ಕೇರಳ ವಿಧಾನಸಭಾ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡು ತೀವ್ರ ಹಿನ್ನಡೆ ಅನುಭವಿಸಿದ್ದ ಎನ್‌ಡಿಎ ಅಭ್ಯರ್ಥಿಗಳು, ಪ್ರಕರಣದ ಬಗ್ಗೆ ಮೇಲ್ಮನವಿ ಸಲ್ಲಿಸಿ ಕೇರಳ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಇದೀಗ ಹೈಕೋರ್ಟ್ ಕೂಡಾ ಅವರ ಮೇಲ್ಮನವಿಯನ್ನು ತಿರಸ್ಕರಿಸಿದೆ. ಈ ಮೂಲಕ ಬಿಜೆಪಿ ನೇತೃತ್ವವು ಕೇರಳದಲ್ಲಿ ಭಾರಿ ಮುಖಭಂಗಕ್ಕೊಳಗಾಗಿದೆ.
ಚುನಾವಣ ಆಯೋಗವು, “ಚುನಾವಣಾ ಅಧಿಸೂಚನೆ ಹೊರಡಿಸಿದ ನಂತರ ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ” ಎಂದು ವಾದಿಸಿತ್ತು. ಇದನ್ನು ಒಪ್ಪಿಕೊಂಡಿರುವ ಕೇರಳ ಹೈಕೋರ್ಟ್ ಅಭ್ಯರ್ಥಿಗಳ ಮೇಲ್ಮನವಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ: ‘ಬಾಂಬೆ ತಂಡ’ದ ಶಾಸಕರ ಕ್ಷೇತ್ರಗಳು ಭೂಲೋಕದ ಸ್ವರ್ಗಗಳಾಗಿವೆಯೇ: ಸಿಎಂಗೆ ಕುಮಾರಸ್ವಾಮಿ ಪ್ರಶ್ನೆ
ಕೇರಳದಲ್ಲಿ ಏಪ್ರಿಲ್ 06 ರಂದು ಚುನಾವಣೆ ನಡೆಯಲಿದ್ದು, ಕಳೆದವಾರ ತಲಶೇರಿ, ಗುರುವಾಯೂರು ಮತ್ತು ದೇವಿಕುಳಂ ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರಗಳು ಅಂತಿಮ ಪರಿಶೀಲನೆಯಲ್ಲಿ ತಿರಸ್ಕೃತವಾಗಿದ್ದವು.
ತಲಶೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಪಕ್ಷದ ಜಿಲ್ಲಾಧ್ಯಕ್ಷ ಎನ್ ಹರಿದಾಸ್ ಅವರ ನಾಮಪತ್ರವನ್ನು ಅಂತಿಮ ಪರಿಶೀಲನೆಯಲ್ಲಿ ತಿರಸ್ಕರಿಸಲಾಗಿತ್ತು. ನಾಮಪತ್ರದೊಂದಿಗೆ ಸಲ್ಲಿಸಬೇಕಾದ ಫಾರ್ಮ್ ಎ (ಅಭ್ಯರ್ಥಿ ಸ್ಫರ್ಧಿಸುವ ರಾಜಕೀಯ ಪಕ್ಷ), ಪಕ್ಷದ ರಾಜ್ಯ ಅಧ್ಯಕ್ಷರ ಕಡ್ಡಾಯ ಸಹಿ ಹೊಂದಿರಲಿಲ್ಲ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದರು.
ಗುರುವಾಯೂರು ಕ್ಷೇತ್ರದಲ್ಲಿ, ಬಿಜೆಪಿ ಅಭ್ಯರ್ಥಿ ನಿವೇದಿತಾ ಸುಬ್ರಮಣ್ಯಂ ಅವರ ನಾಮಪತ್ರವನ್ನು ಅಗತ್ಯ ದಾಖಲೆಪತ್ರಗಳನ್ನು ಸಲ್ಲಿಸದ ಕಾರಣ ನೀಡಿ ತಿರಸ್ಕರಿಸಲಾಗಿತ್ತು. ದೇವಿಕುಲಂ ಕ್ಷೇತ್ರದಲ್ಲಿ ಬಿಜೆಪಿ ಮಿತ್ರಪಕ್ಷ ಎಐಎಡಿಎಂಕೆ ಅಭ್ಯರ್ಥಿ ಆರ್. ಧನಲಕ್ಷ್ಮಿ ಅವರ ನಾಮಪತ್ರ ಅಪೂರ್ಣ ನಾಮಪತ್ರ ಎಂದು ತಿರಸ್ಕರಿಸಲ್ಪಟ್ಟಿತ್ತು.
ಇದನ್ನೂ ಓದಿ: ‘ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ’ ಪೋಸ್ಟರ್: ಹಿಂದೂ ಯುವ ವಾಹಿನಿ ಸದಸ್ಯರ ಮೇಲೆ FIR


