ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಹೆಸರನ್ನು ಟ್ರಂಪ್ ಭೇಟಿಯ ಕಾರ್ಯಕ್ರಮದಿಂದ ಕೈ ಬಿಡಲಾಗಿದೆ ಎಂದು ಎಎಪಿ ಆರೋಪಿಸಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹ್ಮದಾಬಾದ್ ನಲ್ಲಿ ನಡೆಯಲಿರುವ “ನಮಸ್ತೇ ಟ್ರಂಪ್” ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ದೆಹಲಿಯಲ್ಲಿ ಟ್ರಂಪ್ ಮತ್ತು ಮೋದಿಯ ನಡುವೆ ಮಾತುಕತೆ ನಡೆಯಲಿದೆ. ಈ ಸಮಯದಲ್ಲಿ ಟ್ರಂಪ್ ಪತ್ನಿ ಮೆಲಾನಿಯ ಟ್ರಂಪ್ ಅವರು ದಹಲಿಯ ಶಾಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದ ಪಟ್ಟಿಯಲ್ಲಿ ಮುಖ್ಯ ಅತಿಥಿಗಳಾಗಿದ್ದ ಸಿಎಂ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಎಎಪಿ ಆರೋಪಿಸಿದೆ.
ದೆಹಲಿ ಶಾಲೆಯಲ್ಲಿ ಹೊಸದಾಗಿ ಪರಿಚಯಿಸಲಾದ “ಹ್ಯಾಪಿನೆಸ್ಸ್ ಕರಿಕ್ಯುಲಮ್ (ಸಂತಸದಾಯಕ ಪಠ್ಯ) ಅನ್ನು ವೀಕ್ಷಿಸಲು ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕಾರ್ಯಕ್ರಮದ ಪಟ್ಟಿಯಿಂದ ದೆಹಲಿಯ ಇಬ್ಬರು ಉನ್ನತ ನಾಯಕರನ್ನು ವಿವಿಐಪಿ ಪಟ್ಟಿಯಿಂದ ಕೈಬಿಡುವುದರ ಹಿಂದೆ ಕೇಂದ್ರ ಸರ್ಕಾರದ ಹುನ್ನಾರವಿದೆ ಎಂದು ಎಎಪಿ ಆರೋಪಿಸಿದೆ.

ಶಾಲಾ ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಎರಡು ವರ್ಷಗಳ ಹಿಂದೆ “ಹ್ಯಾಪಿನೆಸ್ಸ್ ಪಠ್ಯಕ್ರಮ”ವನ್ನು ದೆಹಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಪರಿಚಯಿಸಿದ್ದರು. ಇದು 40 ನಿಮಿಷಗಳ ಧ್ಯಾನ, ವಿಶ್ರಾಂತಿ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಒಳಗೊಂಡಿದೆ.
ಎಎಪಿ ಸರ್ಕಾರ ಜುಲೈ 2018 ರಲ್ಲಿ ತನ್ನ ಶಾಲೆಗಳಲ್ಲಿ ‘ಸಂತೋಷದಾಯಕ ಪಠ್ಯಕ್ರಮ’ ವನ್ನು ಪರಿಚಯಿಸಿತು. ಪಠ್ಯಕ್ರಮದ ಅಡಿಯಲ್ಲಿ, ನರ್ಸರಿ ಮತ್ತು ಶಿಶುವಿಹಾರದ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಬಾರಿ ಮತ್ತು 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಕ್ಕೆ ಒಂದು ಗಂಟೆಯ ಅವಧಿಯಲ್ಲಿ ಧ್ಯಾನ, ವಿಶ್ರಾಂತಿಯ ಜೊತೆಗೆ ಕಥೆ ಹೇಳುವಿಕೆ ಮತ್ತು ಪ್ರಶ್ನೆ-ಉತ್ತರದ ವಿಷಯಗಳನ್ನು ಒಳಗೊಂಡಿದೆ.
ಅಮೆರಿಕದ ಪ್ರಥಮ ಮಹಿಳೆಯ ಭೇಟಿಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಸಿಸೋಡಿಯಾ ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಮೆಲಾನಿಯಾ ಟ್ರಂಪ್ ಭೇಟಿ ನೀಡಲಿರುವ ಶಾಲೆಯ ಹೆಸರು ಮತ್ತು ಸ್ಥಳವನ್ನು ಭದ್ರತಾ ಕಾರಣಗಳಿಂದ ಬಹಿರಂಗಪಡಿಸಿಲ್ಲ.

ನಾವು ಯುಎಸ್ ರಾಯಭಾರ ಕಚೇರಿಯಿಂದ ಶಾಲಾ ಭೇಟಿಗೆ ವಿನಂತಿಯನ್ನು ಪಡೆದುಕೊಂಡಿದ್ದೇವೆ. ಅವರು ಬರಲು ಬಯಸಿದರೆ ಖಂಡಿತ ಅವರನ್ನು ಸ್ವಾಗತಿಸುತ್ತೇವೆ ಎಂದು ನಾವು ಅವರಿಗೆ ತಿಳಿಸಿದ್ದೇವೆ ಎಂದು ಪಟ್ಪರ್ಗಂಜ್‌ನ ದೆಹಲಿ ಸರ್ಕಾರಿ ಶಾಲೆಗೆ ಭೇಟಿಯ ಸಂದರ್ಭದಲ್ಲಿ ಸಿಸೋಡಿಯ ಹೇಳಿದ್ದಾರೆ.
ಯಾರನ್ನು ಆಹ್ವಾನಿಸಬೇಕು ಮತ್ತು ಯಾರನ್ನು ಆಹ್ವಾನಿಸಬಾರದು ಎಂದು ಭಾರತೀಯ ಸರ್ಕಾರವು ವಿದೇಶಿ ಅತಿಥಿಗೆ ಸಲಹೆ ನೀಡುವುದಿಲ್ಲ. “ಸಣ್ಣ ರಾಜಕೀಯವನ್ನು ಪ್ರಮುಖ ಸಂದರ್ಭಗಳಲ್ಲಿ ಮಾಡಬಾರದು. ಭಾರತ ಸರ್ಕಾರವು ಎಲ್ಲ ಪಕ್ಷಗಳನ್ನು ಒಳಗೊಂಡ ಭಾರತೀಯರನ್ನು ಪ್ರತಿನಿಧಿಸುತ್ತದೆ. ಇಂತಹ ಸಂದರ್ಭದಲ್ಲಿ ರಾಜಕೀಯ ತರಬಾರದು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.


