Homeಮುಖಪುಟಸತತ ಎರಡನೇ ಬಾರಿ ಅಧಿಕಾರಕ್ಕೆ ಬರಲಾಗದ ಸಂಪ್ರದಾಯವನ್ನು ಎಡಪಕ್ಷಗಳು ಮುರಿಯಲಿವೆಯೇ?

ಸತತ ಎರಡನೇ ಬಾರಿ ಅಧಿಕಾರಕ್ಕೆ ಬರಲಾಗದ ಸಂಪ್ರದಾಯವನ್ನು ಎಡಪಕ್ಷಗಳು ಮುರಿಯಲಿವೆಯೇ?

- Advertisement -
- Advertisement -

ಶಬರಿಮಲೆ ಪ್ರಕರಣದಲ್ಲಿ ಸಂಪ್ರದಾಯವಾದಿಗಳ ಒತ್ತಡ ಹಿನ್ನಡೆಯೇ?

ದೇಶದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಮಾರ್ಚ್ 27ರಿಂದ ಮತದಾನ ಹಲವು ಹಂತಗಳಲ್ಲಿ ನಡೆಯಲಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಎಂದಿನಂತೆ ತಮ್ಮ ಪ್ರಚಾರವನ್ನು ಅಬ್ಬರದಿಂದ ಮಾಡುತ್ತಿವೆ. ಪಕ್ಷಾಂತರಗಳು, ರಾಜಕೀಯ ತಂತ್ರಗಳು, ಒಳಜಗಳ-ಬಂಡಾಯಗಳು ಎಗ್ಗಿಲ್ಲದೆ ನಡೆಯುತ್ತಿವೆ.

ಚುನಾವಣೆ ನಡೆಯಲಿರುವ ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಮಾತ್ರ ಮೈತ್ರಿ ಪಕ್ಷಗಳೊಂದಿಗೆ ಅಲ್ಲಿ ಅಧಿಕಾರ ನಡೆಸಿದ ಕೇಂದ್ರದ ಆಡಳಿತಾರೂಢ ಪಕ್ಷವಾದ ಬಿಜೆಪಿ ತನ್ನ ಹಿಡಿತವನ್ನು ಹೊಂದಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಮೈತ್ರಿಯಲ್ಲಿ ಇದ್ದರೂ ಅಲ್ಲಿನ ಸರ್ಕಾರದ ಮೇಲೆ ಬಿಗಿಯಾದ ಹಿಡಿತವನ್ನು ಬಿಜೆಪಿ ಹೊಂದಿಲ್ಲ. ಇನ್ನು ಕಾಂಗ್ರೆಸ್ ಪುದುಚೇರಿಯಲ್ಲಿ ಅಧಿಕಾರ ಹೊಂದಿತ್ತಾದರೂ, ಆಪರೇಶನ್ ಕಮಲಕ್ಕೆ ಬಲಿಯಾಗಿ ಅಧಿಕಾರ ಕಳೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿದೆ. ಇನ್ನುಳಿದಂತೆ ಇಡೀ ದೇಶದಲ್ಲಿ ಒಂದೇ ಒಂದು ಎಡಪಂಥೀಯ ಸರ್ಕಾರ ಕೇರಳದಲ್ಲಿದ್ದು ಈಗ ಚುನಾವಣೆಗೆ ಸಜ್ಜಾಗಿದೆ.

ಕೇರಳ ರಾಜಕೀಯವು ಬಣ್ಣ ಬಣ್ಣದ ಒಂದು ಅಖಾಡವಾಗಿದೆ. ಪ್ರಸ್ತುತ ರಾಜ್ಯದ ವಿಧಾನ ಸಭೆಯಲ್ಲಿ ನಾಲ್ಕು ಪಕ್ಷೇತರ ಶಾಸಕರ ಜೊತೆಗೆ 15 ಬೇರೆ ಬೇರೆ ಪಕ್ಷಗಳ 140 ಶಾಸಕರನ್ನು ಹೊಂದಿದೆ. ಆದರೆ ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಭಾರತೀಯ ಕಮ್ಯುನಿಸ್ಟ್ ಪಕ್ಷ- ಮಾರ್ಕ್ಸ್ವಾದಿ (ಸಿಪಿಐಎಂ) ಒಟ್ಟು 58 ಶಾಸಕರನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ಕಾಂಗ್ರೆಸ್ 21 ಶಾಸಕರನ್ನು ಹೊಂದಿದೆ. ಭಾತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) 19 ಶಾಸಕರನ್ನು ಹೊಂದಿದ್ದರೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 18 ಶಾಸಕರನ್ನು ಹಾಗೂ ಜಾತ್ಯಾತೀತ ಜನತಾದಳ ಮೂವರು ಶಾಸಕರನ್ನು ಹೊಂದಿದೆ. ಉಳಿದಂತೆ ಎನ್‌ಸಿಪಿ, ಪ್ರಾದೇಶಿಕವಾಗಿರುವ ಹಲವಾರು ಸಣ್ಣ ಪ್ರಾದೇಶಿಕ ಪಕ್ಷಗಳು ಇಲ್ಲಿ ತಮ್ಮದೆ ಆದ ನಲೆಯನ್ನು ಹೊಂದಿವೆ. ವಿಶೇಷವೆಂದರೆ ಕೇಂದ್ರದ ಆಡಳಿತ ಪಕ್ಷವಾದ ರಾಷ್ಟ್ರೀಯ ಪಕ್ಷ ಬಿಜೆಪಿಯು ಕೇರಳದಲ್ಲಿ ಕೇವಲ ಒಂದೇ ಒಂದು ಶಾಸಕರನ್ನು ಹೊಂದಿದೆ. ಕೇರಳದಲ್ಲಿ ಹೀಗೆ ಎಂಟು ಪಕ್ಷಗಳು ತಮ್ಮ ಒಬ್ಬ ಶಾಸಕರನ್ನಾದರೂ ವಿಧಾನಸಭೆಯಲ್ಲಿ ಹೊಂದಿದೆ.

ಕೇರಳದ ವಿಧಾನಸಭೆಯಲ್ಲಿ ಮುಖ್ಯವಾಗಿ ಸಿಪಿಐಎಂ ನೇತೃತ್ವ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್), ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಿಟಿಕ್ ಫ್ರಂಟ್ (ಯುಡಿಎಫ್) ಎಂಬ ಎರಡು ಮೈತ್ರಿಕೂಟಗಳಿವೆ. ಎಲ್‌ಡಿಎಫ್‌ನಲ್ಲಿ ನಾಲ್ಕು ಪಕ್ಷೇತರ ಶಾಸಕರ ಸಹಿತ, ಒಟ್ಟು ಒಂಭತ್ತು ಪಕ್ಷಗಳಿವೆ. ಜಾತ್ಯಾತೀತ ಜನತಾದಳ ಕೇರಳದಲ್ಲಿ ಎಲ್‌ಡಿಎಫ್ ಜೊತೆಗೆ ಗುರುತಿಸಿಕೊಂಡಿದೆ. ಯುಡಿಎಫ್‌ನಲ್ಲಿ ನಾಲ್ಕು ಪಕ್ಷಗಳ ಶಾಸಕರಿದ್ದಾರೆ. ಇನ್ನುಳಿದಂತೆ ಬಿಜೆಪಿ ಮತ್ತು ಕೆಜೆ(ಎಸ್) ಪಕ್ಷಗಳ ಒಬ್ಬೊಬ್ಬ ಶಾಸಕರು ಯಾವುದೆ ಮೈತ್ರಿಯನ್ನು ಒಪ್ಪಿಕೊಂಡಿಲ್ಲ.

ತಿರುವಾಂಕೂರು, ಕೊಚ್ಚಿನ್ ಮತ್ತು ಮಲಬಾರ್ ಪ್ರದೇಶಗಳಾಗಿದ್ದ ಕೇರಳವನ್ನು 1956ರಲ್ಲಿ ಭಾಷಾ ಆಧಾರದ ಮೇಲೆ ದಕ್ಷಿಣ ಕನ್ನಡದ ಕಾಸರಗೋಡು ತಾಲ್ಲೂಕನ್ನು ಸೇರಿಸಿ ರಚಿಸಲಾಯಿತು. ಅದೇ ವರ್ಷ ರಾಜ್ಯದಲ್ಲಿ ಮೊದಲ ವಿಧಾನಸಭೆ ಚುನಾವಣೆ ನಡೆದು ರಾಜ್ಯದ ಮೊದಲ ಚುನಾಯಿತ ಸರ್ಕಾರದ ಮುಖ್ಯಮಂತ್ರಿಯಾಗಿ ಭಾರತಿಯ ಕಮ್ಯುನಿಸ್ಟ್ ಪಕ್ಷದ ಇಎಂಎಸ್ ನಂಬೂದಿರಿಪಾದ್ ಆಯ್ಕೆಯಾದರು. ಇದು ದೇಶದಲ್ಲಿ ಅಧಿಕಾರಕ್ಕೆ ಬಂದ ಮೊದಲ ಕಮ್ಯುನಿಸ್ಟ್ ಸರ್ಕಾರ.

ಕೇರಳದಲ್ಲಿ 1982ರ ನಂತರ ಇದುವರೆಗೂ ಯಾವುದೆ ಒಂದು ಪಕ್ಷವಾಗಲೀ ಅಥವಾ ಮೈತ್ರಿಕೂಟವಾಗಲೀ ಪುನರಾವರ್ತಿತವಾಗಿ ಸರ್ಕಾರ ರಚಿಸಿಲ್ಲ. 1982ರ ನಂತರ ಒಮ್ಮೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಧಿಕಾರಕ್ಕೆ ಬಂದರೆ, ಮತ್ತೊಮ್ಮೆ ಸಿಪಿಐಎಂ ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಅಧಿಕಾರಕ್ಕೆ ಬರುವುದು ವಾಡಿಕೆ. ಭೂಸುಧಾರಣೆ, ಜಾತಿ ವಿರೋಧಿ ಹೋರಾಟ ಸೇರಿದಂತೆ ಹಲವಾರು ಹೋರಾಟಗಳ ಮೂಲಕ ಜನರನ್ನು ಸಂಘಟಿಸುತ್ತಾ ಎಡಪಂಥೀಯ ಪಕ್ಷಗಳೇ ಕೇರಳದಲ್ಲಿ ಅತೀ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದ್ದು.

PC : India TV News

ಪ್ರಸ್ತುತ ರಾಜ್ಯದಲ್ಲಿ ಸಿಪಿಐಎಂ ನಾಯಕ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರವಿದೆ. ಕಳೆದ ಐದು ವರ್ಷಗಳಲ್ಲಿ ಸರ್ಕಾರವು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ ಎನ್ನಲಾಗುತ್ತಿದೆ. ರಾಜ್ಯದ ಜಿಡಿಪಿಗೆ ಐದನೆ ಒಂದರಷ್ಟು ಕೊಡುಗೆ ನೀಡುವ ಗಲ್ಪ್ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುವ ಕೇರಳಿಗರು, ಕೆಲಸ ಕಳೆದುಕೊಂಡು ಬಂದಾಗ, ಅವರಲ್ಲಿ ಅನೇಕರಿಗೆ ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿ ನೆರವಾಗಿದೆ. ನಿಫಾ ವೈರಸ್ ಸಮಯದಲ್ಲಿ ಅದನ್ನು ಬೇರೆಲ್ಲೂ ಹರಡದಂತೆ ನಿರ್ವಹಣೆ ಮಾಡಿದ್ದು, ಶತಮಾನದ ಪ್ರವಾಹದ ಸಮಯದಲ್ಲಿ, ಓಖಿ ಚಂಡಮಾರುತದ ಸಮಯದಲ್ಲಿ ಹಾಗೂ ಕಳೆದ ವರ್ಷ ಪ್ರಾರಂಭವಾದ ಕೊರೊನಾ ಸಾಂಕ್ರಮಿಕ ಸಮಯದಲ್ಲಿ ಸರ್ಕಾರವು ಜನರ ನಡುವೆ ನಿಂತು ಗಮನಾರ್ಹ ಕೆಲಸ ಮಾಡಿದ್ದು, ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿದ್ದು, ಆಸ್ಪತ್ರೆಗಳ ನಿರ್ಮಾಣ ಹೀಗೆ ಮುಂತಾದ ಕೆಲಸಗಳನ್ನು ಮುಂದೆ ಇಟ್ಟುಕೊಂಡು ಎಡಪಕ್ಷಗಳು ಚುನಾವಣೆಯಲ್ಲಿ ಮತಗಳನ್ನು ಕೇಳುತ್ತಿದೆ.

ಕೊರೊನಾ ಸಾಂಕ್ರಾಮಿಕವನ್ನು ಕೇರಳವು ನಿರ್ವಹಣೆ ಮಾಡಿರುವ ರೀತಿ ವಿಶ್ವದಾತ್ಯಂತ ಮನ್ನಣೆಗೆ ಪಾತ್ರವಾಗಿತ್ತು. ಸ್ವತಃ ಕೇಂದ್ರ ಸರ್ಕಾರವೇ ಕೇರಳ ಮಾದರಿಯನ್ನು ಅಳವಡಿಸುವಂತೆ ಭಾರತದ ಇತರ ಸರ್ಕಾರಗಳಿಗೆ ಹೇಳಿತ್ತು. ಅಷ್ಟೇ ಅಲ್ಲದೆ ಕೊರೊನಾ ರಾಜ್ಯಸಮಯದ ಆರ್ಥಿಕ ಹಿಂಜರಿತದಲ್ಲೂ ರಾಜ್ಯದ ಜನರಿಗೆ ಉದ್ಯೋಗಗಳನ್ನು ನೀಡುವ ಮೂಲಕ ತನ್ನ ಜನಪ್ರಿಯತೆಯನ್ನು ಸರ್ಕಾರವು ಇನ್ನೂ ಹೆಚ್ಚಿಸಿಕೊಂಡಿತ್ತು ಎನ್ನಲಾಗುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಡಪಕ್ಷಗಳು ಭರ್ಜರಿ ಜಯವನ್ನು ಪಡೆಡುಕೊಂಡಿದ್ದವು. ಇದನ್ನು ವಿಧಾನಸಭಾ ಚುನಾವಣೆಯ ದಿಕ್ಸೂಚಿ ಫಲಿತಾಂಶ ಎಂದು ರಾಜಕೀಯ ತಜ್ಞರು ಉಲ್ಲೇಖಿಸಿದ್ದರು.

ಇನ್ನುಳಿದಂತೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಪಕ್ಷಗಳು ಎಡ ಸರ್ಕಾರದ ಸಮಯದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಡಾಲರ್ ಹವಾಲ, ತೀರಾ ಇತ್ತೀಚೆಗೆ ನಡೆದಿದ್ದ ಗಲ್ಫ್ ದೇಶಗಳಿಂದ ಚಿನ್ನದ ಸ್ಮಗ್ಲಿಂಗ್ ಪ್ರಕರಣಗಳಲ್ಲಿ ಆಡಳಿತದ ಕೈವಾಡ ಇವೆ ಎಂದು ಆರೋಪಿಸುತ್ತಿವೆ. ಇದೆಲ್ಲದೆ ಬಿಜೆಪಿ ಮತ್ತು ಕಮ್ಯುನಿಸ್ಟ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಕೂಡ ಆರೋಪಿಸುತ್ತಿವೆ. ಇವೇ ಆರೋಪಗಳನ್ನು ಎಡಪಕ್ಷಗಳು ಕಾಂಗ್ರೆಸ್ ವಿರುದ್ಧವು ತಿರುಗಿಸಿದೆ. ಅಷ್ಟೇ ಅಲ್ಲದೆ ಶಬರಿಮಲೆ ಹಾಗೂ ಧಾರ್ಮಿಕ ನಂಬಿಕೆಯ ವಿಷಯದಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಎಡಪಕ್ಷಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿವೆ.

ಮತ್ತೊಂದೆಡೆ ಬಿಜೆಪಿಯು ಶಬರಿಮಲೆ ಪ್ರಕರಣ ಸೇರಿದಂತೆ ಧಾರ್ಮಿಕ ವಿಷಯವನ್ನು ಇಟ್ಟುಕೊಂಡು ಅಲ್ಲಿ ಮತ ಕೇಳುತ್ತಿದೆ. ಅಲ್ಲದೆ ಮುಸ್ಲಿಂ ಮೂಲಭೂತವಾದ, ಲವ್ ಜಿಹಾದ್, ಭಯೋತ್ಪಾದನೆ ಸೇರಿದಂತೆ ತನ್ನ ಸಾಮಾನ್ಯ ಚಾಳಿಯೆಂಬಂತೆ ಧ್ರುವೀಕರಣ ಮಾಡಿ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ. ಬಿಜೆಪಿಯ ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯು ಕಳೆದೆ ಬಾರಿ ಗಳಿಸಿದ್ದ ‘ನೇಮಂ’ ವಿಧಾನಸಭಾ ಕ್ಷೇತ್ರ ಪಕ್ಷದ ಕೈತಪ್ಪಿ ಹೋಗಲಿದೆ ಎಂದು ಕೇರಳಿಗರು ಹೇಳುತ್ತಿದ್ದಾರೆ. ಅಲ್ಲದೆ 88 ವರ್ಷದ ಮೆಟ್ರೋ ಮ್ಯಾನ್ ಎಂದೇ ಪ್ರಖ್ಯಾತರಾದ ಇ. ಶ್ರೀಧರನ್ ಅವರನ್ನು ಪಕ್ಷಕ್ಕೆ ಸೇರಸಿಕೊಂಡು ಗಮನ ಸೆಳೆಯಲು ಪ್ರಯತ್ನಿಸುತ್ತಿದೆ.

ಶಬರಿಮಲೆ ವಿಚಾರದಲ್ಲಿ ಎಡಪಕ್ಷಗಳು ತುಸು ಹೈರಾಣಾಗಿರುವುದು ನಿಜವೇ ಆಗಿದ್ದರೂ, ತನ್ನ ಮೇಲೆರೆಗಿ ಬಂದಿರುವ ಆರೋಪವನ್ನು ಸುಪ್ರೀಂಕೋರ್ಟ್ ನತ್ತ ವರ್ಗಾಯಿಸುತ್ತಲೆ ಬಂದಿದೆ. ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ಕೂಡಾ ಶಬರಿಮಲೆಯಲ್ಲಿ ಈಗ ಯಾವುದೆ ಸಮಸ್ಯೆ ಇಲ್ಲ. ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ನಂತರ ನಂಬಿಕೆ ಇರುವ ಜನರೊಂದಿಗೆ ಸಮಾಲೋಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದರು.

ಇವೆಲ್ಲದರೊಂದಿಗೆ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ಭಾರಿ ಅಬ್ಬರದೊಂದಿಗೆ ಮಾಡುತ್ತಿವೆ. ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುವಂತೆ ಕೇರಳದ 40 ವರ್ಷಗಳ ಸಂಪ್ರದಾಯವನ್ನು ಎಡಪಕ್ಷಗಳು ಮುರಿದು ಸತತವಾಗಿ ಎರಡನೇ ಬಾರಿ ಅಧಿಕಾರಕ್ಕೆ ಏರಲಿವೆ. ಆದರೆ ಈ ಸಮೀಕ್ಷೆಗಳ ವಿಚಾರಕ್ಕೆ ಬಂದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹತ್ತಕ್ಕಿಂತ ಹೆಚ್ಚು ಎಡಪಕ್ಷಗಳ ಸಂಸದರು ಗೆಲುವು ಸಾಧಿಸಲಿದ್ದಾರೆ ಎಂದಿದ್ದವು. ಆದರೆ ಕೊನೆಗೆ ಅಲ್ಲಿ ಎಡಪಕ್ಷಗಳು ಗೆದ್ದದ್ದು ಒಂದೇ ಸ್ಥಾನ.

ರಾಜ್ಯದಲ್ಲಿ ಎಪ್ರಿಲ್ 6 ರಂದು ಒಂದೇ ಸುತ್ತಿನ ಮತದಾನ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.


ಇದನ್ನೂ ಓದಿ: ಕೇರಳ ಚುನಾವಣೆ : ಪಿಣರಾಯಿ ತೆಕ್ಕೆಗೆ ಮತ್ತೆ ಅಧಿಕಾರ ಎಂದ ಸಿ-ವೋಟರ್‌ ಸಮೀಕ್ಷೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...