ನಾನುಗೌರಿ ಡೆಸ್ಕ್
ಈಗಾಗಲೇ ವಾಟ್ಸಾಪ್‍ನಲ್ಲಿ ಫಾರ್ವರ್ಡ್ ಆಗುವ ಅಸಂಖ್ಯಾತ ಸುಳ್ಳು ಮೆಸೇಜ್‍ಗಳಲ್ಲಿ ಕೆಲವು ‘ಇಂಟೆಲಿಜೆನ್ಸ್’ ವರದಿಯ ಪ್ರಕಾರ ಇಂತಿಂತಹ ಪಕ್ಷಗಳ ಅಥವಾ ಪಕ್ಷೇತರ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ, ಮುಖ್ಯಮಂತ್ರಿಯವರು ಮಂಡ್ಯ ಜಿಲ್ಲೆಯ ಕುರಿತಾದ ವರದಿ ತರಿಸಿಕೊಂಡಿದ್ದು, ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‍ಗೆ ಹಿನ್ನಡೆಯಾಗಿದ್ದು ಸಂಬಂಧಪಟ್ಟ ಎಂಎಲ್‍ಎಗಳ ಮೇಲೆ ಕಿಡಿಕಾರಿದ್ದಾರೆಂದು ರಾಜ್ಯಮಟ್ಟದ ಪ್ರಮುಖ ಪತ್ರಿಕೆಗಳೇ ವರದಿ ಮಾಡಿವೆ. ನಿನ್ನೆ ಮುಳಬಾಗಿಲಿನ ಮಾಜಿ ಶಾಸಕ ಕೊತ್ತೂರು ಮಂಜು ‘ಮುಖ್ಯಮಂತ್ರಿಯವರಿಗೆ ಎರಡು ಬಾರಿ ಗುಪ್ತಚರ ಇಲಾಖೆಯ ವರದಿಯು ತಲುಪಿದ್ದು, ಕೋಲಾರದ ಹಾಲಿ ಎಂಪಿ ಕೆ.ಎಚ್.ಮುನಿಯಪ್ಪನವರು ಸೋಲುವುದು ಖಚಿತ. ಮುಖ್ಯಮಂತ್ರಿ ಕಚೇರಿಯಿಂದಲೇ ತನಗೆ ಮಾಹಿತಿ ತಲುಪಿದೆ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್‍ನ ಕೊತ್ತೂರು ಮಂಜು, ಬಹಿರಂಗವಾಗಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಪ್ರಚಾರ ನಡೆಸಿದ್ದರು.
ಈ ಸಾರಿ ಮಾತ್ರವಲ್ಲದೇ ಪ್ರತೀ ಚುನಾವಣೆಯ ಸಂದರ್ಭದಲ್ಲೂ ಈ ‘ಇಂಟೆಲಿಜೆನ್ಸ್’ ವರದಿ ಸದ್ದು ಮಾಡುತ್ತದೆ. ಪ್ರಥಮ ಬಾರಿಗೆ ಅದು ರಾಜ್ಯ ಮಟ್ಟದ ಪತ್ರಿಕೆಗಳಲ್ಲೂ ಸ್ಥಾನ ಪಡೆದುಕೊಂಡಿದೆಯಾದರೂ, ರಾಜಕೀಯ ವಲಯಗಳಲ್ಲಿ ಇದು ಸಾಮಾನ್ಯ ಸುದ್ದಿ. ಚುನಾವಣೆ ನಡೆಯುವುದಕ್ಕೆ ಮುಂಚೆಯೇ ಇಂತಹ ಸುದ್ದಿಗಳು ಪ್ರಚಲಿತದಲ್ಲಿರುತ್ತವೆ. ‘ನಾಮಿನೇಷನ್ ಸಲ್ಲಿಸುವಾಗ ನಮ್ಮದೇ ಅಪ್ ಇತ್ತು ಎಂದು ಇಂಟೆಲಿಜೆನ್ಸ್ ರಿಪೋರ್ಟು. ಎರಡನೇ ವಾರದಿಂದ ನಮ್ಮದು ಡೌನ್ ಆಗಿ, ಅವರ್ದು ಅಪ್ ಆಗಿದೆಯಂತೆ. ಹಾಗಾಗಿ ನಾವೀಗ ವರ್ಕಪ್ ಮಾಡಲೇಬೇಕು’ ಎಂದು ಪಕ್ಷಗಳ ಅಭ್ಯರ್ಥಿಗಳ ಜೊತೆಗಾರರು ಹೇಳುತ್ತಿರುತ್ತಾರೆ.

ಸಹಜವಾಗಿಯೇ ಈ ವರದಿ ಸಿಗುವುದು ಗುಪ್ತಚರ ಇಲಾಖೆಯ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿಗಳಿಗೆ ತಾನೇ. ಆದರೆ, ತಮಗೆ ಸಿಕ್ಕಿರುವ ಗುಪ್ತ ಮೂಲದಿಂದ ಇದನ್ನು ಪಡೆದುಕೊಂಡಿದ್ದೇವೆ ಎಂದು ‘ನಿಗೂಢವಾಗಿ’ ಹೇಳುವವರು ಎಲ್ಲಾ ಕಡೆ ಸಿಗುತ್ತಾರೆ. ನಂತರ ಅದೇನೂ ನಿಗೂಢವಾಗಿ ಉಳಿಯುವುದಿಲ್ಲ. ಪ್ರತೀ ಪೊಲೀಸ್ ಠಾಣೆಯಲ್ಲೂ ಠಾಣಾ ವ್ಯಾಪ್ತಿಯ ಇಂಟೆಲಿಜೆನ್ಸ್ ಸಿಬ್ಬಂದಿ ಇದ್ದು ಮಾಹಿತಿ ಸಂಗ್ರಹಿಸುತ್ತಿರುತ್ತಾರಲ್ಲದೇ, ರಾಜ್ಯ ಗುಪ್ತಚರ ಇಲಾಖೆಯ ಸಿಬ್ಬಂದಿ ಸ್ಥಳೀಯವಾಗಿಯೂ ಇರುತ್ತಾರೆ. ‘ಸ್ಟೇಟ್ ಇಂಟೆಲಿಜೆನ್ಸ್’ ಎಂದು ಅವರು ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ. ಬೆಂಗಳೂರಿನಂತಹ ನಗರಗಳಲ್ಲಿ ‘ಕಮೀಷನರ್ ಆಫೀಸ್’ನಿಂದ ನೇರವಾಗಿ ಮಾಹಿತಿ ಸಂಗ್ರಹಿಸುವಂಥವರೂ ಇರುತ್ತಾರೆ.
ವಿವಿಧ ಹಂತಗಳಲ್ಲಿನ ಸ್ಥಳೀಯ ಇಂಟೆಲಿಜೆನ್ಸ್ ಸಿಬ್ಬಂದಿಯ ಜೊತೆ ಹೊಕ್ಕು ಬಳಕೆ ಇರುವ ರಾಜಕೀಯಾಸಕ್ತರು ‘ಏನು ಹೇಳುತ್ತೆ ಇಂಟೆಲಿಜೆನ್ಸ್ ರಿಪೋರ್ಟ್?’ ಎಂದು ಸೀಕ್ರೆಟ್ಟಾಗಿ ಕೇಳುತ್ತಾರೆ. ಅವರು ‘ಹೀಗೀಗಿದೆ, ಭಾಳಾ ಟಫ್ ಇದೆ, ನೆಕ್ ಟು ನೆಕ್ ಇದೆ, ಕ್ಲೋಸ್ ಫೈಟ್’ ಇತ್ಯಾದಿ ಇತ್ಯಾದಿ ಹೇಳುತ್ತಾರೆ. ಕೇಳಿದವರು ಅಷ್ಟೇ ಸೀಕ್ರೆಟ್ಟಾಗಿ ಇನ್ನೊಂದಷ್ಟು ಜನಕ್ಕೆ ಹೇಳುತ್ತಾರೆ.
ಹಾಗಾದರೆ ವಾಸ್ತವವೇನು? ರಾಜ್ಯ ಗುಪ್ತಚರ ಇಲಾಖೆಯು ಚುನಾವಣಾ ಫಲಿತಾಂಶದ ಸಾಧ್ಯತೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತದೆಯಾ? ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಇಡೀ ರಾಜ್ಯದ ಎಲ್ಲಾ ಕ್ಷೇತ್ರಗಳ ಕುರಿತು ವರದಿ ತಯಾರು ಮಾಡಿ ಮುಖ್ಯಮಂತ್ರಿಗಳಿಗೆ ತಲುಪಿಸುತ್ತದೆಯಾ? ಹಾಗಿದ್ದಲ್ಲಿ ಈ ಚುನಾವಣೆಯಲ್ಲಿ ಅಂತಹ ವರದಿ ತಯಾರಾಗಿದೆಯಾ? ಆ ವರದಿ ಏನು ಹೇಳುತ್ತದೆ? ಈ ಕುರಿತು ನಾನುಗೌರಿ.ಕಾಂ ಇಲಾಖೆಯ ಉನ್ನತ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿ ವಿವರವಾಗಿ ಮಾತನಾಡಿಸಿತು. ಅವರು ಹೇಳಿದ ವಿವರಗಳನ್ನು ಕೇಳಿದರೆ ಆಶ್ಚರ್ಯವೆನಿಸುವ ಸಂಗತಿಗಳು ಹೊರಬಂದವು.

ಗುಪ್ತಚರ ಇಲಾಖೆಯಲ್ಲಿ ‘ರಾಜಕೀಯ ವಿಭಾಗ’ವೊಂದಿರುವುದು ವಾಸ್ತವ. ಮುಖ್ಯಮಂತ್ರಿಗೂ ಆಸಕ್ತಿಯಿದ್ದು, ಗುಪ್ತಚರ ಇಲಾಖೆಯ ಮುಖ್ಯಸ್ಥರು ಅವರಿಗೆ ಅಷ್ಟೊಂದು ‘ಆಪ್ತ’ರಿದ್ದಲ್ಲಿ (ಸಾಮಾನ್ಯವಾಗಿ ಅಂತಹವರನ್ನೇ ಮುಖ್ಯಸ್ಥರನ್ನಾಗಿಸಿಕೊಳ್ಳಲಾಗುತ್ತದೆ) ಮುಖ್ಯಮಂತ್ರಿಗೆ ಬೇಕಾದ ಸುದ್ದಿಗಳನ್ನು ಸಂಗ್ರಹಿಸುವುದು, ಮುಖ್ಯಮಂತ್ರಿಯ ಸ್ವಪಕ್ಷೀಯ ಹಾಗೂ ವಿರೋಧ ಪಕ್ಷದ ಮುಖಂಡರ ಚಲನವಲನಗಳ ಬೇಹುಗಾರಿಕೆ ನಡೆಸಿ ಮಾಹಿತಿ ತಲುಪಿಸುವುದು ನಡೆಯುತ್ತದೆ. ಬಹುಶಃ ಇದನ್ನು ಮಾಡದ ಯಾವೊಬ್ಬ ಮುಖ್ಯಮಂತ್ರಿಯೂ ಇರುವುದಿಲ್ಲ. ಆದರೆ, ಯಾವ ಪ್ರಮಾಣಕ್ಕೆ ಮಾಡುತ್ತಾರೆ ಎಂಬುದು ಮುಖ್ಯಮಂತ್ರಿಯ ಸ್ವಭಾವ ಮತ್ತು ಗುಪ್ತಚರ ಮುಖ್ಯಸ್ಥರ ರೀತಿ-ನೀತಿಗಳ ಮೇಲೆ ಹೋಗುತ್ತದೆ.
ಈ ರಾಜಕೀಯ ವಿಭಾಗವು ಚುನಾವಣೆಯ ಸಂದರ್ಭದಲ್ಲಿ ಆಗಬಹುದಾದ ಅವಘಡಗಳು, ಹುನ್ನಾರಗಳ ಕುರಿತು ಮಾಹಿತಿ ಸಂಗ್ರಹಿಸುವುದಲ್ಲದೇ ‘ಜನರ ಮೂಡ್’ ಕುರಿತಾಗಿಯೂ ಮಾಹಿತಿಯನ್ನು ಸಂಗ್ರಹಿಸಿ ಇಲಾಖೆಯಲ್ಲಿ ಮೇಲು ಮೇಲಕ್ಕೆ ಕಳಿಸುತ್ತದೆ. ಅವುಗಳ ಮೇಲೆ ಉನ್ನತಾಧಿಕಾರಿಗಳು ಕಣ್ಣಾಡಿಸುತ್ತಾರೆ. ಆದರೆ, ಈ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಅಥವಾ ಸೋಲಬಹುದು ಎಂಬ ಕುರಿತ ಯಾವ ಅಧಿಕೃತ ವರದಿಯೂ ತಯಾರಾಗುವುದಿಲ್ಲ. ಪ್ರತಿದಿನ ಬೆಳಿಗ್ಗೆ ಮುಖ್ಯಮಂತ್ರಿಗಳ ಕಿವಿ ಕಚ್ಚುವ (ಇದನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳಬಾರದು. ಅವರ ಕರ್ತವ್ಯ ಅದು) ಸಂದರ್ಭದಲ್ಲಿ ಗುಪ್ತಚರ ಇಲಾಖೆಯ ಮುಖ್ಯಸ್ಥರು ತಮ್ಮ ಅಸೆಸ್‍ಮೆಂಟ್‍ಅನ್ನು ಹೇಳಲೂಬಹುದು.
ರಾಜಕೀಯವಾಗಿ ಚಾಣಾಕ್ಷಮತಿಯಾದ ಯಾವ ರಾಜಕಾರಣಿಯೂ, ಮುಖ್ಯಮಂತ್ರಿಯೂ ಅದನ್ನು ನಂಬುವುದಿಲ್ಲ. ಈ ರೀತಿಯಲ್ಲಿ ಕಿವಿಯಲ್ಲಿ ಕೇಳಿದ ‘ಚುನಾವಣಾ ಮುನ್ಸೂಚನೆ’ಯ ಕುರಿತು ಮುಖ್ಯಮಂತ್ರಿ ಮನಸ್ಸಿನೊಳಗೇ ನಗುತ್ತಿರಬಹುದು; ಫಲಿತಾಂಶ ಬಂದ ನಂತರ ಅಧಿಕಾರಿಗಳನ್ನು ಆಡಿಕೊಳ್ಳಲೂ ಬಳಸಬಹುದು. ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ‘ಕಿವಿಗೆ ಬಿದ್ದ’ ಸಂಗತಿಯನ್ನು ಹೇಳಿ ಅಂದಿನ ಮುಖ್ಯಮಂತ್ರಿಗಳು, ಫಲಿತಾಂಶದ ನಂತರ ತುಂಬಿದ ಸಭೆಯಲ್ಲಿ ಅಧಿಕಾರಿಗಳನ್ನು ಸಿಕ್ಕಾಪಟ್ಟೆ ಆಡಿಕೊಂಡಿದ್ದು ಐಪಿಎಸ್ ಅಧಿಕಾರಿಗಳ ವಲಯದಲ್ಲಿ ಬಹುಕಾಲ ಚರ್ಚೆಯಲ್ಲಿತ್ತು.
ಏಕೆಂದರೆ, ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಯಾವ ವ್ಯವಸ್ಥಿತ ಮಾಹಿತಿ ಸಂಗ್ರಹವನ್ನೂ ಗುಪ್ತಚರ ಇಲಾಖೆ ಮಾಡುವುದಿಲ್ಲ. ಬಹಳ ಪರಿಣಿತಿಯೊಂದಿಗೆ ಕೆಲವು ಪ್ರಸಿದ್ಧ ಸಂಸ್ಥೆಗಳು ನಡೆಸುವ ಎಕ್ಸಿಟ್ ಪೋಲ್‍ಗಳೇ ಬಹಳ ಸಾರಿ ಸುಳ್ಳಾಗಿರುತ್ತವೆ. ಅಂತಹ ಪರಿಣಿತಿಯಾಗಲೀ, ಕಾರ್ಯಯೋಜನೆಯಾಗಲೀ, ಉದ್ದೇಶವಾಗಲೀ ಗುಪ್ತಚರ ಇಲಾಖೆಗೆ ಇರುವುದಿಲ್ಲ. ಇನ್ನು ಸ್ಥಳೀಯ ಸಿಬ್ಬಂದಿಯ ‘ಜನರಲ್’ ಮಾಹಿತಿಯನ್ನಾಧರಿಸಿ ಅಥವಾ ತಮ್ಮದೇ ಅಂದಾಜನ್ನು ಆಧರಿಸಿ ಗುಪ್ತಚರ ಇಲಾಖೆಯ ಅಧಿಕಾರಿಗಳು ಹೇಳಬಹುದಾದ ‘ಅನಧಿಕೃತ ಸೋರಿಕೆ’ಗೆ ಅಂತಹ ಯಾವ ಮಹತ್ವವೂ ಇಲ್ಲ. ಇನ್ನು ಈ ವಿಚಾರದಲ್ಲಿ ‘ಇಂಟೆಲಿಜೆನ್ಸ್ ರಿಪೋರ್ಟ್’ ಅಂತ ಒಂದು ಇರುವುದೇ ಇಲ್ಲ. ಈ ಸಾರಿಯೂ ಅಂತಹ ಯಾವ ವರದಿಯೂ ತಯಾರಾಗಿಲ್ಲ.
ಹಾಗೆ ನೋಡಿದರೆ, ಕಾಲ ಇನ್ನೂ ಮುಂದಕ್ಕೆ ಬಂದಿದೆ. ವಿವಿಧ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆಗಳನ್ನು ನಡೆಸಿ ಇಟ್ಟುಕೊಂಡಿರುತ್ತಾರೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಆದೇಶದ ಅನ್ವಯ ಅವನ್ನು ಕಡೆಯ ಹಂತದ ಚುನಾವಣೆಯು ಮುಗಿಯುವತನಕ ಘೋಷಿಸುವ ಹಾಗಿಲ್ಲ. ಆ ಸಮೀಕ್ಷೆಗಳನ್ನು ಸಂಸ್ಥೆಗಳ ಜೊತೆಗೆ ಸಖ್ಯ ಹೊಂದಿರುವ ಪಕ್ಷಗಳು ಪಡೆದುಕೊಳ್ಳಬಹುದು. ಇಲ್ಲವೇ, ಕೆಲವು ಏಜೆನ್ಸಿಗಳನ್ನು ನಿಯೋಜಿಸಿ ತಮ್ಮ ಪರವಾಗಿ ಅಥವಾ ವಿರುದ್ಧವಾಗಿ ಏನು ಭಾವನೆಯಿದೆ ಎಂಬುದನ್ನು ತಿಳಿದುಕೊಳ್ಳುವ ಕೆಲಸವನ್ನು ಈಗ ಎಲ್ಲಾ ಪಕ್ಷಗಳೂ ಮಾಡುತ್ತಿವೆ.
ಉದಾಹರಣೆಗೆ, ಮೂರು ದಿನಗಳ ಕೆಳಗೆ ಎನ್‍ಡಿಟಿವಿಯ ಶ್ರೀನಿವಾಸನ್ ಜೈನ್‍ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ನೀಡಿದ ಸಂದರ್ಶನವನ್ನು ನೀವು ನೋಡಿರಬಹುದು. ರಫೇಲ್ ಹಗರಣ ಹೊರಗೆ ತಂದ ಸಂದರ್ಭದಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರು ಮಾತ್ರ ಮೋದಿ ಭ್ರಷ್ಟಾಚಾರ ಮಾಡಿರಬಹುದು ಎಂದು ಭಾವಿಸಿದ್ದರು; ಈಗ ಮೂರನೇ ಎರಡು ಭಾಗದಷ್ಟು ಜನರು ಆ ಭಾವನೆ ಹೊಂದಿದ್ದಾರೆ ಎಂಬುದು ನಮ್ಮ ಆಂತರಿಕ ಸರ್ವೇ ಹೇಳುತ್ತದೆ ಎಂದು ರಾಹುಲ್‍ಗಾಂಧಿ ಹೇಳಿದರು. ಅಂತಹ ಸರ್ವೇ ಮಾಡಿಸಿ ಹೇಳಿದರೋ, ಸುಮ್ಮನೇ ಹೇಳಿದರೋ ರಾಹುಲ್‍ಗಾಂಧಿಯವರಿಗೇ ಗೊತ್ತು. ಆದರೆ, ಇಂತಹ ಸರ್ವೇ ಮಾಡುವ ಹಲವು ಏಜೆನ್ಸಿಗಳು ಇವೆ ಮತ್ತು ರಾಜಕೀಯ ಪಕ್ಷಗಳು ಅವುಗಳ ಬಳಕೆ ಮಾಡುತ್ತಿರುವುದಂತೂ ವಾಸ್ತವ.

ಇಂತಹುದೇ ಕೆಲಸವನ್ನು ಗುಪ್ತಚರ ಇಲಾಖೆ ಮಾಡುತ್ತಿರಬಹುದಲ್ಲವೇ? ಗುಪ್ತಚರ ಇಲಾಖೆಯಿಂದ ಬರುವ ವರದಿಗಳಲ್ಲಿ (ಚುನಾವಣಾ ವಿಷಯಕ್ಕೆ ಸಂಬಂಧಿಸದ್ದಲ್ಲ, ಇತರ ವಿಷಯಗಳದ್ದು) ಹಲವು ಸಾರಿ ಹಾಸ್ಯಾಸ್ಪದವಾಗಿರುತ್ತವೆ. ಆದರೆ, ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಗಳು ಗಮನ ಕೊಟ್ಟು ಯಾವುದಾದರೂ ಕೆಲಸಕ್ಕೆ ಇಳಿದರೆ, ಅವರು ಏನು ಬೇಕಾದರೂ ಮಾಡಬಲ್ಲಷ್ಟು ಸಾಧ್ಯತೆಯನ್ನೂ ಹೊಂದಿದ್ದಾರೆ. ಪ್ರಶ್ನೆಯಿರುವುದು ಚುನಾವಣಾ ಫಲಿತಾಂಶದ ವಿಚಾರದ್ದಾದರೆ, ಅದಕ್ಕೆಂದೇ ನಿಯೋಜಿತವಾಗಬಲ್ಲಷ್ಟು ಸಮಯ, ಸಂಪನ್ಮೂಲ ಮತ್ತು ಸಿಬ್ಬಂದಿ ಈ ಇಲಾಖೆಗೆ ಇಲ್ಲ. ಹಾಗಾಗಿಯೇ ಅವರು ತಮ್ಮ ರಾಜಕೀಯ ಬಾಸ್‍ಗಳನ್ನು ತೃಪ್ತಿ ಪಡಿಸಲು ಬೇಕಾದ ಕೆಲವು ಸಿದ್ಧ ಮಾದರಿ ಊಹೆಗಳನ್ನು ಮಾತ್ರ ಮುಂದಿಡುತ್ತಾರೆ. ಅವು ರಾಜಕೀಯ ವಲಯದಲ್ಲಿ ಪ್ರಚಲಿತವಿರುವ, ‘ವೇವ್ ಇಲ್ಲ, ಆದರೆ ಅಂಡರ್ ಕರೆಂಟ್ ಹೇಗಿದೆ ಅಂತ ಈಗಲೇ ಊಹಿಸಕ್ಕಾಗಲ್ಲ. ಕಡೆ ದಿನಗಳಲ್ಲಿ ಒಂದು ಅಲೆ ಎದ್ದು ಬಿಟ್ಟಿತು ಎನಿಸುತ್ತದೆ. ಕ್ಯಾಸ್ಟ್ ಫ್ಯಾಕ್ಟರ್ ವರ್ಕ್ ಆಯಿತಾದರೂ, ಕಡೇದಿನದ ಹಣ ಯಾವ ಕಡೆಗೆ ತಿರುಗಿಸ್ತು ಅಂತ ಹೇಳೋಕಾಗಲ್ಲ. ಆದ್ರೂ ನೆಕ್ ಟು ನೆಕ್ಕೇ’ ಇಂತಹ ಅಂದಾಜುಗಳನ್ನೇ ಅವರೂ ನೀಡುತ್ತಾರೆ. ಚಾಣಾಕ್ಷ ರಾಜಕಾರಣಿಗಳು ಅವನ್ನು ಗಂಭೀರವಾಗಿ ಕೇಳಿಸಿಕೊಂಡಂತೆ ಮಾಡಿ, ತಮ್ಮ ಅಂದಾಜನ್ನು ತಾವು ಮಾಡಿಕೊಳ್ಳುತ್ತಾರೆ.
ಇದು ನಾನುಗೌರಿ.ಕಾಂಗೆ ತಿಳಿದು ಬಂದಿರುವ ಅಧಿಕೃತ ಮಾಹಿತಿ. ಇಷ್ಟರ ಮೇಲೂ ಇಂಟೆಲಿಜೆನ್ಸ್ ರಿಪೋರ್ಟ್ ಕುರಿತಾದ ವದಂತಿಗಳನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು. ಬಿಬಿಸಿ ವೆಬ್‍ಸೈಟ್‍ನ ಯಾವುದೋ ಲಿಂಕ್ ಹಾಕಿ, ಮೆಸೇಜ್‍ನಲ್ಲೇ ಎಲ್ಲಾ ಕ್ಷೇತ್ರಗಳ ಫಲಿತಾಂಶ ಘೋಷಣೆ ಮಾಡುತ್ತಿರುವ ಫೇಕ್ ಸುದ್ದಿಗಳನ್ನು ನಂಬುತ್ತಿರುವ ಕಾಲದಲ್ಲಿ ಸತ್ಯ ಅಷ್ಟು ರೋಚಕವಾಗಿರುವುದಿಲ್ಲ. ಹಾಗಾಗಿ, ಇನ್ನಷ್ಟು ‘ಇಂಟೆಲಿಜೆನ್ಸ್ ರಿಪೋರ್ಟ್ ನ್ಯೂಸ್’ಗಳನ್ನು ಮುಂದಿನ ದಿನಗಳಲ್ಲಿ ಕೇಳುತ್ತಲೇ ಇರುತ್ತೀರಿ. ಅವು ವಾಸ್ತವ ಆಗಿರುವುದಿಲ್ಲ ಅಷ್ಟೇ.


