Homeದಲಿತ್ ಫೈಲ್ಸ್ಕೋರೆಗಾಂವ್‌‌ ಕದನ: ದಲಿತ ಅಸ್ಮಿತೆ, ಸ್ವಾಭಿಮಾನದ ಮಹಾಕಥನ

ಕೋರೆಗಾಂವ್‌‌ ಕದನ: ದಲಿತ ಅಸ್ಮಿತೆ, ಸ್ವಾಭಿಮಾನದ ಮಹಾಕಥನ

ಪ್ರತಿವರ್ಷ ಜನವರಿ 1 ಜಗತ್ತಿಗೆ ಹೊಸವರ್ಷ, ಆದರೆ ದಲಿತರಿಗೆ ದಿಗ್ವಿಜಯದ ದಿವಸ.

- Advertisement -
- Advertisement -

ಡಾನ್ ಬ್ರಾನ್ ಬರೆದ ಡಾ ವಿಂಚಿ ಕೋಡ್ ಎಂಬ ಪುಸ್ತಕದಲ್ಲಿ ನೆಪೊಲೀಯನ್ ಬೊನಾಪಾರ್ಟೆ ಅಕಾಡೆಮಿಕ್ ಇತಿಹಾಸಕಾರರು ಯಾವಾಗಲೂ ಇತಿಹಾಸದ ಒಂದು ಮುಖವನ್ನು ಮಾತ್ರ ಬರೆಯುತ್ತಾರೆ ಎಂಬ ಹೇಳಿಕೆಯು ಇಂದಿಗೂ ಸತ್ಯವೇ ಆಗುತ್ತಿದೆ. ಈ ದೇಶದ ಬಹುಪಾಲು ಇತಿಹಾಸವನ್ನು ಮುಚ್ಚಿ ಹಾಕಲಾಗಿದೆ. ಅದರಲ್ಲಿಯೂ ಕೋರೆಂಗಾವ್ ನಲ್ಲಿ ನಡೆದ ದಲಿತರ ದಿಗ್ವಿಜಯವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರುವ ತನಕ ಯಾವ ಇತಿಹಾಸಕಾರರು ಉಲ್ಲೇಖಿಸಲು ಸಾಧ್ಯವೇ ಆಗಿರಲಿಲ್ಲ. ಇನ್ನು ಮುಂದಾದರೂ ಇತಿಹಾಸದತ್ತ ಗಮನ ಹರಿಸುವ ಮೂಲಕ ಹೊಸ ಬೆಳಕು ಚೆಲ್ಲಬೇಕಿದೆ.

ಬ್ರಿಟೀಷರು ಮತ್ತು ಶಿವಾಜಿ ಸೇರಿದಂತೆ ಹಲವು ರಾಜಮನೆತನಗಳಲ್ಲಿ ದಲಿತರು ಸೇನೆ ಮತ್ತು ಇನ್ನಿತರ ಅಧಿಕಾರಿ ಕೆಲಸಗಳಲ್ಲಿ ಇದ್ದರು. ಶಿವಾಜಿಯು ತನ್ನ ಕೋಟೆ ಕಾಯುವ ರಕ್ಷಣಾ ಪಡೆಗೆ ಮಹರ್ ಗಳನ್ನು ನೇಮಿಸಿಕೊಂಡಿದ್ದರು. ಮಹರ್ ಮತ್ತು ಮಾಂಗ್ ಎಂಬ ದಲಿತ ಸಮುದಾಯದವರನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಂಡಿದ್ದರು. ಅದಲ್ಲದೆ ಕಿಲ್ಲೆದಾರ ಎಂಬ ಜವಾಬ್ದಾರಿಯುತ ಅಧಿಕಾರಿ ಹುದ್ದೆಗೆ ಮಹರ್‌ಗಳನ್ನೇ ನೇಮಿಸಿಕೊಂಡಿದ್ದರು. ದುರಾದೃಷ್ಟವಶಾತ್ 1680ರಲ್ಲಿ ಶಿವಾಜಿ ಮಹಾರಾಜರು ಮರಣ ಹೊಂದಿದ ನಂತರ ಪೇಶ್ವೆಗಳು ಅಧಿಕಾರಕ್ಕೆ ಬಂದರು. ಪೇಶ್ವೆಗಳು ಮೂಲತಃ ಸುರಪಾನಿಗಳು, ಸ್ತ್ರೀ ಲೋಲುಪರು, ವ್ಯಭಿಚಾರಿಗಳು, ಎಲ್ಲಕ್ಕಿಂತ ಮಿಗಿಲಾಗಿ ಮನುಧರ್ಮ ಪರಿಪಾಲಕರು. ಇವರು ಅಧಿಕಾರಕ್ಕೆ ಬಂದ ನಂತರ ಮಾಡಿದ ಕೆಲಸವೆಂದರೆ ಶಿವಾಜಿ ಮಹರಾಜರು ಪ್ರತಿಯೊಂದು ಸಮುದಾಯಕ್ಕು ನೀಡಿದ ಪ್ರಾತಿನಿಧ್ಯವನ್ನು ತೆಗೆದು ಹಾಕಿ ಬಹುಭದ್ರವಾಗಿ ಕಟ್ಟಿದ್ದ ಶಿವಾಜಿ ಮಹಾರಾಜರ ರಾಜ್ಯವನ್ನು ದುರ್ಬಲಗೊಳಿಸಿದ್ದು.

ಮರಾಠರ ಇತಿಹಾಸದಲ್ಲಿ ಕ್ರಿ.ಶ,1713 ಕಾಲ ಒಂದು ಮಹತ್ವದ ಗಟ್ಟ. ಅಂದಿನ ಸಮಯದಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣತ್ವದ ಪ್ರಭಾವ ತುಂಬಾ ಕಡಿಮೆ ಇತ್ತು. ಪೇಶ್ವೆಗಳು ಹಾಗೂ ಕೊಂಕಣಿ ಬ್ರಾಹ್ಮಣರು ಒಳನುಸುಳಿ ಆಡಳಿತ ಹಿಡಿದ ಮೇಲೆ ಅಲ್ಲಿಂದ ಪೇಶ್ವೆಗಳ ದರ್ಬಾರ್‌‌ ಪ್ರಾರಂಭವಾಯಿತು. ಮನುವಾದಿಗಳ ಯಥಾಸ್ಥಿತಿವಾದ ಮತ್ತೆ ಪುನರ್ ಉದಯವಾಯಿತು. ಪೇಶ್ವೆಗಳ 2ನೇ ಬಾಜಿರಾಯ ಯಾವ ಮಟ್ಟಕ್ಕೆ ಇಳಿಯುತ್ತಾರೆಂದರೆ ಸಿದನಾಕ ಎಂಬ ದಲಿತ ಅರಮನೆಯ ಹತ್ತಿರ ನಿಂತಿದ್ದ ಸ್ಥಳವನ್ನು ಮಂತ್ರ ಹಾಕಿಸಿ ಶುಚಿಗೊಳಿಸುತ್ತಾನೆ. ಇದೆಲ್ಲದಕ್ಕೂ ಹೊಸತಿರುವು ನೀಡಿದ್ದು ಕೋರೆಗಾಂವ್ ಎಂಬ ಐತಿಹಾಸಿಕ ಕದನ.

ಅಸ್ಪೃಶ್ಯತೆಯ ಕಾರಣದಿಂದ ಬಹುದೂರ ಉಳಿದುಕೊಂಡಿದ್ದ ಅನೇಕರನ್ನು ಬ್ರಿಟಿಷರು ಗುರುತಿಸಿ ತಮ್ಮ ಸೇನೆಯಲ್ಲಿ ಅವಕಾಶ ನೀಡಿದ್ದಲ್ಲದೆ ಶಿಕ್ಷಣವನ್ನೂ ನೀಡಿದರು. ಮಹರ್‌ಗಳ ಈ ಕಲಿತನದ ಕಾರಣದಿಂದಲೇ ಬ್ರಿಟೀಷರು ಪೇಶ್ವೆಗಳ ವಿರುದ್ದ ಜಯ ಸಾಧಿಸಲು ಕಾರಣವಾದದ್ದು. ಪೇಶ್ವೆಗಳಲ್ಲಿ 2ನೇ ಬಾಜಿರಾಯ ಅಧಿಕಾರಕ್ಕೆ ಬಂದ ಮೇಲೆ ಅವನ ಕಣ್ಣು ಬಿದ್ದಿದ್ದು ಪೂನಾದ ಮೇಲೆ. ಅದನ್ನು ಹೇಗಾದರು ಮಾಡಿ ವಶಪಡಿಸಿಕೊಳ್ಳಬೇಕೆಂಬ ಹಂಬಲದಿಂದ ಪೂನಾ ಬಳಿ ಇರುವ ಚಕನ್ ಎಂಬ ಸ್ಥಳದಲ್ಲಿ 2ನೇ ಬಾಜಿರಾಯನ ಸೇನೆ ಬಿಡು ಬಿಟ್ಟಿತ್ತು. ಇದನ್ನು ತಿಳಿದ ಬ್ರಿಟಿಷ್ ಜನರಲ್ ಸ್ಮಿತ್ ನೇತೃತ್ವದ ಸೇನೆ ಹಿಂಬಾಲಿಸಿತು. ಆ ಸಂದರ್ಭದಲ್ಲಿ 28 ಸಾವಿರರದವರೆವಿಗೆನ ಸೈನ್ಯದ ತುಕಡಿ ಅವಶ್ಯಕತೆ ಇತ್ತು. ಬ್ರಿಟಿಷರಿಗೆ ಮಾಡು ಇಲ್ಲವೆ ಮಡಿ ಎಂಬಂತಾಗಿತ್ತು. ತುಂಬಾ ಅರ್ಹತೆ ಮತ್ತು ಸಾಮರ್ಥ್ಯ ಇರುವ ಸೈನ್ಯದ ತುಕಡಿಯನ್ನು ಆಯ್ಕೆ ಮಾಡಬೇಕಿತ್ತು. ತಕ್ಷಣ ಬಾಂಬೆ ರೆಜೆಮೆಂಟ್ ತುಕಡಿಯನ್ನು ಆಯ್ಕೆಮಾಡಿಕೊಂಡರು. ಈ ರೆಜಿಮೆಂಟ್‌‌ನಲ್ಲಿ ಮಹರ್ ಸೈನಿಕರು ಇದ್ದರು. 250 ಕುದುರೆ ಸವಾರರು, 24 ಬ್ರಿಟಿಷ್ ಸೈನಿಕರಿದ್ದರು. ಅದರೊಟ್ಟಿಗೆ 205 ಸಣ್ಣ ತುಪಾಕಿಗಳಿದ್ದವು. ಇದರ ಕ್ಯಾಪ್ಟನ್ ಸಿಪ್ ಸ್ಟ್ಯಾಂಟಿನ್. ಕಮಾಂಡರ್ ಸಿದನಾಕ ಆಗಿದ್ದರು. ತಕ್ಷಣ ಫಿಲ್ಸ್ಮನ್ IInd battaalion of first regiment bombay native infantry ಎಂಬ ಸೈನ್ಯವನ್ನು ಪುಣೆಗೆ ಕಳುಹಿಸಿದರು. ಈ ಸೇನೆಯಲ್ಲಿ ಮರಾಠರು, ಮುಸ್ಲಿಂ ಯೋಧರು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಹರ್ ಸೈನಿಕರೇ ತುಂಬಿದ್ದರು. ಈ ಸೇನೆಗೆ ನಾಯಕತ್ವ ವಹಿಸಿದ್ದು ಸ್ಟಾಂಟನ್ ಮತ್ತು ಸಿದನಾಕ.

1817 ಡಿಸೆಂಬರ್ 31 ರಾತ್ರಿ 8 ಗಂಟೆಗೆ ಶಿರೂರಿನಿಂದ ಹೊರಟ ಸೇನೆಯಲ್ಲಿ 500 ಕಾಲ್ದಳ, 250 ಅಶ್ವದಳ, 24 ಗನ್ನಸರ್ಗಳಿಂದ ಕೂಡಿತ್ತು. 27 ಗಂಟೆಗಳ ಕಾಲ್ನಡಿಗೆಯಲ್ಲಿ 1 ಜನವರಿ 1818ರ ಬೆಳಗ್ಗೆ ಭೀಮಾನದಿ ತೀರದ ಕೋರೆಗಾಂವ್ ತಲುಪಿತು. ನಿರಂತರ ಕಾಲ್ನಡಿಗೆಯಿಂದ ಸೈನ್ಯ ಬಹಳ ಬಸವಳಿದಿತ್ತು. ಮಾರ್ಗ ಮಧ್ಯದಲ್ಲಿ ಬಾಯಾರಿದರೆ ನೀರು ಕುಡಿಯಲು ಸಹ ನದಿ ನೀರು ಕೂಡ ಅಲ್ಲಿ ಸಿಕ್ಕಿರಲಿಲ್ಲ. ಇಂತಹ ಸಂದರ್ಭದಲ್ಲಿ ಪೇಶ್ವೆಗಳ ಸೈನ್ಯ ದಾಳಿಗಿಳಿಯಿತು. ಪೇಶ್ವೆಗಳೊಡನೆ 1000 ಅರಬ್ ಸೈನ್ಯವಿತ್ತು. ಖಡ್ಗಬಲ ಮತ್ತು ಗುಂಡಿನ ತೋಪುಗಳಿಂದ ಪ್ರಾರಂಭವಾದ ಯುದ್ದ ಲೆಪ್ಟಿನೆಂಟ್ ಚಿಶೋಲಮ್ ನನ್ನು ಸೆರೆಹಿಡಿದು ಆತನ ರುಂಡ ಮುಂಡಗಳನ್ನು ಬೇರ್ಪಡಿಸಿದರು. ಇದನ್ನು ನೋಡಿ ಬ್ರಿಟಿಷ್ ಸೈನ್ಯ ಹತಾಶವಾಯಿತು. ರುಂಡ ಹಿಡಿದುಕೊಂಡು ಪೇಶ್ವೆಗಳು ಯುದ್ದ ಭೂಮಿಯಲ್ಲಿ ತಿರುಗಾಡಿದರು. ಶೌರ್ಯದ ಶಿಖರ ಏರಿ ಕುಳಿತಿದ್ದ ಪೇಶ್ವೆಗಳನ್ನು ಕಂಡು ಸ್ಟಾಂಟನ್ ಸೋಲು ಖಚಿತ ಎಂದುಕೊಂಡಿದ್ದರು. ಆದರೆ ಮಹರ್ ಸೈನಿಕರಿಗೆ ಮಾತ್ರ ಯಾವ ಭಯವೂ ಇರಲಿಲ್ಲ.

ಮಹರ್ ಸೈನಿಕರಿಗೆ ಇದ್ದ ಬದ್ಧತೆ, ಆ ಅಂಜದೆ ನುಗ್ಗುವ ಗುಣ. ಈ ಯುದ್ಧವು ಒಂದು ಹಗಲು, ಒಂದು ರಾತ್ರಿಯುದ್ದಕ್ಕೂ ನಿರಂತರವಾಗಿ ನಡೆದಿದೆ. ಒಬ್ಬ ಮಹರ್ ಸೈನಿಕ 40 ಜನ ಪೇಶ್ವೆ ಸೈನಿಕರನ್ನು ಎದುರಿಸಬೇಕಿತ್ತು. ಆ ಸಂದರ್ಭದ ಬೀಕರತೆಯನ್ನು ಕಂಡ ಸ್ಟಾಂಟನ್ ನಾವು ಶರಣಾಗುವುದೇ ಲೇಸು ಎಂದು ಆದೇಶಿಸಿದರು. ಇದನ್ನು ಕೇಳಿದ ತಕ್ಷಣವೇ ಕುಪಿತರಾದ ಮಹರ್ ಸೈನಿಕರು ಬಹಳ ಧೈರ್ಯದಿಂದ ಪೇಶ್ವೆಗಳನ್ನು ಎದುರಿಸಿದರು. ಕ್ಯಾಪ್ಟನ್ ಸ್ಟಾಂಟನ್ ಮೇಲೆ ಆಕ್ರೋಶಗೊಂಡು, “ನಾವು ಯಾವುದೇ ಸನ್ನಿವೇಶದಲ್ಲಿಯೂ ಕೂಡ ಯುದ್ಧ ಭೂಮಿಯಿಂದ ಹಿಂದಿರುಗುವುದಿಲ್ಲ. ಹೆದರಬೇಡಿ, ಧೈರ್ಯವಾಗಿರಿ, ಈ ಮಹರ್ ಸೈನಿಕರು ಕೊನೆಯ ಬುಲೆಟ್, ಕೊನೆಯ ಶತ್ರು ಉಳಿದಿರುವವರೆವಿಗೂ ಹೋರಾಡುತ್ತೇವೆ” ಎಂದರು. ಇದನ್ನು ಕೇಳಿದ ಸ್ಟಾಂಟನ್ ಖುಷಿಯಾದರು. ತಕ್ಷಣ ಮಹರ್ ಸೈನಿಕರಿಗೆ ಕೊನೆಯ ಬುಲೆಟ್, ಕೊನೆಯ ಶತ್ರು ಉಳಿದಿರುವ ತನಕ ಹೋರಾಡಲು ಸೂಚಿಸಿದರು.

ಸಾವು ಎದುರಿಗಿದ್ದರೂ ಮಹರ್ ಸೈನಿಕರು ದಿಟ್ಟತನದಿಂದ ಹೋರಾಡುತ್ತಲೇ ಇದ್ದರು. ಯುದ್ದದ ಸಂದರ್ಭದಲ್ಲಿ ಪೇಶ್ವೆಯ ನಾಯಕ ಬಾಪು ಗೊಖಲೆಯ ಮಗ ಗೋವಿಂದ ಬಾಬಾನು ಸತ್ತು ಹೋದನು. ತಕ್ಷಣ ಕುಸಿದು ಬಿದ್ದು ಯುದ್ಧ ಭೂಮಿಯಲ್ಲೇ ಒದ್ದಾಡ ತೊಡಗಿದನು. ಬೆರಳೆಣಿಕೆಯಷ್ಟಿದ್ದ ಮಹರ್ ಸೈನಿಕರು ಶಿಸ್ತು ಬದ್ದವಾದ ಆಕ್ರಮಣದ ಮೂಲಕ ಪೇಶ್ವೆ ಸೈನ್ಯವನ್ನು ದಿಕ್ಕಾಪಾಲಾಗಿಸಿದರು. ಬಂದೂಕು ಗುಂಡುಗಳು ತೀರುತ್ತ ಬಂದಾಗ ಖಡ್ಗಗಳ ಮೂಲಕ ವೈರಿ ಪಡೆಯನ್ನು ಸೈನಿಕರ ರುಂಡಗಳನ್ನು ಚಂಡಾಡತೊಡಗಿದರು. ರಾತ್ರಿಯ ವೇಳೆ ಕುಡಿಯಲು ನೀರು ಸಿಕ್ಕಿದ್ದೇ ತಡ ಮತ್ತಷ್ಟು ಉತ್ಸುಕರಾಗಿ ಮಹರ್ ಯೋಧರು ಮರುದಿನದ ಕದನದಲ್ಲಿ ನಿರತರಾದರು. ಮತ್ತು ಪೇಶ್ವೆಯ ಸೈನ್ಯದ ಮೇಲೆ ಮತ್ತೆ ದಾಳಿ ಇಟ್ಟರು. ಈ ಮಹರ್ ವೀರರ ಬಲಿಷ್ಠ ಹಾಗೂ ಬ್ರಿಟಿಷರ ನೆರವಿಗೆ ಇನ್ನೊಂದು ಸೇನೆ ಬರುತ್ತಿದೆ ಎಂಬ ವದಂತಿಯಿಂದ ಪೇಶ್ವೆ ಸೇನೆ ಅವಘಡಕ್ಕೀಡಾಯಿತು. 1818 ಜನವರಿ 1 ರಾತ್ರಿ 9 ಗಂಟೆಗೆ ಪೇಶ್ವೆ ಸೈನಿಕರು ಯುದ್ದ ಭೂಮಿಯಿಂದ ಪಲಾಯನ ಮಾಡಲು ಪ್ರಾರಂಭಿಸಿದರು.

ಯುದ್ದದಿಂದ ದಣಿದಿದ್ದ ಮಹರ್ ಸೈನಿಕರು ಭೀಮಾ ನದಿಯ ನೀರನ್ನು ಕುಡಿದು ದಣಿವಾರಿಸಿಕೊಂಡರು. ಈ ವಿಜಯವನ್ನೇ ಇಂದಿಗೂ ಇತಿಹಾಸದಲ್ಲಿ ಮಹರ್‌ಗಳ ಕೋರೆಗಾಂವ್ ದಿಗ್ವಿಜಯ ಎಂದು ಕರೆಯುತ್ತಾರೆ. ಇದರ ನೆನಪಿನಾರ್ತಕವಾಗಿ ಇಂದಿಗೂ ಸೈನ್ಯದಲ್ಲಿ ಮಹರ್ ರೆಜಿಮೆಂಟ್ ಇದೆ. ಸ್ವತಂತ್ರ ಮಹರ್ ರೆಜಿಮೆಂಟ್ ಯೋಧರು 1941-46 ವಿಜಯಸ್ಥಂಭದ ಚಿಹ್ನೆಯ ಬ್ಯಾಡ್ಜ್‌‌ ಇರುವ ಕ್ಯಾಪ್ ಧರಿಸುತ್ತಿದ್ದರು.

ಕೋರೆಗಾಂವ್ ವಿಜಯಸ್ತಂಭದ ಮೇಲೆ one of the proudest triumphs of the british army in the east ಎಂದು ಬರೆಯಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮಗೆಷ್ಟೇ ತುರ್ತು ಕೆಲಸ ಕಾರ್ಯಗಳಿದ್ದರೂ ಅವುಗಳೆಲ್ಲವನ್ನು ಬದಿಗಿರಿಸಿ ಈ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅಲ್ಲಿಂದ ಹೊರಟು ಜನವರಿ 1ರಂದು ಕೋರೆಗಾಂವ್‌ಗೆ ತಮ್ಮ ಕುಟುಂಬ ಸಮೇತರಾಗಿ ಭೇಟಿನೀಡಿ ಅಲ್ಲಿರುವ ಹುತಾತ್ಮ ಅಸ್ಪೃಶ್ಯ ಯೋಧರ ಸ್ಮಾರಕಕ್ಕೆ (ವಿಜಯಸ್ತಂಭ) ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರು. ಅವರು ಬದುಕಿರುವ ತನಕವೂ ಒಂದೇ ಒಂದು ವರ್ಷವೂ ಜನವರಿ 1ನೇ ತಾರೀಖಿನಂದು ಇಲ್ಲಿಗೆ ಬರುವುದನ್ನು ತಪ್ಪಿಸುತ್ತಿರಲಿಲ್ಲ. ಪ್ರತಿವರ್ಷ ಜನವರಿ 1 ಜಗತ್ತಿಗೆ ಹೊಸವರ್ಷ, ಆದರೆ ದಲಿತರಿಗೆ ದಿಗ್ವಿಜಯದ ದಿವಸ.


ಇದನ್ನೂ ಓದಿರಿ: ಜಮ್ಮು ಕಾಶ್ಮೀರದ ವೈಷ್ಣೋ ದೇವಿ ದೇವಾಲಯದಲ್ಲಿ ಕಾಳ್ತುಳಿತ: 12 ಯಾತ್ರಾರ್ಥಿಗಳು ಮರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ನ್ನು ಚುನಾವಣೆಗೆ ಮುನ್ನ ಬಂಧಿಸಿದ್ದು ಏಕೆ? EDಗೆ ಉತ್ತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌

0
ಸಾರ್ವತ್ರಿಕ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆಗೂ ಮುನ್ನ ಬಂಧಿಸಿದ್ದು ಏಕೆ? ಎಂದು...