ಪಕ್ಷದ ಪಂಜಾಬ್ ಘಟಕದಲ್ಲಿ ಭಿನ್ನಮತದ ವದಂತಿಗಳ ನಡುವೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ (ಫೆ.11) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಸಚಿವರು ಮತ್ತು ಶಾಸಕರೊಂದಿಗೆ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಸಭೆ ನಡೆಸಿದ್ದಾರೆ.
ಪಕ್ಷದ ನಾಯಕರ ಪ್ರಕಾರ, ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ಸೋತಿರುವ ಕುರಿತು ಪರಾಮರ್ಶೆ ನಡೆಸಲು ಮತ್ತು 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಯೋಜನೆ ರೂಪಿಸುವ ಬಗ್ಗೆ ಚರ್ಚೆಸಲು ಸಭೆ ನಡೆಸಲಾಗಿದೆ. ಪಂಜಾಬ್ ಸಂಸದರಾದ ರಾಘವ್ ಚಡ್ಡಾ ಮತ್ತು ಸಂದೀಪ್ ಪಾಠಕ್ ಸೇರಿದಂತೆ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಪಂಜಾಬ್‌ನ ಸಂಗ್ರೂರ್ ಶಾಸಕಿ ನರಿಂದರ್ ಕೌರ್ ಅವರು ಎಎಪಿಯೊಳಗಿನ ಆಂತರಿಕ ಭಿನ್ನಾಭಿಪ್ರಾಯದ ವರದಿಗಳನ್ನು ತಳ್ಳಿಹಾಕಿದ್ದಾರೆ. ಇಂದಿನದ್ದು ಪಕ್ಷದ ಸಾಮಾನ್ಯ ಸಭೆ ಎಂದಿದ್ದಾರೆ. “ನಾವು ದೆಹಲಿಯ ಜನಾದೇಶವನ್ನು ಸ್ವೀಕರಿಸುತ್ತೇವೆ ಮತ್ತು ಬಲವಾದ ವಿರೋಧ ಪಕ್ಷವಾಗಿ ನಮ್ಮ ಪಾತ್ರ ನಿರ್ವಹಿಸುತ್ತೇವೆ. ಪಂಜಾಬ್ ಮತ್ತು ದೆಹಲಿಯಲ್ಲಿ ಇಂತಹ ಸಭೆಗಳು ಈ ಹಿಂದೆಯೂ ನಡೆದಿವೆ” ಎಂದು ಹೇಳಿದ್ದಾರೆ.
ಎಎಪಿಯಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಕಾಂಗ್ರೆಸ್‌ನ ಹೇಳಿಕೆಯನ್ನು ಕೌರ್ ವಿರೋಧಿಸಿದ್ದಾರೆ. “ಇಷ್ಟು ವರ್ಷಗಳ ಕಾಲ ಆಡಳಿತ ನಡೆಸಿದ ತಮ್ಮ ಪಕ್ಷಕ್ಕೆ ದೆಹಲಿಯಲ್ಲಿ ಶೂನ್ಯ ಸ್ಥಾನಗಳು ಏಕೆ ಬಂದವು ಎಂಬುವುದನ್ನು ಕಾಂಗ್ರೆಸ್ ಪರಾಮರ್ಶಿಸಲಿ. ನಮ್ಮ ಪಕ್ಷವನ್ನು ನಾವು ನೋಡಿಕೊಳ್ಳುತ್ತೇವೆ” ಎಂದಿದ್ದಾರೆ.
ಒಂದು ದಶಕದ ಕಾಲ ದೆಹಲಿಯನ್ನು ಆಳಿದ್ದ ಎಎಪಿ, ಫೆಬ್ರವರಿ 8ರಂದು ಪ್ರಕಟಗೊಂಡ ಚುನಾವಣಾ ಫಲಿತಾಂಶದಲ್ಲಿ 70 ವಿಧಾನಸಭಾ ಸ್ಥಾನಗಳಲ್ಲಿ ಕೇವಲ 22 ಮಾತ್ರ ಗೆಲ್ಲುವ ಮೂಲಕ ಭಾರೀ ಹಿನ್ನಡೆ ಅನುಭವಿಸಿದೆ. ಬಿಜೆಪಿಯ ಗೆಲುವು ರಾಜಧಾನಿಯಲ್ಲಿ ಎಎಪಿಯ ದಶಕದ ಆಡಳಿತವನ್ನು ಕೊನೆಗೊಳಿಸಿದೆ. ಪಕ್ಷದ ಭವಿಷ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ದೆಹಲಿಯಲ್ಲಿ ಎಎಪಿಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರೇ ಸೋಲನುಭವಿಸಿದ್ದಾರೆ. ಹಾಗಾಗಿ, ಅವರು ಪಂಜಾಬ್ ಮೂಲಕ ಮುಂದಿನ ರಾಜಕೀಯ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಖಾಲಿ ಇರುವ ಲುಧಿಯಾನ ವಿಧಾನಸಭಾ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಎಎಪಿ ಸಂಸದ ಮಲ್ವಿಂದರ್ ಸಿಂಗ್ ಕಾಂಗ್ ಅವರು ಈ ವರದಿಗಳನ್ನು ತಳ್ಳಿ ಹಾಕಿದ್ದಾರೆ. ಇಂದಿನ ಸಭೆಯನ್ನು ಪಕ್ಷದ ನಿಯಮಿತ ಕಾರ್ಯತಂತ್ರದ ಭಾಗ ಎಂದಿದ್ದಾರೆ.
ದೆಹಲಿಯಲ್ಲಿ ಸೋತ ಬಳಿಕ ಪಂಜಾಬ್‌ನಲ್ಲಿ ಮಾತ್ರ ಎಎಪಿ ಆಡಳಿತವಿದ್ದು, ಇಂದಿನ ಸಭೆಯ ಫಲಿತಾಂಶವು ಪಕ್ಷದ ಭವಿಷ್ಯದ ದೃಷ್ಟಿಯಲ್ಲಿ ಮಹತ್ವದ್ದು ಎನ್ನಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ “ದೆಹಲಿ ಮಾದರಿ” ತಿರಸ್ಕರಿಸಲ್ಪಟ್ಟ ನಂತರ, ಎಎಪಿ ಈಗ ಅಧಿಕಾರದಲ್ಲಿರುವ ಏಕೈಕ ರಾಜ್ಯದಲ್ಲಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಲು “ಪಂಜಾಬ್-ನಿರ್ದಿಷ್ಟ ಅಭಿವೃದ್ಧಿ ಮಾದರಿ”ಯನ್ನು ರೂಪಿಸಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬ್‌ನ ಒಟ್ಟು 117 ವಿಧಾನಸಭಾ ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ 2022ರಲ್ಲಿ ಎಎಪಿ ಅಧಿಕಾರ ಹಿಡಿದಿತ್ತು. “ದೆಹಲಿ ಅಭಿವೃದ್ಧಿ ಮಾದರಿ”ಯನ್ನು ಮುಂದಿಟ್ಟುಕೊಂಡು ಪಕ್ಷವು ಪಂಜಾಬ್ ಚುನಾವಣೆ ಗೆದ್ದಿತ್ತು.
ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಪಂಜಾಬ್ ಸಿಎಂ ಭಗವಂತ್ ಮಾನ್, ಅವರ ಸಂಪುಟದ ಸಚಿವರು, ಸಂಸದರು ಮತ್ತು ಶಾಸಕರು ಸೇರಿದಂತೆ ಎಎಪಿಯ ಸಂಪೂರ್ಣ ಪಂಜಾಬ್ ಘಟಕವು ದೆಹಲಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು. ಪಂಜಾಬ್‌ನಲ್ಲಿ ತಾವು ಮಾಡಿದ ಕೆಲಸಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದ ಮಾನ್ ಅವರು, ದೆಹಲಿಯಲ್ಲಿ ರೋಡ್‌ಶೋಗಳನ್ನು ನಡೆಸಿ ಮತ ಕೇಳಲು ತಮ್ಮ ಸರ್ಕಾರದ ಕೆಲಸಗಳನ್ನು ಹೇಳಿಕೊಂಡಿದ್ದರು.
ದೆಹಲಿಯಲ್ಲಿ ಎಎಪಿ ಸೋಲಿನ ನಂತರ, ಪಂಜಾಬ್‌ನ ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ಟೀಕಿಸತೊಡಗಿವೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯ ಸುಳ್ಳು ಮತ್ತು ವಂಚನೆಯನ್ನು ಜನರು ಬಹಿರಂಗಪಡಿಸಿದ್ದಾರೆ ಎಂದು ಹೇಳುತ್ತಿವೆ. ಪಂಜಾಬ್‌ನಲ್ಲಿ ಭಗವಂತ್ ಮಾನ್ ಸರ್ಕಾರ ಕೂಡ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ವಂಚಿಸಿದೆ ಎಂದು ಆರೋಪಿಸುತ್ತಿವೆ.
ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ, ಹೆಚ್ಚುತ್ತಿರುವ ಸಾಲ ಮತ್ತು ಮಾದಕವಸ್ತು ಪಿಡುಗು ಸೇರಿದಂತೆ ಹಲವಾರು ವಿಷಯಗಳ ಕುರಿತು ವಿರೋಧ ಪಕ್ಷಗಳು ಎಎಪಿ ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ.
ದೆಹಲಿಯಲ್ಲಿ ಸೋಲಿನ ನಂತರ, ಪಂಜಾಬ್‌ನಲ್ಲಿ ಪಕ್ಷವನ್ನು ಬಲಪಡಿಸುವುದು ಮತ್ತು ರಾಜ್ಯದಲ್ಲಿ ಅದರ ಕಾರ್ಯಕ್ಷಮತೆಯನ್ನು ಸುಧಾರಿಸುವುದು ಈಗ ಎಎಪಿ ಮುಂದಿರುವ ಸವಾಲು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತಗಳನ್ನು ಹಾಳು ಮಾಡಲು ಕಾಂಗ್ರೆಸ್‌ಗೆ ಅಸಾಧ್ಯ – ಮಮತಾ ಬ್ಯಾನರ್ಜಿ


