ರಾಜ್ಯದ ಕಾರವಾರ ತಾಲ್ಲೂಕಿನಲ್ಲಿರುವ ಗ್ರಾಸಿಮ್ ಇಂಡಸ್ಟ್ರೀಸ್ ಘಟಕದಲ್ಲಿ ಶನಿವಾರ ಸಂಭವಿಸಿದ ರಾಸಾಯನಿಕ ಅನಿಲ ಸೋರಿಕೆಯಿಂದ ಬಿಹಾರ ಮತ್ತು ಉತ್ತರ ಪ್ರದೇಶದ 19 ಕಾರ್ಮಿಕರು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಗೆ ಕಳಪೆ ಸುರಕ್ಷತಾ ಮಾನದಂಡಗಳು ಮತ್ತು ಘಟಕದಲ್ಲಿನ ಲೋಪಗಳೆ ಕಾರಣ ಎಂದು ಕಾರ್ಖಾನೆಯ ಸಮೀಪ ವಾಸಿಸುವ ಜನರು ಆರೋಪಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಸಂಭವಿಸಿದ ಕಾಸ್ಟಿಕ್ ಸೋಡಾ ಉತ್ಪಾದಿಸುವ ಸ್ಥಾವರವು ಕಾರವಾರ ತಾಲ್ಲೂಕಿನ ಬಿನಾಗಾದಲ್ಲಿದೆ. ಶನಿವಾರ ಮಧ್ಯಾಹ್ನ ಅನಿಲ ಸೋರಿಕೆ ಸಂಭವಿಸಿದೆ. ರಾಸಾಯನಿಕ ಸೋರಿಕೆಯಿಂದ ಕಣ್ಣು ಉರಿ ಮತ್ತು ಉಸಿರಾಟದ ತೊಂದರೆಗೆ ಒಳಗಾದ ಹದಿನಾಲ್ಕು ಕಾರ್ಮಿಕರನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ಯಲಾಗಿದ್ದು, ಇತರ ಐದು ಜನರನ್ನು ಕಾರ್ಖಾನೆ ಆವರಣದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ರಮೇಶ್ ರಾವ್, ಕ್ಲೋರಿನ್ ಅನಿಲ ಸೋರಿಕೆಯಿಂದಾಗಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಆದರೆ ಅವರ ಸ್ಥಿತಿ ಗಂಭೀರವಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ನಡುವೆ, ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಮುನ್ನೆಚ್ಚರಿಕೆ ವಹಿಸಿಲ್ಲ ಎಂದು ಆರೋಪಿಸಿ ಉದ್ರಿಕ್ತ ಸ್ಥಳೀಯರು ಮತ್ತು ಕಾರ್ಮಿಕ ಸಂಘಗಳು ಪ್ರತಿಭಟನೆಗಳನ್ನು ನಡೆಸಿವೆ.
ಅಪಾಯದ ಬಗ್ಗೆ ಎಚ್ಚರಿಕೆ ನೀಡಬೇಕಾದ ಕಂಪನಿಯ ಸೈರನ್ ಅನ್ನು ಮೊಳಗಿಸಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ಶಾಲೆಗಳು, ಕಾಲೇಜುಗಳು ಮತ್ತು ಮನೆಗಳು ಸ್ಥಾವರದ ಹತ್ತಿರದಲ್ಲಿ ಇರುವುದರಿಂದ ಈ ವೈಫಲ್ಯವು ಸಾರ್ವಜನಿಕರನ್ನು ಅಪಾಯಕ್ಕೆ ಸಿಲುಕಿಸಿದೆ. ಕಾರ್ಖಾನೆಯು ಈ ಹಿಂದೆಯೂ ಇದೇ ರೀತಿಯ ಘಟನೆಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಸುರಕ್ಷತಾ ಪರಿಶೋಧನೆ ನಡೆಸಿ ಬಳಕೆಗೆ ಅನುಮತಿ ನೀಡುವವರೆಗೆ ಸ್ಥಾವರವನ್ನು ಮುಚ್ಚಬೇಕೆಂದು ಪ್ರದೇಶದ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ. ಜೊತೆಗೆ, ಅನಿಲ ಸೋರಿಕೆಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂಓದಿ: ಇಂಡಿಯಾ ಬಣ ವಿಸರ್ಜನೆಯಾಗಬೇಕೆಂದು ಎಂದಿಗೂ ಬಯಸಿರಲಿಲ್ಲ: ಶಿವಸೇನೆ ಸಂಸದ ಸಂಜಯ್ ರಾವತ್
ಇಂಡಿಯಾ ಬಣ ವಿಸರ್ಜನೆಯಾಗಬೇಕೆಂದು ಎಂದಿಗೂ ಬಯಸಿರಲಿಲ್ಲ: ಶಿವಸೇನೆ ಸಂಸದ ಸಂಜಯ್ ರಾವತ್


