Homeಕರ್ನಾಟಕರಾಮನಗರ: ರೇಷ್ಮೆ ಮಾರುಕಟ್ಟೆಯಲ್ಲಿ ಶೋಷಣೆ ಆರೋಪ - ಪತ್ರ ಅಭಿಯಾನ ಆರಂಭಿಸಿದ ರೈತರು

ರಾಮನಗರ: ರೇಷ್ಮೆ ಮಾರುಕಟ್ಟೆಯಲ್ಲಿ ಶೋಷಣೆ ಆರೋಪ – ಪತ್ರ ಅಭಿಯಾನ ಆರಂಭಿಸಿದ ರೈತರು

- Advertisement -
- Advertisement -

ಕಳೆದ 30 ವರ್ಷಗಳಿಂದ ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೀಲರ್‌ಗಳು ಹಾಗು ಗೂಡು ಕದಿಯುವ ಮಾಫಿಯಾದವರಿಂದ ರೈತರ ಮೇಲೆ ನಿರಂತರ ಶೋಷಣೆ ಆಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಪತ್ರ ಅಭಿಯಾನ ಆರಂಭಿಸಿದ್ದಾರೆ.

ರೈತರ ಮೇಲಿನ ಶೋಷಣೆ ತಪ್ಪಿಸಲು ಜರೂರು ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ಮುಂದೆ ಮುಖ್ಯಮಂತ್ರಿಗಳಿಗೆ ರಿಜಿಸ್ಟರ್‌ ಪೋಸ್ಟ್‌ನಲ್ಲಿ ಪತ್ರ ಬರೆಯುವ ಚಳವಳಿ ಆರಂಭವಾಗಿದೆ. ಮದ್ದೂರು ತಾಲೂಕಿನ ಹೋಬಳಿ ಮಟ್ಟದಲ್ಲೂ ರೈತರು ಪತ್ರ ಚಳವಳಿ ಆರಂಭಿಸಿದ್ದಾರೆ.

ಇಂದಿನಿಂದ ಪತ್ರ, ಇ-ಮೇಲ್, ಟ್ವಿಟರ್‌ ಮುಂದಾದ ಸಾಮಾಜಿಕ ಮಾಧ್ಯಮಗಳ ಮೂಲಕವೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲಾಗುತ್ತದೆ ಎಂದು ರೈತಮುಖಂಡರಾದ ನ.ಲಿ.ಕೃಷ್ಣರವರು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.

ರಾಮನಗರದ ರೇಷ್ಮೆಗೂಡು ಮಾರುಕಟ್ಟೆ ಬೃಹತ್ ವ್ಯವಹಾರ ಹೊಂದಿದ್ದು ರಾಜ್ಯದ ಎಲ್ಲಾ ಕಡೆಯಿಂದ ರೈತರು ರೇಷ್ಮೆ ಗೂಡು ಮಾರಾಟಕ್ಕಾಗಿ ರಾಮನಗರದ ಮಾರುಕಟ್ಟೆಗೆ ಬರುತ್ತಾರೆ. ಇಲ್ಲಿನ ರೀಲರ್‌ಗಳು ಮತ್ತು ಗೂಡು ಕದಿಯುವ ಮಾಫಿಯಾದವರು ಅಧಿಕಾರಿಗಳೊಂದಿಗೆ ಶಾಮಿಲಾಗಿ ಪ್ರತಿಕ್ಷಣ ಪ್ರತಿದಿನ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕಾವೇರಿಯ ಉಳಿವಿಗೆ ‘ಮೇಕೆದಾಟು ಅಣೆಕಟ್ಟು’ ಪ್ರಸ್ತಾಪ ಕೈಬಿಡಬೇಕು: ಮೇಧಾ ಪಾಟ್ಕರ್‌‌

ರೇಷ್ಮೆ ರೈತರು ಅಭಿಯಾನ ನಡೆಸಲು ಕಾರಣ:

ನಾನು ಗೌರಿ.ಕಾಂ ಜೊತೆಗೆ ಮಾತನಾಡಿರುವ ರೈತ ನ.ಲಿ ಕೃಷ್ಣ ಅಂದಿನ ಘಟನೆಯನ್ನು ತಿಳಿಸಿದ್ದು ಹೀಗೆ.. “ಜನವರಿ 12 ರಂದು ರೇಷ್ಮೆಗೂಡು ಮಾರಾಟಕ್ಕೆ ಬಂದಿದ್ದ ಹಾವೇರಿ ತಾಲೂಕು ಗುಬ್ಬಿ ಗ್ರಾಮದ ರೈತ ವಿರುಪಾಕ್ಷಪ್ಪ ಅವರ ಜಾಲರಿಯಿಂದ ಗೂಡು ಜಾಡಿಸುವ, ಗೂಡು ಬೇರ್ಪಡಿಸುವ ಮೂಲಕ ಅಕ್ರಮವಾಗಿ ಗೂಡು ಸಾಗಿಸುವ, ಗೂಡು ಕದಿಯುವ ಕೆಲಸಕ್ಕೆ ರೀಲರ್ ಮುನೀರ್ ಅಹಮದ್ ಮತ್ತು ಆತನ ಸಹಚರರು ಮುಂದಾಗಿದ್ದಾರೆ. ಹೀಗೆ ತೊಂದರೆ ಮಾಡಬೇಡಿ ಎಂದು ರೈತ ವಿರುಪಾಕ್ಷಪ್ಪ ಕೈ ಮುಗಿದು ಬೇಡಿಕೊಂಡರು ಕೇಳದೇ ಗೂಡು ಮಾಫಿಯಾ ಮಂದಿ ರೈತನ ಮೇಲೆ ಹಲ್ಲೆಗೆ ಮುಂದಾಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಷ್ಟು ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯಾಗಲಿ, ಭದ್ರತಾ ಸಿಬ್ಬಂದಿಯಾಗಲಿ, ಅಲ್ಲೇ ಇದ್ದ ರೈತರಾಗಲಿ ವಿರುಪಾಕ್ಷಪ್ಪನವರ ರಕ್ಷಣೆಗೆ ಧಾವಿಸಿಲ್ಲ. ಇದು ಇಲ್ಲಿನ ಮಾರುಕಟ್ಟೆಯ ಗೂಡುಕದಿಯುವ ಮಾಫಿಯಾದ ಬಲವನ್ನು ತಿಳಿಸುತ್ತದೆ” ಎಂದಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಮಾರುಕಟ್ಟೆ ಅಧಿಕಾರಿ ಈ ಕುರಿತು ಮರುದಿನ ಸಾಂಕೇತಿಕವಾಗಿ  ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ತಮ್ಮ ಹುದ್ದೆಯ ರಕ್ಷಣೆಯ ನಾಟಕವಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಇದು ಒಂದು ಘಟನೆಯಷ್ಟೆ, ಇಂತಹ ಜಾಲ ಕಳೆದ ಮೂವತ್ತು ವರ್ಷಗಳಿಂದಲೂ ಇಲ್ಲಿ ಬೆಳೆದು ನಿಂತಿದೆ. ಅಧಿಕ ಸಂಖ್ಯೆಯಲ್ಲಿ ರಾಜ್ಯದೆಲ್ಲೆಡೆಯಿಂದ ಬರುವ ರೈತರನ್ನು ವ್ಯವಸ್ಥಿತ ಸಂಚಿನ ಮೂಲಕ ಶೋಷಣೆ ಮಾಡುತ್ತಿದೆ. ಇಲ್ಲಿಗೆ ಗೂಡು ತರುವ ಬಹುತೇಕ ರೈತರು ಈ ಮಾಫಿಯಾದಿಂದ ಗೂಡು ರಕ್ಷಿಸಿ ಕೊಳ್ಳಲು ತಮ್ಮ ಗೂಡಿನ ಜಾಲರಿ ಬಿಟ್ಟು ಕದಲದೆ ದಿನವಿಡಿ ಕಾವಲು ಕಾಯಬೇಕಾದ ಪರಿಸ್ಥಿತಿ ಇದೆ. ಹರಾಜಿಗೆ ಮುನ್ನ ಗೂಡು ಪರೀಕ್ಷಿಸುವ ನೆಪದಲ್ಲಿ ಗೂಡು ಚೆಲ್ಲುವುದು, ಹರಾಜಿನ ನಂತರ ಅಕ್ರಮವಾಗಿ ಗುಂಪುಗೂಡಿ ನಿಯಮಬಾಹಿರವಾಗಿ ಗೂಡು ಬೇರ್ಪಡಿಸುವುದು, ಅಕ್ರಮವಾಗಿ ಗೂಡು ಸಾಗಿಸುವುದು, ಜಾಲರಿಯ ಕೆಳಕ್ಕೆ ಗೂಡು ಚೆಲ್ಲಿ ಗೂಡು ಕದಿಯುವ ಕೆಲಸ ಮಾಡುತ್ತಾರೆ. ದೇವರ ಹೆಸರಿನಲ್ಲಿ, ಇತರೆ ಕಾರಣ ಹೇಳಿ ಐದಾರು ಕೆ.ಜಿ.ಗೂಡು ಎತ್ತಿಕೊಳ್ಳುತ್ತಾರೆ. ಪ್ರಶ್ನಿಸುವ ರೈತನ ಮೇಲೆ ಮಾಫಿಯಾ ಮಂದಿ ಒಟ್ಟಾಗಿ ಸೇರಿ ಹಲ್ಲೆ ನಡೆಸುತ್ತಾರೆ ಎಂದು ನ.ಲಿ.ಕೃಷ್ಣ ತಿಳಿಸಿದ್ದಾರೆ.

ಇದನ್ನೂ ಓದಿ: ಒಡಿಶಾ: ಜಿಂದಾಲ್ ಸ್ಟೀಲ್ ವರ್ಕ್ಸ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ- ಪೊಲೀಸರಿಂದ ಮಾರಣಾಂತಿಕ ಹಲ್ಲೆ

ಪ್ರಕರಣ ಹಿನ್ನೆಲೆ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಶೋಷಣೆ ವಿರುದ್ಧ ರೈತರು ದನಿ ಎತ್ತಿದ್ದಾರೆ. ಮುಖ್ಯಮಂತ್ರಿಗಳು ಘಟನೆ ಎಸಗಿದ ರೀಲರ್ ಮುನೀರ್ ಅಹಮದ್ ಲೈಸನ್ಸ್ ರದ್ದುಗೊಳಿಸಬೇಕು. ಆತನ ಬಂಧನ ಮಾಡಬೇಕು. ಜೊತೆಗೆ ಪ್ರಮುಖವಾಗಿ ತಕ್ಷಣ ದಕ್ಷ ಅಧಿಕಾರಿಗಳ ನೇಮಕವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಇವುಗಳ ಜೊತೆಗೆ…

* ಈ ಕೂಡಲೆ ರಾಮನಗರ ಮಾರುಕಟ್ಟೆಗೆ ದಕ್ಷ ಅಧಿಕಾರಿಗಳ ನೇಮಕವಾಗಬೇಕು

* ಮಾರುಕಟ್ಟೆಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧಿಸಬೇಕು

* ರೀಲರ್‌ಗಳು ಅಧಿಕೃತ ಬ್ಯಾಡ್ಜ್ ಧರಿಸಿ ವ್ಯಾಪಾರದಲ್ಲಿ ಭಾಗಿಯಾಗಬೇಕು

* ಮಾರುಕಟ್ಟೆ ಆವರಣದಲ್ಲಿ ಸಮಗ್ರವಾಗಿ ಸಿಸಿಟಿವಿ ಅಳವಡಿಸಿ ಅದನ್ನು ಬಹೃತ್ ಪರದೆಯಲ್ಲಿ ಪ್ರದರ್ಶಿಸಬೇಕು

* ಮಾರುಕಟ್ಟೆಯಲ್ಲಿ ಜಾಗೃತ ದಳ ನೇಮಿಸಿ ರೈತರ ಮೇಲಿನ ಶೋಷಣೆ ತಡೆಯಬೇಕು.

* ದಿನದ ವಹಿವಾಟಿನ ಕೊನೆಗೆ ಎಲ್ಲಾ ರೈತರಿಗೆ ತೂಕಕ್ಕೆ ತಕ್ಕ ದರಕ್ಕೆ ತಕ್ಕ ಹಣ ಹೊಂದಾಣಿಕೆ ಆಗಿರುವುದನ್ನ ಖಚಿತಪಡಿಸಿಕ್ಕೊಳ್ಳುವ ಅಧಿಕಾರಿ ನೇಮಕವಾಗಬೇಕು.

* ಮಾರುಕಟ್ಟೆ ಆವರಣದಲ್ಲಿ ಕಿರು ಪೊಲೀಸ್ ಠಾಣೆ ಸ್ಥಾಪಿಸಬೇಕು ಎಂಬ ಪ್ರಮುಖ ಹಕ್ಕೋತ್ತಾಯಗಳನ್ನು ಸಲ್ಲಿಸಿದ್ದಾರೆ.

ಘಟನೆ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ ಖಂಡಿಸಿದ್ದರು. “ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತನ ಮೇಲೆ ರೀಲರ್‌ ಒಬ್ಬ ದುಂಡಾವರ್ತನೆ ನಡೆಸಿದ ಘಟನೆ ಖಂಡನೀಯ. ಹಗಲು ರಾತ್ರಿ ನಿದ್ದೆಗೆಟ್ಟು ಕಷ್ಟದಿಂದ ರೇಷ್ಮೆಗೂಡು ಬೆಳೆದು ತರುವ ರೈತರ ಮೇಲೆ ಈ ರೀತಿ ದೌರ್ಜನ್ಯ ಎಸಗುವುದು ಅಕ್ಷಮ್ಯ” ಎಂದಿದ್ದರು.

“ದೌರ್ಜನ್ಯ ಎಸಗಿದ ರೀಲರುಗಳ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌ ಅವರಿಗೆ ತಿಳಿಸಿದ್ದೇನೆ. ರೇಷ್ಮೆಗೂಡು ಹರಾಜು ನಡೆಯುವ ಸಂದರ್ಭದಲ್ಲಿ ಹೆಚ್ಚುವರಿ ಭದ್ರತೆ ಒದಗಿಸುವಂತೆಯೂ ಸೂಚಿಸಿದ್ದೇನೆ. ಇಂಥ ಘಟನೆಗಳು ಮರುಕಳಿಸದಂತೆ ಬಿಗಿಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. ಹರಾಜು ಸಂದರ್ಭದಲ್ಲಿ ರೇಷ್ಮೆ ಗೂಡನ್ನು ಬೇರ್ಪಡಿಸುವುದು, ಅಕ್ರಮವಾಗಿ ಗೂಡನ್ನು ತೆಗೆದುಕೊಳ್ಳುವುದು, ಕಳ್ಳತನ ಮಾಡುವುದು ರಾಮನಗರ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬಗ್ಗೆ ನನಗೆ ಅನೇಕ ದೂರುಗಳು ಬಂದಿವೆ. ಇಂಥ ಕಾನೂನು ಬಾಹಿರ ಕೃತ್ಯಗಳನ್ನು ಸಹಿಸುವ ಪ್ರಶ್ನೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಸಂಸ್ಕೃತ ವಿವಿಗೆ ದುಡ್ಡು ಸುರಿಯುವ ಬದಲು ಸರ್ಕಾರಿ ಶಾಲೆ ಉಳಿಸಿ: ಕನ್ನಡಿಗರ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ: ಕೆನಡಾದಲ್ಲಿ ಶಂಕಿತ ಮೂವರು ಭಾರತೀಯರ ಬಂಧನ

0
ಸಿಖ್‌ ಪ್ರತ್ಯೇಕತವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಕೆನಡಾದಲ್ಲಿ ಕೆಲ ತಿಂಗಳ ಹಿಂದೆಯೇ ಈ ಶಂಕಿತರನ್ನು ಪೊಲೀಸರು ಗುರುತಿಸಿದ್ದು,...