Homeಮುಖಪುಟಪತ್ರಿಕಾ ಧರ್ಮ ಹಳ್ಳ ಹಿಡಿಸಿರುವ ಯುದ್ಧೋನ್ಮಾದಿ ಸಂಪಾದಕರು: ಮದ್ದೆರೆಯಬೇಕಾದ ಸಾಂಸ್ಕೃತಿಕ ಲೋಕ

ಪತ್ರಿಕಾ ಧರ್ಮ ಹಳ್ಳ ಹಿಡಿಸಿರುವ ಯುದ್ಧೋನ್ಮಾದಿ ಸಂಪಾದಕರು: ಮದ್ದೆರೆಯಬೇಕಾದ ಸಾಂಸ್ಕೃತಿಕ ಲೋಕ

ಮಾದ್ಯಮಗಳ ಮೇಲೆ ಕಾನೂನು ಸಮರವನ್ನು ಸಾರಬೇಕಿದೆ. ಅಂಥ ವಾಹಿನಿಗಳನ್ನು ಅಮಾನತ್ತಿನಲ್ಲಿರಿಸುವುದು, ಕಪ್ಪು ಪಟ್ಟಿಯಲ್ಲಿರುವುರುದು, ನೊಂದಣಿ ರದ್ದು ಪಡಿಸುವುದು ಇತ್ಯಾದಿ ಕ್ರಮಗಳನ್ನು ಸರಕಾರ ತೆಗೆದುಕೊಳ್ಳುವಂತೆ ಮಾಡಬೇಕಿದೆ.

- Advertisement -
- Advertisement -

ಭಾರತ ವರ್ಸಸ್ ಅವರು
ಮಿನಿ ಪಾಕಿಸ್ತಾನವಾಗಿದೆಯೇ ಪಾದರಾಯನಪುರ?
ಸುವರ್ಣ ಪ್ರಶ್ನೆಗೆ ಜಮೀರ ವಿಲ ವಿಲ, ಮೈಕ್ ಕಂಡ ಓಡಿ ಹೋದ ಜಮೀರ,
ಜನ ರಸ್ತೆಗೆ ಬಂದರೆ ಅವರನ್ನು ಗುಂಡಿಕ್ಕಿ ಕೊಲ್ಲಿ

ಇವು ಇತ್ತೀಚೆಗೆ ಟಿವಿಗಳಲ್ಲಿ ಬಂದ ಸುದ್ದಿಗಳ ಹೆಡಲೈನುಗಳು ಅಥವಾ ಆಯಾ ಟಿವಿಯ ಸಂಪಾದಕರ ಯುದ್ಧೋನ್ಮಾದಿ ಆಜ್ಞೆಗಳು ಎನ್ನಬಹುದು. ನಾನು ಮೊದಲೇ ಹೇಳಿ ಬಿಡುತ್ತೇನೆ. ಪಾದರಾಯನಪುರದ ಘಟನೆಯನ್ನು ನಾನು ಕಡಾಖಂಡಿತವಾಗಿ ಖಂಡಿಸುತ್ತೇನೆ. ಖಂಡಿಸುತ್ತಲೇ, ಒಬ್ಬ ಪತ್ರಕರ್ತನಾಗಿ ಕೆಲವೊಂದಿಷ್ಟು ವಿಚಾರಗಳನ್ನು ಹೇಳಬೇಕೆನಿಸಿದ್ದರಿಂದ ಈ ಬರಹ ಬರೆಯುತ್ತಿದ್ದೇನೆ.  ಮಾದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎನ್ನಲಾಗುತ್ತಿದೆ. ಯಾವುದೇ ಸುದ್ದಿ ವಸ್ತುನಿಷ್ಠವಾಗಿರಬೇಕು. ನಿಷ್ಪಕ್ಷಪಾತವಾಗಿರಬೇಕು. ವರದಿಗಾರ ತನ್ನ ಒಲುವು ನಿಲುವಗಳನ್ನು ಸುದ್ದಿಯಲ್ಲಿ ತುರಿಸಲೇಬಾರದು. ಪೂರ್ವಾಗ್ರಹಪೀಡಿತನಾಗಿ ನೋಡಬಾರದು. ಸಾಕ್ಷಿಗಳು ಹೇಳಿದ ಅಭಿಪ್ರಾಯಗಳನ್ನು ಅವರು ಹೇಳಿದಂತೆಯೇ ನಿರೂಪಿಸಬೇಕು. ಯಾರನ್ನೋ ಕೆರಳಿಸುವಂತೆ ಅಥವಾ ಪ್ರಚೋದಿಸುವಂತೆ ಸುದ್ದಿ ಪ್ರಕಟಿಸಬಾರದು ಎಂಬುದನ್ನು ಮಾದ್ಯಮ ಸಂಹಿತೆ ಹೇಳುತ್ತದೆ. ಕುರಿತು ಕನ್ನಡದಲ್ಲಿ ಮೊದಲು ಪ್ರಕಟಗೊಂಡ ಡಿವಿಜಿಯವರ “ವೃತ್ತಪತ್ರಿಕೆ” ಕೃತಿಯಲ್ಲಿ ಈ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಪತ್ರಿಕೋದ್ಯಮದ ಕಾಲೇಜುಗಳಲ್ಲಿ ಸುದ್ದಿಯನ್ನು ಹೇಗೆ ವಸ್ತುನಿಷ್ಠವಾಗಿ ಬರೆಯಬೇಕು ಎಂಬುದರ ಬಗ್ಗೆಯೇ ವರ್ಷಾನುಗಟ್ಟಲೆ ಪಾಠಗಳಾಗುತ್ತವೆ. ಪ್ರ್ಯಾಕ್ಟಿಸ್ ಮಾಡಿಸಲಾಗುತ್ತದೆ. ಆದಾಗ್ಯೂ ಕೂಡ ಇವತ್ತು ನಮ್ಮ ಮೀಡಿಯಾಗಳು ಈ ಮಟ್ಟದಲ್ಲಿ ಹಳ್ಳ ಹಿಡಿದಿರುವುದೇಕೆ ಅನ್ನೋದು ನನ್ನನ್ನು ಬಲವಾಗಿ ಕಾಡುತ್ತಿದೆ. ಹೌದು, ಅತ್ಯಂತ ಕೆಟ್ಟ ಭಾಷೆಯಲ್ಲಿ ಸುದ್ದಿಗಳನ್ನು ತಮ್ಮ ಮೂಗಿನ ನೇರಕ್ಕೆ ನೋಡುತ್ತಿದ್ದ ಪತ್ರಿಕೆಗಳು ಆಗಲೂ ಇದ್ದವು. ಅವುಗಳನ್ನು ಪೀತ ಪತ್ರಿಕೋದ್ಯಮ ಎನ್ನಲಾಗುತ್ತಿತ್ತು. ಅವು ಸಾಕಷ್ಟು ಕೇಸುಗಳನ್ನು ತಮ್ಮ ಮೈಮೇಲೆ ಎಳೆದುಕೊಂಡಿರುತ್ತಿದ್ದವು.


ಇದನ್ನೂ ಓದಿ: ಪಾದರಾಯನಪುರ ಘಟನೆ ನಡೆಯಲು ಕಾರಣಗಳೇನು? ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳೇನು?


ಬಹುಶಃ ನಮ್ಮ ವರದಿಗಾರರು ಮಾದ್ಯಮ ಸಂಹಿತೆಯನ್ನು ಪಾಲಿಸಿದ್ದರೆ “ಚಾಮರಾಜಪೇಟೆ ಕ್ಷೇತ್ರದ ಪಾದರಾಯನಪುರಕ್ಕೆ ಕೊರೋನಾ ತಪಾಸನೆ ಮತ್ತು ಮತ್ತು ಕ್ವಾರಂಟೈನ್ ಮಾಡಲು ತೆರಳಿದ್ದ ವೈದ್ಯರು ಮತ್ತು ಕೋರಾನಾ ವಾರಿಯರ್ಸ್ (ಹಾಗೆ ನೋಡಿದರೆ ಪತ್ರಿಕಾ ಧರ್ಮದ ಪ್ರಕಾರ ವಾರಿಯರ್ಸ್, ಸೈನಿಕರು, ಯುದ್ದ; ಈ ಪದಗಳನ್ನು ಬಳಸುವಂತಿಲ್ಲ. ಇವು ಓದುಗರನ್ನು ಉನ್ಮಾದರನ್ನಾಗಿಸುತ್ತವೆ.) ಮೇಲೆ 100ಕ್ಕೂ ಹೆಚ್ಚು ಕಿಡಿಗೇಡಿಗಳು ದಾಳಿ ನಡೆಸಿ ದಾಂಧಲೆ ಮಾಡಿದ್ದಾರೆ. ಈ ದಾಳಿಯಲ್ಲಿ ಬ್ಯಾರಿಕೇಡ್, ಪೆಂಡಾಲ್ ಗಳಿಗೆ ಹಾನಿಯಾಗಿದೆ. ಈ ಆರೋಪಿಗಳು ಕ್ವಾರಂಟೈನ್ ಗೆ ಹೆದರಿಕೊಂಡು ಹೀಗೆ ದಾಂಧಲೆ ಮಾಡಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಎಂದಷ್ಟೆ ಸುದ್ದಿ ಪ್ರಕಟವಾಗುತ್ತಿತ್ತು. ಬಹುಶಃ ಎಲ್ಲ ಸುದ್ದಿ ವಾಹಿನಿಗಳು ಹೀಗೆ ನಿಷ್ಪಕ್ಷಪಾತವಾಗಿ ಸುದ್ದಿ ಪ್ರಕಟಿಸಿದ್ದರೆ ಪಾದರಾಯನಪುರದ ಘಟನೆಗೆ ಇಷ್ಟೆಲ್ಲ ಕೋಮು ಬಣ್ಣ ಮೆತ್ತುತ್ತಿರಲಿಲ್ಲ ಮತ್ತು ಇಷ್ಟೊಂದು ತಿರುವು ಪಡೆದುಕೊಳ್ಳುತ್ತಿರಲಿಲ್ಲ. ಹೀಗೆ ಎರಡ್ಮೂರು ಕಾಲಂಗಳಲ್ಲಿ ಪ್ರಕಟವಾಗಬೇಕಿದ್ದ, ಮೂರ್ನಾಲ್ಕು ನಿಮಿಷ ಪ್ರಸಾರವಾಗಬೇಕಿದ್ದ ಸುದ್ದಿ ಹೀಗೆ ವಾರಗಟ್ಟಲೇ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಲೇ ಇರುವ ಹಿಂದಿನ ಹುನ್ನಾರಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಸುದ್ದಿ ಘಟಿಸದಿದ್ದರೆ ಸೃಷ್ಟಿಸಬೇಕು. ಹೀಗೆ ಸೃಷ್ಟಿಸುವ ವರದಿಗಾರನೇ ಮಹಾಶೂರ. ಆತ ಮಾತ್ರ ಇಂದಿನ ಟಿಆರ್ಪಿ ಸ್ಪರ್ಧೆಯ ಸುದ್ದಿಮನೆಗಳಲ್ಲಿ ಬದುಕಬಲ್ಲ ಎಂಬ ಮಾತೊಂದು ಸುದ್ದಿಮನೆಗಳಲ್ಲಿ ಚಾಲ್ತಿಯಲ್ಲಿದೆ.

ಮೊನ್ನೆ ಸುವರ್ಣ ಟಿವಿಯವಲ್ಲಿ “ಭಾರತ ವರ್ಸಸ್ ಅವರು”ಅಂತ ಮೂರು ಸರಣಿ ಕಾರ್ಯಕ್ರಮ ಪ್ರಸಾರವಾಯಿತು. ಮೊನ್ನೆಯಷ್ಟೆ ಏಕೆ? ಕಳೆದ ಮುರು ದಿನಗಳಿಂದಲೂ ಪಾದರಾಯನಪುರದ ಸುದ್ದಿಯನ್ನು ಹಾಕಿ ರುಬ್ಬುತ್ತಿದ್ದಾರೆ ಬಿಡಿ. ಅದ್ರಲ್ಲಿ ಅದರ ಸಂಪಾದಕ ಅಜಿತ ಹನುಮಕ್ಕನವರ್ “ಮೀಡಿಯಾಗಳಿಂದ ತಪ್ಪಿಸಿಕೊಂಡು ಓಡುತ್ತಿರುವ ಜಮೀರನನ್ನು ಬೆನ್ನಟ್ಟಿ. ಬಿಡಬೇಡಿ ಅಂತೆಲ್ಲ ತಮ್ಮ ವರದಿಗಾರನನ್ನು ಹುರಿದುಂಬಿಸುತ್ತಿದ್ದರು. ಅವರೇನು ಪಾದರಾಯನಪುರವನ್ನು ಪಾಕಿಸ್ತಾನದ ಭಾಗ ಎಂದು ತಿಳಿದಿದ್ದಾರಾ? ತಮ್ಮ ಪಾಳ್ಯಪಟ್ಟು ಅಂದ್ಕೊಂಡಿದ್ದಿರಾ? ನೋಡಿ ಜಮೀರ ಹೇಗೆ ಬಾಲ ಮುದುರಿಕೊಂಡು ಓಡಿ ಹೋಗ್ತಿದ್ದಾರೆ ನೋಡಿ ವೀಕ್ಷಕರೆ ಹಹ್ಹಹ್ಹಹ್ಹ ಅಂತ ಅರಚುತ್ತಿದ್ದರು. ಅವರ ಮುಖದಲ್ಲಿ ಕೆಣಕುವ ಕುಹಕ ನಗೆ ಆಗಾಗ ಮಿಂಚಿ ಮಾಯವಾಗುತ್ತಿತ್ತು.

ಜನರಿಂದ ಆಯ್ಕೆಯಾದ ಒಬ್ಬ ಪ್ರತಿನಿಧಿಯನ್ನು ಹೀಗೆ ತಮ್ಮ ಅರಚಾಟದಿಂದಲೇ ಕಟ್ಟಿ ಹಾಕಿ ಬೆನ್ನಟ್ಟುವಂತೆ ಮಾಡಲು ಇವರಿಗೆ ಕಾನೂನಿನಲ್ಲಿ ಅವಕಾಶ ಕೊಟ್ಟವರ್ಯಾರು? ಸಂಪಾದಕನೆಂದರೆ ಏನು ಬೇಕಾದ್ರೂ ಮಾತಾಡಬಹುದಾದ ಸರ್ವಾಧಿಕಾರಿಯೇ? ಎಂಬುದನ್ನು ಪ್ರಶ್ನಿಸುವವರೇ ಇಲ್ಲದಂತಾಗಿಬಿಟ್ಟಿರುವುದು ದುರದೃಷ್ಟಕರ. ನಂತರ ಮುಂದವರೆದ ಚರ್ಚೆಯಲ್ಲಿ ಅಬ್ದುಲ್ ರಜಾಕ್ ಎನ್ನುವ ಮುಸ್ಲಿಂ ಮುಖಂಡರೊಬ್ಬರು ಭಾಗವಹಿಸುತ್ತಾರೆ. ಅಜಿತ್ ಅವರಿಗೂ ಬಿಡುವುದಿಲ್ಲ. “ರಜಾಕ್, ನಿಮ್ಮ ಧರ್ಮಗುರು ಕ್ವಾರಂಟೈನ್ ಆಗಲ್ಲವಂತೆ. ನೀವ್ಯಾಕೆ ನಿಮ್ಮ ಧರ್ಮಗುರುವಿಗೆ ಬುದ್ದಿ ಹೇಳ್ತಿಲ್ಲ. ನಿಮ್ಮ ಜನಕ್ಕೆ ಯಾರು ಬುದ್ದಿ ಹೇಳೋರೇ ಇಲ್ಲವೇನ್ರಿ? ಬೇರೆ ದೇಶಗಳಲ್ಲಾಗಿದ್ದರೆ ಇಂಥ ನಿಮ್ಮ ಜನರನ್ನು ಗುಂಡಿಕ್ಕಿ ಕೊಲ್ಲತಿದ್ರು ಗೊತ್ತಾ? ಭಾರತದಲ್ಲಿ ಇರೋದ್ರಿಂದ ನೀವೆಲ್ಲ ಬಚಾವಾಗಿದ್ದಿರಿ ಅರ್ಥ ಮಾಡ್ಕೊಳ್ಳಿ. ಗೊತ್ತಾ? ಅಂತೆಲ್ಲ ಏರು ದ್ವನಿಯಲ್ಲಿ ಪ್ರಶ್ನಿಸುತ್ತಿದ್ದರು.


ಇದನ್ನೂ ಓದಿ: ಪಾದರಾಯನಪುರದ ಬಿಕ್ಕಟ್ಟು ಬೆಳೆಸುವಂತೆ ಅಧಿಕಾರಿಗಳಿಗೆ ಒತ್ತಡ? ಕಾಣದ ಕೈಗಳೇಕೆ ಕೆಲಸ ಮಾಡುತ್ತಿವೆಯೆ?


ರಜಾಕ್ ಆಗಾಗ ಒಂಚೂರು ಬಾಯಿ ತೆರೆಯಲು ಪ್ರಯತ್ನಿಸುತ್ತಿದ್ದರು. ಆದ್ರೆ ಆಗೆಲ್ಲ, ಅವರ ದ್ವನಿಯನ್ನು ಮ್ಯೂಟ್ ಮಾಡಿ, ನೋಡಿ ರಜಾಕ್, ನೀವಿಲ್ಲಿ ನಿಮಗೆ ಬಾಯಿಗೆ ಬಂದಂಗೆ ಮಾತಾಡಬೇಡಿ, ನಾನು ಕೇಳಿದ ಪ್ರಶ್ನೆಗಷ್ಟೇ ನೀವು ಉತ್ತರಿಸಬೇಕು. ನಿಮ್ಮಂಥವರಿಂದಾಗಿ ಇಡೀ ದೇಶದ ಲಾಕ್ಡೌನ್ ಮುಂದಕ್ಕೆ ಹೋಗಿದೆ. ನಿಮ್ಮಿಂದಾಗಿ ಇಡಿ ದೇಶಕ್ಕೆ ಶಿಕ್ಷೆ. ಅನ್ನೋ ಪಾಪಪ್ರಜ್ಞೆಯಿದೆಯಾ? ಟಿವಿಯಲ್ಲಿ ಮಾತಾಡಕ್ಕೆ ಬರೋ ಮುಂಚೆ ಅಪ್ಡೇಟ್ ಆಗಿ ಬರಬೇಕು ಅನ್ನೋ ಕಾಮನ್ ಸೆನ್ಸ್ ಇಲ್ಲವಾ ನಿಮಗೆ ಅಂತ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ ಬಿಜೆಪಿ ಮುಖಂಡ ರಹೀಮ ಉಚ್ಚೀಲ ತಮ್ಮನ್ನು ಬೆಂಬಲಿಸಿ ಮಾತಾಡಿದಾಗಲೆಲ್ಲ ಇಷ್ಟಗಲ ನಕ್ಕು ಸಮರ್ಥಿಸುತ್ತಿದ್ದರು. ಅದಾದ ಮೇಲೆ ಬಂಧಿಸಲ್ಪಟ್ಟ ಆರೋಪಿಗಳ ಹೆಂಡತಿಯರು ಜೆಜೆನಗರ ಪೊಲೀಸ್ ಠಾಣೆ ಮುಂದೆ ಬಂದು “ನಾವು ಬಳ್ಳಾರಿ, ರಾಯಚೂರು ಕಡೆಯವರು ಸಾರ್, ಇಲ್ಲಿಗೆ ಹೊಟ್ಟೆಪಾಡಿಗ ದುಡಿಯಲು ಬಂದಿದ್ದಿವಿ. ಬೇಕಾದ್ರೆ ನಮ್ಮ ಗಂಡಂದಿರ ಆಧಾರ ಕಾರ್ಡ್ ಚೆಕ್ ಮಾಡಿ. ಈ ಕೇಸಿನಲ್ಲಿ ಏನು ತಪ್ಪು ಮಾಡದ ನಮ್ಮ ಗಂಡಂದಿರನ್ನು ಅರೆಸ್ಟ್ ಮಾಡಿದ್ದಾರೆ ಅಂತ ಪೊಲೀಸರ ಮುಂದೆ ಬೇಡಿಕೊಳ್ಳುತ್ತಿದ್ದರೆ ಆ ಸುದ್ದಿಯನ್ನು ಈ ಸುವರ್ಣ ಟಿವಿ “ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಮಹಿಳೆಯರ ಹೈಡ್ರಾಮಾ” ಅಂತ ಸುದ್ದಿ ಪ್ರಸಾರ ಮಾಡಿತು.ಆ ಮಹಿಳೆಯರ ಸಂಕಟ ಇವರಿಗೆ ಹೈಡ್ರಾಮಾ…!!

ಪಾದರಾಯನಪುರದಲ್ಲಿನ ಏನು ತಪ್ಪು ಮಾಡದ ಅಮಾಯಕರಿಗಾದರೂ ಊಟ ಕೊಡಿ ಅಂತ ಪೋಸ್ಟರ್ ಅಂಟಿಸಿದ್ದನ್ನು ಸಹ ಈ ಟಿವಿ ಕುಹಕದಿಂದ ಪ್ರಸಾರ ಮಾಡಿತು. ಹೀಗೆ ಪಾದರಾಯನಪುರದ ಜನ ಬದುಕಲು ಕನಿಷ್ಟ ಸೌಲಭ್ಯಗಳನ್ನು ಕೇಳುತ್ತಿದ್ದರೆ, ಟಿವಿಯವರು ಮಾತ್ರ ಅದನ್ನು ಹೈಡ್ರಾಮಾ ಎಂದಲೋ, ಬಹಿಷ್ಕರಿಸಬೇಕು ಅಂತಲೋ ಅವರ ಆತ್ಮಘನತೆಗೆ ಪೆಟ್ಟು ನೀಡುತ್ತಲೇ ಇದ್ದಾರೆ. ಇದಕ್ಕೂ ಒಂದು ವಾರ ಮುಂಚೆ ಲಾಕ್ಡೌನ್ ಸಮಯದಲ್ಲಿ ರಸ್ತೆಗೆ ಬರುವ ಕಾರ್ಮಿಕರನ್ನು ಗುಂಡಿಕ್ಕಿ ಕೊಲ್ಲಿ ಯಡಿಯೂರಪ್ಪನವರೇ ಅಂತ ಪಬ್ಲಿಕ್ ಟಿವಿ ರಂಗಣ್ಣ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದನ್ನು ನಾವು ನೋಡಿದ್ದೇವೆ.

“ಭಾರತ ವರ್ಸಸ್ ಅವರು” ಈ ಹೆಡ್ಡಿಂಗ್ ಎಂಥ ಸಂವಿಧಾನ ವಿರೋಧಿಯಾಗಿದೆ ನೋಡಿ. ಈ “ಅವರು” ಎಂದರೆ ಯಾರು? ಈ ಅವರು ನಮ್ಮ ಭಾರತದವರು ಅಲ್ಲವೆ? ಅವರು ಭಾರತದವರಲ್ಲ ಅಂತ ಯಾವ ಕಾನೂನಿನಲ್ಲಿ ಹೇಳಲಾಗಿದೆ? ಈ ಸುದ್ದಿ ನೋಡುವ ಬಿಸಿರಕ್ತದ ಹಿಂದೂ ಯುವಕರ ಎದೆಯಲ್ಲಿ ಹುಟ್ಟುವ ಆಕ್ರೋಶವನ್ನು ಅಳೆಯಲು ಯಾವ ಮಷೀನಿನಲ್ಲಿ ಅಳೆಯಬಹುದು? ಅದೇ ಸಮಯದಲ್ಲಿ ಇಂಥ ಸುದ್ದಿ ಓದುವ ಮುಸ್ಲಿಂ ಯುವಕರ ಮನಸ್ಸಿನಲ್ಲಿ ಎಂಥ ಭೀತಿ, ಅಭದ್ರತೆ, ಭಯ, ಕಳವಳ ಹುಟ್ಟಿರಬಹುದು? ಇಂಥ ಸುದ್ದಿಗಳಿಂದಾಗಿಯೇ ಅವರೆಲ್ಲ ಕೆರಳಿ ಹೀಗೆ ವೈದ್ಯರ ಮೇಲೆ ತಿರುಗಿ ಬಿದ್ದಿರಬಹುದಲ್ಲವೇ? ಅಂತೆಲ್ಲ ಯುದ್ಧೋನ್ಮಾದಿ ಸಂಪಾದಕರ ಕೊರಳುಪಟ್ಟಿ ಹಿಡಿದು ಕೇಳಬೇಕೆನಿಸುತ್ತದೆ.


ಇದನ್ನೂ ಓದಿ: ಪಾದರಾಯನಪುರದಲ್ಲಿ ನಡೆದದ್ದೇನು? ಸಂಪೂರ್ಣ ವಿವರಗಳು


ಹಾಗಾದ್ರೆ ಪತ್ರಿಕಾ ಧರ್ಮ ಇಷ್ಟೊಂದು ಅಧೊಗತಿಗೆ ಇಳಿದಿರುವುದು ಯಾಕೆ? ಕೇವಲ ಲಾಭ ಮಾಡಿಕೊಳ್ಳುವುದಷ್ಟೇ ಮಾದ್ಯಮಗಳ ಉದ್ದೇಶವೇ? ಅಥವಾ ಈ ದೇಶದ ಬಹುಸಂಖ್ಯಾತ ಕೋಮಿನ ಕೋಮುವಾದಿ ಮುಖಂಡರೆ ಅಲ್ಲಿಂದ ತಪ್ಪಿಸಿಕೊಂಡು ಬಂದು ಮಾದ್ಯಮ ಕ್ಷೇತ್ರದ ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದಾರೆಯೇ? ಅಥವಾ ಜನರೇ ಇಂಥ ಸುದ್ದಿ ನಿರೀಕ್ಷಿಸುತ್ತಾರೆಯೇ, ಜನರಲ್ಲಿ ಹೆಪ್ಪುಗಟ್ಟುತ್ತಿರುವ ಈ ಯುದ್ಧೋನ್ಮಾದ ಈ ದೇಶವನ್ನು ಎಲ್ಲಿಗೆ ತಂದು ಹಚ್ಚಬಹುದು ಅಂತ ಯೋಚಿಸಿದಾಗಲೆಲ್ಲ ಭಯ ಮತ್ತಷ್ಟು ಹೆಚ್ಚಾಗಿ ದೇಹ ಕಂಪಿಸುತ್ತದೆ.

ಈ ಸಮಸ್ಯೆಗೆ ಪರಿಹಾರವಿಲ್ಲವೇ?

ಹಾಗಂತ ಇದಕ್ಕೆಲ್ಲ ಪರಿಹಾರವೇ ಇಲ್ಲವೇ? ಪರಿಹಾರವಿದೆ. ಸೌಹಾರ್ಧತೆಯಿಂದ ಕೂಡಿ ಸಹಬಾಳ್ವೆ ನಡೆಸುತ್ತಿರುವ ಈ ದೇಶದ ಜನರಲ್ಲಿ ನಂಜು ತುಂಬಿ ಮಾನವ ಬಾಂಬ್ ಗಳನ್ನಾಗಿಸುತ್ತಿರುವದನ್ನು ತಡೆಗಟ್ಟಲು ಸಂವಿಧಾನದ ಮೊರೆ ಹೋಗಬೇಕಿದೆ. ನಮ್ಮ ದೇಶದ ನಾಡಿನ ಸಾಕ್ಷಿಪ್ರಜ್ಞೆ ಎನಿಸಿಕೊಂಡಿರುವ ಸಾಂಸ್ಕೃತಿಕ ಚಿಂತಕರು, ಬರಹಗಾರರು, ಮಾದ್ಯಮಕ್ಷೇತ್ರದ ಜೀವಪರರು, ಕಾನೂನು ಸಲಹೆಗಾರರು ಎಲ್ಲರೂ ಸೇರಿಕೊಂಡು ಇಂಥ ಮಾದ್ಯಮಗಳಿಗೆ ಕಾನೂನಾತ್ಮಕವಾಗಿ ಬುದ್ಧಿ ಕಲಿಸುವ ಆಂದೋಲನವನ್ನು ಹಮ್ಮಿಕೊಳ್ಳಲು ಇದು ಸಕಾಲ. ಈ ಅವಕಾಶವಾದಿ ಸಂಪಾದಕರು ಬಳಸುವ ಒಂದೊಂದು ವಾಕ್ಯದಲ್ಲೂ ಅಸಂವಿಧಾನಾತ್ಮಕ, ತಾರತಮ್ಯದ ಯುದ್ಧೋನ್ಮಾದಿ ಪದ ಇದ್ದೆ ಇರುತ್ತದೆ. ಅಂತ ಪದ ಬಳಸುವ ಮಾದ್ಯಮಗಳ ಮೇಲೆ ಕಾನೂನು ಸಮರವನ್ನು ಸಾರಬೇಕಿದೆ. ಅಂಥ ವಾಹಿನಿಗಳನ್ನು ಅಮಾನತ್ತಿನಲ್ಲಿರಿಸುವುದು, ಕಪ್ಪು ಪಟ್ಟಿಯಲ್ಲಿರುವುರುದು, ನೊಂದಣಿ ರದ್ದು ಪಡಿಸುವುದು ಇತ್ಯಾದಿ ಕ್ರಮಗಳನ್ನು ಸರಕಾರ ತೆಗೆದುಕೊಳ್ಳುವಂತೆ ಮಾಡಬೇಕಿದೆ.

ಆದ್ರೆ ಕೆಲವು ಹಿರಿಯ ಕಥೆಗಾರರು ಸಹ ಟಿವಿಯವರ ಈ ಯುದ್ಧೋನ್ಮಾದಿ ಭಾಷೆಯ ಪ್ರಭಾವಕ್ಕೆ ಒಳಗಾಗಿ ಮುಸ್ಲಿಂ ಸಮುದಾಯವನ್ನು ದ್ವೇಷಿಸುವ ಮಟ್ಟಕ್ಕೆ ಕರಪ್ಟ್ ಆಗುತ್ತಿದ್ದಾರೆ. ಜೊತೆಗೆ ಕೆಲವರು ನ್ಯೂಜ್ ಚಾನಲ್ ಬಹಿಷ್ಕರಿಸುವ ಅಭಿಯಾನ ನಡೆಸುತ್ತಿದ್ದಾರೆ. ಇದಕ್ಕಿಂತಲೂ ಕಾನೂನು ಹೋರಾಟವೇ ಸೂಕ್ತ ಮದ್ದು.

ಟಿವಿಗಳಿಗೆ ಬರುತ್ತಿರುವ ಕಮೆಂಟ್ಸ್‌ ಏಕೆ ಓದುತ್ತಿಲ್ಲ?

ಇನ್ನು ಈ ಟಿವಿಗಳ ಯುಟ್ಯೂಬ್ ಲೈವ್ ಲಿಂಕಿನಲ್ಲಿನ ಚಾಟ್ ಬಾಕ್ಸ್ ನಲ್ಲಿನ ಕೆಲವರ ಕಮೆಂಟ್ ಗಳನ್ನು, ಅವರು ಬಳಸುವ ಭಾಷೆಯನ್ನು ನೋಡಿದರಂತೂ ವಾಕರಿಕೆ ಬರುತ್ತದೆ. ಕೆಲವು ಕೋಮುವಾದಿಗಳಂತೂ ಮುಸ್ಲಿಮರ ಅಕ್ಕ, ಅವ್ವ, ಹೆಂಡತಿಯರ ಗುಪ್ತಾಂಗಳನ್ನೆ ಕೇಂದ್ರೀಕರಿಸಿಕೊಂಡು ಅಸಹ್ಯ ಪದಗಳನ್ನು ಬಳಸುತ್ತಾ ತಮ್ಮ ವಿಕೃತತೆಯನ್ನು ಮೆರೆಯುತ್ತಾರೆ. ಕೆಲವರು ನೇರವಾಗಿ ಪಾಕಿಸ್ತಾನ, ಟಿಪ್ಪು, ಖಿಲ್ಜಿ, ಘೋರಿ ಅಂತೆಲ್ಲ ವಿಷಯಗಳನ್ನು ಅದರಲ್ಲಿ ತಂದು ಮುಸ್ಲಿಮ ಸಮುದಾಯ ಕೆರಳುವಂತ ಮಾಡುತ್ತಾರೆ. ಕೆರಳುವ ಮುಸ್ಲಿಮ ಸಮುದಾಯದವರು ಸಹ ಅವರ ವಿರುದ್ಧ ಅಸಹ್ಯದ ಭಾಷೆಯಲ್ಲೆ ಉತ್ತರಿಸುತ್ತಾರೆ. ಅಂಥ ಕಮೆಂಟ್ ಗಳನ್ನು ಆಯಾ ಟಿವಿಯ ಸಂಪಾದಕರು ನೋಡಿಯೂ ಸುಮ್ಮನಿರುತ್ತಾರೆ. ಇಂಥವೆಲ್ಲ ಪರಿಶೀಲಿಸಿ ಅಥವಾ ಅಂಥ ಕಮೆಂಟ್ ಗಳನ್ನು ಓದಿ ಅವರ ಆತ್ಮ ಮತ್ತಷ್ಟು ಸಂತೃಪ್ತಗೊಳ್ಳುತ್ತದೆಯೋ? ಇದಕ್ಕೆಲ್ಲ ಕಡಿವಾಣ ಹಾಕಲು ಸಂಪಾದಕರ ಮೇಲೆ ಕ್ರಮ ತೆಗೆದುಕೊಳ್ಳಬೇಕಿದೆ.


ವಿಡಿಯೊ ನೋಡಿ: ಮಾಧ್ಯಮಗಳು ಸೃಷ್ಟಿಸಿರುವ ಸಾವಿನ ಬಾವಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಕನ್ನಡದ ಟಿವಿ ಮಾದ್ಯಮದವರ ಅಟಾಟೋಪಕ್ಕೆ ಲಂಗುಲಗಾಮು ಇಲ್ಲದಂತಾಗಿದೆ. ಸಾಂಸ್ಕೃತಿಕ ಲೋಕದ ದಿಗ್ಗಜರು, ಚಿಂತಕರು, ಅಸಹಾಯಕರಾಗಿದ್ದಾರೆ. ಮನುವಾದಿಗಳ ವಿರುದ್ಧ ದನಿ ಎತ್ತುವವರನ್ನು ಕರಾಳವಾದ ಯು.ಎ.ಪಿ.ಎ. ಕಾನೂನಿನ ಅಡಿಯಲ್ಲಿ ಜೈಲಿಗೆ ತಳ್ಳಲಾಗುತ್ತಿದೆ. ಈಗ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಈ ದೇಶದ ಬವಿಶ್ಯ ಕರಾಳವಾಗಲಿದೆ, ಎಂದೆನಿಸುತ್ತಿದೆ.

  2. ಬಹುಪಾಲು ಮುದ್ರಣ ಮಾಧ್ಯಮವೂ ಇಂದು ದಾರಿ ತಪ್ಪಿದೆ,ಆದರೆ ಜನ ಸಾಮಾನ್ಯರ ಪಾಲಿಗೆ ಬಹಳ ಅಪಾಯಕಾರಿ ಆಗಿರುವುದು ನಮ್ಮ ಈ ಕನ್ನಡ ನ್ಯೂಸ್ ಚಾನೆಲ್ ಗಳು!ಮುಗ್ಧ ಜನಗಳ ಮನದಲ್ಲಿ ಕೋಮು ನಂಜು ತುಂಬಿ ಇಡೀ ಮುಸ್ಲಿಂ ಜನರೇ ಕೆಡುಕರು ಎಂಬ ವಿಷ ಬಿತ್ತುತ್ತಿದ್ದಾರೆ ಈ ಬ್ರಾಹ್ಮಣಷಾಹಿ,ಪುರೋಹಿತಷಾಹಿ ಮಾಧ್ಯಮ ದೂರ್ತರು…ಎಲ್ಲಾ ಸಮಾಜಮುಖಿ ಚಿಂತಕರು ಈಗ ಎಚ್ಚರವಹಿಸಿ ಹೋರಾಡದ ಹೊರತು ದೇಶಕ್ಕೆ ಉಳಿಗಾಲವಿಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...