ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮೂರನೆ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಲ್ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಇತರ ಆರು ಮಂದಿ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಇದೇ ವೇಳೆ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಮನೀಸ್ ಸಿಸೋಡಿಯಾ, ಸತ್ಯಂದ್ರ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್, ರಾಜೇಂದ್ರ ಗೌತಮ್ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಜನರ ಸಮ್ಮುಖದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗೆ 70 ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 62 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕೇಜ್ರಿವಾಲ್ “ಈಗ ನಾನು ದೆಹಲಿಯ ಮುಖ್ಯಮಂತ್ರಿ. ನಾನು ಎಲ್ಲರ ಮುಖ್ಯಮಂತ್ರಿ. ದೆಹಲಿ ಜನರು ನನ್ನನ್ನು ಪ್ರೀತಿಸುತ್ತಾರೆ ಹಾಗೆಯೇ ನಾನೂ ದೆಹಲಿಯ ಜನರನ್ನು ಪ್ರೀತಿಸುತ್ತೇನೆ. ಯಾರೂ ಚಿಂತೆ ಮಾಡಬೇಕಾಗಿಲ್ಲ. ನಾನು ಎಲ್ಲರಿಗಾಗಿ ಕೆಲಸ ಮಾಡುತ್ತೇನೆ” ಎಂದು ಭರವಸೆ ನೀಡಿದರು.
“ನಾನು ಪ್ರತಿಯೊಬ್ಬರಿಗಾಗಿ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬರೊಂದಿಗೂ ಕೆಲಸ ಮಾಡುತ್ತೇನೆ. ದೆಹಲಿಯನ್ನು ವಿಶ್ವ ನಗರವನ್ನಾಗಿ ಮಾಡಲು ಶ್ರಮಿಸುತ್ತೇನೆ. ಪಕ್ಷದ ಗೆಲವು ದೆಹಲಿ ಜನರ ಗೆಲುವು. ಎಲ್ಲರೂ ದೆಹಲಿಯತ್ತ ನೋಡುತ್ತಿದ್ದಾರೆ. ದೆಹಲಿಯಲ್ಲಾದ ರಾಜಕೀಯ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ” ಎಂದರು.


