Homeಮುಖಪುಟಕಥುವಾ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಅಪರಾಧಿ ಬಿಡುಗಡೆ, ಆತಂಕದಲ್ಲಿ ಸಂತ್ರಸ್ತ ಕುಟುಂಬ

ಕಥುವಾ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಅಪರಾಧಿ ಬಿಡುಗಡೆ, ಆತಂಕದಲ್ಲಿ ಸಂತ್ರಸ್ತ ಕುಟುಂಬ

- Advertisement -
- Advertisement -

2018ರ ಜನವರಿಯಲ್ಲಿ ಜಮ್ಮು ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಾಲಕಿಯನ್ನು ಹತ್ಯೆ ಮಾಡಲಾಯಿತು. ಈ ಪ್ರಕರಣ ಸಂಬಂಧ ಶಿಕ್ಷೆಗೊಳಗಾಗಿದ್ದ ಪೊಲೀಸ್ ಅಧಿಕಾರಿಯ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಶಿಕ್ಷೆಯನ್ನು ಅಮಾನತುಗೊಳಿಸಿದ್ದು ಸಂತ್ರಸ್ತ ಬಾಲಕಿಯ ಕುಟುಂಬ ಆತಂಕಕ್ಕೊಳಗಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಸಬ್ ಇನ್ಸ್‌ಪೆಕ್ಟರ್ ಆನಂದ್ ದತ್ತಾ ಅವರನ್ನು ಶಿಕ್ಷೆಗೆ ಗುರಿಪಡಿಸಲಾಯಿತು. ಅಲ್ಲದೆ ಸೇವೆಯಿಂದ ವಜಾಗೊಳಿಸಲಾಯಿತು. ಘಟನೆಯ ವೇಳೆ ದತ್ತಾ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿದ್ದರು. ಅವರಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. ದತ್ತಾ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಕಳೆದ ತಿಂಗಳು ಅಮಾನತುಗೊಳಿಸಲಾಯಿತು. ವೈಯಕ್ತಿಕ ಮತ್ತು ಭದ್ರತಾ ಬಾಂಡ್‌ಗಳನ್ನು ಒದಗಿಸಿದ ಮೇಲೆ ಅವರನ್ನು ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಪ್ರಾಸಿಕ್ಯೂಷನ್ ಮಾಡಿರುವ ಆರೋಪಗಳು ಆಧಾರ ರಹಿತ ಎಂದು ದತ್ತಾ ಅವರ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದ್ದಾರೆ.

ಪ್ರಕರಣದ ಮತ್ತೊಬ್ಬ ಅಪರಾಧಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ತಿಲಕ್ ರಾಜ್ ಅವರ ಶಿಕ್ಷೆಯನ್ನು ಡಿಸೆಂಬರ್ 16, 2021ರಂದು ನ್ಯಾಯಾಲಯವು ಅಮಾನತುಗೊಳಿಸಿತು. ದತ್ತಾ ಮತ್ತು ರಾಜ್ ಸೇರಿದಂತೆ ಮೂವರು ಆರೋಪಿಗಳು ಸಾಕ್ಷ್ಯ ನಾಶಪಡಿಸಿದ ತಪ್ಪಿತಸ್ಥರೆಂದು ಸಾಬೀತಾದ ಬಳಿಕ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇಬ್ಬರು ಪೊಲೀಸರು ಅರ್ಧಕ್ಕಿಂತ ಹೆಚ್ಚು ಶಿಕ್ಷೆ ಅನುಭವಿಸಿದ್ದರು.

ಪಠಾಣ್‌ಕೋಟ್‌ನ ವಿಶೇಷ ನ್ಯಾಯಾಲಯವು ಇತರ ಮೂವರು ಆರೋಪಿಗಳಾದ ಸಂಜಿ ರಾಮ್, ದೀಪಕ್ ಖಜುರಿಯಾ ಮತ್ತು ಪರ್ವೇಶ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

2018ರ ಜನವರಿ 17ರಂದು ಪ್ರಮುಖ ಆರೋಪಿ ಸಂಜಿ ರಾಮ್ ಅವರ ನಿವಾಸದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಎಂಟು ವರ್ಷದ ಬಾಲಕಿಯ ವಿರೂಪಗೊಂಡ ಶವ ಪತ್ತೆಯಾಗಿತ್ತು. ಕ್ರೂರ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ರಾಷ್ಟ್ರಾವ್ಯಾಪಿ ಪ್ರತಿಭಟನೆಗಳು ಜರುಗಿದವು. ಅಂದಿನ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರವು ಸಂತ್ರಸ್ತೆಯ ಕುಟುಂಬದ ಕೋರಿಕೆಯ ಮೇರೆಗೆ ಪ್ರಕರಣವನ್ನು ಜಮ್ಮುವಿನ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಿತು.

ಘಟನಾ ಸ್ಥಳದಲ್ಲಿ ಸುಳ್ಳು ಪುರಾವೆಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮೊದಲು ಪೊಲೀಸರು ಅಪ್ರಾಪ್ತ ಸಂತ್ರಸ್ತೆಯ ಬಟ್ಟೆಗಳನ್ನು ತೊಳೆದಿದ್ದಾರೆ ಎಂದು ಕ್ರೈಂ ಬ್ರಾಂಚ್ ತನ್ನ ತನಿಖೆಯಲ್ಲಿ ತಿಳಿಸಿದೆ.

“ಸ್ಥಳೀಯ ಅಂಗಡಿಯಿಂದ ಖರೀದಿಸಿದ ನಿದ್ರಾಜನಕಗಳ ಮೂಲಕ ಪ್ರಜ್ಞೆ ತಪ್ಪಿಸಿ ಬಾಲಕಿಯನ್ನು ರಸಾನಾದಲ್ಲಿನ ದೇವಸ್ಥಾನದಲ್ಲಿ ಕೆಲವು ದಿನಗಳ ಕಾಲ ಬಚ್ಚಿಟ್ಟು ಕ್ರೂರ ರೀತಿಯಲ್ಲಿ ಕತ್ತು ಹಿಸುಕಿ ಸಾಯಿಸಲಾಯಿತು” ಎಂದು ಅಪರಾಧ ವಿಭಾಗದ ಚಾರ್ಜ್‌ಶೀಟ್ ಬಹಿರಂಗಪಡಿಸಿದೆ. “ಆರೋಪಿಗಳು ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾರೆ, ಆದರೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಾಕ್ಷ್ಯವನ್ನು ನಾಶಪಡಿಸಿದ್ದಾರೆ” ಎಂದು 15 ಪುಟಗಳ ಆರೋಪಪಟ್ಟಿ ಹೇಳಿದೆ.

ಬಾಲಾಪರಾಧಿ ಸೇರಿದಂತೆ ಎಂಟು ಜನರ ವಿರುದ್ಧ ಚಾರ್ಜ್ ಶೀಟ್ಅನ್ನು ಕ್ರೈಂ ಬ್ರಾಂಚ್ ಸಲ್ಲಿಸಿದೆ. ಬಾಲಾಪರಾಧಿಗಳ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ. ಯಾಕೆಂದರೆ ಅವರ ವಯಸ್ಸನ್ನು ನಿರ್ಧರಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇನ್ನೂ ವಿಚಾರಣೆ ನಡೆಸಬೇಕಿದೆ.

ದೇವಾಲಯದೊಳಗೆ ಅಪ್ರಾಪ್ತ ಬಾಲಕಿಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ನಂತರ, 2018 ರಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರದಿಂದ ಹೊರಗೆ ವರ್ಗಾಯಿಸಲು ಸೂಚಿಸಿತು. ಪಠಾಣ್‌ಕೋಟ್‌ನ ಸೆಷನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

“ಐದು ವರ್ಷಗಳ ಶಿಕ್ಷೆಯನ್ನು ಪೂರೈಸುವ ಮೊದಲು ಅವರನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಅಪರಾಧಿಗಳನ್ನು ಗಲ್ಲಿಗೇರಿಸಬೇಕೆಂದು ನಾವು ಯಾವಾಗಲೂ ಒತ್ತಾಯಿಸುತ್ತೇವೆ” ಎಂದು ಸಂತ್ರಸ್ತ ಕುಟುಂಬ ಆಗ್ರಹಿಸಿದೆ.

ಈ ಜನರು (ಅಪರಾಧಿ ಪೊಲೀಸರು) ಈಗ ಹೊರಗಿದ್ದಾರೆ ಮತ್ತು ಅವರು ನಮಗೆ ಏನು ಬೇಕಾದರೂ ಮಾಡಬಹುದಾದ್ದರಿಂದ ನಾವು ಮತ್ತೆ ಬೆದರಿಕೆಯನ್ನು ಅನುಭವಿಸುತ್ತೇವೆ ಎಂದು ಕುಟುಂಬದ ಮೂಲಗಳು ಹೇಳಿವೆ.


ಇದನ್ನೂ ಓದಿರಿ: ಮೇಕೆದಾಟು ಪಾದಯಾತ್ರೆ ವಿರುದ್ಧದ ಪಿತೂರಿಯಾಗಿ ಅಶ್ವತ್ಥ್ ನಾರಾಯಣ್‌ ಹೈಡ್ರಾಮಾ: ಕರ್ನಾಟಕ ರಣಧೀರ ಪಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...