ದಲಿತರ ಸ್ವಾಭಿಮಾನ ಮತ್ತು ಅಸ್ಮಿತೆಯ 1818ರ ಭೀಮಾ-ಕೋರೆಗಾಂವ್ ಯುದ್ದದ ನೆನಪಿನಲ್ಲಿ ಬುಧವಾರ (ಜ.1) ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕೋರೆಗಾಂವ್ ಭೀಮಾ ಗ್ರಾಮದಲ್ಲಿ 207ನೇ ‘ಶೌರ್ಯ ದಿನ’ ಆಚರಣೆ ನಡೆಯಿತು.
ರಾಜಕೀಯ ನಾಯಕರು, ಸಮುದಾಯದ ಮುಖಂಡರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನರು ಭೀಮಾ-ಕೋರೆಗಾಂವ್ ‘ವಿಜಯಸ್ತಂಭ’ದ ಬಳಿ ಜಮಾಯಿಸಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ‘ವಿಜಯಸ್ತಂಭ’ದ ಪ್ರದೇಶದ ಅಭಿವೃದ್ದಿ ಮತ್ತು ವಿಸ್ತರಣೆಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬೇಡಿಕೆಯಿಟ್ಟರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅಠವಳೆ, “ಈ ದಿನ, ನಮ್ಮ ಜನರು ಪೇಶ್ವೆಗಳೊಂದಿಗೆ ಹೋರಾಡಿದರು. ಈ ಕಂಬವು ಅವರ ಶೌರ್ಯವನ್ನು ಪ್ರತಿಬಿಂಬಿಸುತ್ತದೆ. ಪ್ರತಿ ವರ್ಷ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಈಗ ದೇಶದ ವಿವಿಧ ಭಾಗಗಳ ಜನರು ಇಲ್ಲಿಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ವಿಜಯಸ್ತಂಭದ ಸುತ್ತ ಬೃಹತ್ ಸ್ಮಾರಕ ನಿರ್ಮಿಸಬೇಕು. ಸರ್ಕಾರ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ಆದರೆ, ಕಾಮಗಾರಿ ಪೂರ್ಣಗೊಂಡಿಲ್ಲ. ನಾನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಸ್ಮಾರಕಕ್ಕೆ 200 ಕೋಟಿ ರೂ. ಮಂಜೂರಾತಿ ಪಡೆಯುತ್ತೇನೆ” ಎಂದರು.
ಜನವರಿ 1, 1818 ರಂದು ನಡೆದ ಕೋರೆಗಾಂವ್ ಕದನವನ್ನು ಸ್ಮರಿಸಲು ಕೋರೆಗಾಂವ್ ಭೀಮಾದಲ್ಲಿ ಪ್ರತಿವರ್ಷ ಶೌರ್ಯ ದಿನ ಆಚರಣೆ ಮಾಡಲಾಗುತ್ತದೆ. ಭೀಮಾ-ಕೋರೆಗಾಂವ್ ಯುದ್ದದಲ್ಲಿ 500 ಮಹಾರ್ ಸೈನಿಕರು ಸೇರಿದಂತೆ 834 ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಯೋಧರು ಪೇಶ್ವೆಯ 28,000 ಶಕ್ತಿಶಾಲಿ ಯೋಧರನ್ನು ಸೋಲಿಸಿದ್ದರು. ಈ ವಿಜಯದ ನೆನಪಿಗೆ ಬ್ರಿಟಿಷರು ವಿಜಯ ಸ್ತಂಭವನ್ನು ಸ್ಥಾಪಿಸಿದರು. ಅದು ಇಂದು ದಲಿತರ ಹೆಮ್ಮೆಯ ಸಂಕೇತವಾಗಿ ನಿಂತಿದೆ.
ವಂಚಿತ್ ಬಹುಜನ ಅಗಾಧಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್, ಸಚಿವರಾದ ದತ್ತಾತ್ರಯ ಭರ್ನೆ, ಆನಂದರಾಜ್ ಅಂಬೇಡ್ಕರ್, ರಾಜ್ಯ ಸಚಿವೆ ಮಾಧುರಿ ಮಿಸಾಲ್ ಮತ್ತು ಇತರ ಮುಖಂಡರು ಕೋರೆಗಾಂವ್ ಭೀಮಾದಲ್ಲಿ ಬುಧವಾರ (ಜ.1) ಉಪಸ್ಥಿತರಿದ್ದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂದೆ ಮತ್ತು ಅಜಿತ್ ಪವಾರ್ ವಿಜಯಸ್ತಂಭದ ಬಳಿಗೆ ಆಗಮಿಸಿದ್ದಕ್ಕೆ ಆನಂದರಾಜ್ ಅಂಬೇಡ್ಕರ್ ಬೇಸರ ವ್ಯಕ್ತಪಡಿಸಿದರು. “ಜನರು ಮತ ಹಾಕಿದ್ದರಿಂದ ಅವರು ಈಗ ಉನ್ನತ ಹುದ್ದೆಗೇರಿದ್ದಾರೆ. ಅವರಿಗೆ ಈ ದಿನ ಮತ್ತು ಜಾಗ ಮಹತ್ವದ್ದಾಗಿದ್ದರೆ ಇಲ್ಲಿಗೆ ಬರುತ್ತಿದ್ದರು. ಸಾಮಾನ್ಯ ಜನರು ಕರೆಯದೆ ಪ್ರತಿವರ್ಷ ಇಲ್ಲಿಗೆ ಆಗಮಿಸುತ್ತಿದ್ದಾರೆ” ಎಂದು ಹೇಳಿದರು.
ಡಾ. ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗನಾಗಿರುವ ಆನಂದರಾಜ್ ಅಂಬೇಡ್ಕರ್ ಅವರು ಅಂಬೇಡ್ಕರ್‌ವಾದಿ ಸಂಘಟನೆ ರಿಪಬ್ಲಿಕನ್ ಸೇನೆಯ ಸ್ಥಾಪಕರಾಗಿದ್ದಾರೆ.
ಬಿಗಿ ಭದ್ರತೆ, ಅಗತ್ಯ ವ್ಯವಸ್ಥೆ
ಪ್ರತಿ ವರ್ಷ ಜನವರಿ 1 ರಂದು ಕೋರೆಗಾಂವ್ ಭೀಮಾಗೆ ಕನಿಷ್ಠ ಎಂಟರಿಂದ 10 ಲಕ್ಷ ಜನರು ಆಗಮಿಸುತ್ತಾರೆ. ಬುಧವಾರ ವಿಶೇಷ ವ್ಯವಸ್ಥೆಗಳ ಭಾಗವಾಗಿ 5000 ಪೊಲೀಸ್ ಸಿಬ್ಬಂದಿ 2,000 ಗೃಹರಕ್ಷಕ ಸಿಬ್ಬಂದಿ, ರಾಜ್ಯ ಮೀಸಲು ಪೊಲೀಸ್ ಪಡೆ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BBDS)ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಇದರ ಜೊತೆಗೆ ಸಿಸಿಟಿವಿ ಕ್ಯಾಮರಾ ಮತ್ತು ಮುಖ ಗುರುತಿಸುವಿಕೆಯ ಕ್ಯಾಮಾರಗಳನ್ನು ಅಳವಡಿಸಲಾಗಿತ್ತು. ಡ್ರೋನ್ ಮೂಲಕ ಜನಸಂದಣಿ ಮೇಲೆ ಕಣ್ಣಿಡಲಾಗಿತ್ತು. ವಾಹನ ಪಾರ್ಕಿಗ್‌ಗೆ ಜಾಗದ ವ್ಯವಸ್ಥೆ ಮಾಡಲಾಗಿತ್ತು. ತುರ್ತು ಸಂದರ್ಭಗಳಿಗೆ ಆಂಬ್ಯುಲೆನ್ಸ್, ಅಗ್ನಿಶಾಮಕ ತಂಡ ಸ್ಥಳದಲ್ಲಿತ್ತು.
ಇದನ್ನೂ ಓದಿ : ಕೋರೆಗಾಂವ್ ಕದನ: ದಲಿತ ಅಸ್ಮಿತೆ, ಸ್ವಾಭಿಮಾನದ ಮಹಾಕಥನ



Jai bheem