Homeಕರ್ನಾಟಕಕರ್ನಾಟಕ ಬಜೆಟ್ 2021-22 ಗಾಳಿಯಲ್ಲಿ ಕಟ್ಟಿದ ಗೋಪುರ!: ಪ್ರೊ. ಟಿ ಆರ್ ಚಂದ್ರಶೇಖರ್

ಕರ್ನಾಟಕ ಬಜೆಟ್ 2021-22 ಗಾಳಿಯಲ್ಲಿ ಕಟ್ಟಿದ ಗೋಪುರ!: ಪ್ರೊ. ಟಿ ಆರ್ ಚಂದ್ರಶೇಖರ್

- Advertisement -
- Advertisement -

ಕರ್ನಾಟಕವು ಇಂದು ಎರಡು ರೀತಿಯ ಪ್ಯಾಂಡಮಿಕ್‌ಗಳನ್ನು ಎದುರಿಸುತ್ತಿದೆ. ಒಂದು: ಕೋವಿಡ್ 19. ಎರಡು: ಒಕ್ಕೂಟ(ಭಾರತ) ಸರ್ಕಾರದ ಮಲತಾಯಿ ಧೋರಣೆ. ಒಂದು ಜಾಗತಿಕ ಮತ್ತು ಪ್ರಕೃತಿ ನಿರ್ಮಿತ ವಿಕೋಪ. ಎರಡನೆಯದು ಒಕ್ಕೂಟ ಸರ್ಕಾರವು ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ. ಈ ಎರಡೂ ಪ್ಯಾಂಡಮಿಕ್‌ಗಳಿಂದಾಗಿ 2020-21 ಮತ್ತು 2021-22ರಲ್ಲಿ ನಮ್ಮ ಆರ್ಥಿಕತೆಯು ಇನ್ನಿಲ್ಲದ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಕೋವಿಡ್ 19ರಿಂದಾಗಿ ನಮ್ಮ ಆರ್ಥಿಕತೆ ನೆಲಕಚ್ಚುವಂತಾಯಿತು. ಇದರಿಂದಾಗಿ 2019-20ರಿಂದ 2020-21ರಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನವು ರೂ.18.05 ಲಕ್ಷ ಕೋಟಿಯಿಂದ ರೂ.17.02 ಲಕ್ಷ ಕೋಟಿಗೆ ಕುಸಿಯುವಂತಾಗಿದೆ (ಶೇ. 5.71 ಕುಸಿತ). ಕರ್ನಾಟಕಕ್ಕೆ 2018-19ರಲ್ಲಿ ಒಕ್ಕೂಟ ಸರ್ಕಾರದ ತೆರಿಗೆ ರಾಶಿಯಿಂದ ದೊರೆತ ಮೊತ್ತ ರೂ.35894 ಕೋಟಿ. ಆದರೆ 2019-20ರಲ್ಲಿ ದೊರೆತ ಮೊತ್ತ ರೂ.30919 ಕೋಟಿ. ಇದು 2020-21ರಲ್ಲಿ ಪರಿಷ್ಕೃತ ಅಂದಾಜಿನ ಪ್ರಕಾರ ರೂ. 20053 ಕೋಟಿಯಾಗಿದೆ. ಪ್ರಸ್ತುತ ವರ್ಷದ(2021-22) ಬಜೆಟ್ ಅಂದಾಜಿನಲ್ಲಿ ಇದು ರೂ. 24274 ಕೋಟಿಯಾಗಿದೆ. ಇದೇ ರೀತಿಯಲ್ಲಿ ಕೇಂದ್ರವು ರಾಜ್ಯಕ್ಕೆ ನೀಡುವ ಸಹಾಯಾನುದಾನ 2020-21ರಲ್ಲಿ ರೂ.14144 ಕೋಟಿಯಷ್ಟಾಗಿದ್ದರೆ 2021-22ರಲ್ಲಿ ಇದು ರೂ.15537 ಕೋಟಿಯಾಗಿದೆ.

ಅಂದರೆ ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ 2018-19ರಿಂದ 2019-20ರಲ್ಲಿ ಒಕ್ಕೂಟದ ವರ್ಗಾವಣೆಯಲ್ಲಿನ ಕಡಿತ ರೂ. 4975 ಕೋಟಿ ಮತ್ತು 2019-20 ರಿಂದ 2020-21ರ ನಡುವೆ ಉಂಟಾದ ಕಡಿತ ರೂ. 10866 ಕೋಟಿ. ಇದೇ ರೀತಿಯಲ್ಲಿ ಸಹಾಯಾನುದಾನ 2019-20ರಲ್ಲಿ ರೂ. 19839 ಕೋಟಿಯಷ್ಟಿದ್ದರೆ 2021-22ರಲ್ಲಿ ಇದರ ಮೊತ್ತ ರೂ. 15537 ಕೋಟಿ. ಇಲ್ಲಿನ ಕಡಿತ ರೂ. 4445 ಕೋಟಿ. ಈ ರೀತಿಯಲ್ಲಿ ಒಕ್ಕೂಟ(ಭಾರತ) ಸರ್ಕಾರದ ಮಲತಾಯಿ ಧೋರಣೆಯನ್ನು ರಾಜ್ಯದ ದೃಷ್ಟಿಯಿಂದ ಪ್ಯಾಂಡಮಿಕ್ ಎನ್ನದೆ ಮತ್ತೇನನ್ನಬೇಕು?

PC : Money9

ಒಂದು ಬಜೆಟ್ಟಿನ ಮೌಲ್ಯಮಾಪನದ ಮುಖ್ಯ ಮಾನದಂಡವೆಂದರೆ ಬಜೆಟ್ಟಿನ ಗಾತ್ರ. ಕರ್ನಾಟಕದ ಬಜೆಟ್ಟಿನಲ್ಲಿನ ಒಟ್ಟು ವೆಚ್ಚ 2020-21ರಲ್ಲಿ ರೂ.2.37 ಲಕ್ಷ ಕೋಟಿಯಷ್ಟಿದ್ದುದು 2021-22 ರಲ್ಲಿ ಇದು ರೂ.2.46 ಲಕ್ಷ ಕೋಟಿಗೇರಿದೆ. ಇಲ್ಲಿನ ಏರಿಕೆ ಪ್ರಮಾಣವು ಕೇವಲ ಶೇ.3.78. ಇಷ್ಟು ಏರಿಕೆಯಿಂದ ಯಾವ ಪ್ರಮಾಣದ ಆರ್ಥಿಕ ಪುನಶ್ಚೇತನವನ್ನು ನಾವು ನಿರೀಕ್ಷಿಸಬಹುದು? ಎಲ್ಲಕ್ಕಿಂತ ಮುಖ್ಯವಾಗಿ 2021-22ರಲ್ಲಿ ಬಡ್ಡಿ ಪಾವತಿ ವೆಚ್ಚ ರೂ.27160 ಕೋಟಿ. ಇದು ಒಟ್ಟು ವೆಚ್ಚದ ಶೇ.41 ರಷ್ಟಾಗುತ್ತದೆ. ಸಾರ್ವಜನಿಕ ಅರ್ಥಶಾಸ್ತ್ರದಲ್ಲಿ ಸರ್ಕಾರವೊಂದು ಸಾಲ ಎತ್ತುವುದು ತಪ್ಪೇನಲ್ಲ. ಆದರೆ ತಂದ ಸಾಲವನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬುದು ಮುಖ್ಯವಾಗುತ್ತದೆ. ಕರ್ನಾಟಕದ 2020-21ರಲ್ಲಿ ರೆವಿನ್ಯೂ ಕೊರತೆ ರೂ.19985 ಕೋಟಿ. ಇದು 2021-22ರಲ್ಲಿ ರೂ.15133 ಕೋಟಿಯಾಗಿದೆ. ಕರ್ನಾಟಕವು 2004-05ನೆಯ ಸಾಲಿನಿಂದಲೂ ಸತತವಾಗಿ ರೆವಿನ್ಯೂ ಖಾತೆಯಲ್ಲಿ ಆಧಿಕ್ಯವನ್ನು ಸಾಧಿಸಿಕೊಂಡು ಬಂದ ರಾಜ್ಯವಾಗಿದೆ. ಈ ಸಾಧನೆ ಇಂದು ಮಣ್ಣು ಪಾಲಾಗಿದೆ. ಸರ್ಕಾರವು ಎತ್ತಿದ ಸಾಲವನ್ನು ಬಂಡವಾಳ ವೆಚ್ಚಕ್ಕೆ ಬಳಸದೆ ರೆವಿನ್ಯೂ ಕೊರತೆ ತುಂಬಲು ಅಥವಾ ಬಡ್ಡಿ ಪಾವತಿಸಲು ಬಳಸಿದರೆ ಅದರಿಂದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಹಣಕಾಸು ವಲಯದ ನಿರ್ವಹಣೆಯು ಕಳೆದ ಎರಡು ವರ್ಷಗಳಿಂದ ಸಮರ್ಪಕವಾಗಿಲ್ಲ ಎಂದು ಹೇಳಬೇಕಾಗಿದೆ. ಇಲ್ಲಿ Escapee ರಾಜ್ಯ ಎಷ್ಟು ಕಾರಣವೋ ಒಕ್ಕೂಟ ಸರ್ಕಾರವು ರಾಜ್ಯಕ್ಕೆ ತೋರುತ್ತಿರುವ ಮಲತಾಯಿ ಧೋರಣೆಯೂ ಅಷ್ಟೇ ಕಾರಣ.

ಒಕ್ಕೂಟ ಸರ್ಕಾರವು ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಡುತ್ತಿರುವ ಮತ್ತೊಂದು ಅನ್ಯಾಯವೆಂದರೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳ ಮೇಲಿನ ತೆರಿಗೆ ರಾಶಿಯನ್ನು ರಾಜ್ಯಗಳ ಜೊತೆ ಹಂಚಿಕೊಳ್ಳದೆ ತಿಂದು ನೊಣೆಯುತ್ತಿರುವುದು. ಏಕೆಂದರೆ ಈ ತೆರಿಗೆಯು ಜಿಎಸ್‌ಟಿ ವ್ಯಾಪ್ತಿಗೆ ಸೇರುವುದಿಲ್ಲ. ಈ ತೆರಿಗೆ ಮೂಲಕ ಭಾರತ ಸರ್ಕಾರವು ಸಂಗ್ರಹಿಸಿಕೊಳ್ಳುತ್ತಿರುವ ತೆರಿಗೆ ಮೊತ್ತ 2016-17ರಲ್ಲಿ ರೂ.2.37 ಲಕ್ಷ ಕೋಟಿಯಷ್ಟಾಗಿದ್ದರೆ 2020-21ರಲ್ಲಿ ಇದು ರೂ.3.01 ಲಕ್ಷ ಕೋಟಿಯಾಗಿದೆ (ಭಾರತ ಸರ್ಕಾರದ ಪೆಟ್ರೋಲಿಯಮ್ ಸಚಿವ ಧರ್ಮೇಂದ್ರ ಪ್ರಧಾನ ಹೇಳಿಕೆ: ಪ್ರಜಾವಾಣಿ. ಮಾರ್ಚ್ 09, 2021). ಇದು ಸಣ್ಣ ಪ್ರಮಾಣವಲ್ಲ. ಇದನ್ನು ಒಕ್ಕೂಟ ಸರ್ಕಾರವು ರಾಜ್ಯಗಳ ಜೊತೆ ಹಂಚಿಕೊಳ್ಳುತ್ತಿಲ್ಲ. ಇದು ಇನ್ನೊಂದು ರೀತಿಯಲ್ಲಿ ಕರ್ನಾಟಕಕ್ಕೆ ಬಿದ್ದ ಪ್ಯಾಂಡಮಿಕ್ ಹೊಡೆತ.

ಮತ್ತೊಂದು ರೀತಿಯಲ್ಲಿ ಒಕ್ಕೂಟ ಸರ್ಕಾರವು ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಇದನ್ನು 15ನೆಯ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ ಸಿಂಗ್ ಬಹಿರಂಗಪಡಿಸಿದ್ದಾರೆ. ಒಕ್ಕೂಟ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳಬಹುದಾದ ತೆರಿಗೆ ರಾಶಿಯಲ್ಲಿ ಸೆಸ್ ಮತ್ತು ಸರ್‌ಚಾರ್ಚ್‌ಗಳು ಸೇರುವುದಿಲ್ಲ. ಎನ್.ಕೆ ಸಿಂಗ್ ಪ್ರಕಾರ 2021-22ರಿಂದ 2025-26ರ ಅವಧಿಯಲ್ಲಿನ ತೆರಿಗೆ ರಾಶಿ ಅಂದಾಜು ಮೊತ್ತ ರೂ.135.2 ಲಕ್ಷ ಕೋಟಿ. ಆದರೆ ಇದರಲ್ಲಿ ಸೆಸ್ ಮತ್ತು ಸರ್‌ಚಾರ್ಜ್‌ಗಳ ಮೊತ್ತವನ್ನು ತೆಗೆದರೆ ಹಂಚಬಹುದಾದ ಮೊತ್ತ ರೂ.103 ಲಕ್ಷ ಕೋಟಿ. ಒಂದು ವೇಳೆ ರೂ.135 ಕೋಟಿ ಹಂಚಿಕೆ ಮೊತ್ತವಾಗಿದ್ದರೆ ರಾಜ್ಯಗಳಿಗೆ ದೊರೆಯುವ ಮೊತ್ತ ರೂ.55.43 ಲಕ್ಷ ಕೋಟಿ (ಶೇ.41). ಆದರೆ ಈಗ ದೊರೆಯುವ ಮೊತ್ತ ರೂ.42.23 ಲಕ್ಷ ಕೋಟಿ ಮಾತ್ರ. ಒಕ್ಕೂಟದ ತೆರಿಗೆ ರಾಶಿಯಲ್ಲಿ ಸೆಸ್ ಮತ್ತು ಸರ್‌ಚಾರ್ಜ್‌ಗಳ ಪ್ರಮಾಣ 2011-12ರಲ್ಲಿ ಶೇ. 10.4ರಷ್ಟಿದ್ದುದು 2020-21ರಲ್ಲಿ ಶೇ.20ಕ್ಕೇರಿದೆ. ಇವೆಲ್ಲವೂ ಸಂವಿಧಾನದತ್ತ ಒಕ್ಕೂಟ ತತ್ವಕ್ಕೆ ವಿರುದ್ಧವಾದ ನಡೆಗಳಾಗಿವೆ. ಒಕ್ಕೂಟ ಸರ್ಕಾರದ ಇಂತಹ ನಡೆಯಿಂದಾಗಿ ಕರ್ನಾಟಕವು ತನ್ನ ಬಜೆಟ್ ನಿರ್ವಹಣೆಯಲ್ಲಿ ಮತ್ತು ಅಭಿವೃದ್ಧಿ ನಿರ್ವಹಣೆಯಲ್ಲಿ ವಿಫಲವಾಗುತ್ತಿದೆ.

ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯ

ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ ಉಂಟಾಗಿರುವ ಅನ್ಯಾಯವನ್ನು ಉಲ್ಬಣಗೊಳಿಸುವ ರೀತಿಯಲ್ಲಿ, 15ನೆಯ ಹಣಕಾಸು ಆಯೋಗವೂ ಕರ್ನಾಟಕಕ್ಕೆ ಭಾರತ ಸರ್ಕಾರದ ತೆರಿಗೆ ರಾಶಿಯಿಂದ ಮಾಡುವ ವರ್ಗಾವಣೆಯ ಪ್ರಮಾಣವನ್ನು 14ನೆಯ ಹಣಕಾಸು ಆಯೋಗದ ಶಿಫಾರಸ್ಸಾದ ಶೇ.4.713 ರಿಂದ ಶೇ.3.646ಕ್ಕೆ ಕಡಿತ ಮಾಡಿದೆ. ಅದರ ಶಿಫಾರಸ್ಸಿನ ಪ್ರಕಾರ 2016-17ರಿಂದ 2021-22ರ ಐದು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ದೊರೆಯುವ ಭಾರತ ಸರ್ಕಾರದ ತೆರಿಗೆ ರಾಶಿಯಲ್ಲಿನ ಅನುದಾನದ ಅಂದಾಜು ರೂ.1.54 ಲಕ್ಷ ಕೋಟಿ. ಅಂದರೆ ವಾರ್ಷಿಕ ರೂ.30815.40 ಕೋಟಿ. ಹಿಂದಿನ 14ನೆಯ ಹಣಕಾಸು ಆಯೋಗದ ಶಿಫಾರಸ್ಸಿನ ಐದು ವರ್ಷಗಳಲ್ಲಿ (2015-16ರಿಂದ 2020-21) ಶಿಫಾರಸ್ಸು ಮಾಡಿದ್ದ ಅಂದಾಜು ಮೊತ್ತ ರೂ.1.86 ಲಕ್ಷ ಕೋಟಿ. ಅಂದರೆ ವಾರ್ಷಿಕ ರೂ.37215.6 ಕೋಟಿ. ಅಂದರೆ 15ನೆಯ ಹಣಕಾಸು ಆಯೋಗದ ಭಾರತ ಸರ್ಕಾರದ ತೆರಿಗೆ ರಾಶಿಯಲ್ಲಿನ ರಾಜ್ಯದ ಪಾಲು 14ನೆಯ ಹಣಕಾಸು ಆಯೋಗದ ಶಿಫಾರಸ್ಸಿಗೆ ಹೋಲಿಸಿದರೆ, ಇದು ರೂ.32001 ಕೋಟಿ ಕಡಿಮೆಯಾಗುತ್ತದೆ (ವಿವರಗಳಿಗೆ ನೋಡಿ: 14ನೆಯ ಹಣಕಾಸು ಆಯೋಗದ ವರದಿ, ಸಂಪುಟ 1, ಪುಟ: 95 ಮತ್ತು 15ನೆಯ ಹಣಕಾಸು ಆಯೋಗದ ಅಂತಿಮ ವರದಿ, ಪುಟ: 328).

ಬಜೆಟ್ಟಿನಲ್ಲಿ ಮಹಿಳಾ ಸ್ಪಂದನೆ

ಮಾನ್ಯ ಮುಖ್ಯಮಂತ್ರಿಯವರು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 08ರಂದು ಬಜೆಟ್ ಮಂಡಿಸಿ ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ಬಜೆಟ್ಟಿನಲ್ಲಿ ನೀಡಿರುವುದಾಗಿ ಘೋಷಿಸಿದ್ದಾರೆ. ಹಾಗಾದರೆ ಈ ಬಜೆಟ್ಟನ್ನು ಮಹಿಳಾ ಸಂವೇದಿ ಬಜೆಟ್ಟೆಂದು ಹೇಳಬಹುದೆ? ಖಚಿತವಾಗಿ ಇಲ್ಲ. ಏಕೆಂದರೆ ಮಹಿಳಾ ಉದ್ದೇಶಿತ ಬಜೆಟ್ ಎಂಬುದನ್ನು ಸರ್ಕಾರ ಪರಿಭಾವಿಸಿಕೊಂಡಿರುವ ಕ್ರಮವೇ ಸಮಸ್ಯಾತ್ಮಕವಾಗಿದೆ. ಉದಾ: 2020-21ರ ಬಜೆಟ್ಟಿನಲ್ಲಿ ಮಹಿಳಾ ಉದ್ದೇಶಿತ ಬಜೆಟ್ ಕಾರ್ಯಕ್ರಮಗಳ ಸಂಖ್ಯೆ 953. ಸರ್ಕಾರವು 2020-21ರಲ್ಲಿ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಬಜೆಟ್ಟಿನಲ್ಲಿ ನೀಡಿದ್ದ ಮೊತ್ತ ರೂ.37785 ಕೋಟಿ. ಇದು ಒಟ್ಟು ಬಜೆಟ್ ವೆಚ್ಚದ ಶೇ.15.88ರಷ್ಟಿತ್ತು. ಪ್ರಸ್ತುತ ವರ್ಷ ಇದಕ್ಕಾಗಿ ನೀಡಿರುವ ಮೊತ್ತ ರೂ.37187 ಕೋಟಿ. ಒಟ್ಟು ಬಜೆಟ್ ವೆಚ್ಚದ ಶೇ.15.10. ಅಂದರೆ ಕಡಿಮೆಯಾಗಿದೆ. ಈ ಮಹಿಳಾ ಉದ್ದೇಶಿತ ಬಜೆಟ್ ಸಮಾಜದ ಯಾವ ವರ್ಗದ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡಿದೆ? ಉದಾ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿನ ಒಟ್ಟು ಮಹಿಳಾ ಸಾಗುವಳಿದಾರರ ಸಂಖ್ಯೆ 18.27 ಲಕ್ಷ ಮತ್ತು ಭೂರಹಿತ ಕೃಷಿ ದಿನಗೂಲಿ ದುಡಿಮೆಗಾರ ಮಹಿಳೆಯರ ಸಂಖ್ಯೆ 38.72 ಲಕ್ಷ. ಇವರ ಬಗ್ಗೆ ಬಜೆಟ್ಟಿನಲ್ಲಿ ಏನಿದೆ? ಇವರ ಆಹಾರ ಭದ್ರತೆಯ ಬಗ್ಗೆ, ಇವರ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ, ಇವರ ಮಕ್ಕಳ ಯೋಗಕ್ಷೇಮದ ಬಗ್ಗೆ ಏನು ಕಾರ್ಯಕ್ರಮಗಳಿವೆ? ಏನೂ ಇಲ್ಲ.

ಮಹಿಳಾ ಉದ್ದಿಮೆದಾರರ ಬಗ್ಗೆ ಬಜೆಟ್ ಮಾತನಾಡುತ್ತದೆ. ನಗರ ಉದ್ಯೋಗಿ ಮಹಿಳೆಯರ ಶಿಶುಪಾಲನಾ ಕೇಂದ್ರಗಳ ಬಗ್ಗೆ ಬಜೆಟ್ಟಿನಲ್ಲಿ ಅನುದಾನವಿದೆ. ಆದರೆ ಈ ಬಜೆಟ್ಟಿನ ಬಹುಮುಖ್ಯ ವೈಫಲ್ಯವೆಂದರೆ ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆಯ ಬಗ್ಗೆ ಮೌನ ವಹಿಸಿರುವುದು. ಕರ್ನಾಟಕದಲ್ಲಿ 6 ತಿಂಗಳಿಂದ 59 ತಿಂಗಳ ವಯೋಮಾದ ಒಟ್ಟು ಮಕ್ಕಳಲ್ಲಿ ಅನೀಮಿಯ ರೋಗವನ್ನು ಎದುರಿಸುತ್ತಿರುವ ಮಕ್ಕಳ ಪ್ರಮಾಣ 2015-16ರಲ್ಲಿ ಶೇ. 60.9ರಷ್ಟಿದ್ದುದು 2019-2020ರಲ್ಲಿ ಇದು ಶೇ.65.5ಕ್ಕೇರಿದೆ. ಇದೇ ರೀತಿಯಲ್ಲಿ 15ರಿಂದ 49 ವರ್ಷಗಳ ವಯೋಮಾನದ ಒಟ್ಟು ಮಹಿಳೆಯರಲ್ಲಿ ಅನೀಮಿಯ ಎದುರಿಸುತ್ತಿರುವ ಮಹಿಳೆಯರ ಪ್ರಮಾಣ 2015-16ರಲ್ಲಿ ಶೇ.44.8ರಷ್ಟಿದ್ದುದು 2019-2020ರಲ್ಲಿ ಶೇ.47.8ಕ್ಕೇರಿದೆ. (ಮೂಲ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ – ಎನ್‌ಎಫ್‌ಎಚ್‌ಎಸ್ – ಸುತ್ತು 4: 2015-16 ಮತ್ತು ಸುತ್ತು 5: 2019-2020, ಕರ್ನಾಟಕ). ಈ 2019-2020ರ ಸಮೀಕ್ಷೆಯು ಕೋವಿಡ್ ಪ್ಯಾಂಡಮಿಕ್ ಪೂರ್ವದಲ್ಲಿ ನಡೆದಿದೆ. ಅಂದರೆ ಈಗ ಇದು ಇನ್ನಷ್ಟು ಉಲ್ಬಣಗೂಂಡಿರಲು ಸಾಕು. ಇದರ ಬಗ್ಗೆ ಸೌಜನ್ಯಕ್ಕಾದರೂ ಮಖ್ಯಮಂತ್ರಿಯವರು ಉಲ್ಲೇಖ ಮಾಡಿಲ್ಲ. ಹಾಗಾದರೆ ಲಿಂಗತ್ವ ನ್ಯಾಯ ಬಜೆಟ್ಟಿನಲ್ಲಿ ಸಾಕಾರಗೊಂಡಿದೆ ಎಂದು ಹೇಳಲು ಸಾಧ್ಯವೆ?

ಕೊನೆಯದಾಗಿ ಕೋವಿಡ್ ಪರಿಣಾಮವಾಗಿ ಅತಿಹೆಚ್ಚು ಹೊಡೆತ ಅನುಭವಿಸಿದ ವರ್ಗ ಯಾವುದು? ವಲಸೆ ಕಾರ್ಮಿಕರು ಎಂಬುದು ಜಗಜ್ಜಾಹೀರಾಗಿದೆ. ನಿರುದ್ಯೋಗ ಪ್ರಮಾಣ ಕಳೆದ 40 ವರ್ಷಗಳಲ್ಲಿ ಅತಿಹೆಚ್ಚು ಎನ್ನುವ ಮಟ್ಟದಲ್ಲಿದೆ. ಇಡೀ ಬಜೆಟ್ಟಿನಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳಿಲ್ಲ. ನಿಜ, ಬಜೆಟ್ಟಿನಲ್ಲಿನ ಕಾರ್ಯಕ್ರಮಗಳಿಂದ ಅಪ್ರತ್ಯಕ್ಷವಾದ ಉಪಯೋಗಗಳು ಉಂಟಾಗಬಹುದು. ಆದರೆ ಇಂದು ನಾವು ವಿಶೇಷ ಸಂದರ್ಭದಲ್ಲಿದ್ದೇವೆ. ಆದ್ದರಿಂದ ನೇರವಾಗಿ ಉದ್ಯೋಗ ನಿರ್ಮಿಸುವ, ಹೂಡಿಕೆ ಹೆಚ್ಚಿಸುವ ಕ್ರಮಗಳಿಗೆ ಬಜೆಟ್ಟಿನಲ್ಲಿ ಆದ್ಯತೆ ದೊರೆಯಬೇಕಾಗಿತ್ತು.

ಅನ್ನಭಾಗ್ಯ-ಆಹಾರ ಭದ್ರತೆ ಕಾರ್ಯಕ್ರಮಗಳನ್ನು ಬಲಪಡಿಸುವ ಅಗತ್ಯವಿತ್ತು. ಸಾರ್ವಜನಿಕ ಆರೋಗ್ಯ ಮತ್ತು ಸಾರ್ವಜನಿಕ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿತ್ತು. (ಬಲಿಷ್ಠ) ಜಾತಿವಾರು ಮಂಡಳಿಗಳಿಗೆ ನೀಡಿರುವ ಅನುದಾನವನ್ನು ಇವಕ್ಕೆ ವರ್ಗಾಯಿಸಬೇಕಾಗಿತ್ತು. ಇವೆಲ್ಲ ಆರ್ಥಿಕತೆಯ ಕಟ್ಟಕಡೆಯಲ್ಲಿರುವ ವರ್ಗಗಳಿಗೆ ನೆರವಾಗಬಲ್ಲ ಕಾರ್ಯಕ್ರಮಗಳಾಗಿದ್ದವು. ಪ್ರಜಾವಾಣಿ ಸರಿಯಾಗಿ ಗುರುತಿಸಿರುವಂತೆ ಈ ಬಜೆಟ್ಟಿನಲ್ಲಿರುವುದು ’ಬರೀ ನೋಟ: (ಎಲ್ಲವೂ) ಸಾಲದ ಆಟ’.

35 ಲಕ್ಷದಿಂದ 45 ಲಕ್ಷದೊಳಗಿನ ಫ್ಲಾಟ್ ಖರೀದಿಸುವವರಿಗೆ ನೋಂದಣಿ ಶುಲ್ಕವನ್ನು ಶೇ.5ರಿಂದ ಶೇ.3ಕ್ಕಿಳಿಸಲಾಗಿದೆ. ಇದನ್ನು ಉಳ್ಳವರ ಬಜೆಟ್ ಎನ್ನದೆ ವಿಧಿಯಿಲ್ಲ. ಸಂಪನ್ಮೂಲದ ಭಾರಿ ಕೊರತೆಯನ್ನು ಅನುಭವಿಸುತ್ತಿರುವ ಆರ್ಥಿಕತೆಯಲ್ಲಿ ಉಳ್ಳವರಿಗೆ ಶುಲ್ಕವನ್ನು ಇಳಿಸುವುದು ಯಾವ ಸಾರ್ವಜನಿಕ ಹಣಕಾಸು ಶಾಸ್ತ್ರವೋ ತಿಳಿಯುತ್ತಿಲ್ಲ. ಮಾಧ್ಯಮಗಳು ’ಇದೊಂದು ತೆರಿಗೆಯಲ್ಲದ ಬಜೆಟ್ ಎಂದು ಬೊಬ್ಬಿಡುತ್ತಿವೆ. ಸ್ವಾಮಿ ತೆರಿಗೆ ವಿಧಿಸುವ ರಾಜ್ಯಗಳ ಅದಿಕಾರವನ್ನು ಜಿಎಸ್‌ಟಿ ಕಸಿದುಕೊಂಡಿದೆ. ತೆರಿಗೆಗಳನ್ನು ವಿಧಿಸುವ ಅಥವಾ ತೆರಿಗೆ ದರಗಳನ್ನು ಹೆಚ್ಚಿಸುವ ಅಧಿಕಾರ ಇಂದು ರಾಜ್ಯಗಳಿಗಿಲ್ಲ.

ಒಟ್ಟಾರೆಯಾಗಿ ಇದೊಂದು ಗಾಳಿಯಲ್ಲಿ ಗೋಪುರ ಕಟ್ಟುವ ಪ್ರಯತ್ನದ ಬಜೆಟ್ಟಾಗಿದೆ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಕಾಂಗ್ರೆಸ್ ಸೇರಲಿರುವ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...