ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಭೂಕುಸಿತದಿಂದ ಮೂವರು ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಸಮೀಪದ ಕಜೆಬೈಲು ಗ್ರಾಮದಲ್ಲಿ ಬುಧವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಗ್ರಾಮದ ಮನೆಯೊಂದರ ಮೇಲೆ ಭಾರೀ ಪ್ರಮಾಣದ ಮಣ್ಣು ಕುಸಿದಿದೆ. ನಿನ್ನೆ ರಾತ್ರಿ ಭೂಕುಸಿತ ಸಂಭವಿಸಿದ ನಂತರ ಜನರು ಮನೆಯೊಳಗೆ ಸಿಲುಕಿಕೊಂಡಿದ್ದರು. ನಾಲ್ವರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮೂವರನ್ನು ರಕ್ಷಿಸಿ ತುರ್ತು ಸೇವೆಗಳ ಮೂಲಕ ಸ್ಥಳೀಯ ಆಸ್ಪತ್ರೆಗೆ ಬುಧವಾರ ರಾತ್ರಿ ಸಾಗಿಸಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತ ಮೂವರೂ ಕೇರಳದ ಕಾರ್ಮಿಕರು” ಎಂದು ದಕ್ಷಿಣ ಕನ್ನಡ ಎಸ್‌ಪಿ ರಿಷಿಕೇಶ್ ಸೋನವಾನೆ ತಿಳಿಸಿದ್ದಾರೆ. ಮೃತರನ್ನು ಪಾಲಕ್ಕಾಡ್‌ನ ಬಿಜು (45), ಅಲಪ್ಪುಳದ ಸಂತೋಷ್ (46) ಮತ್ತು ಕೊಟ್ಟಾಯಂನ ಬಾಬು ( 46) ಎಂದು ಗುರುತಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಕರ್ನಾಟಕದ ಕೆಲವು ಭಾಗಗಳಲ್ಲಿ – ವಿಶೇಷವಾಗಿ ಕರಾವಳಿಯಲ್ಲಿ ಭಾರೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯು ಜುಲೈ 7ರಂದು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಕೊಡಗಿನಲ್ಲಿ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ಹಾಸನ, ಹಾವೇರಿ, ಧಾರವಾಡ, ಗದಗ ಮತ್ತು ಕಲಬುರಗಿಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಹವಾಮಾನ ಇಲಾಖೆಯು ಜುಲೈ 6 ರಂದು ಎಲ್ಲಾ ಜಿಲ್ಲೆಗಳಲ್ಲಿ, ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ನೀಡಿತ್ತು. ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದೆ. ಇದೇ ಪರಿಸ್ಥಿತಿ ಜುಲೈ 10ರವರೆಗೆ ಮುಂದುವರಿಯಬಹುದು ಎಂದು ಹವಾಮಾನ ನಿಗಾ ಸಂಸ್ಥೆ ತಿಳಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಬೆಳಗಾವಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.
ಇದನ್ನೂ ಓದಿರಿ: ದ್ವೇಷ ಭಾಷಣ: ಬಿಜೆಪಿ ಬೆಂಬಲಿತ ಸಂಘಟನೆ ಹೆಚ್‌ಜೆವಿ ರಾಜ್ಯ ಸಂಚಾಲಕ ಕೇಶವ ಮೂರ್ತಿ ವಿರುದ್ಧ ಎಫ್‌ಐಆರ್
ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೊಡಗು, ಕಾರವಾರ ಮತ್ತು ಉಡುಪಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
“ಸಾಮಾನ್ಯ ಭೂಕುಸಿತ ಸಂಭವಿಸುವ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಮತ್ತು ರಸ್ತೆಗಳನ್ನು ತೆರವುಗೊಳಿಸಲು ಸೂಚನೆಗಳನ್ನು ನೀಡಲಾಗಿದೆ. ನಮ್ಮ ತಂಡಗಳು ಎಲ್ಲಾ ಸಲಕರಣೆಗಳೊಂದಿಗೆ ಸನ್ನದ್ಧವಾಗಿವೆ” ಎಂದು ಸಿಎಂ ಹೇಳಿದ್ದಾರೆ.
ನೈಋತ್ಯ ಮಾನ್ಸೂನ್ ಪ್ರಾರಂಭವಾಗುವುದರೊಂದಿಗೆ, ರಾಜ್ಯದ ಹೆಚ್ಚಿನ ಸ್ಥಳಗಳಲ್ಲಿ ಮಳೆ ಬೀಳುತ್ತಿದೆ. ವಿಶೇಷವಾಗಿ ಉತ್ತರ ಒಳಭಾಗ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಿದೆ.


