“ಜುಮ್ಮಿ ಮನೆಗೆ ಬಂದ ವಾಟಿಸ್ಸೆ.”
“ಇದೆನಕ್ಕ ರಂಗೋಲೆಲಿ ಗಾಡಿ ಚಕ್ರನೆ ಬರೆದಿದ್ದಿ” ಎಂದ.
“ಇಲ್ಲಿಗಂಟ ಬರಬ್ಯಾಡ ಅದರ್ವಳಗೆ ಕುತಗಂಡು ಮಾತಾಡು. ಅದ್ಕು ಮದ್ಲು ಅಲ್ಲಿ ಮಡಗಿರೊ ನೀರಲ್ಲಿ ಕೈ ಕಾಲು ತ್ವಳಕಂಡು ಬಾ. ಅಮ್ಯಾಲೆ ಆ ಬಾಯಿಕಟ್ಟ ಸರಿಯಾಗಾಯ್ಕೊ ಕೆಮ್ಮು ಬಂದ್ರೆ ಸೀನಿದ್ರೆ ಮುಸುರಿ ಮುಚಗಂಡು ಅಮ್ಯಾಲೆ ಕೈಯುಜ್ಜಕೊ” ಎಂದು ಜುಮ್ಮಿ ಹೇಳುತ್ತಿರುವಾಗ.
“ಭೇಷ್ ಕಣಕ್ಕ. ಎಷ್ಟೇ ಆಗ್ಲಿ ಜನಪತಿನಿಧಿ ನೀನು. ನಮ್ಮೂರ ಪಿಣರಾಯಿ ಕಣಕ್ಕ” ಎಂದ.
“ಪಿಣತೆರಾಯ ಅಂದ್ರೇನ್ಲ.”
“ಅವುನು ಕೇರಳದ ಚಿಪ್ ಮಿನಿಷ್ಟ್ರು ಕಣಕ್ಕ. ಕೊರೋನ ಯಂಗೆ ಕಂಟ್ರೊಲ್ ಮಾಡ್ಯವುನೆ ಅಂದ್ರೇ ಥೇಟ್ ನಿನ್ನ ತರನೆ ಮಾಡ್ಯವುನೆ ಕಣಕ್ಕ.”
“ಎಜ್ಜಾಟ್ಳಿ ಕರಟ್ ಕಣೊ ಉಗ್ರಿ. ಎಜುಕೇಟೆಡ್ ಪರಸನ್ ಅಂದ್ರೆ ಅವುನು. ಅವುನೇನಾರ ಪ್ರಧಾನಿಯಾಗಿದ್ರೆ ದೀಪ ಹಚ್ಚಿ ಜಾಗಟೆ ಬಡಿರಿ ಅಂತಿರಲಿಲ್ಲ. ಕರೋನ ಕಡಿಮೆ ಮಾಡಕ್ಕೆ ಏನು ಮಾಡಬೇಕು ಅದ್ ಮಾಡಿ ಅನ್ನೊನು.”
“ಮೋದಿ ದೀಪ ಹಚ್ಚಿ ಅಂದ ಮ್ಯಾಲೆ ಕಡಿಮ್ಯಾಗಬೇಕಿತ್ತಲವೆ” ಎಂದಳು ಜುಮ್ಮಿ.
“ದೀಪ ಹಚ್ಚಿದ್ರೆ ಕರೋನ ಕಡಿಮೆಯಾಯ್ತದೆ ಅಂತ ಅವುನೆಲ್ಲ ಹೇಳಿದ್ನಕ್ಕ. ದೀಪ ಹಚ್ಚಿ ಅಂದ ಅಷ್ಟೆಯ ಅದ್ಕೆ ನಮ್ಮೂರ ಮೇಷ್ಟ್ರು ಐದು ದೀಪ ಹಚ್ಚಿದ್ನಂತೆ.”
“ಅವುನ್ಯಾಕೆ ಐದು ದೀಪ ಹಚ್ಚಿದಾ.”
“ಅದು ಮದ್ಲೆ ಕಪಿ ಮುಂಡೆದಲವಾ. ಮೋದಿ ಹೇಳಿದ್ದು ತಲಿಗೊಂದು ದೀಪ ಅಂತ ತಿಳಕಂಡು ಅವುನು ಅವುನೆಂಡ್ತಿ ಮೂರು ಹೆಣ್ ಮಕ್ಕಳು ಸೇರಿ ತಲಿಗೊಂದು ದೀಪ ಹಚ್ಚಿದನಂತೆ.”
“ಮಕ್ಕಳಿಗೆ ಪಾಟ ಹೇಳೊ ಮುಂಡೆ ಮಗನೆ ಹಿಂಗಾದ್ರೆ ಇನ್ನ ದೇಸದ ಜನಗಳ ಕತಿಯೇನೂ.”
“ಇಂಥೊರಿಂದ್ಲೆಯ ಹಿಂದೂಗಳು ಸಾಬರು ಅಂತ ಬ್ಯಾರೆ ಬ್ಯಾರೆ ಆಯ್ತಾಯಿರದು.”
“ಅದೇನ್ಲ ಸಾಬರು ಗಲಾಟೆ” ಎಂದಳು ಜುಮ್ಮಿ.
“ಸಾಬರ ಕತೆ ಮುಗಿತು ಮುಗಿತು ಬುಡಕ್ಕ” ಎಂದ ವಾಟಿಸ್ಸೆ.
“ಅದ್ಯಾಕ್ಲ ಅಂಗಂತಿ.”
“ಇನ್ನೆನಕ್ಕ ಕೊರೋನ ಆದೊರಿಗೆ ಅವುಸ್ಥಿಕೊಡಕೋದೊರಿಗೆ ವಡುದು ಕಲ್ಲು ಬಿರತವೆ ಅಂದ್ರೆ ಅವು ಕತಿಯೇನೂ.”
“ಅವುಕೇನು ಮಲ್ಲಾಗ್ರು ಬಂದದ್ಲ.”
“ಬುದ್ದಿ ಕಡಿವೆಯಿದ್ದೊರಿಗೆ ಅಲವೆ ಮಲ್ಲಾಗ್ರು ಬರದು.”
“ಅದೇನಾರ ಆಗ್ಲಿ ಆ ಬಿಜೆಪಿಗಳಾಡದ್ಕೂ ಇವು ಮಾಡದ್ಕೂ ಸರಿಯಾಗ್ಯದೆ.”
“ನಿಜ ಕಣೊ ಉಗ್ರಿ ಈಗಾಗ್ಲೆ ಡೆಲ್ಲಿ ಮಸೀದಿ ವಳಗಿಂದ ತಂದು ಕರೋನ ಹರಡತ ಅವುರೆ ಸಾಬ್ರು ಊರಿಗೆ ಸೇರಸಬ್ಯಾಡಿ ಅಂತ ಬಿಜೆಪಿ ಬಡ್ಡೆತ್ತವು ಹೇಳಿಕೊಂಡು ತಿರುಗ್ತಾ ಅವೆ. ಅವುರಂಗೇಳಕ್ಕೂ ಇವುರಿಂಗೆ ಮಾಡಕ್ಕೂ ಸರಿಯಾಗ್ಯದೆ ಬುಡು.”
“ಮುಂದೆ ಕತಿಯೇನಯ್ಯಾ.”
“ಮುಂದೇನು ಅವುರ ಅಂಗೆಯ ಈ ಸಾಬರು ಅಂಗೆಯ ಅನ್ನಂಗಾಗಿ ಸಾಬರ ಪರ ಮಾತಡಕ್ಕೆ ಯಾರು ಇಲ್ದಂಗಾಯ್ತದೆ.”
“ನಾವು ಮಮನುಸರಾಗಿರತಿವಿ ಸಾಬರು ಮಾತ್ರ ಸಾಬರಾಗೆ ಇರತರೆ. ಅವನೋಡಂಗೆಯ, ಹೆಂಗಸರ್ಯಲ್ಲ ಬುರುಖಾ ಹಾಯ್ಕಂಡು. ಗಂಡಸರ್ಯಲ್ಲ ಗಡ್ಡ ಬುಟಗಂಡು ಕಣಕಾಲಗಾಟ ಪೈಜಾಮಕಂಡು ಟೋಪಿ ಹಾಯ್ಕಂಡು ನೋಡಿದೇಟಿಗೆ ಪಕ್ಕಾ ಸಾಬಿ ಅನ್ನಂಗೆ ಕಾಣ್ತರಪ್ಪ.”
“ಮದ್ಲಂಗಿರಲಿಲ್ಲ ಅಲವೆ.”
“ಊಕಣಕ್ಕ ಬಾಬ್ರಿ ಮಸೀದಿ ಬಿದ್ದಮ್ಯಾಲೆ ವಳಗಿರೊ ಮೌಲವಿಗಳು ಸಾಬರ ಕೈಗೆ ತಗಂಡು ಅಂಗೆ ಮಾಡ್ಯವುರೆ. ನೀವ್ಯಲ್ಲ ಧರಮ ಪಾಲಿಸಿಯಲ್ಲಿ ವಗ್ಗಟ್ಟಾಗಿರಿ. ಧರಮ ಅಂತ ಹೇಳಿ ಕಳುಸ್ತನೆ. ಇವು ಬಂದು ಕಲ್ಲು ಬೀರ್ತವೆ. ಅಂತೂ ಈ ಸಾಬ್ರು ಆರೆಸ್ಸೆಸ್‍ಗಳಿಂದ ನಮಗೆ ನೆಮ್ಮದಿಯಿವಲ್ಲ ಹೇಳು.”
“ಹಿಂಗಾದ್ರೆ ಸಾಬ್ರು ಕತೆ ಮುಗಿತು ಬುಡು.”
ಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ
- Advertisement -
- Advertisement -
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ


