Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ತೇರದಾಳ ವಿಧಾನಸಭಾ ಕ್ಷೇತ್ರ ಸಮೀಕ್ಷೆ: ನೇಕಾರರ ನಾಡಲ್ಲಿ ಕೈ-ಕಮಲದ ನಡುವೆ ಬಿಗ್ ಫೈಟ್

ತೇರದಾಳ ವಿಧಾನಸಭಾ ಕ್ಷೇತ್ರ ಸಮೀಕ್ಷೆ: ನೇಕಾರರ ನಾಡಲ್ಲಿ ಕೈ-ಕಮಲದ ನಡುವೆ ಬಿಗ್ ಫೈಟ್

- Advertisement -
- Advertisement -

ತೇರದಾಳ ಪಟ್ಟಣ ಸುದೀರ್ಘ ಇತಿಹಾಸ ಹೊಂದಿರುವ ಜೈನರ ಪ್ರಮುಖ ಕೇಂದ್ರವಾಗಿದೆ. ಶಾಸನಗಳಲ್ಲಿ ತೇರದಾಳ ಎಂದು ಕರೆಯಲ್ಪಟ್ಟಿರುವ ಈ ಪಟ್ಟಣ ಗೋಂಕ ಅರಸರ ರಾಜಧಾನಿಯಾಗಿತ್ತು. 2018ರಲ್ಲಿ ಎಚ್‌.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲೆಯ ತೇರದಾಳವನ್ನು ಹೊಸ ತಾಲೂಕನ್ನಾಗಿ ಘೋಷಣೆ ಮಾಡಿದ್ದರು. 2008ರಲ್ಲಿ ನಡೆದ ಕ್ಷೇತ್ರ ಮರು ವಿಂಗಡನೆಯಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರ ರಚನೆಯಾಗಿದೆ. ಗುಳೇದಗುಡ್ಡ ಮತ ಕ್ಷೇತ್ರವನ್ನು ತೆಗೆದುಹಾಕಿ ಹೊಸ ಕ್ಷೇತ್ರವಾಗಿ ತೇರದಾಳವನ್ನು ರಚನೆ ಮಾಡಲಾಯಿತು. ರಬಕವಿ, ಬನಹಟ್ಟಿ, ಮಹಾಲಿಂಗಪುರ ಈ ಕ್ಷೇತ್ರದ ಪ್ರಮುಖ ಪಟ್ಟಣಗಳಾಗಿವೆ.

ರಾಜ್ಯದಲ್ಲಿ ಅತಿಹೆಚ್ಚು ನೇಕಾರ ಸಮುದಾಯವಿರುವ ವಿಧಾನಸಭಾ ಮತಕ್ಷೇತ್ರಗಳ ಪೈಕಿ ತೇರದಾಳ ಕೂಡ ಒಂದು. ರಾಜಕೀಯವಾಗಿ ಇಲ್ಲಿ ಮೇಲಿಂದ ಮೇಲೆ ನೇಕಾರರಿಗೆ ಮನ್ನಣೆ ನೀಡಿ ಎನ್ನುವ ಕೂಗು ಸದಾ ಕೇಳುತ್ತಲೇ ಇರುತ್ತದೆ. ಈ ವಿಚಾರದಲ್ಲಿ ಕಾಂಗ್ರೆಸ್ ನೇಕಾರ ಸಮುದಾಯದ ಉಮಾಶ್ರೀಯವರಿಗೆ ಮಣೆ ಹಾಕಿ ಒಮ್ಮೆ ಗೆಲುವು ಕಂಡು ಇನ್ನೊಮ್ಮೆ ಸೋಲು ಅನುಭವಿಸಿದೆ. ಆದರೆ ಬಿಜೆಪಿ ಮಾತ್ರ ಇದುವರೆಗೂ ನೇಕಾರರಿಗೆ ಮನ್ನಣೆ ನೀಡಿಲ್ಲ. ನೇಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಕ್ಷೇತ್ರದ ಶಾಸಕ ಸಿದ್ದು ಸವದಿ ಲಿಂಗಾಯತರು. 2004ರಲ್ಲಿ ಜಮಖಂಡಿಯ ಶಾಸಕರಾಗಿದ್ದ ಅವರು 2008ರ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ತೇರದಾಳಕ್ಕೆ ಬಂದರು. ನಾಲ್ಕನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ತೇರದಾಳ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ.

ಮೂರು ವಿಧಾನಸಭಾ ಚುನಾವಣೆ ಎದುರಿಸಿದ ತೇರದಾಳದ ಚಿತ್ರಣ

2008ರಲ್ಲಿ ಮೊದಲ ವಿಧಾನಸಭಾ ಚುನಾವಣೆ ಎದುರಿಸಿದ ತೇರದಾಳದಲ್ಲಿ ಬಿಜೆಪಿ ಬಾವುಟ ಹಾರಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿದ್ದು ಸವದಿ 62,595 ಮತಗಳನ್ನು ಪಡೆದು ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಉಮಾಶ್ರೀ 50351 ಮತ ಪಡೆದು, 12,244 ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,78,292 ಇದ್ದು, 1,24,451 ಮತದಾರರು ಮತ ಚಲಾಯಿಸಿದ್ದರು.

ಆನಂತರ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮಾಶ್ರೀ ಅವರು ಸಿದ್ದು ಸವದಿಗೆ ಸೋಲಿನ ರುಚಿ ತೋರಿಸಿದರು. ಉಮಾಶ್ರೀ ಅವರು 70,189 ಮತ ಪಡೆಯುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆ ಮೂಲಕ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವೆ ಕೂಡ ಆದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿದ್ದು ಸವದಿ 67,590 ಪಡೆದು, 2,599 ಮತಗಳ ಅಂತರದಲ್ಲಿ ಸೋಲು ಕಂಡರು. ಆ ವೇಳೆ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,92,780 ಇದ್ದು, 1,51,562 ಮತದಾರರು ಮತ ಚಲಾಯಿಸಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಿದ್ದು ಸವದಿ ಮತ್ತೆ ಗೆಲುವು ಸಾಧಿಸುವ ಮೂಲಕ ಉಮಾಶ್ರೀ ಅವರನ್ನು ಸೋಲಿಸಿದರು. ಆ ವೇಳೆ ಸಿದ್ದು ಸವದಿ 87,583 ಮತ ಪಡೆದು ಗೆಲುವಿನ ನಗೆ ಬಿರಿದರು. ಉಮಾಶ್ರೀ 66,470 ಮತ ಪಡೆದು 21,113 ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು. ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಮತದಾರರ ಸಂಖ್ಯೆ 2 ಲಕ್ಷ ದಾಟಿದ್ದು, ಒಟ್ಟು ಮತದಾರರು 2,20,421 ಇದ್ದು, 1,73,610 ಮತದಾರರು ಮತ ಚಲಾಯಿಸಿದ್ದರು.

ಮತದಾರರ ಅಂಕಿ ಅಂಶಗಳು

ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆ-1,13,719  ಮಹಿಳಾ ಮತದಾರರ ಸಂಖ್ಯೆ-1,13,593 ಲಿಂಗತ್ವ ಇತರೆ-18 ಒಟ್ಟು ಮತದಾರರ ಸಂಖ್ಯೆ- 2,27,330

ಜಾತಿ ಲೆಕ್ಕಾಚಾರ:

ತೇರದಾಳ ಕ್ಷೇತ್ರದಲ್ಲಿ ಪಂಚಮಸಾಲಿ ಮತದಾರರು 40,000,  ನೇಕಾರ ಸಮುದಾಯದ ಮತಗಳು-36,000, ಮುಸ್ಲಿಂ ಸಮುದಾಯದ ಮತದಾರರು-30,000, ಎಸ್‌ಸಿ-ಎಸ್‌ಟಿ ಮತದಾರರು-25,000, ಗಾಣಿಗ ಸಮುದಾಯದ ಮತಗಳು-18,000 ಕುರುಬ ಸಮುದಾಯದ ಮತಗಳು-18,000 ಜೈನ ಮತದಾರರು-16,000 ಬಂಜಾರ-10,000, ಉಪ್ಪಾರ ಸಮುದಾಯದವರು-10,000 ಜಂಗಮರು-6000 ರೆಡ್ಡಿ ಸಮುದಾಯದವರು-5000 ಇತರೆ-12,000 ಮತಗಳಿವೆ ಎನ್ನಲಾಗಿದೆ.

ನೇಕಾರರ ನಾಡಲ್ಲಿ ನೇಕಾರರಿಗೆ ದೊರೆಯದ ರಾಜಕೀಯ ಪ್ರಾಶಸ್ತ್ಯ

ತೇರದಾಳ ಕ್ಷೇತ್ರದಲ್ಲಿ ಬಿಜೆಪಿ ರಾಜಕೀಯ ನೋಡುವುದಾರೆ ಈ ವರೆಗೂ ಒಂದು ಬಾರಿಯೂ ನೇಕಾರ ಸಮುದಾಯದವರಿಗೆ ಟಿಕೆಟ್ ನೀಡಲಿಲ್ಲ. ಪಂಚಮಸಾಲಿ ಲಿಂಗಾಯತ ಸಮುದಾಯದ ಸಿದ್ದು ಸವದಿ ಅವರಿಗೆ 2008ರಿಂದ 2013ರ ಚುನಾವಣೆ ವರೆಗೂ ಟಿಕೆಟ್ ನೀಡಿದೆ. ಸಿದ್ದು ಸವದಿ ಅವರು ಈ ಕ್ಷೇತ್ರದಲ್ಲಿ ಈ ವರೆಗೂ ಮೂರು ಬಾರಿ ಪ್ರತಿನಿಧಿಸಿ ಎರಡು ಬಾರಿ ಗೆಲುವು ಕಂಡಿದ್ದಾರೆ. ಬಿ ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೇಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಸಹ ಆಗಿದ್ದರು. ತೇರದಾಳ ಕ್ಷೇತ್ರದಲ್ಲಿ ನೇಕಾರರೇ ನಿರ್ಣಾಯಕವಾಗಿದ್ದು, ಬಿಜೆಪಿ ಮಾತ್ರ ನೇಕಾರ ಸಮುದಾಯದ ಅಭ್ಯರ್ಥಿಗಳಿಗೆ ಈವರೆಗೂ ಟಿಕೆಟ್ ನೀಡಿಲ್ಲ.

ಈ ಕ್ಷೇತ್ರದಲ್ಲಿ ಪಂಚಮಸಾಲಿ ಲಿಂಗಾಯತರನ್ನು ಬಿಟ್ಟರೆ ಅತಿಹೆಚ್ಚು ನೇಕಾರ ಸಮುದಾಯ ಇರುವುದರಿಂದ ಅವರು ಯಾರ ಪರ ಒಲವು ವ್ಯಕ್ತಪಡಿಸುತ್ತಾರೋ ಆ ಅಭ್ಯರ್ಥಿಯೇ ತೇರದಾಳ ಕ್ಷೇತ್ರದ ಶಾಸಕರಾಗುತ್ತಾರೆ. ಮತ್ತೊಂದು ಕಡೆ ಕಾಂಗ್ರೆಸ್‌ನವರು ಸತತ ಮೂರು ಬಾರಿ ಟಿಕೆಟ್ ನೀಡಿದ್ದರು. ಆದರೆ ಮೊದಲ ಬಾರಿಗೆ ಉಮಾಶ್ರೀ ಅವರು ಸೋಲು ಕಾಣಲು ಅವರು ಸ್ಥಳೀಯರಲ್ಲ ಎನ್ನುವ ಕಾರಣಕ್ಕೆ. ಎರಡನೇ ಬಾರಿ ಅವರು ಅಲ್ಲಿಯೇ ವಾಸ್ತವ್ಯ ಹೂಡಿ ನಾನು ಈ ಊರ ಮಗಳು ಎಂದು ಹೇಳಿಕೊಂಡರು ಆಗ ಅಲ್ಲಿಯ ಮತದಾರರು ಒಲವು ತೋರಿ ಗೆಲುವಿನ ಮಾಲೆ ಹಾಕಿದರು. ಆ ಬಳಿಕ ಅವರು ಸಿದ್ದರಾಮಯ್ಯ ಅವರ ಕ್ಯಾಬಿನೆಟ್ ಸಚಿವೆಯೂ ಆದರೂ ಮತ್ತು ಕ್ಷೇತ್ರದಿಂದ ದೂರವೇ ಉಳಿದರು. ಹಾಗಾಗಿ ಮತ್ತೆ ಅವರನ್ನು 2018ರಲ್ಲಿ ಸೋಲುಣಬೇಕಾಯಿತು.

ಈ ಬಾರಿ ಕಾಂಗ್ರೆಸ್ ನೇಕಾರ ಸಮುದಾಯದ ಉಮಾಶ್ರೀ ಅವರನ್ನು ಕೈ ಬಿಟ್ಟು ಪಂಚಮಸಾಲಿ ಲಿಂಗಾಯತ ಸಮುದಾಯದ ಸಿದ್ದು ಕೊಣ್ಣೂರು ಅವರಿಗೆ ಟಿಕೆಟ್ ನೀಡಿದೆ. ಮತ್ತೊಂದೆಡೆ ಬಿಜೆಪಿ ಮತ್ತೆ ಸಿದ್ದು ಸವದಿಗೆ ಮಣೆ ಹಾಕಿರುವುದು ಕ್ಷೇತ್ರದ ನೇಕಾರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಸವದಿ ಗೆಲುವಿನ ಓಟ ಮುನ್ನಡೆಸುತ್ತಾರಾ?

ಬಿಜೆಪಿ ಅಭ್ಯರ್ಥಿಯಾಗಿ ಸತತ ನಾಲ್ಕನೇ ಬಾರಿಗೆ ಸ್ಪರ್ಧೆ ಮಾಡುತ್ತಿರುವ ಸಿದ್ದು ಸವದಿ ಗೆಲುವಿನ ಓಟ ಮುಂದುವರೆಸಲು ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯಲ್ಲಿ ಈ ಬಾರಿ ಜಿಲ್ಲೆಯ ನೇಕಾರ ಮುಖಂಡ ಮನೋಹರ ಶಿರೋಳ ಪ್ರಬಲ ಆಕಾಂಕ್ಷಿಯಾಗಿದ್ದರು. ಇವುಗಳ ಮಧ್ಯೆ ಮೂರನೇ ವ್ಯಕ್ತಿ ಪಿಕೆಪಿಎಸ್​ ಮಾಜಿ ನಿರ್ದೆಶಕ ಭೀಮಶಿ ಮಗದುಮ್​ ಸಹ ಬಿಜೆಪಿ ಟಿಕೆಟ್​ ಗಾಗಿ ಪೈಪೋಟಿ ನಡೆಸಿದ್ದರು. ಆದರೆ ಬಿಜೆಪಿ ಅಂತಿಮವಾಗಿ ಸಿದ್ದು ಸವದಿಗೆ ಮುದ್ರೆ ಒತ್ತಿದೆ. ಆದರೆ ಇದೀಗ ಬಿಜೆಪಿಯ ಬಂಡಾಯ ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಸಧ್ಯದ ಚಿತ್ರಣ ಬಂಡಾಯ ಕಾಣುತ್ತಿಲ್ಲ. ಇದು ಸವದಿ ಗೆಲುವಿಗೆ ಅನಕೂಲವಾಗಲಿದೆ.

ಇನ್ನು ನೇಕಾರರ ಸಮುದಾಯವು ಈವರೆಗೂ ಸಿದ್ದು ಸವದಿಗೆ ಭಾರೀ ಬಹುಮತದ ಅಂತರದ ಗೆಲುವು ನೀಡಿತ್ತು. ಆದರೆ ಈಗ ಬಿಜೆಪಿಯವರು ನೇಕಾರರ ಸಮುದಾಯದ ಮನೋಹರ ಶಿರೋಳ ಅವರಿಗೆ ಟಿಕೇಟ್ ನೀಡದಿರುವುದು ಸಹಜವಾಗಿಯೇ ಒಂದಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ ಫಲಿತಾಂಶದ ಬಳಿಕವೇ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.

ಹೊಸಮುಖಕ್ಕೆ ಮಣೆ; ಬಂಡಾಯದ ಎದುರು ಬೆಂಡಾಗುವರೇ ಕೈ ಅಭ್ಯರ್ಥಿ ಕೊಣ್ಣೂರು

ನೇಕಾರರ ಪ್ರಾತಿನಿಧ್ಯ ವಿಚಾರದಲ್ಲಿ ಕಾಂಗ್ರೆಸ್​ ನೇಕಾರ ಸಮುದಾಯದ ಉಮಾಶ್ರೀ ಅವರಿಗೆ ಮಣೆ ಹಾಕಿ ಒಮ್ಮೆ ಗೆಲುವು ಕಂಡು ಇನ್ನೊಮ್ಮೆ ಸೋಲು ಅನುಭವಿಸಿದೆ. 2008ರಿಂದ ಕಾಂಗ್ರೆಸ್‌ನಿಂದ ತೇರದಾಳ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದ ನಟಿ ಉಮಾಶ್ರೀಗೆ ಈ ಬಾರಿ ಟಿಕೆಟ್‌ ತಪ್ಪಿದೆ. ಹೊಸ ಮುಖ ಸಿದ್ದು ಕೊಣ್ಣೂರು ಅವರಿಗೆ ಕಾಂಗ್ರೆಸ್‌ ಮಣೆ ಹಾಕಿದೆ.

2013ರಲ್ಲಿ ನಟಿ ಉಮಾಶ್ರೀ ಶಾಸಕಿಯಾಗಿ ಆಯ್ಕೆಯಾಗಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವೆಯೂ ಆದರು. ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ನೊಣವಿನಕೆರೆ ಗ್ರಾಮದವರು. ಸದಾ ಬೆಂಗಳೂರಿನಲ್ಲೇ ಕಾಲ ಕಳೆಯುತ್ತಾರೆ ಎನ್ನುವ ದೂರು ಇವರ ಮೇಲಿತ್ತು. ಕೊನೆ ಕ್ಷಣದವರೆಗೂ ತಮಗೇ ಟಿಕೆಟ್‌ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ, ತೇರದಾಳದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಎಂಬ ಕೂಗು ಬಲವಾಗಿ ಕೇಳಿ ಬಂದಿದ್ದರಿಂದ ಸಿದ್ದು ಕೊಣ್ಣೂರು ಅವರಿಗೆ ಟಿಕೆಟ್‌ ಲಭಿಸಿದೆ.

ತೇರದಾಳದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಹೊಸ ಅಭ್ಯರ್ಥಿಗೆ ಮಣೆ ಹಾಕಿರುವುದು ಹೆಚ್ಚಿನ ಲಾಭವನ್ನೇನು ತಂದುಕೊಡುವುದಿಲ್ಲ. ಏಕೆಂದರೆ, ಬದಲಾವಣೆಯಿಂದ ಕಾಂಗ್ರೆಸ್‌ನಲ್ಲಿ ಸಾಕಷ್ಟು ಬಿರುಕು ಉಂಟಾಗಿದೆ. ಒಂದು ಕಡೆ ನೇಕಾರರಿಗೆ ಟಿಕೇಟ್ ನೀಡಿಲ್ಲ ಎನ್ನುವ ಅಸಮಧಾನವಿದ್ದರೆ ಮತ್ತೊಂದು ಕಡೆ ಅಭ್ಯರ್ಥಿಯ ಆಯ್ಕೆಯಲ್ಲಿಯೇ ತಪ್ಪು ಎನ್ನುವುದು ಸ್ಥಳೀಯ ಕಾಂಗ್ರೆಸ್‌ ನಾಯಕರ ಆಕ್ರೋಶವಾಗಿದೆ. ಸಿದ್ದು ಕೊಣ್ಣುರ ಅವರು ಕ್ಷೇತ್ರದಲ್ಲಿ ಆ ಮಟ್ಟಿನ ಒಳ್ಳೆಯ ಹೆಸರು ಗಳಿಸಿಲ್ಲ ಎನ್ನುವ ಮಾತುಗಳು ಇವೆ. ಹಣದಹೊಳೆ ಹರಿಸಲು ಮುಂದಾದರೂ ಎದುರಾಳಿಯ ವರ್ಚಸ್ಸಿನ ಮುಂದೆ ಎಲ್ಲವೂ ಗೌಣವಾಗುತ್ತದೆ. ಬಂಡಾಯವೆದ್ದಿರುವ ಡಾ. ಪದ್ಮಜೀತ್ ನಾಡಗೌಡ ಕಾಂಗ್ರೆಸ್‌ನ ಮತ ದೋಚುವುದರಲ್ಲಿ ನಿರತರಾಗಿದ್ದಾರೆ.

ಇನ್ನು ಸಿದ್ದು ಕೊಣ್ಣೂರು ಪಂಚಮಸಾಲಿ ಲಿಂಗಾಯತ ಸಮುದಾಯದವರಾಗಿದ್ದು, ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯವೂ ಇದೆ. ಹಾಗಾಗಿ ಈ ಬಾರಿ ಕಾಂಗ್ರೆಸ್‌ ಪಕ್ಷ ಲಿಂಗಾಯತ ಮತಗಳನ್ನು ಗಳಿಸಿಕೊಳ್ಳಲು ಮುಂದಾಗಿದೆ. ಇನ್ನು ಉಮಾಶ್ರೀಯವರ ಬೆಂಬಲಿಗರು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿ ಕೊಣ್ಣೂರ ಅವರು ಪ್ರಬಲ ಪೈಪೋಟಿ ಕೊಡುತ್ತಾರೆ.

ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ನಾಡಗೌಡ, ಕೈ-ಕಮಲ ಕಲಿಗಳ ಮತ ದೋಚುವುದು ಪಕ್ಕಾ

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೈಪೋಟಿ ನೀಡಲು ಮತ್ತೊಬ್ಬ ಅಭ್ಯರ್ಥಿ ಸಜ್ಜಾಗಿದ್ದಾರೆ. ಅದು ಕಾಂಗ್ರೆಸ್‌ನಿಂದ ಬಂಡಾಯ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಪದ್ಮಜೀತ್ ನಾಡಗೌಡ ಕಣಕ್ಕಿಳಿದಿದ್ದಾರೆ.

ಡಾ. ಪದ್ಮಜೀತ್ ನಾಡಗೌಡ ಅವರು ಜೈನ ಸಮುದಾಯಕ್ಕೆ ಸೇರಿದ್ದು, ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸಗಳಿಂದ ಹೆಸರು ಗಳಿಸಿದ್ದಾರೆ. ಅವರದೇ ಫೌಂಡೇಶನ್‌ನಿಂದ ಕ್ಷೇತ್ರದ ಜನರಿಗೆ ಸಾಕಷ್ಟು ಸೇವೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದರು ಆದರೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪಕ್ಷೇತರ ಅಬ್ಯರ್ಥಿಯಾಗಿದ್ದಾರೆ.

ಕಾಂಗ್ರೆಸ್‌ ಪಕ್ಷದ ಬಂಡಾಯ ಅಭ್ಯರ್ಥಿಯಾಗಿದ್ದರೂ ಕೂಡ ಜಾತಿಯ ಲೆಕ್ಕಾಚಾರ ಹಾಗೂ ಸಮಾಜಮುಖಿ ಕೆಲಸಗಳ ಕಾರಣಕ್ಕೆ ಬಿಜೆಪಿಯ ಮತಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಳ್ಳಲಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಫೈಟ್‌ ಇರಲಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿ ಮತ ವಿಭಜಿಸಿ, ಯಾರ ಗೆಲುವಿಗೆ ಕಾರಣವಾಗುತ್ತಾರೆ ಎಂಬುದು ಕೂಡ ಕುತೂಹಲ ಸೃಷ್ಟಿಸಿದೆ.

ಇದನ್ನೂ ಓದಿ: ಇದು ಡಬಲ್ ಇಂಜಿನ್ ಸರ್ಕಾರ, ಬಟ್ ಸಿಂಗಲ್ ಡ್ರೈವರ್: ವಾಜಪೇಯಿ ಒಡನಾಡಿ ಸುಧೀಂದ್ರ ಕುಲಕರ್ಣಿಯವರ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...