ಬದುಕುವ ಹಕ್ಕಿಗೆ ಅಡ್ಡಿಯಾದಾಗ ಧಾರ್ಮಿಕ ಹಕ್ಕನ್ನು ಹಿಂದಕ್ಕೆ ತಳ್ಳಬಹುದು: ಮದ್ರಾಸ್ ಹೈಕೋರ್ಟ್‌ | NaanuGauri
PC: Ameer Malik

ಧರ್ಮವನ್ನು ಆಚರಿಸುವ ಹಕ್ಕು ಖಂಡಿತವಾಗಿಯೂ ಜೀವಿಸುವ ಹಕ್ಕಿಗೆ ಅಧೀನವಾಗಿದ್ದು, ಜೀವಿಸುವ ಹಕ್ಕಿಗೆ ತೊಂದರೆಯಾದಾಗ, ಧಾರ್ಮಿಕ ಆಚರಣೆಯ ಹಕ್ಕನ್ನು ಹಿಂದಕ್ಕೆ ತಳ್ಳಬಹುದು ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ. ಕೊರೊನಾ ಲಾಕ್‌ಡೌನ್ ನಿರ್ಬಂಧದಿಂದಾಗಿ ಮುಚ್ಚಲ್ಪಟ್ಟ ದೇವಾಲಯಗಳನ್ನು ಪೂರ್ಣವಾಗಿ ಪುನಃ ತೆರೆಯಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯ ಮನವಿಯನ್ನು ನ್ಯಾಯಾಲಯವು ನಿರಾಕರಿಸಿತು.

ಕೆ.ಕೆ.ರಮೇಶ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌‌ಕುಮಾರ್ ರಾಮಮೂರ್ತಿ ಅವರ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಸ್ ಸೇವೆಗಳನ್ನು ಸಂಪೂರ್ಣವಾಗಿ ಪುನರಾರಂಭಿಸಲು ಕೋರಿದ್ದರು.

ಇದನ್ನೂ ಓದಿ: ಕೊರೊನಾ ನಿರ್ಬಂಧದಿಂದಾಗಿ ತೊಂದರೆಯಾದವರ ನೆರವಿಗೆ ಒಂದು ತಿಂಗಳ ಸಂಬಳ ನೀಡಿದ ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ

ನ್ಯಾಯಪೀಠವು ಮನವಿಯನ್ನು ವಿಲೇವಾರಿ ಮಾಡಿ, “… ಅಂತಹ ವಿಷಯವನ್ನು ನಿರ್ಬಂಧಗಳನ್ನು ವಿಧಿಸುವ ಮೊದಲು ಅಥವಾ ಅವುಗಳನ್ನು ಸರಾಗಗೊಳಿಸುವ ಮೊದಲು ಸಂಬಂಧಿತ ಡೇಟಾ ಮತ್ತು ತಜ್ಞರ ಸಲಹೆಯನ್ನು ಪಡೆಯಲು ರಾಜ್ಯಕ್ಕೆ ಬಿಡಲಾಗುತ್ತದೆ. ಈ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ರೀತಿಯಲ್ಲಿ ರಾಜ್ಯದ ಕಡೆಯಿಂದ ಯಾವುದೇ ಅನಿಯಂತ್ರಿತ ಕ್ರಮಗಳು ಕಂಡುಬರುತ್ತಿಲ್ಲ” ಎಂದು ನ್ಯಾಯಾಲಯವು ಹೇಳಿದೆ.

ಈ ಮಧ್ಯೆ, ಒಕ್ಕೂಟ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗರ್ಭಿಣಿಯರು ಕೊರೊನಾ ವ್ಯಾಕ್ಸಿನೇಷನ್‌ಗೆ ಅರ್ಹರು ಎಂದು ಶುಕ್ರವಾರ ಘೋಷಿಸಿದೆ. ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹದ (ಎನ್‌ಟಿಎಜಿಐ) ಶಿಫಾರಸುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ವೀಕರಿಸಿದೆ. “ಗರ್ಭಿಣಿಯರು ಈಗ ಕೋವಿನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಲಸಿಕೆ ಪಡೆಯಲು ಹತ್ತಿರದ ಕೋವಿಡ್ ವ್ಯಾಕ್ಸಿನೇಷನ್ ಸೆಂಟರ್ (ಸಿವಿಸಿ) ಗೆ ತೆರಳಬಹುದು” ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಇದುವರೆಗೂ 27.56 ಕೋಟಿ ಜನರು ಒಂದು ಡೋಸ್‌ ಕೊರೊನಾ ವ್ಯಾಕ್ಸೀನ್ ಪಡೆದುಕೊಂಡಿದ್ದು, 5.9 ಕೋಟಿ ಜನರು ಎರಡು ಡೋಸ್ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಹಾಗಾಗಿ ದೇಶದಲ್ಲಿ ಲಸಿಕೆ ಪಡೆಯಲು ಅರ್ಹರಾಗಿರುವ 4.3% ಜನರಷ್ಟೇ ಕೊರೊನಾ ಲಸಿಕೆ ಪಡೆದುಕೊಂಡಂತಾಗಿದೆ. ದೇಶದಲ್ಲಿ ಇದುವರೆಗೂ 3.05 ಕೋಟಿ ಜನರು ಸೋಂಕಿಗೆ ಒಳಗಾಗಿದ್ದು, 4 ಲಕ್ಷ ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ದೇಶದಲ್ಲಿ ಸೋಂಕಿನಿಂದ ಇದುವರೆಗೂ 2.95 ಕೋಟಿ ಜನರು ಚೇತರಿಸಿಕೊಂಡಿದ್ದು, 5.17 ಲಕ್ಷ ಸಕ್ರಿಯ ಸೋಂಕಿತರಿದ್ದಾರೆ.

ಇದನ್ನೂ ಓದಿ: ಸಾಲಿಟರ್‌ ಜನರಲ್‌ ಹುದ್ದೆಯಿಂದ ತುಷಾರ್‌ ಮೆಹ್ತಾರನ್ನು ಕಿತ್ತು ಹಾಕಿ: ಮೋದಿಗೆ ಟಿಎಂಸಿ ಪತ್ರ

LEAVE A REPLY

Please enter your comment!
Please enter your name here