ಮಲಯಾಳಂ ಚಿತ್ರ ನಿರ್ದೇಶಕ ಹಾಗೂ ಸಂಘ ಪರಿವಾರ ನಿಷ್ಟರಾದ ರಾಮಸಿಂಹನ್ ಅಬೂಬಕ್ಕರ್ ಇಂದು ಬಿಜೆಪಿ ತೊರೆದಿರುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಇತ್ತೀಚಿಗೆ ಸಾಲು ಸಾಲಾಗಿ ಬಿಜೆಪಿ ತೊರೆಯುತ್ತಿರುವ ಚಿತ್ರರಂಗದ ಪ್ರಮುಖರ ಪಾಲಿಗೆ ಸೇರ್ಪಡೆಯಾಗಿದ್ದಾರೆ.
ಕೇರಳದಲ್ಲಿ ಕಳೆದ ಎರಡು ವಾರಗಳಲ್ಲಿ ಬಿಜೆಪಿ ತೊರೆದ ಮೂರನೇ ಚಿತ್ರರಂಗದ ವ್ಯಕ್ತಿ ಅವರಾಗಿದ್ದಾರೆ. ಈ ಹಿಂದೆ ಮಲಯಾಳಂ ನಿರ್ದೇಶಕ ರಾಜಸೇನನ್ ಮತ್ತು ನಟ ಭೀಮನ್ ರಘು ಅವರು ಬಿಜೆಪಿ ತೊರೆದು ಆಡಳಿತಾರೂಢ ಸಿಪಿಐ(ಎಂ) ಜೊತೆ ಕೆಲಸ ಮಾಡುವುದಾಗಿ ಘೋಷಿಸಿದ್ದರು. ಇವರಿಬ್ಬರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಡಿ ಸ್ಪರ್ಧಿಸಿ ಸೋಲು ಕಂಡಿದ್ದರು.
ಅಲಿ ಅಕ್ಬರ್ ಹೆಸರಿನ ಅವರು ಡಿಸೆಂಬರ್ 2021 ರಲ್ಲಿ ಇಸ್ಲಾಂ ಧರ್ಮವನ್ನು ತ್ಯಜಿಸಿದ ನಂತರ ರಾಮಸಿಂಹನ್ ಅಬೂಬಕ್ಕರ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ನಂತರ ಬಿಜೆಪಿ ಸೇರಿದ್ದಲ್ಲದೇ ರಾಜ್ಯ ಸಮಿತಿಯ ಸದಸ್ಯರಾಗಿದ್ದರು.
”ನಾನು ಯಾವುದೇ ರಾಜಕೀಯದ ಗುಲಾಮನಲ್ಲ. ಈಗ ನಾನು ಎಲ್ಲರಿಂದ ಮುಕ್ತನಾಗಿದ್ದೇನೆ ಮತ್ತು ಧರ್ಮದೊಂದಿಗೆ ಮಾತ್ರ ನಿಂತಿದ್ದೇನೆ” ಎಂದು ಗುರುವಾರ ಅಬೂಬಕ್ಕರ್ ಫೇಸ್‌ಬುಕ್ ಪೋಸ್ಟ್ ಮಾಡಿದ್ದರು.
ತಮ್ಮ ರಾಜೀನಾಮೆ ನಿರ್ಧಾರದ ಬಗ್ಗೆ ಮಾತನಾಡಿರುವ ಅವರು, “ಈ ಕುರಿತು ಯಾವುದೇ ಗದ್ದಲ ಸೃಷ್ಟಿಸುವ ಅಗತ್ಯವಿಲ್ಲ. ನಾನು ಎಲ್ಲಿಯೂ ಹೋಗುವುದಿಲ್ಲ, ಸನಾತನ ಧರ್ಮದೊಂದಿಗೆ ಉಳಿಯುತ್ತೇನೆ” ಎಂದು ಅವರು ಹೇಳಿಕೊಂಡಿದ್ದಾರೆ.
ಬಿಜೆಪಿ ರಾಜ್ಯ ವಕ್ತಾರ ನಾರಾಯಣನ್ ನಂಬೂತಿರಿ ಮಾತನಾಡಿ, “ಅಲಿ ಅಕ್ಬರ್ ಕಳೆದ ಕೆಲವು ದಿನಗಳಿಂದ ಪಕ್ಷದಲ್ಲಿ ಸಕ್ರಿಯವಾಗಿಲ್ಲ. ಅವರ ನಿರ್ಧಾರ ವೈಯಕ್ತಿಕವಾಗಿದೆ. ಕಲಾವಿದರಾದ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು” ಎಂದಿದ್ದಾರೆ.
ಇದನ್ನೂ ಓದಿ: ಸಿನಿಮಾ ವಿಮರ್ಶೆ: ಮತ್ತೊಂದು ಇಸ್ಲಮಾಫೋಬಿಕ್ ಸಿನಿಮಾ ’ದ ಕೇರಳ ಸ್ಟೋರಿ’


