ರೈತರ ಪ್ರತಿರೋಧವನ್ನೂ ಲೆಕ್ಕಿಸದೆ ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರ, ಎರಡು ದಿನಗಳ ಹಿಂದಷ್ಟೇ ಚನ್ನರಾಯಪಟ್ಟಣ ಹೋಬಳಿಯ ಎಂಟು ಹಳ್ಳಿಗಳಿಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಈ ಬಗ್ಗೆ ಆಕ್ರೋಶಗೊಂಡಿರುವ ರೈತರು, ಚನ್ನರಾಯಪಟ್ಟಣ ನಾಡ ಕಚೇರಿ ಮುಂಭಾಗದ ಧರಣಿ ಸ್ಥಳದಲ್ಲಿ ಸಭೆ ನಡೆಸಿದರು. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ಸುಡುವ ಮೂಲಕ ಪ್ರತಿರೋಧ ವ್ಯಕ್ತಪಡಿಸಿದರು.
“ಯಾವುದೇ ಕಾರಣಕ್ಕೂ ಭೂಮಿ ಬಿಡುವ ಪ್ರಶ್ನೆಯೇ ಇಲ್ಲ, ನಮ್ಮ ಪ್ರಾಣತ್ಯಾಗವಾದರೂ ಸರಿ ನಾವು ಭೂಮಿ ಬಿಡುವುದಿಲ್ಲ, ಭೂಮಿ ತಂಟೆಗೆ ಬಂದವರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ರೈತರು ಸರ್ಕಾರದ ವಿರುದ್ಧ ಸೆಟೆದು ನಿಂತಿದ್ದಾರೆ.
ಕಳೆದ ಮೂರುವರೆ ವರ್ಷಗಳಿಂದ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಭೂಸ್ವಾಧೀನವನ್ನು ವಿರೋಧಿಸಿ ನಿರಂತರ ಧರಣಿ ನಡೆಸುತ್ತಿದ್ದರೂ, ಈ ಪೈಕಿ ಇದುವರೆಗೂ ಎರಡು ಹಂತದಲ್ಲಿ 10 ಹಳ್ಳಿಗಳ 1280 ಎಕರೆ ಭೂಮಿಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಈ ಸರ್ಕಾರದ ಆದೇಶವನ್ನು ಖಂಡಿಸಿ ಮಾತನಾಡಿದ ರೈತರು “ಜನರ ಸಂಪೂರ್ಣ ವಿರೋಧದ ನಡುವೆಯು ಸರ್ಕಾರ ಬಲವಂತವಾಗಿ ಭೂಸ್ವಾಧೀನಕ್ಕೆ ಮುಂದಾಗಿರುವುದು ರೈತಸಮುದಾಯಕ್ಕೆ ಮಾಡುತ್ತಿರುವ ದ್ರೋಹ, ಇದನ್ನು ಸಹಿಸಲು ಸಾದ್ಯವೇ ಇಲ್ಲ” ಎಂದು ಆಕ್ರೋಶ ಹೊರಹಾಕಿದರು.
“ಈ ವಚನ ಭ್ರಷ್ಟ ಸರ್ಕಾರ, ಮಾತು ತಪ್ಪಿದ ಮುಖ್ಯಮಂತ್ರಿ ಮತ್ತು ಮಂತ್ರಿಗಳು ನಾಳೆ ನಮ್ಮ ಜಿಲ್ಲೆಯಲ್ಲಿ ಸಾಧನೆ ಸಮಾವೇಶ ಮಾಡುತ್ತಿದ್ದು, ಬಡ ರೈತರ ಭೂಮಿ ಕಸಿದುಕೊಂಡು ಬೀದಿಗೆ ತಳ್ಳುತ್ತಿರುವುದೆ ಇವರ ಅತಿದೊಡ್ಡ ಸಾಧನೆ, ಇದೇ ಈ ಕಾಲದ ವ್ಯಂಗ್ಯ. ಇದು ಈ ತಾಲ್ಲೂಕಿನ ಬಡ ರೈತರ ಸಮಾದಿಗಳ ಮೇಲೆ ನಡೆಸುತ್ತಿರುವ ಸಮಾವೇಶ” ಎಂದರು.
“ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪನವರನ್ನು ಇತ್ತೀಚೆಗೆ ಬೇಟಿಯಾದಾಗಲೂ ರೈತರಿಗೆ ಯಾವುದೇ ಆತಂಕ ಬೇಡ, ನಾನು ರೈತರ ಪರವಾಗಿದ್ದು ಭೂಮಿಯನ್ನು ಉಳಿಸುತ್ತೇನೆ ಎಂದು ಹೇಳಿರುತ್ತಾರೆ. ಆದ್ದರಿಂದ, ರೈತರಿಗೆ ವಿಶ್ವಾಸದ್ರೋಹ ಮಾಡದೆ, ತಕ್ಷಣವೇ ಈ ಅಧಿಸೂಚನೆಯನ್ನು ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ರೈತರಿಗೆ ನ್ಯಾಯ ಒದಗಿಸಬೇಕು” ಎಂದು ರೈತರು ಒತ್ತಾಯಿಸಿದರು.
“ಸರ್ಕಾರಕ್ಕೆ ಕಿಂಚಿತ್ತಾದರೂ ಬದ್ದತೆ ಇದ್ದರೆ, ನಾಳೆ ನಡೆಯುವ ಸಮಾವೇಶದಲ್ಲಿ ಚನ್ನರಾಯಪಟ್ಟಣ ಹೋಬಳಿಯ ರೈತರ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವ ಘೋಷಣೆ ಮಾಡುವ ಮೂಲಕ ತಮ್ಮ ಘನತೆಯನ್ನು ಉಳಿಸಿಕೊಳ್ಳಲಿ. ಇಲ್ಲವಾದಲ್ಲಿ ಅತಿ ಶೀಘ್ರದಲ್ಲಿ ರೈತರ ತೀವ್ರ ಪ್ರತಿರೋಧ ಎದುರಿಸಲು ಸಜ್ಜಾಗಿ. ಇಷ್ಟು ದಿನಗಳ ಕಾಲ ಶಾಂತಿಯುತವಾಗಿ ಧರಣಿ ಕುಳಿತಿದ್ದೆವು. ಆದರೆ, ಈ ಬಾರಿ ರಕ್ತಪಾತವಾದರೂ ಸರಿ, ನಮ್ಮ ಪ್ರಾಣತ್ಯಾಗವಾದರು ಸರಿ ನಮ್ಮ ಭೂಮಿಯನ್ನು ಉಳಿಸಿಕೊಳ್ಳುವ ಶಪತ ತೊಟ್ಟು ಹೋರಾಟಕ್ಕೆ ದುಮುಕುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ನೀರಾವರಿ ಹೋರಾಟಗಾರರಾದ ಆಂಜನೇಯರೆಡ್ಡಿ, ಪ್ರಾಂತ್ಯ ರೈತ ಸಂಘದ ಚಂದ್ರತೇಜಸ್ವಿ, ಪ್ರಭಾ ಬೆಳವಂಗಲ, ರೈತ ಮುಖಂಡರಾದ ಕಾರಳ್ಳಿ ಶ್ರೀನಿವಾಸ್, ನಲ್ಲಪ್ಪನಹಳ್ಳಿ ನಂಜಪ್ಪ, ಅಶ್ವತ್ಥಪ್ಪ, ತಿಮ್ಮರಾಯಪ್ಪ,ವೆಂಕಟೇಶ್, ಮುಕುಂದ, ಪ್ರಮೋದ್, ಮೋಹನ್, ಮಂಜುನಾಥ್, ಮಾರೇಗೌಡ ಸೇರಿದಂತೆ ನೂರಾರು ರೈತರು ಭಾಗಿಯಾಗಿದ್ದರು.
ಎದೆಗೆ ಬಿದ್ದ ಸಂವಿಧಾನ-ಭೂಮಿಗೆ ಬಿದ್ದ ಬೀಜ ಒಂದಲ್ಲ ಒಂದು ದಿನ ಫಲ ಕೊಡುತ್ತದೆ: ಮಾವಳ್ಳಿ ಶಂಕರ್