ಧಾರ್ಮಿಕ ಸ್ಥಳಗಳಿಂದ ಉಂಟಾಗುತ್ತಿರುವ ಶಬ್ಧ ಮಾಲಿನ್ಯ ತಡೆಗೆ ಕ್ರಮಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ನಿನ್ನೆ ಪೊಲೀಸ್ ಇಲಾಖೆಗೆ ಕಠಿಣ ನಿರ್ದೇಶನಗಳನ್ನು ನೀಡಿದೆ. ಪದೇ ಪದೇ ಹೇಳಿದ್ದನೇ ಹೇಳುವಷ್ಟು ನ್ಯಾಯಾಲಯಕ್ಕೆ ವ್ಯವಧಾನವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಪೊಲೀಸ್ ಇಲಾಖೆ ತ್ವರಿತವಾಗಿ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಈ ಹಿಂದೆ ಧಾರ್ಮಿಕ ಸ್ಥಳ ಮತ್ತು ಸಮಾರಂಭಗಳಲ್ಲಿ ಧ್ವನಿ ವರ್ಧಕ ಮತ್ತು ಡಿಜೆ ಸಂಗೀತಗಳು ಬಳಕೆಯಾಗುವ ಕುರಿತು ಸಾಕಷ್ಟು ಜನರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಿದ್ದರು. ಹೈಕೋರ್ಟ್ ಆನೇಕ ಬಾರಿ ಈ ಸಂಬಂಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರೂ ಪೊಲೀಸ್ ಇಲಾಖೆ ಮಾತ್ರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ನಿನ್ನೆ ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್, “ಇದುವರೆಗೆ ಶಬ್ಧ ಮಾಲಿನ್ಯಕ್ಕೆ ಸಂಬಂಧಪಟ್ಟ ಹಾಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (KSPCB) 11 ದೂರುಗಳು ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಪೊಲೀಸ್ ಇಲಾಖೆ ಠಾಣಾ ಮಟ್ಟದಲ್ಲಿ ಈ ಕುರಿತು ಕ್ರಮ ಕೈಗೊಳ್ಳುತ್ತಿದ್ದು ಪರಿಸರ ಸಂರಕ್ಷಣೆ ಕಾಯ್ದೆ ಮತ್ತು ಶಬ್ಧ ಮಾಲಿನ್ಯ ನಿಯಂತ್ರಣ ನಿಯಮಗಳು 2000 ಅಡಿಯಲ್ಲಿ ತನಿಖೆಯನ್ನು ಕೂಡ ನಡೆಸುತ್ತಿದೆ” ಎಂದು ಹೈಕೋರ್ಟ್‌ನಲ್ಲಿ ಅಫಿಡೆವಿಟ್ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬದುಕುವ ಹಕ್ಕಿಗೆ ತೊಂದರೆಯಾದಾಗ ಧಾರ್ಮಿಕ ಹಕ್ಕನ್ನು ಹಿಂದಕ್ಕೆ ತಳ್ಳಬಹುದು: ಮದ್ರಾಸ್ ಹೈಕೋರ್ಟ್
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಪೊಲೀಸ್ ಸಿಬ್ಬಂದಿಗಳಿಗೆ ಶಬ್ಧ ಹೊರಸೂಸುವಿಕೆ ಪ್ರಮಾಣವನ್ನು ಅಳೆಯುವ ತರಬೇತಿಯನ್ನು ನೀಡುತ್ತಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಶಬ್ಧ ಮಾಲಿನ್ಯದ ಪ್ರಮಾಣ ಅಳೆಯುವ ಉಪಕರಣಗಳನ್ನು ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ ಎಂದು ಅಫಿಡೆವಿಟ್‌ನಲ್ಲಿ ಹೇಳಲಾಗಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಸಲ್ಲಿಸಿದ ಅಫಿಡೆವಿಟ್ ನಿಂದ ಸಮಾಧಾನಗೊಳ್ಳದ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ ಹೆಚ್ಚುವರಿ ಅಫಿಡೆವಿಟ್ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನವನ್ನು ನೀಡಿತು. ಎಸಿಪಿಗಳಿಗೆ ಮಾಲಿನ್ಯ ನಿಯಂತ್ರಣ ಕಾಯ್ದೆಯ 19 ನೇ ಸೆಕ್ಷನ್ ಅಡಿ ಧಾರ್ಮಿಕ ಸ್ಥಳಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ ಎಂಬುದನ್ನು ನ್ಯಾಯಾಲಯದ ಮುಂದೆ ಸ್ಪಷ್ಟ ಪಡಿಸಿ ಎಂದು ಆದೇಶಿಸಿ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.
ಗಿರೀಶ್ ಭಾರದ್ವಾಜ್ ಎಂಬುವವರು ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಮುಂತಾದ ಉಪಕರಣಗಳನ್ನು ಅನುಮತಿ ನೀಡಿದ ಪ್ರಮಾಣಕ್ಕಿಂತಲೂ ಹೆಚ್ಚು ಬಳಸಲಾಗುತ್ತಿದೆ. ನಿಯಮಿತ ಪ್ರಮಾಣದಲ್ಲಿ ಮಾತ್ರ ಧ್ವನಿ ವರ್ಧಕಗಳ ಬಳಕೆಗೆ ಅವಕಾಶ ನೀಡಲಾಗಿದ್ದು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದ್ದರೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದಿಂದ ಅನುಮತಿಯನ್ನು ಪಡೆಯದೇ ಅಕ್ರಮವಾಗಿ ಕೆಲವು ಧಾರ್ಮಿಕ ಸ್ಥಳಗಳು ಧ್ವನಿ ವರ್ಧಕಗಳನ್ನು ಬಳಸುತ್ತಿವೆ. ಇದರಿಂದಾಗಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್‌ನಲ್ಲಿ ಸಾವರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ಇದನ್ನೂ ಓದಿ: ಜಿಎಸ್‌ಟಿ ವಿಚಾರದಲ್ಲಿ ರಾಜ್ಯಗಳನ್ನು ವಂಚಿಸಿದ್ದಕ್ಕೆ ಸಂಭ್ರಮಿಸಬೇಕೆ?: ಕುಮಾರಸ್ವಾಮಿ ಆಕ್ರೋಶ


