”ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಅಥವಾ ಸಮಗ್ರತೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕದ ಚುನಾವಣಾ ರ‍್ಯಾಲಿಯಲ್ಲಿ ಹೇಳಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ಸೋಮವಾರ ಭಾರತ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
”6.5 ಕೋಟಿ ಕನ್ನಡಿಗರಿಗೆ ಸೋನಿಯಾ ಗಾಂಧಿ ಗಟ್ಟಿ ಸಂದೇಶ ರವಾನಿಸಿದ್ದಾರೆ. ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಅಥವಾ ಸಮಗ್ರತೆಗೆ ಧಕ್ಕೆ ತರಲು ಕಾಂಗ್ರೆಸ್ ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
CPP Chairperson Smt. Sonia Gandhi ji sends a strong message to 6.5 crore Kannadigas:
"The Congress will not allow anyone to pose a threat to Karnataka's reputation, sovereignty or integrity." pic.twitter.com/W6HjKYWjLa
— Congress (@INCIndia) May 6, 2023
ಸೋಮವಾರ, ಕೇಂದ್ರ ಸಚಿವ ಭೂಪೇಂದರ್ ಯಾದವ್ ನೇತೃತ್ವದ ಬಿಜೆಪಿಯ ನಿಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಸೋನಿಯಾ ಗಾಂಧಿ ವಿರುದ್ಧ ತಕ್ಷಣ ಮತ್ತು ದೃಢವಾದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದು ಕಾಂಗ್ರೆಸ್ ಮಾನ್ಯತೆಯನ್ನೂ ರದ್ದು ಮಾಡಬೇಕು ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
”ಕರ್ನಾಟಕದಲ್ಲಿನ ಸೌಹಾರ್ದತೆ ಮತ್ತು ಶಾಂತಿಯನ್ನು ಕದಡುವುದಕ್ಕಾಗಿ ಕೇವಲ ಕೆಲವು ಆಯ್ದ ಸಮುದಾಯಗಳು ಅಥವಾ ಗುಂಪುಗಳ ಮತಗಳು ಗಳಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ. ಅವರ ಏಕೈಕ ಉದ್ದೇಶವು ಭಾರತೀಯ ರಾಜ್ಯದ ಅಸ್ತಿತ್ವವನ್ನು ಅಡ್ಡಿಪಡಿಸುವುದಾಗಿದೆ” ಎಂದು ಬಿಜೆಪಿ ಆರೋಪಿಸಿದೆ.
”ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು “ತುಕ್ಡೆ ತುಕ್ಡೆ ಗ್ಯಾಂಗ್” ನಂತಹ ಪ್ರತ್ಯೇಕತಾವಾದಿ ಸಂಘಟನೆಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ” ಎಂದು ಹಿಂದುತ್ವವಾದಿ ಪಕ್ಷ ಬಿಜೆಪಿ ಆರೋಪ ಮಾಡಿದೆ.
”ಕರ್ನಾಟಕವು ಭಾರತದ ಒಕ್ಕೂಟದಲ್ಲಿ ಅತ್ಯಂತ ಪ್ರಮುಖ ರಾಜ್ಯವಾಗಿದೆ ಮತ್ತು ಅದರ ಸಾರ್ವಭೌಮತ್ವವನ್ನು ರಕ್ಷಿಸುವ ಬಗ್ಗೆ ಮಾತನಾಡುವುದು ಪ್ರತ್ಯೇಕತೆಯ ಕರೆಗೆ ಸಮಾನವಾಗಿರುತ್ತದೆ ಮತ್ತು ಇದು ಅಪಾಯಕಾರಿ ಮತ್ತು ಹಾನಿಕಾರಕ ಪರಿಣಾಮಗಳಿಂದ ತುಂಬಿದೆ” ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ: ಧರ್ಮದ ಹೆಸರಲ್ಲಿ ಮೋದಿ ಮತಯಾಚನೆ, ಪ್ರಣಾಳಿಕೆ ಸುಟ್ಟುಹಾಕಿದ ಈಶ್ವರಪ್ಪ: ಆಯೋಗಕ್ಕೆ ಕಾಂಗ್ರೆಸ್ ದೂರು
ಭಾನುವಾರ, ಮೈಸೂರಿನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋನಿಯಾ ಗಾಂಧಿಯವರ ಟೀಕೆಗಳನ್ನು ಉಲ್ಲೇಖಿಸಿದರು. ಕಾಂಗ್ರೆಸ್‌ಗೆ ”ತುಕ್ಡೆ-ತುಕ್ಡೆ ಗ್ಯಾಂಗ್” ನ ‘ರೋಗ’ ಹೆಚ್ಚಾಗಿದೆ ಎಂದು ಆರೋಪಿಸಿದರು.
ಬಿಜೆಪಿಯು ತನ್ನ ಪ್ರತಿಪಕ್ಷಗಳು ಮತ್ತು ಸರ್ಕಾರವನ್ನು ಟೀಕಿಸುವವರನ್ನು ದೇಶವಿರೋಧಿಗಳು ಎಂದು ಹೇಳುತ್ತದೆ ಮತ್ತು ಅವರಿಗೆ ”ತುಕ್ಡೆ ತುಕ್ಡೆ ಗ್ಯಾಂಗ್” ಎಂದು ಲೇಬಲ್ ಮಾಡುತ್ತದೆ. ಆದರೆ, ಜನವರಿ 2020ರಲ್ಲಿ, ಕೇಂದ್ರ ಗೃಹ ಸಚಿವಾಲಯವು ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಅಂತಹ ಯಾವುದೇ ದೇಶವಿಭಜನೆ ಮಾಡುವ ಗ್ಯಾಂಗ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದೆ.


