ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನರೇಂದ್ರ ಮೋದಿಗೆ ಪರ್ಯಾಯವಾಗಿ ಬೆಳೆಯುತ್ತಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
GNCTD (Government of National Capital Territory of Delhi) ಮಸೂದೆಯನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಇದರ ಬಗ್ಗೆ ಕಾನೂನು ಸಲಹೆಯನ್ನು ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದರು.
“ಎಲ್ಲೆಡೆ ದೆಹಲಿಯ ಆಡಳಿತದ ಮಾದರಿಯನ್ನು ಚರ್ಚಿಸಲಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಅಸುರಕ್ಷಿತ ಭಾವನೆ ಕಾಡುತ್ತಿದೆ. ಏಕೆಂದರೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನರೇಂದ್ರ ಮೋದಿಗೆ ಪರ್ಯಾಯವಾಗಿ ಬೆಳೆಯುತ್ತಿದ್ದಾರೆ. ಹಾಗಾಗಿ ಚುನಾಯಿತ ಸರ್ಕಾರವನ್ನು ದುರ್ಬಲಗೊಳಿಸುವ ಸಲುವಾಗಿ ಈ ಮಸೂದೆಯನ್ನು ಜಾರಿಗೊಳಿಸಿದ್ದಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ: ಹೆಲಿಕಾಪ್ಟರ್, ಚಂದ್ರಯಾನ, ಐಪೋನ್, ಕೋಟಿ ಹಣ-ತಮಿಳುನಾಡು ಚುನಾವಣಾ ಅಭ್ಯರ್ಥಿಯ ಪ್ರಣಾಳಿಕೆ!
ಪ್ರತಿಪಕ್ಷಗಳ ವಿರೋಧದ ಹೊರತಾಗಿಯೂ ರಾಜ್ಯಸಭೆಯಲ್ಲಿ 2021 ರ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು.
ಸಾಮಾನ್ಯವಾಗಿ ಎನ್‌ಸಿಟಿ ಮಸೂದೆ ಎಂದು ಕರೆಯಲ್ಪಡುವ ಈ ಮಸೂದೆಯನ್ನು ಲೋಕಸಭೆಯು ಮಾರ್ಚ್ 22 ರಂದು ಅಂಗೀಕರಿಸಿತ್ತು.
“ಈ ಮಸೂದೆಯು ಚುನಾಯಿತ ಸರ್ಕಾರಕ್ಕಿಂತ ದೆಹಲಿ ಲೆಫ್ಟಿನೆಂಟ್-ಗವರ್ನರ್ (ಎಲ್‌ಜಿ) ಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ. ಜೊತೆಗೆ ಯಾವುದೇ ಕಾರ್ಯಕಾರಿ ಕ್ರಮ ಕೈಗೊಳ್ಳುವ ಮೊದಲು ದೆಹಲಿ ಸರ್ಕಾರವು ಎಲ್‌ಜಿಯ ಅಭಿಪ್ರಾಯವನ್ನು ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸುತ್ತದೆ” ಎಂದು ದೆಹಲಿ ಸರ್ಕಾರ ಆರೋಪಿಸಿದೆ.
ಇದಲ್ಲದೆ ದೆಹಲಿಯಲ್ಲಿ “ಸರ್ಕಾರ” ಎಂದರೆ “ಲೆಫ್ಟಿನೆಂಟ್ ಗವರ್ನರ್” ಎಂದೂ ಮಸೂದೆ ಸ್ಪಷ್ಟಪಡಿಸುತ್ತದೆ.
ಇದನ್ನೂ ಓದಿ: ಭಾರತೀಯ ಮೀನುಗಾರರು ಶ್ರೀಲಂಕಾ ನೌಕಾಪಡೆಯ ವಶಕ್ಕೆ: ಬಂಧಿತರ ಸಂಖ್ಯೆ 54 ಕ್ಕೆ ಏರಿಕೆ


