್ನು ಅಳಿವಿನಂಚಿಗೆ ತಳ್ಳಬೇಕಾ? ಮರಗಳನ್ನೆಲ್ಲಾ ಕತ್ತರಿಸಿ ಕಾಡನ್ನ ನಾಶ ಮಾಡಬೇಕಾ? ಆಗ ಅವರು ಕಾಡಿನ ಜನ ಹೇಗಾಗ್ತಾರೆ? ಚಿತ್ರದಲ್ಲಿ ಬರುವ ಅರಣ್ಯಾಧಿಕಾರಿ ಬದಲಾಗ್ತಾನೆ ಅನ್ನೋದು ಕಥೆಗಾರನ/ ನಿರ್ದೇಶಕನ ಕಲ್ಪನೆ. ಹಾಗಾಗಲು ಸಾಧ್ಯವೇ ಇಲ್ಲ ಅಂತ ಹೇಗೆ ಹೇಳತೀಯ? ಹಾಗಾದರೆ ಬರೋ 99% ಚಿತ್ರಗಳೆಲ್ಲಾ ಡೋಂಗಿಯೇ. ಇನ್ನು ಮುಂದೆ ಸಿನೆಮಾ ನೋಡೋದನ್ನೇ ಬಿಟ್ಟುಬಿಡು. ಬದಲಾವಣೆ, ಅವಲೋಕನ ಅನ್ನೋದು ಮನುಜನಲ್ಲಿ ಕ್ಷಣಮಾತ್ರದಲ್ಲಿಯೂ ನಡೆಯಬಹುದಾದ ವಿಷಯ. ಅದಕ್ಕೇ ಹೇಳೋದು ಎರಡು ಬೇರೆಯ ವಿಚಾರಗಳನ್ನ ಒಂದೇ ತಕ್ಕಡಿಯಲ್ಲಿ ತೂಗಬಾರದು ಅಂತ. ನಿಮ್ಮ ಈ ಕುಚೋದ್ಯಗಳಿಗೆ ಕರ್ನಾಟಕದಲ್ಲಿ ಯಾರೂ ಸೊಪ್ಪು ಹಾಕಲ್ಲ. ನಾವು ಉಸಿರಿರೋವರೆಗೂ ಭಾರತೀಯರು ಅಂತ ನಂಬೋ ಕನ್ನಡಿಗರು ಹಾಗೂ ಧರ್ಮದ ಪಾಲಕರು. ಅದನ್ನ ನಿನ್ನಂಥೋರು ಏನು ಕುತಂತ್ರ ಮಾಡಿದರೂ ಬದಲಾಯಿಸಲು ಸಾಧ್ಯವಿಲ್ಲ. ಸುಮ್ನೆ ಗಂಟೂ ಮೂಟೆ ಕಟ್ಟಿಕೊಂಡು ನಿನ್ನ ನೆಚ್ಚಿನ ತಮಿಳು ನಾಡಿಗೋ ಕೇರಳಕ್ಕೋ ಹೊರಡು. ಅಲ್ಲಿ ಈ ನಿನ್ನ ಹಿಂದೂ ದ್ವೇಷಕ್ಕೆ ಸನ್ಮಾನ ಸಿಗಬಹುದು. ಇಲ್ಲಿ ಅದೆಲ್ಲಾ ನಡೆಯಲ್ಲ!

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...