Homeಮುಖಪುಟಇದು ಡಬಲ್ ಇಂಜಿನ್ ಸರ್ಕಾರ, ಬಟ್ ಸಿಂಗಲ್ ಡ್ರೈವರ್: ವಾಜಪೇಯಿ ಒಡನಾಡಿ ಸುಧೀಂದ್ರ ಕುಲಕರ್ಣಿಯವರ ಸಂದರ್ಶನ

ಇದು ಡಬಲ್ ಇಂಜಿನ್ ಸರ್ಕಾರ, ಬಟ್ ಸಿಂಗಲ್ ಡ್ರೈವರ್: ವಾಜಪೇಯಿ ಒಡನಾಡಿ ಸುಧೀಂದ್ರ ಕುಲಕರ್ಣಿಯವರ ಸಂದರ್ಶನ

ಕಾಂಗ್ರೆಸ್‌ನವರು 40% ಸರ್ಕಾರ ಎಂದು ಬಿಜೆಪಿ ಮೇಲೆ ಆಪಾದನೆ ಮಾಡಿದ್ದೀರಿ ಅದು ಸರಿ ಇದೆ. ಆದರೆ ನಾಳೆ ನಿಮ್ಮ ಸರ್ಕಾರ ಬಂದ ನಂತರ ಇದನ್ನು ತಗ್ಗಿಸಲು ನೀವು ಬದ್ಧರಾಗಿದ್ದೀರಾ? ಇದು ನಾವು ಕೇಳಬೇಕಾದ ಪ್ರಶ್ನೆ.

- Advertisement -
- Advertisement -

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸುಧೀಂದ್ರ ಕುಲಕರ್ಣಿಯವರು ಆರಂಭದಲ್ಲಿ ಸಿಪಿಐ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಆನಂತರ ಬಿಜೆಪಿ ಸೇರಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಖ್ಯಾತ ಅಂಕಣಕಾರರಾಗಿರುವ ಅವರು ಸದ್ಯ ಬಿಜೆಪಿಯಿಂದ ದೂರವಾಗಿದ್ದಾರೆ. ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ಕರೆ ನೀಡುತ್ತಿರುವ ಅವರು ಕರ್ನಾಟಕ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನ್ಯಾಯಪಥ ಪತ್ರಿಕೆಯ ಸಂಪಾದಕರಾದ ಡಿ.ಎನ್ ಗುರುಪ್ರಸಾದ್‌ರವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

ಪ್ರ: ನೀವು ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಧಾನ ಮಂತ್ರಿ ಕಚೇರಿಯಲ್ಲಿ ಕೆಲಸ ಮಾಡಿದವರು; ಬಿಜೆಪಿ ಜೊತೆ ಅಸೋಸಿಯೆಟ್ ಆಗಿದ್ದವರು. ಈಗಿನ ಬಿಜೆಪಿಯ ಟೀಕಾಕಾರರಾಗಿದ್ದೀರಿ ಮತ್ತು ರಾಹುಲ್ ಗಾಂಧಿಯವರ ‘ಭಾರತ್ ಜೋಡೋ’ ನಡಿಗೆಯಲ್ಲೂ ಭಾಗವಹಿಸಿ ಅವರು ಪ್ರಧಾನಮಂತ್ರಿಯಾಗಬೇಕು ಅನ್ನುವ ರೀತಿಯಲ್ಲಿ ಕೂಡ ಮಾತನಾಡಿದ್ದೀರಿ. ನಿಮಗೆ ಅಟಲ್ ಬಿಹಾರಿ ವಾಜಪೇಯಿಯವರ ಕಾಲದ ಬಿಜೆಪಿಗೂ, ಇವಾಗಿನ ನರೇಂದ್ರಮೋದಿ, ಅಮಿತ್ ಶಾ, ನಡ್ಡಾ ಅವರ ಬಿಜೆಪಿಗೂ ಅಷ್ಟು ವ್ಯತ್ಯಾಸ ಕಾಣಿಸುತ್ತಿದೆಯ?

ಸುಧೀಂದ್ರ ಕುಲಕರ್ಣಿ: ನಿಶ್ಚಿತವಾಗಿಯೂ. ನಾನು ಬಿಜೆಪಿ ಜೊತೆಯಲ್ಲಿ ಪೂರ್ಣಕಾಲಿನ ಕಾರ್ಯಕರ್ತನಾಗಿ 16 ವರ್ಷ ಇದ್ದೆ. ಈ 16 ವರ್ಷಗಳಲ್ಲಿ 6 ವರ್ಷ ನಾನು ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಪ್ರಮುಖ ಹುದ್ದೆಯಲ್ಲಿದ್ದೆ. ನಾನು ಇವತ್ತು ಬಿಜೆಪಿಯ ಕ್ರಿಟಿಕ್ ಆಗಿದ್ದರೂ ಕೂಡ ನಾನು ಅದನ್ನು ಪೂರ್ತಿಯಾಗಿ ತೆಗಳುವುದಿಲ್ಲ. ಯಾಕೆಂದರೆ, ಇವತ್ತೂ ನಾನು ಹೇಳ್ತೀನಿ, ಬಿಜೆಪಿಯಲ್ಲಿ ಅನೇಕ ಒಳ್ಳೆಯ ವಿಚಾರಗಳಿವೆೆ, ನಿಲುವುಗಳಿವೆ. ಆದರೆ ನೀವು ಕೇಳಿದ ಪ್ರಶ್ನೆ, ಮೋದಿ-ಅಮಿತ್ ಶಾ ಇವರ ಬಿಜೆಪಿ, ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿಯ ಬಿಜೆಪಿಯಿಂದ ಪೂರ್ತಿ ದೂರ ಹೋಗಿದೆ. ಅಲ್ಲಿ ಯಾವುದೇ ತರಹದ ಆಂತರಿಕ ಪ್ರಜಾಪ್ರಭುತ್ವವಿಲ್ಲ; ಕನ್ಸಲ್ಟೇಟಿವ್ ಪ್ರೋಸೆಸ್ ಇಲ್ಲ. ಮತ್ತು ದೇಶದ ನಮ್ಮ ಸಮಾಜದ ಬಹುತ್ವವನ್ನು ನಂಬಿ ಅದನ್ನು ಕಾಪಾಡುವ ಒಂದು ಕಮಿಟ್‌ಮೆಂಟ್ ಇಲ್ಲ. ವಿಶೇಷವಾಗಿ ಹಿಂದುತ್ವದ ಹೆಸರಿನಲ್ಲಿ ಮುಸ್ಲಿಂ ವಿರೋಧ ಹೆಚ್ಚಿದೆ. ಇದು ಯಾಕೆ ಆಗುತ್ತಿದೆ ಅಂದರೆ, ಅದರಿಂದ ಒಂದು ದೊಡ್ಡ ಹಿಂದೂ ವೋಟ್ ಬ್ಯಾಂಕ್ ಅನ್ನು ಕ್ರಿಯೇಟ್ ಮಾಡಿದ್ದಾರೆ ಮತ್ತು ಮೇಲಿಂದಮೇಲೆ ಅದನ್ನು ಕನ್ಸಾಲಿಡೇಟ್ ಮಾಡುತ್ತಾ ಹೋಗುತ್ತಾರೆ. ಅದರ ಆಧಾರದ ಮೇಲೆ ಚುನಾವಣೆ ಗೆಲ್ಲಬಹುದು ಎಂಬ ವಿಶ್ವಾಸ ಅವರಿಗಿದೆ. ಆದ್ದರಿಂದ ಅವರು ಬಹಿರಂಗವಾಗಿ ಹೇಳುತ್ತಾರೆ ಮುಸ್ಲಿಂ ಅವರ ವೋಟ್ ನಮಗೆ ಬೇಕಿಲ್ಲ, ಅವರನ್ನು ಅಭ್ಯರ್ಥಿಗಳಾನ್ನಾಗಿ ಮಾಡುವುದಿಲ್ಲ ಎಂದು. 224 ಮತದಾರ ಕ್ಷೇತ್ರಗಳಿರುವಂತ ಕರ್ನಾಟಕದಲ್ಲಿ ಒಂದು ಅಥವಾ ಎರಡು ಕೊಟ್ಟಿರಬಹುದು (ಒಂದು ಇಲ್ಲ ಸೊನ್ನೆ); ಇದು ಏನನ್ನು ಹೇಳುತ್ತದೆ ಎಂದರೆ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್’ ಎಂಬ ಪ್ರಧಾನ ಮಂತ್ರಿಗಳ ಘೋಷಣೆ ಏನಿದೆ ಇದು ಪೊಳ್ಳು ಘೋಷಣೆ ಎಂದು. ತಮ್ಮದೇ ಘೋಷಣೆಯಲ್ಲಿ ಅವರಿಗೆ ನಂಬಿಕೆಯಿಲ್ಲ. ನಾನು ಯಾವ ಕಾಲದಲ್ಲಿ ಭಾರತೀಯ ಜನತಾ ಪಾರ್ಟಿ ಜೊತೆಯಲ್ಲಿ ಇದ್ದೆ ಆಗಲೂ ಕೂಡ ಆ ಪಾರ್ಟಿಯ ಅನೇಕರಲ್ಲಿ ಈ ತರಹದ ಒಂದು ಕೋಮು ಮನೋವೃತ್ತಿ ಇತ್ತು. ಅದನ್ನು ನಾನು ಅಲ್ಲೆಗೆಳೆಯುವುದಿಲ್ಲ. ಆದರೆ ವಾಜಪೇಯಿ ಮತ್ತು ಅಡ್ವಾನಿಯವರಲ್ಲೂ ಕೂಡ ಭಾರತದ ವೈವಿದ್ಯತೆಯಲ್ಲಿ ನಂಬಿಕೆ ಇತ್ತು, ವಿಶ್ವಾಸ ಇತ್ತು. ಭಾರತದ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿತ್ತು. ಭಾರತೀಯ ಸಂವಿಧಾನದ ಬಗ್ಗೆ ಆಸ್ಥೆ ಇತ್ತು. ಯಾಕೆಂದರೆ ಅವರು ಎಮರ್ಜೆನ್ಸಿ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. 19 ತಿಂಗಳು ಇದೇ ಬೆಂಗಳೂರಿನ ಸೆಂಟ್ರಲ್ ಜೈಲ್‌ನಲ್ಲಿ ಅಡ್ವಾಣಿ ಇದ್ದರು. ಅನೇಕ ತಿಂಗಳು ವಾಜಪೇಯಿಯವರು ಕೂಡ ಜೈಲ್‌ನಲ್ಲಿದ್ದರು. ಆದ್ದರಿಂದ ಆ ಸಮಯದ ಎಮರ್ಜೆನ್ಸಿ ಅಂದರೆ ಸರ್ವಾಧಿಕಾರಶಾಹಿ ಹೋರಾಟದಲ್ಲಿ ಇದ್ದವರಿಗೆ ಪ್ರಜಾಪ್ರಭುತ್ವದ ಪ್ರಾಮುಖ್ಯತೆ ಗೊತ್ತಿತ್ತು. ಅದೆಲ್ಲಾ ಹೋಗ್ತಾ ಇದೆ. ಇವತ್ತು ಒಂದು ಪ್ರಕಾರ undeclared emergency ನೋಡುತ್ತ ಇದೀವಿ. ಎಲ್ಲ ಕಡೆ ಭಯದ ವಾತಾವರಣ ಇದೆ. ಯಾರು ತಮ್ಮ ವಿರುದ್ಧ ಮಾತನಾಡುತ್ತಾರೆ ಅವರಿಗೆ ಬೇರೆಬೇರೆ ಕಡೆಯಿಂದ ಹೆದರಿಕೆ ಬೆದರಿಕೆ ಬರತ್ತೆ. ಇವತ್ತು ವಾಕ್ ಸ್ವಾತಂತ್ರ್ಯ ವಿಚಾರ ಸ್ವಾತಂತ್ರ್ಯ ಎಲ್ಲ ಕಡಿಮೆಯಾಗುತ್ತ ಹೋಗುತ್ತಿದೆ. ಆದ್ದರಿಂದ ಇವತ್ತಿನ ಬಿಜೆಪಿಯನ್ನು ನಾವು ಅಧಿಕಾರದಿಂದ ಕೆಳಗಿಳಿಸಲೇಬೇಕು. 2024ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಸೋಲಿಸಬೇಕು ಮತ್ತು ಅದರ ಪೂರ್ವ ಪೀಠಿಕೆಯಾಗಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು.

ಪ್ರಶ್ನೆ: ನೀವೇ ಹೇಳ್ತಾ ಇದ್ದಂತೆ, ಮುಸ್ಲಿಮರ ವೋಟುಗಳೇ ಬೇಡ ಅನ್ನುವಷ್ಟರ ಮಟ್ಟಕ್ಕೆ ಧ್ರುವೀಕರಣವಾಗಿರುವ ಪರಿಸ್ಥಿತಿಯಲ್ಲಿ, ಬೇರೆ ಪಕ್ಷಗಳು ಇದನ್ನು ಯಾವ ರೀತಿ ಅಡ್ರೆಸ್ ಮಾಡಬಹದು? ಇನ್ನೊಂದು ಅಪಾಯವೆಂದರೆ ಇಲ್ಲಿ ಪ್ರಾದೇಶಿಕ ನಾಯಕತ್ವ ಬೆಳೆಯುವುದಕ್ಕಿಂತ ಮೋದಿಯವರ ಮುಖ ನೋಡಿ ಮತ ಹಾಕಿ ಎಂಬ ಅಭಿಯಾನ ಜೋರಾಗಿದೆ. ಪ್ರಾದೇಶಿಕ ಸಮಸ್ಯೆಗಳು ಹೋಗಿ ರಾಷ್ಟ್ರೀಯತೆ, ಪಾಕಿಸ್ತಾನದ ಗುಮ್ಮ ಇವುಗಳು ಮಾತ್ರ ಚುನಾವಣಾ ವಿಷಯಗಳಾಗುವ ಅಪಾಯವಿದೆ. ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದ ಹೇಗೆ?

ಉ: ನೋಡಿ, ಇವತ್ತು ಕರ್ನಾಟಕದಲ್ಲಿ ಯಾವ ರೀತಿ ಭಾರತೀಯ ಜನತಾ ಪಾರ್ಟಿ ಚುನಾವಣೆ ಪ್ರಚಾರ ಮಾಡುತ್ತ ಇದೆ ಅದನ್ನು ನೋಡಿದರೆ, ಅವರು ಪೂರ್ತಿಯಾಗಿ ಮೋದಿಯವರಿಗೆ ಶರಾಣು ಹೋಗಿದ್ದಾರೆ. ಇದರಲ್ಲಿ ಯಾವುದೇ ತರಹದ ಸ್ವಾಭಿಮಾನ ಕಾಣಿಸುವುದಿಲ್ಲ. ಇದು ನಿಜವಾಗಿ ಕನ್ನಡದ ಕರ್ನಾಟಕದ ಸ್ವಾಬಿಮಾನಕ್ಕೆ ಒಂದು ದೊಡ್ಡ ಅಪಮಾನ. ಡಬಲ್ ಇಂಜಿನ್ ಸರ್ಕಾರ ಎನ್ನುವ ಕಾನ್ಸೆಪ್ಟೇ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ; ಯಾಕೆಂದರೆ, ನಮ್ಮ ದೇಶ ಬಹುಪಕ್ಷೀಯ ಡೆಮಾಕ್ರಸಿ. ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿಯೇ ಇರಬೇಕು, ಎಲ್ಲಾ ರಾಜ್ಯಗಳಲ್ಲೂ ಭಾರತೀಯ ಜನತಾ ಪಾರ್ಟಿಯ ಸರ್ಕಾರವೇ ಇರಬೇಕು ಅನ್ನುವುದರ ಅರ್ಥವೇನು? ಇದರ ಅರ್ಥ ಕೇವಲ ಕಾಂಗ್ರೆಸ್ ಮುಕ್ತ ಭಾರತವಲ್ಲ; ವಿರೋಧಿ ಪಕ್ಷ ಮುಕ್ತ ಭಾರತ ಅವರಿಗೆ ಬೇಕಾಗಿರುವುದು. ಅಂದರೆ ಕೇವಲ ಒಂದೇ ಪಕ್ಷ ಇರಬೇಕು ಭಾರತದಲ್ಲಿ. ‘ಒಂದು ದೇಶ ಒಂದು ಪಕ್ಷ ಒಂದು ವಿಚಾರ ಸರಣಿ ಒಬ್ಬ ನಾಯಕ’, ಅವರು ಡಿಕ್ಟೇಟರ್‌ಶಿಪ್‌ನ ಫಾಲೋ ಮಾಡುತ್ತಿದ್ದಾರೆ. ಈ ಡಬಲ್ ಇಂಜಿನ್ ಸರ್ಕಾರದಲ್ಲಿ ಮತ್ತೊಂದು ವಿಷಯ ಹೇಳಬೇಕೆಂದರೆ, ಇಲ್ಲಿ ಕೂಡ ಮೋದಿಯವರೆ, ಕರ್ನಾಟಕದ ಅಭಿವೃದ್ಧಿಯನ್ನು ಸಾಧಿಸುವ ಒಬ್ಬನೇ ಒಬ್ಬ ನಾಯಕ ಎಂದರೆ ಮೋದಿ ಅನ್ನುವ ರೀತಿಯಲ್ಲಿ ತೋರಿಸಿಕೊಳ್ತಾ ಇದಾರೆ. ಈಗ ಅಮಿತ್ ಶಾ ಇಲ್ಲಿ ಬಂದು ಪ್ರಚಾರ ಮಾಡುವಾಗ ಹೇಳಿದ್ದೇನು? ಕರ್ನಾಟಕದ ಭವಿಷ್ಯವನ್ನ ಮೋದಿಯವರಿಗೆ ನೀವು ಒಪ್ಪಿಸಿಬಿಡಿ. ನಡ್ಡಾ ಹೇಳಿದ್ದೇನು? ನೀವು ಬಿಜೆಪಿಯನ್ನು ಸೋಲಿಸಿದರೆ ಮೋದಿಯವರ ಆಶೀರ್ವಾದದಿಂದ ವಂಚಿತರಾಗುವಿರಿ ಎಂದು. ಅಂದರೆ ಕರ್ನಾಟಕ ಜನ ನಾವೇನು ಭಿಕ್ಷುಕರೇ? ಆಶೀರ್ವಾದ ಕೊಡಿ ನಿಮಗೆ ವೋಟ್ ಹಾಕ್ತಿವಿ ಅಂತ ಹೇಳುವುದಕ್ಕೆ. ಎಂತಾ ಗುಲಾಮಿ ಮನೋವೃತ್ತಿಯನ್ನು ಇವರು ಬೆಳೆಸುತ್ತಿದ್ದಾರೆ? ಅಂದರೆ ಅಲ್ಲಿಯೂ ಕೂಡ ಮೋದಿ ಒಬ್ಬನೇ ನಾಯಕ, ಇಲ್ಲಿ ಕೂಡ ಅವರೇ. ಇದರ ಅರ್ಥವೇನೆಂದರೆ ಡಬಲ್ ಇಂಜಿನ್ ಸರ್ಕಾರ ಬಟ್ ಸಿಂಗಲ್ ಡ್ರೈವರ್. ಈ ತರದ ಪ್ರಜಾಪ್ರಭುತ್ವದ ಪತನ ಕರ್ನಾಟಕದಲ್ಲಿ ಎಂದೂ ಆಗಿರಲಿಲ್ಲ. ಆದ್ದರಿಂದ ಇವರನ್ನು ಸೋಲಿಸಲೇಬೇಕು ಮತ್ತು ಬದಲಾವಣೆಯನ್ನು ತರಲೇಬೇಕು.

anti incumbency ಅಂತೂ ಪೂರ್ತಿಯಾಗಿ ನಮಗೆ ಕಾಣುತ್ತಾ ಇದೆ. ಡಬಲ್ ಇಂಜಿನ್ ಸರ್ಕಾರ ಇದ್ದರೂ ಕೂಡ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಇಷ್ಟ್ಯಾಕೆ? ಆದ್ದರಿಂದ ಬದಲಾವಣೆ ಬೇಕೆಬೇಕು. ಬದಲಾವಣೆ ಜೊತೆಯಲ್ಲಿ ಯಾರು ಬಿಜೆಪಿಯನ್ನು ಸೋಲಿಸಬಹುದೋ ಅವರಿಗೆ ಪೂರ್ಣ ಮತ್ತು ನಿರ್ಣಾಯಕ ಬಹುಮತ ಕೂಡ ಸಿಗಬೇಕು. ಅಂದರೆ ಕಾಂಗ್ರೆಸ್ ಕೇವಲ ಲೀಡ್ ಪಕ್ಷವಾದರೆ ಆಗುವುದಿಲ್ಲ, ಅಥವಾ ಕಾಂಗ್ರೆಸ್‌ಗೆ ಥಿನ್ ಮೇಜಾರಿಟಿ ಬಂದರೂ ಆಗುವುದಿಲ್ಲ. ಯಾಕೆಂದರೆ ಮತ್ತವರು ಅಪರೇಷನ್ ಕಮಲ ಮಾಡುತ್ತಾರೆ. ಯಾವ ರೀತಿಯಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಕೆಡವಿದರೋ ಅದರ ಪುನರವರ್ತನೆ ಕರ್ನಾಟಕದಲ್ಲಿ ಆಗುತ್ತದೆ. ಇದನ್ನು ತಪ್ಪಿಸಲು ಕರ್ನಾಟಕದ ಪ್ರಬುದ್ಧ ಮತದಾರರು ಇವರಿಗೆ ತಕ್ಕ ಪಾಠ ಕಲಿಸಬೇಕು. ಬೇರೆ ರಾಜ್ಯದಲ್ಲೂ ಕೂಡ ಈ ತರಹದ ಅಪರೇಷನ್ ಕಮಲದಂತಹ ಕುತಂತ್ರವನ್ನು ಮತ್ತೆ ಎಲ್ಲಿಯೂ ಮಾಡುವುದಕ್ಕೆ ಆಗುವುದಿಲ್ಲ ಅನ್ನುವಂತಹ ಸ್ಥಿತಿಯನ್ನು ತರಬೇಕು.

ಪ್ರ: ನೀವು ಅಟಲ್ ಬಿಹಾರಿ ವಾಜಪೇಯಿ ಜೊತೆ ಕೆಲಸ ಮಾಡಿದ್ದೀರಿ; ಅವರು ಪ್ರಧಾನಿಯಾಗಿರಬೇಕಾದರೆ ವೈವಿಧ್ಯಮಯವಾದ ಲೀಡರ್‌ಶೀಪ್ ಬಿಜೆಪಿಗಿತ್ತು; ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ ಹೀಗೇ ಬೇರೆಬೇರೆ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ ಸುಮಾರು ಜನ ಇದ್ದರು. ಈಗಿನ ಬಿಜೆಪಿಯಲ್ಲಿ ಇಬ್ಬರು, ಅಬ್ಬಬ್ಬಾ ಅಂದರೆ ಮತ್ತೊಬ್ಬರು ಎನ್ನುವಂತಾಗಿದೆ. ಈಗ ಎಲ್ಲಾ ಸಚಿವಾಲಯಗಳಿಗೂ ಮೋದಿಯವರ ಮುಖವೇ ಅನ್ನುವಂತಾಗಿದೆ. ಎರಡೂ ಸರ್ಕಾರಗಳನ್ನು ಆರ್‌ಎಸ್‌ಎಸ್ ಸಂಸ್ಥೆ ಪೊರೆಯುತ್ತಿತ್ತು. ಆದರೆ ಈ ಸರ್ಕಾರ ಈ ರೀತಿ ಬೆಳೆಯುವುದಕ್ಕೆ ಆರ್‌ಎಸ್‌ಎಸ್ ಧೋರಣೆಯಲ್ಲಿ ಏನಾದರೂ ಭಾರಿ ವ್ಯತ್ಯಾಸ ಆಯ್ತಾ?

ಉ: ನೋಡಿ ಆರೆಸ್ಸೆಸ್ಸ್ ಬಗ್ಗೆ ಅನೇಕರ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಅವರಲ್ಲಿ ಕೆಲವು ಗುಣಗಳಿದ್ದವು. ಅದನ್ನ ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಆರೆಸ್ಸೆಸ್ಸ್ ಶಿಸ್ತಿಗೆ ಹೆಸರಾಗಿತ್ತು ಮತ್ತು ಬಿಜೆಪಿಯ ಮೇಲೆ ಅದಕ್ಕೂ ಮೊದಲು ಜನಸಂಘದ ಮೇಲೆ ನೈತಿಕ ಒತ್ತಡವನ್ನು ಅದು ಸದಾ ಹಾಕುತ್ತಿತ್ತು. ಅಂದರೆ, ರಾಜಕೀಯ ಪಕ್ಷವಾಗಿ ಉದಯವಾದಂತಹ ಭಾರತೀಯ ಜನಸಂಘವಾಗಲಿ, ಭಾರತೀಯ ಜನತಾ ಪಾರ್ಟಿಯಾಗಲಿ, ಇವರ ಮೇಲೆ ನೈತಿಕ ಒತ್ತಡ ತರುವಂತ ಒಂದು ಶಕ್ತಿ, ಮಾತೃ ಸಂಸ್ಥೆ- ಸಂಘಪರಿವಾರದ ಮದರ್ ಆರ್ಗನೈಸೇಶನ್ ಆಗಿ ಅದಿತ್ತು. ಅದನ್ನು ಬಿಜೆಪಿಯವರು ಕೂಡ ನಂಬುತ್ತಿದ್ದರು. ಇವತ್ತು ಆ ನೈತಿಕ ಅಧಿಕಾರ, ನೈತಿಕ ಒತ್ತಡ ಹೋಗಿಬಿಟ್ಟಿದೆ. ಆರೆಸ್ಸೆಸ್ಸ್ ಅ ಸ್ಥಿತಿಯಲ್ಲಿ ಇಲ್ಲ ಮತ್ತು ಆರೆಸ್ಸೆಸ್‌ನ ಅನೇಕರಲ್ಲಿ, ಮೇಲಿನಿಂದ ಕೆಳಗಿನವರೆಗೆ ಈ ಸರ್ಕಾರದ ಕಾರ್ಯಶೈಲಿಯ ಬಗ್ಗೆ ಮತ್ತು ಭ್ರಷ್ಟಾಚಾರ, ಇದೆಲ್ಲಾ ಏನು ನಡಿತಾ ಇದೆ, ಇದರ ಬಗ್ಗೆ ಅಸಂತೋಷ ಕೂಡ ಇದೆ. ಇದು ನನಗೆ ಗೊತ್ತು.

ಪ್ರ: ಭ್ರಷ್ಟಾಚಾರ ಅಂತ ಹೇಳಿದ್ರಿ. ನಾವು ಹಿಂದೆ ಯಾವತ್ತೂನು ಗುತ್ತಿಗೆದಾರರ ಸಂಘದವರೇ, ಅಂದರೆ ಯಾರು ಭ್ರಷ್ಟಾಚಾರದ ಒಂದು ಭಾಗವಾಗಿರುತ್ತಾರೋ ಅವರೇ ಈ ಮಟ್ಟದ ಭ್ರಷ್ಟಾಚಾರ ಸಹಿಸಿಕೊಳ್ಳುವುದಕ್ಕೆ ಆಗ್ತಾ ಇಲ್ಲ ಎಂದು ನೇರ ಪ್ರಧಾನಿಯವರಿಗೇ ಪತ್ರ ಬರೆದ ಉದಾಹರಣೆಗಳು ಇಲ್ಲ. ಮತ್ತೊಬ್ಬ ಗುತ್ತಿಗೆದಾರ ಇಲ್ಲಿ ಸಚಿವರಾಗಿದ್ದವರೊಬ್ಬರ ಮೇಲೆ ಆಪಾದನೆ ಮಾಡಿ ಆತ್ಮಹತ್ಯೆ ಮಾಡಿಕೊಂಡರು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡ್ತೀವಿ ಅಂತ ಅಭಿಯಾನ ಮಾಡಿಕೊಂಡು ಬಂದ ಕೇಂದ್ರ ಸರ್ಕಾರಕ್ಕೆ ಏನೂ ಅನ್ನಿಸ್ತಾನೇ ಇಲ್ಲವಾ?

ಉ: ನೋಡಿ 2014ಕ್ಕಿಂತ ಮುಂಚೆ, ಮೋದಿಯವರು ಪ್ರಧಾನಮಂತ್ರಿ ಆಗುವುದಕ್ಕಿಂತ ಮುಂಚೆ ಅವರು ದೇಶಕ್ಕೆ ಆಶ್ವಾಸನೆ ಕೊಟ್ಟಿದ್ದು ಏನು? ಅವರು ಹೇಳಿದ್ದೇನು? ‘ನಾ ಖಾವೂಂಗಾ ನಾ ಖಾನೇ ದೂಂಗಾ’, ಅಂದರೆ ನಾನು ತಿನ್ನುವುದಿಲ್ಲ ಮತ್ತು ಬೇರೆಯವರಿಗೆ ತಿನ್ನುವುದಕ್ಕೂ ಬಿಡುವುದಿಲ್ಲ. ನಾನು ಪ್ರಧಾನ ಮಂತ್ರಿಯಾದರೆ ನಾನು ಭ್ರಷ್ಟಾಚಾರ ಅಂತೂ ಮಾಡುವುದಿಲ್ಲ, ಬೇರೆಯವರೂ ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ. ಇದು ಅವರ ಆಶ್ವಾಸನೆ, ಇದು ಅವರ ಆಶ್ವಾಸನೆ ಇದ್ದಾಗ, ಡಬಲ್ ಇಂಜಿನ್ ಸರ್ಕಾರ ಇದ್ದಾಗ ಇಲ್ಲಿ ಭ್ರಷ್ಟಾಚಾರ ಹೇಗೆ ಬೆಳೆಯಿತು? ಅವರಿಗೆ ಗೊತ್ತಿರಲಿಲ್ಲವ ಇದು? ಅಂದರೆ ಭ್ರಷ್ಟಾಚಾರವನ್ನು ನಿಲ್ಲಿಸಲ್ಲಿಕ್ಕೆ ಅವರು ಅಸಮರ್ಥರಾದರು. ಅವರು ವೈಯಕ್ತಿಕವಾಗಿ ಭ್ರಷ್ಟರು ಎಂದು ನಾನು ಹೇಳುವುದಿಲ್ಲ. ವೈಯಕ್ತಿಕವಾಗಿ ಭ್ರಷ್ಟಾಚಾರದ ಆಪಾದನೆ ಅವರ ಮೇಲೆ ಇಲ್ಲ, ಅಂಟಿಕೊಂಡಿಲ್ಲ. ಆದರೆ ಪ್ರಧಾನಮಂತ್ರಿಯಾಗಿ ಅವರ ಹತ್ತಿರ ಎಷ್ಟು ಅಧಿಕಾರ ಇದೆ ಎಂದರೆ, ಅವರು ಮನಸ್ಸು ಮಾಡಿದರೆ ಇದನ್ನು ತಪ್ಪಿಸಬಹುದು ಅಥವಾ ಕಡಿಮೆ ಮಾಡಬಹುದು. ಪೂರ್ತಿಯಾಗಿ ತಪ್ಪಿಸಲಿಕ್ಕೆ ಸಾಧ್ಯವಿಲ್ಲ, ಏಕೆಂದರೆ ಭ್ರಷ್ಟಾಚಾರ ನಮ್ಮ ವ್ಯವಸ್ಥೆಗೆ ಅಂಟಿಕೊಂಡಂತಹ ಒಂದು ಮಹಾರೋಗವಾಗಿದೆ. ಇದನ್ನು ತೊಡೆಯಬೇಕೆಂಬುದು ಜನರ ಅಪೇಕ್ಷೆಯಾಗಿತ್ತು. ಅದಕ್ಕಾಗಿ ಜನ ಅವರಿಗೆ ದೊಡ್ಡ ಬಹುಮತದಿಂದ ಆರಿಸಿ ತಂದಿದ್ದು. ಆದರೆ ಕರ್ನಾಟಕದಲ್ಲಿ ಏನಾಗಿದೆ ನಾವು ಇದನ್ನು ನೋಡಿದ್ದೀವಿ. ಕರ್ನಾಟಕದಲ್ಲಿ ನಾವು ಭ್ರಷ್ಟಾಚಾರವನ್ನು ಕಡಿಮೆ ಮಾಡಿದರೆ- ಕರ್ನಾಟಕ ಈಗಾಗಲೇ ಸಾಕಷ್ಟು ಸಮೃದ್ಧಿಗಳಿಸಿದೆ- ಇದು ಜನರ ಪ್ರಯತ್ನದಿಂದ- ಇಷ್ಟೆಲ್ಲಾ ಭ್ರಷ್ಟಾಚಾರವಿದ್ದರೂ ಕೂಡ- ಕರ್ನಾಟಕದಲ್ಲಿ ಅಥವಾ ಕರ್ನಾಟಕದ ಒಂದು ಭಾಗದಲ್ಲಿ- ಬೆಂಗಳೂರಿನಲ್ಲಿ ಅಭಿವೃದ್ಧಿಯನ್ನು ನೋಡಿದ್ದೇವೆ- ನಾನು ಸ್ಪಷ್ಟವಾಗಿ ಹೇಳುತ್ತೇನೆ ಕರ್ನಾಟಕದಲ್ಲಿ ಭ್ರಷ್ಟಾಚಾರ ಕಡಿಮೆಯಾದರೆ ನಮ್ಮ ಮೂರು ಲಕ್ಷ ಕೋಟಿ ರೂಪಾಯಿ ಬಜೆಟ್ ಏನಿದೆ, ಇದನ್ನು ನಿಶ್ಚಿತವಾಗಿ ಆರು ಲಕ್ಷ ಕೋಟಿ ರುಪಾಯಿಗೆ ತೆಗೆದುಕೊಂಡು ಹೋಗಬಹುದು. ಅಂದರೆ ನಮ್ಮ ರಾಜ್ಯದ ಉದ್ಯಮಿಗಳು, ನಮ್ಮ ರಾಜ್ಯದ ವ್ಯಾಪರಸ್ಥರು, ನಮ್ಮ ರಾಜ್ಯದ ರೈತರು ನಮ್ಮ ರಾಜ್ಯದ ಸಣ್ಣ ಸಣ್ಣ entrepreneurs  ಅವರೆಲ್ಲರೂ ಭ್ರಷ್ಟಾಚಾರದಿಂದ ಪೀಡಿತರಾಗಿದ್ದಾರೆ. ಈ ಶಾಪ ತೊಲಗಿದರೆ ಅವರೆಲ್ಲರೂ ಇನ್ನಷ್ಟು ಪರಿಣಾಮಕಾರಿಯಾಗಲಿದ್ದಾರೆ. ಇದರಿಂದ, ನಮ್ಮ ರಾಜ್ಯದ ಬಜೆಟ್ ಅದು ಮೂರು ಪಟ್ಟು ಆಗಲಿಕ್ಕು ಸಾಧ್ಯವಿದೆ. ಆ ಕ್ಷಮತೆ ಕರ್ನಾಟಕಕ್ಕೆ ಸಾಧ್ಯ ಇದೆ. ಹಾಗಾದರೆ ನಮ್ಮ ರಾಜ್ಯದ ಅನೇಕ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಧನ ಸಹಾಯ ಸಿಗಬಹುದು. ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಹೆಚ್ಚಿಸಲು ಸಹಾಯವಾಗಬಹುದು. ನಮ್ಮ ರಾಜ್ಯದ ಸಾಂಸ್ಕೃತಿಕ ಬೆಳವಣಿಗೆಗೆ, ಕನ್ನಡ ಭಾಷೆಯ ಬೆಳವಣಿಗೆಗೆ, ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ, ಕನ್ನಡದ ಸಾಹಿತ್ಯದ ಬೆಳವಣಿಗೆಗೆ, ಕನ್ನಡದ ಶಾಲೆಗಳನ್ನು ಮತ್ತಷ್ಟು ಸುಧಾರಿಸಲಿಕ್ಕೆ ಸರ್ಕಾರದ ಹತ್ತಿರ ಹೆಚ್ಚಿನ ಸಂಪನ್ಮೂಲ ಇರಲಿದೆ. ಆದ್ದರಿಂದ ನಾನು ಕಾಂಗ್ರೆಸ್ ಪಕ್ಷದ ನಾಯಕರಿಗೆ ಕೂಡ, ಅವರಿಂದ ನಾವು ಅಪೇಕ್ಷೆ ಮಾಡುವುದೆನೆಂದರೆ, ನೀವು 40% ಸರ್ಕಾರ ಎಂದು ಬಿಜೆಪಿ ಮೇಲೆ ಆಪಾದನೆ ಮಾಡಿದ್ದೀರಿ ಅದು ಸರಿ ಇದೆ. ಆದರೆ ನಾಳೆ ನಿಮ್ಮ ಸರ್ಕಾರ ಬಂದ ನಂತರ ಇದನ್ನು ತಗ್ಗಿಸಲು ನೀವು ಬದ್ಧರಾಗಿದ್ದೀರಾ? ಇದು ನಾವು ಕೇಳಬೇಕಾದ ಪ್ರಶ್ನೆ. ಮತ್ತು ನಾಳೆ ಕಾಂಗ್ರೆಸ್ ಸರ್ಕಾರ ಬಂದರೆ ಕರ್ನಾಟಕದ ಪ್ರಬುದ್ಧ ಜನತೆ, ಸಂಸ್ಥೆಗಳು, ಸಂಘಟನೆಗಳು ಅವರ ಮೇಲೆ ಒಂದು ತರಹದ ಅಂಕುಶ ಇಡಬೇಕು. ನಾವು ಬಿಜೆಪಿಯನ್ನು ಸೋಲಿಸಿ ನಿಮಗೆ ಅಧಿಕಾರ ಕೊಟ್ಟಿದ್ದೇವೆ; ನೀವು ಎಲ್ಲ ಹೊಲಸನ್ನು ತೆಗೆದು ಹಾಕುವುದಕ್ಕೆ ಕೆಲಸ ಮಾಡಬೇಕು ಅನ್ನುವಂತಹ ಅಂಕುಶ, ಒತ್ತಡ, ಒತ್ತಾಯ ಜನರಿಂದ ಅವರ ಮೇಲೆ ಬರಬೇಕು.

ಪ್ರಶ್ನೆ: ನೀವು ಕರ್ನಾಟಕದ ಬಗ್ಗೆ ಹೇಳ್ತಾ ಇರಬೇಕಾದರೆ, ಇಷ್ಟೆಲ್ಲಾ ಭ್ರಷ್ಟಾಚಾರದ ಹೊರತಾಗಿಯೂ, ಕರ್ನಾಟಕ ಸಮೃದ್ಧಿಯನ್ನು ಸಾಧಿಸಲು ಸಾಧ್ಯವಾಗಿದೆ ಅಂದಿರಿ. ಆದರೆ ಕರ್ನಾಟಕದ ಈ ಚುನಾವಣೆಗಲ್ಲಿ, ಕರ್ನಾಟಕಕ್ಕಿಂತ ಸುಮಾರು ಎಲ್ಲಾ ವಲಯಗಳಲ್ಲಿಯೂ ಹಿಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಕರೆಸಿ ಯುಪಿ ಮಾಡೆಲ್ ತರುತ್ತೀವಿ ಅಂತ ಪ್ರಚಾರ ಮಾಡ್ತಾ ಇದಾರೆ. ಹಿಂದೆ ಗುಜರಾತ್ ಮಾಡೆಲ್‌ನ ಸೆಲ್ ಮಾಡುವುದಕ್ಕೆ ಪ್ರಯತ್ನ ಮಾಡಿದ್ದರು. ಅದು ವಿಫಲ ಮಾಡೆಲ ಅಂತ ಗೊತ್ತಾಗಿದೆ ಈಗ ಮತ್ತೊಂದು ವಿಫಲ ಮಾಡೆಲ್ ಬಗ್ಗೆ ಪ್ರಚಾರ ಮಾಡುವುದಕ್ಕೆ ಅವರಿಗೆ ಸ್ವಲ್ಪವೂ ಹಿಂಜರಿಕೆಯಿಲ್ಲವೆಲ್ಲ ಏಕೆ?

ಉ: ನೋಡಿ ಈ ಪ್ರಶ್ನೆಯನ್ನು ಕರ್ನಾಟಕದ ಜನತೆ ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಕೇಳಬೇಕು. ಯಾವ ಯುಪಿ ಮಾಡೆಲ್ ಇದು? ಒಂದು ಸಣ್ಣ ಪ್ರಶ್ನೆ; ಇವತ್ತು ಉತ್ತರ ಪ್ರದೇಶದಿಂದ ಎಷ್ಟು ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ? ಕರ್ನಾಟಕದ ಎಷ್ಟು ವಿದ್ಯಾರ್ಥಿಗಳು ಉತ್ತರ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ? ಈ ಕಂಪ್ಯಾರಿಶನ್ ಹೇಳಿ; ಅಂಕಿಅಂಶಗಳನ್ನು ಕರ್ನಾಟಕದ ಜನರ ಮುಂದಿಡಿ. ನಮ್ಮ ರಾಜ್ಯದಲ್ಲಿನ ಶೈಕ್ಷಣಿಕ ಸಂಸ್ಥೆಗಳು- they are among the best in india, they attract students from all over India. ಉತ್ತರ ಪ್ರದೇಶ ಈ ರೀತಿ ವಿದ್ಯಾರ್ಥಿಗಳನ್ನು ಬೇರೆಬೇರೆ ಕಡೆಯಿಂದ ಸೆಳೆಯುತ್ತದೆಯೇ? ಇಲ್ಲ, ಯಾಕೆಂದರೆ ಅಲ್ಲಿನ ಶಿಕ್ಷಣದ ಗುಣಮಟ್ಟ ಕುಸಿದಿದೆ. ನಮ್ಮ ಕರ್ನಾಟಕದಲ್ಲಿನ ಆರೋಗ್ಯ ವ್ಯವಸ್ಥೆ ಉತ್ತರ ಪ್ರದೇಶಕ್ಕಿಂತ ಎಷ್ಟೋ ಪಟ್ಟು ಚೆನ್ನಾಗಿದೆ. ಕರ್ನಾಟಕದ ಬೆಂಗಳೂರನ್ನು ಲಕ್ನೋಗೆ ಹೋಲಿಸಿ ಎಲ್ಲಿಯ ಬೆಂಗಳೂರು ಎಲ್ಲಿಯ ಲಕ್ನೋ? ಎಲ್ಲಿಯ ಹುಬ್ಬಳ್ಳಿ ಎಲ್ಲಿಯ ಕಾನ್ಪುರ್? ಕಾನ್ಪುರ್ ಒಂದು ಕಾಲಕ್ಕೆ ಒಂದು ದೊಡ್ಡ ಔದ್ಯೋಗಿಕ ಶಹರವಾಗಿತ್ತು. ಇವತ್ತು ಅಲ್ಲಿ ಇಂಡಸ್ಟ್ರಿಗಳೇ ಇಲ್ಲ. ಎಲ್ಲಿ ಮೈಸೂರು ಎಲ್ಲಿ ಗೋರಕ್‌ಪುರ್? ಈ ಯೋಗಿ ಅದಿತ್ಯನಾಥ್ ಅವರ ಊರು ಗೋರಕ್‌ಪುರ್; ಆ ಗೋರಕ್‌ಪುರ್‌ನ್ನು ಮೈಸೂರಿಗೆ ಹೋಲಿಸಿ ನೀವು. ಅಂದರೆ ಯಾವ indicies ನಲ್ಲಿಯೂ ಕೂಡ ಯುಪಿ ಬಹಳ ಹಿಂದೆ ಇದೆ. Child mortalty, Infant mortality, Maternal Mortality ಇರಬಹದು. ಎಲ್ಲ ಸಾಮಾಜಿಕ ಅಭಿವೃದ್ದಿಯ ಸೂಚ್ಯಂಕದಲ್ಲಿ ಯುಪಿ ದಯನೀಯ ಸ್ಥಿತಿಯಲ್ಲಿದೆ. ಅಂತಹ, ಆ ನಾಯಕರು ಇಲ್ಲಿ ಬಂದು ಕರ್ನಾಟಕವನ್ನು ಯುಪಿ ಮಾಡುತ್ತೆವೆ ಎಂದರೆ ನಾವು ನಮಸ್ಕಾರ ಮಾಡಬೇಕು, ದಯಮಾಡಿ ನೀವು ಇಲ್ಲಿಂದ ಹೋಗಿ ಅಂತ.

ಪ್ರ: ನೀವು ಪತ್ರಿಕೋದ್ಯಮದಲ್ಲಿ ಇದ್ದವರು; ಇವತ್ತು ಮಾಧ್ಯಮಗಳ ದುಸ್ಥಿತಿಯನ್ನು ಕಾಣುತ್ತಿದ್ದೇವೆ. ಅವುಗಳು ಅಧಿಕಾರಕ್ಕೆ ಸತ್ಯವನ್ನು ನುಡಿಯುತ್ತಿಲ್ಲ. ಒಂದು ಅವುಗಳನ್ನು ಕೊಂಡುಕೊಳ್ಳಲಾಗಿದೆ. ಇಲ್ಲ ಅವನ್ನು ಬೆದರಿಸಿ ಇಡಲಾಗಿದೆ. ಈ ಸಮಯದಲ್ಲಿ ಮಾಧ್ಯಮಗಳಿಗೆ ನಿಮ್ಮ ಕಿವಿಮಾತೇನು?

ಉ: ಭಾರತದ ಮಾಧ್ಯಮಗಳ ಇತಿಹಾಸ ನೊಡಿದರೆ, ಪತ್ರಿಕೋದ್ಯಮದ ಇತಿಹಾಸ ನೋಡಿದರೆ- ಆ ಕಾಲದಲ್ಲಿ ಪತ್ರಿಕೆಗಳ ಹೊರತಾಗಿ ಇತರ ಮಾಧ್ಯಮಗಳು ಇರಲಿಲ್ಲ- ಈಗ ಬೇರೆ ಬೇರೆ ಮಾಧ್ಯಮಗಳು ಬಂದಿವೆ- ಈ ಇತಿಹಾಸವನ್ನು ನೋಡಿದರೆ ಇದೊಂದು ಅತ್ಯಂತ ಗೌರವಶಾಲಿ ಇತಿಹಾಸ. ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಣ್ಣಸಣ್ಣ ಪತ್ರಿಕೆಗಳು, ಕನ್ನಡ ಭಾಷೆಯ ಪತ್ರಿಕೆಗಳು ಸೇರಿದಂತೆ ಇತರ ಭಾಷೆಯ ಪತ್ರಿಕೆಗಳು ಸಹ ದೊಡ್ಡ ಕೊಡುಗೆಯನ್ನು ಕೊಟ್ಟಿವೆ. ಜನಾಜಾಗೃತಿ ತರಲು, ಜನರನ್ನು ಒಗ್ಗೂಡಿಸಲು, ಜನರಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಲು, ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ, ಸಾಮಾಜಿಕ ಕುನೀತಗಳ ವಿರುದ್ಧ ಅರಿವು ಮೂಡಿಸುವಲ್ಲಿ ನಮ್ಮ ಪತ್ರಿಕೆಗಳು, ಅವು ರಾಜ್ಯಮಟ್ಟದ, ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಪತ್ರಿಕೆಗಳಾಗಲಿ ಎಷ್ಟು ದೊಡ್ಡ ಕೆಲಸ ಮಾಡಿವೆ. ಇದು ನಮ್ಮ ಪತ್ರಿಕೆಗಳ ನಿಜವಾದ ಜವಾಬ್ದಾರಿ ಮತ್ತು ಇದು ನಮ್ಮ ಪತ್ರಿಕೆಗಳ ಲೆಗೆಸಿ. ಈ ಲೆಗೆಸಿಯನ್ನ ಮುಂದುವರೆಸಬೇಕು. ಸಂಪಾದಕರಿಗೆ ಮತ್ತು ಪತ್ರಕರ್ತರಿಗೆ ಇದನ್ನು ಬಿಟ್ಟರೆ, ಇವತ್ತಿಗೂ ಕೂಡ ಕನ್ನಡದಲ್ಲಿಯ ಮಾಧ್ಯಮಗಳಲ್ಲಿನ ಜನ ಮಾಧ್ಯಮಗಳನ್ನ ಸರಿಯಾದ ರೀತಿಯಲ್ಲಿ ಆ ಲೆಗೆಸಿಯನ್ನು ಮುಂದುವರೆಸುವುದರಲ್ಲಿ ಒಂದು ದೊಡ್ಡ ಪಾತ್ರ ವಹಿಸುತ್ತಾರೆ ಎನ್ನುವ ಭರವಸೆ ನನಗೆ ಇದೆ. ಆದರೆ ಈ ಮಾಧ್ಯಮಗಳ ಕಂಟ್ರೋಲ್ ಅವರ ಕೈಯಲ್ಲಿ ಇಲ್ಲ. ಅದು ಇರುವುದು ಮಾಲೀಕರ ಕೈಯಲ್ಲಿ. ಆ ಮಾಲೀಕರನ್ನು ಯಾರು ಕಂಟ್ರೋಲ್ ಮಾಡುತ್ತಾರೆ? ಇವತ್ತಿನ ಸರ್ಕಾರ. ಮತ್ತು ಹೆಚ್ಚು ಹೆಚ್ಚು ಮಾಧ್ಯಮಗಳು ಕಾರ್ಪೊರೇಟ್ ನಿಯಂತ್ರಣದಲ್ಲಿವೆ. ಎಷ್ಟು ದೊಡ್ಡ ಕಾರ್ಪೊರೇಟ್ ಆಗಿರುತ್ತದೋ ಅಷ್ಟು ಅದು ಸರ್ಕಾರದ ಮೇಲೆ ಅವಲಂಬಿಸಿರುತ್ತದೆ. ಅದರರ್ಥ, ಅವರಿಗೆ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಕಮಿಟ್‌ಮೆಂಟ್, ಕಳಕಳಿ ಕಮ್ಮಿ. ಆದ್ದರಿಂದ ನಾನು ನನ್ನ ಕಾಂಗ್ರೆಸ್ ಪಕ್ಷದ ಮಿತ್ರರಿಗೆ, ಇತರ ಪಕ್ಷದ ಮುಖಂಡರಿಗೆ ನಾನು ಒಂದು ಮಾತು ಹೇಳುತ್ತೇನೆ. 2024ರ ಚುನಾವಣೆ ಸಮಯದಲ್ಲಿ ನಾವು ಒಂದು ಹೊಸ ವಿಚಾರವನ್ನು ತರಬೇಕು, ಅದೇನೆಂದರೆ ಭಾರತದಲ್ಲಿಯ ಮಾಧ್ಯಮಗಳ ಕಂಟ್ರೋಲ್, ಅದು ಕಾರ್ಪೊರೆಟ್ ಶಕ್ತಿಗಳ ಕೈಯಲ್ಲಿ ಇರಬಾರದು, ಸರ್ಕಾರದ ನಿಯಂತ್ರಣದಲ್ಲಿಯೂ ಇರಬಾರದು, ಅದು ನಿಜವಾಗಿಯೂ ಜನರ ಮಾಸ್ ಮೀಡಿಯಾ ಆಗಿರಬೇಕು. ಮಾಸ್ ಮೀಡಿಯಾ ಜನಗಳ ಹತ್ತಿರ ಇರಬೇಕು. ಈ ಸಂದರ್ಭದಲ್ಲಿ ಅಮೆರಿಕೆಯ ಒಬ್ಬ ಮೀಡಿಯಾ ಎಕ್ಸ್ಪರ್ಟ್ ಹರ್ಬಟ್ ಶಿಲ್ಲರ್ ನೆನಪಿಗೆ ಬರುತ್ತಾರೆ. ಅವರು ಎಡಪಂಥೀಯ ವಿಚಾರಧಾರೆಗಳ ಸ್ಕಾಲರ್. ಈ ಕಾರ್ಪೊರೆಟ್ ಕಂಟ್ರೋಲ್‌ಡ್ ಮೀಡಿಯಾ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ, ಅವರು ಅಮೆರಿಕಾ ಸಂದರ್ಭದಲ್ಲಿ ಹೇಳಿದ ಒಂದು ಮಾತೆಂದರೆ ‘ಇಂದು ಮಾಸ್ ಮೀಡಿಯಾ ವಿಥೌಟ್ ಮಾಸ್ಸಸ್ ನೋಡುತ್ತಿದ್ದೇವೆ’ ಎಂದು. ಅದು ಇವತ್ತು ಭಾರತದಲ್ಲಿಯೂ ಆಗುತ್ತಿದೆ. ನಮ್ಮ ಜನರಿಂದ ಈ ಮಾಧ್ಯಮಗಳು ದೂರಾ ಹೋಗುತ್ತಿವೆ. ಇವರಲ್ಲಿ ಸ್ವಾತಂತ್ರ್ಯ ಇಲ್ಲ, ಇವರಿಗೆ ಸರಿ ಯಾವುದು ತಪ್ಪು ಯಾವುದು ಹೇಳುವ ಅಧಿಕಾರ ಇಲ್ಲಿ. ಆದ್ದರಿಂದ ನಾವು ಕಾರ್ಪೋರೆಟೈಷನ್ ಆಫ್ ಮೀಡಿಯಾ ಇದರ ಬದಲಾಗಿ people’s control the media ಆಗುವಂತೆ ಒಂದು ಹೊಸ ಪಾಲಿಸಿಯನ್ನು ತರಬೇಕು. ಅದಕ್ಕಾಗಿ ಪತ್ರಕರ್ತರು, ರಾಜಕಾರಣಿಗಳು, ಪ್ರಬುದ್ಧ ಚಿಂತಕರು ನಾವೆಲ್ಲರೂ ಕೂಡಿ ಒಂದು ವಿಚಾರ ಮಾಡಿ ಒಂದು ಹೊಸ ಧೋರಣೆಯನ್ನು ತಳೆದು ಅದರ ಬಗ್ಗೆ ವ್ಯಾಪಕ ಚರ್ಚೆಯನ್ನು ಮಾಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ.

ಇದನ್ನೂ ಓದಿ: ಅಭಿವೃದ್ಧಿಯಲ್ಲಿ ಮುಂದಿರುವ ಕರ್ನಾಟಕಕ್ಕೇಕೆ ಯುಪಿ ಮಾಡೆಲ್ ಎಂಬ ಟೊಳ್ಳು ಮಾದರಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...