Homeಕರ್ನಾಟಕನನಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ, ಆದರೂ ಸರ್ಕಾರ ಸಂಚು ನಡೆಸುತ್ತಿದೆ: ಡಿ.ಕೆ.ಶಿವಕುಮಾರ್‌ ಆರೋಪ

ನನಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ, ಆದರೂ ಸರ್ಕಾರ ಸಂಚು ನಡೆಸುತ್ತಿದೆ: ಡಿ.ಕೆ.ಶಿವಕುಮಾರ್‌ ಆರೋಪ

’ಜನರ ಮೇಲೆ ಬಿಜೆಪಿ ಕೋವಿಡ್, ಬಿಜೆಪಿ ಲಾಕ್ ಡೌನ್, ಬಿಜೆಪಿ ಕರ್ಫ್ಯೂ ಹೇರಲಾಗಿದೆ. ಸೋಂಕು ಇಲ್ಲದಿದ್ದರೂ ಇವರು ಜನರಿಗೆ ಸೋಂಕು ಬರಿಸುತ್ತಿದ್ದಾರೆ’

- Advertisement -
- Advertisement -

“ರಾಜ್ಯ ಸರ್ಕಾರ ನನ್ನ ಮೇಲೆ ಹಾಗೂ ಪಕ್ಷದ ವಿರುದ್ಧ ದೊಡ್ಡ ಸಂಚು ರೂಪಿಸುತ್ತಿದೆ. ಏನಾದರೂ ಮಾಡಿ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತಿದೆ. ಅದೇ ಅವರ ದೊಡ್ಡ ಕಾರ್ಯಕ್ರಮವಾಗಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.

“ನನಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ ಆದರೂ ನನ್ನ ಬಳಿಗೆ ಅಧಿಕಾರಿಯನ್ನು ಕಳುಹಿಸಿ ಸ್ಯಾಂಪಲ್ ಕಲೆಹಾಕಲು ಮುಂದಾದರು. ನಿನ್ನೆ ನನಗೆ ಪರೀಕ್ಷೆ ನಡೆಸಲು ಕಳುಹಿಸಿದ್ದ ಅಧಿಕಾರಿಗೂ ಕೊರೊನಾ ಪಾಸಿಟಿವ್ ಎಂದು ಹೇಳುತ್ತಿದ್ದಾರೆ. ಇದು ಎಷ್ಟು ನಿಜವೋ ಗೊತ್ತಿಲ್ಲ. ನಾನು ಪ್ರಾಥಮಿಕ ಸಂಪರ್ಕಿತ ಎನ್ನುತ್ತಿದ್ದಾರೆ. ಆತನನ್ನು ನನ್ನ ಬಳಿ ಕಳುಹಿಸಿದ್ದು ಯಾರು..? ಯಾಕೆ ಕಳುಹಿಸಿದರು..?” ಎಂದು ಪ್ರಶ್ನಿಸಿದ್ದಾರೆ.

’ನಮ್ಮ ಮನೆಯಲ್ಲೇ ಡಜನ್ ವೈದ್ಯರಿದ್ದಾರೆ. ಅರ್ಧ ಡಜನ್ ವೈದ್ಯಕೀಯ ಕಾಲೇಜು ಮಾಲೀಕರಿದ್ದಾರೆ. ನನಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ ಹೀಗಾಗಿ ಯಾವುದೇ ಪರೀಕ್ಷೆ ಅಗತ್ಯವಿಲ್ಲ ಎಂದು ಅಧಿಕಾರಿಯನ್ನು ವಾಪಸ್ ಕಳುಹಿಸಿದೆ” ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ ದಿನಪತ್ರಿಕೆಗಳಿಗೆ ‘ಮೇಕೆದಾಟು’ ಜಾಹೀರಾತು ಕೊಟ್ಟವರ್‍ಯಾರು? ಪತ್ರಿಕೆಗಳು ಹೇಳಿದ್ದೇನು?

ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಳ ಬಿಜೆಪಿ ತಂತ್ರವಾಗಿದೆ ಎಂದು ಆರೋಪಿಸಿರುವ ಅವರು, “ವಿಮಾನ ನಿಲ್ದಾಣದಲ್ಲಿ ಬಂದವರನ್ನೆಲ್ಲಾ ಹಿಡಿದು ಸೋಂಕು ತಗುಲಿದೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ದೊಡ್ಡ ಷಡ್ಯಂತ್ರ ನಡೆಯುತ್ತಿದ್ದು, ಜನರ ಮೇಲೆ ಬಿಜೆಪಿ ಕೋವಿಡ್, ಬಿಜೆಪಿ ಲಾಕ್ ಡೌನ್, ಬಿಜೆಪಿ ಕರ್ಫ್ಯೂ ಹೇರಲಾಗಿದೆ. ಸೋಂಕು ಇಲ್ಲದಿದ್ದರೂ ಜನರಿಗೆ ಇವರು ಸೋಂಕು ಬರಿಸುತ್ತಿದ್ದಾರೆ. ಸೋಂಕು ಸಂಖ್ಯೆ ಹೆಚ್ಚಳ ವಿಚಾರವಾಗಿ ನ್ಯಾಯಾಂಗ ತನಿಖೆ ನಡೆಯಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸಾತನೂರಿನಲ್ಲಿ ಕೊರೊನಾ ನಿಯಮ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್‌, “ಕೆಲ ದಿನಗಳ ಹಿಂದೆ ಗೃಹ ಸಚಿವರು ತಮ್ಮ ಊರಿನಲ್ಲಿ ಜಾತ್ರೆ ಮಾಡಿದ್ದಾರೆ. ಅವರ ವಿರುದ್ಧ ಯಾಕೆ ಪ್ರಕರಣ ದಾಖಲಾಗಿಲ್ಲ..? ಬಿಜೆಪಿ ನಾಯಕ ಗುತ್ತೆದಾರ್ ಅವರು ಸಾವಿರಾರು ಜನರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡಿದ್ದಾರೆ. ಆದರೂ ಪ್ರಕರಣ ಯಾಕೆ ದಾಖಲಾಗಿಲ್ಲ..? ರಾಜಕೀಯ ಕಾರ್ಯದರ್ಶಿಯಾಗಿದ್ದ ರೇಣುಕಾಚಾರ್ಯ ಅವರು ನಿಯಮ ಉಲ್ಲಂಘಿಸಿದ್ದಾರೆ ” ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸಾತನೂರಿನಲ್ಲಿ 30 ಜನರ ಮೇಲೆ ಕೇಸ್ ಹಾಕಿದ್ದಾರಂತೆ. ಇನ್ನಷ್ಟು ಜನರ ವಿವರಗಳನ್ನು ನಾನು ನೀಡುತ್ತೇನೆ. ಸಾವಿರಾರು ಜನ ಇದ್ದರಲ್ಲ ಅವರ ಮೇಲೆ ಯಾಕೆ ಕೇಸ್ ದಾಖಲಿಸಿಲ್ಲ..? ನಿನ್ನೆ 127 ತಾಲೂಕುಗಳಿಂದ ನಮಗೆ ಕರ್ಫ್ಯೂ ನಿಯಮ ಉಲ್ಲಂಘನೆ ಫೋಟೋ, ವಿಡಿಯೋಗಳು ಬಂದಿವೆ. ಎಲ್ಲಿಯೂ ನಿಯಮ ಪಾಲನೆ ಆಗಿಲ್ಲ. ಎಲ್ಲೆಡೆ ಓಡಾಟ ಮಾಡಲಾಗಿದೆ. ಇವರ ಮೇಲೂ ಕೇಸ್ ಹಾಕಿಲ್ಲ ಯಾಕೆ..?” ಎಂದು ಪ್ರಶ್ನಿಸಿದ್ದಾರೆ.

’ಈ ರಾಜ್ಯದಲ್ಲಿ ಎಲ್ಲರಿಗೂ ನ್ಯಾಯ ಒಂದೇ. ನಾನು ಏನೇ ಮಾತನಾಡಿದರೂ ಬೇರೆ ರೀತಿ ಬಿಂಬಿತವಾಗುತ್ತಿದೆ. ನಾನು ಹೇಳುವುದೊಂದು ಇವರು ತೋರಿಸುವುದೊಂದು. ಹೀಗಾಗಿ ಮುಂದಿನ ಮೂರು ದಿನ ನಾನು ಮೌನ ವಹಿಸುತ್ತೇನೆ. ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡುವುದಿಲ್ಲ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಹರಿಯೋ ನೀರು, ಉರಿಯೋ ಸೂರ್ಯನ ತಡೆಯಲಾಗಲ್ಲ, ಮೇಕೆದಾಟು ಹೋರಾಟ ನಿಲ್ಲಿಸಲಾಗಲ್ಲ: ಡಿ.ಕೆ.ಶಿವಕುಮಾರ್‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read