ಮುಸ್ಲಿಂ ದಂಪತಿಗಳಿಗೆ ವಿವಾಹ ಮತ್ತು ವಿಚ್ಛೇದನ ಪ್ರಮಾಣಪತ್ರಗಳನ್ನು ನೀಡುವ ರಾಜ್ಯ ವಕ್ಫ್ ಮಂಡಳಿಯ ಅಧಿಕಾರದ ಬಗ್ಗೆ ಕರ್ನಾಟಕ ಹೈಕೋರ್ಟ್ ಸೋಮವಾರ (ಫೆ.10) ಅನುಮಾನ ವ್ಯಕ್ತಪಡಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಮುಸ್ಲಿಂ ದಂಪತಿಗಳಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡಲು ವಕ್ಫ್ ಮಂಡಳಿ ಮತ್ತು ಅದರ ಜಿಲ್ಲಾ ಅಧಿಕಾರಿಗಳಿಗೆ ಅಧಿಕಾರ ನೀಡಿ ಆಗಸ್ಟ್ 30, 2023ರಂದು ಹೊರಡಿಸಲಾದ ಸರ್ಕಾರಿ ಆದೇಶವನ್ನು ನ್ಯಾಯಾಲಯ ಕಳೆದ ವರ್ಷ ತಡೆ ಹಿಡಿದಿತ್ತು.
ಮನವಿಯ ಮೇರೆಗೆ, ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ನ್ಯಾಯಪೀಠವು ಇಂದು ರಾಜ್ಯ ಸರ್ಕಾರಕ್ಕೆ ತನ್ನ ಆದೇಶವನ್ನು ಪ್ರಶ್ನಿಸಿರುವ ಅರ್ಜಿಗೆ ಪ್ರತಿಕ್ರಿಯಿಸಲು ಸ್ವಲ್ಪ ಸಮಯವಕಾಶ ನೀಡಿದೆ. ಫೆಬ್ರವರಿ 19ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.
“ವಕ್ಫ್ (ಪ್ರಾಧಿಕಾರ) ಮದುವೆ ಪ್ರಮಾಣಪತ್ರ ಮತ್ತು ವಿಚ್ಛೇದನ ಪ್ರಮಾಣಪತ್ರವನ್ನು ಸಹ ನೀಡುತ್ತಿದೆಯೇ? ನಾವು ನಿಮ್ಮ ಉತ್ತರಕ್ಕಾಗಿ ಹೆಚ್ಚಿನ ಸಮಯವನ್ನು ನೀಡುವುದಿಲ್ಲ. ಏಕೆಂದರೆ ಇದು ಬಹಳ ಮುಖ್ಯವಾದ ವಿಷಯವಾಗಿದೆ. ವಕ್ಫ್ ಕಾಯ್ದೆಯಡಿ ನಿಮಗೆ ಯಾವುದೇ ಅಧಿಕಾರವಿಲ್ಲ” ಎಂದು ನ್ಯಾಯಾಲಯ ಟೀಕಿಸಿದೆ ಎಂದು ವರದಿ ಹೇಳಿದೆ.
ಕರ್ನಾಟಕದಾದ್ಯಂತ ಜಿಲ್ಲಾ ವಕ್ಫ್ ಮಂಡಳಿಗಳಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ಕೊಡುವ ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆಯ ಅಧೀನ ಕಾರ್ಯದರ್ಶಿ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಆಲಂ ಪಾಷಾ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಮುಸ್ಲಿಂ ದಂಪತಿಗಳ ವಿವಾಹ ಸಮಾರಂಭದ ಸಮಯದಲ್ಲಿ ಕುರಾನ್ ಶ್ಲೋಕಗಳನ್ನು ಪಠಿಸುವ ಖಾಝಿಗೆ, 1988ರ ಖಾಝಿ ಕಾಯ್ದೆಯ ಅಡಿಯಲ್ಲಿ ವಿವಾಹ ಪ್ರಮಾಣಪತ್ರಗಳನ್ನು ನೀಡಲು ವಕ್ಫ್ ಮಂಡಳಿಯು ಅಧಿಕಾರ ನೀಡಿತ್ತು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆದರೆ, ಈ ಕಾಯ್ದೆಯನ್ನು 2013 ರಲ್ಲಿ ರದ್ದುಗೊಳಿಸಲಾಗಿದೆ. ನಂತರ ರಾಜ್ಯ ಸರ್ಕಾರ ವಕ್ಫ್ ಮಂಡಳಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ಕೊಡುವ ಆದೇಶ ಹೊರಡಿಸಿದೆ.
ವಕ್ಫ್ ಕಾಯ್ದೆಯು ಸ್ಥಿರ ಮತ್ತು ಚರ ಆಸ್ತಿಗಳೊಂದಿಗೆ ಮಾತ್ರ ವ್ಯವಹರಿಸುತ್ತದೆ. ವಕ್ಫ್ ಮಂಡಳಿಯ ಅಧಿಕಾರಿಗಳಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡಲು ಅಥವಾ ವ್ಯವಹರಿಸಲು ಅಧಿಕಾರ ನೀಡುವ ಯಾವುದೇ ನಿಬಂಧನೆಗಳು ಈ ಕಾಯ್ದೆಯಡಿಯಲ್ಲಿ ಇಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
“ಮದುವೆಯ ನಂತರ ವಿದೇಶ ಪ್ರವಾಸ ಮಾಡಿದ ಮುಸ್ಲಿಮರು ವಿವಾಹ ಪ್ರಮಾಣಪತ್ರಗಳನ್ನು ಪಡೆಯುವಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿರುವುದರಿಂದ ಈ ಆದೇಶವನ್ನು ಹೊರಡಿಸಲಾಗಿದೆ” ಎಂದು ನವೆಂಬರ್ 2024ರಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.
ಇಂದು ವಾದ ಮಂಡಿಸಲು ವಕೀಲರು ಲಭ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಪರಿಣಾಮ ವಿಚಾರಣೆ ಮುಂದೂಡಲಾಯಿತು ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ಅಹಿಂದ ನಾಯಕರ ರಹಸ್ಯ ಸಭೆ; ನಾಯಕತ್ವ ಬದಲಾವಣೆ ಚರ್ಚೆ?


