Homeಮುಖಪುಟ2021 ವಿಶೇಷವಾಗಿ ಮರೆಯಲೇಬೇಕಾದ ವರ್ಷ

2021 ವಿಶೇಷವಾಗಿ ಮರೆಯಲೇಬೇಕಾದ ವರ್ಷ

- Advertisement -
- Advertisement -

ಐರ್‍ಲೆಂಡಿನಲ್ಲಿ 1916ರಲ್ಲಿ ನಡೆದ, ಹಿಂಸೆ ಮತ್ತು ಅನೇಕ ಯುವಜನರ ಸಾವಿಗೆ ಕಾರಣವಾದ ’ಈಸ್ಟರ್ ಬಂಡಾಯ’ವನ್ನು ಕುರಿತು ಐರಿಷ್ ಕವಿ ಡಬ್ಲ್ಯೂ.ಬಿ.ಯೇಟ್ಸ್ “ಪ್ರತಿಯೊಂದೂ ಬದಲಾಯಿತು, ತೀವ್ರವಾಗಿ ಬದಲಾಯಿತು, ಹಾಗೂ ಒಂದು ಭಯಂಕರವಾದ ಸೌಂದರ್ಯ ಉದ್ಭವಿಸಿತು” ಎಂದು ಸ್ಮರಣೀಯ ಮಾತುಗಳಲ್ಲಿ ಉದ್ಗರಿಸಿ ಇಂದಿಗೆ ಒಂದು ಶತಮಾನಕ್ಕಿಂತಲೂ ಸ್ವಲ್ಪ ಹೆಚ್ಚು ಕಾಲವಾಯಿತು. ಈ ಮಾತು ನಮ್ಮ ಕಾಲಕ್ಕೂ ಸಮರ್ಪಕವಾಗಿ ಅನ್ವಯಿಸುತ್ತದೆ. 21ನೇ ಶತಮಾನದ ಮೊದಲ ಎರಡು ದಶಕಗಳು ಜಗತ್ತನ್ನು ಅನೇಕ ಮೂಲಭೂತ ರೀತಿಗಳಲ್ಲಿ ಬದಲಾಯಿಸಿದವು; 2021ನೇ ವರ್ಷವು ಆ ಬದಲಾವಣೆಗಳ ವೇಗವನ್ನು ಮತ್ತಷ್ಟು ಹೆಚ್ಚಿಸಿದೆ. ಸಾರ್ವಜನಿಕ ಚರ್ಚೆಯು ಈ ಬದಲಾವಣೆಗಳನ್ನು ಸಮರ್ಪಕವಾಗಿ ಪ್ರತಿಫಲಿಸಿಲ್ಲದಿರಬಹುದು; ಆದರೆ ಅವು ಸಂಭವಿಸಿಯೇ ಇಲ್ಲ ಎಂದು ಇದರರ್ಥವಲ್ಲ.
ನಿಜವಾಗಿ ಹೇಳಬೇಕೆಂದರೆ, ವಾಸ್ತವ ಸ್ಥಿತಿ ಮತ್ತು ಅದನ್ನು ಕುರಿತ ಗ್ರಹಿಕೆ ಇವುಗಳ ನಡುವೆ ಏನು ಕಂದರವಿದೆಯೋ, ಅದೂ ಸಹ ಈ ಬದಲಾವಣೆಯ ಒಂದು ಭಾಗವೇ ಆಗಿದೆ.

ಕೊರೊನಾ ಒಂದು ಹೊಸ ವೈರಸ್ ಆಗಿದ್ದರೂ, ಒಟ್ಟಾರೆ ಮಹಾ ಸಾಂಕ್ರಾಮಿಕದ ಅನುಭವವೇನೂ ಮಾನವ ಕುಲಕ್ಕೆ ಹೊಸದಲ್ಲ. ಈ ಹಿಂದೆಯೂ ಜಗತ್ತಿನಲ್ಲಿ ಇತರ ಮಹಾ ಸಾಂಕ್ರಾಮಿಕಗಳು, ಪ್ಲೇಗುಗಳು ಹಾಗೂ ನೈಸರ್ಗಿಕ ವಿಕೋಪಗಳು ಸಂಭವಿಸಿವೆ. ಆದರೆ ಈ ಬಾರಿ ಕೊರೊನಾಕ್ಕೆ ಜಗತ್ತಿನಾದ್ಯಂತ ಸಾರ್ವಜನಿಕ ವಲಯಗಳಲ್ಲಿ ನೀಡಲಾದ ಗಮನ ಮಾತ್ರ ಹಿಂದೆಂದೂ ಕಾಣದಿದ್ದಂತಹದು. 2020 ಮತ್ತು 2021ರ ಎರಡು ವರ್ಷಗಳಲ್ಲಿ ಟಿವಿಗಳ ಸಮಯವು ಪ್ರಧಾನವಾಗಿ ಸಾರ್ವಜನಿಕ ಆರೋಗ್ಯ ಮತ್ತು ಸರ್ಕಾರಿ ನಿಯಂತ್ರಣಗಳನ್ನು ಕುರಿತ ಚರ್ಚೆಗಳ ಸುತ್ತಲೇ ಸುತ್ತಿದೆ. ಆದಾಗ್ಯೂ, ಇಷ್ಟೇ ಗಮನಕ್ಕೆ ಅರ್ಹವಾದ ಇನ್ನಿತರ ವಿಚಾರಗಳೂ ಇವೆ. ಅವುಗಳಲ್ಲಿ: ಪ್ರಜಾಪ್ರಭುತ್ವದಂತಹ 20ನೇ ಶತಮಾನದ ಚಿಂತನೆಗಳಿಗೆ ಎಷ್ಟುಮಾತ್ರಕ್ಕೂ ಆಶಾದಾಯಕವಲ್ಲದ ರಾಜಕೀಯ ವಾತಾವರಣ; ಮಾನವರ ಚಿಂತನಾ ಸಾಮರ್ಥ್ಯದ ಮೇಲೆ ಕೃತಕ ಬುದ್ಧಿಮತ್ತೆಯ ಬಿಗಿ ಹಿಡಿತ; ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನಿಂದ ಪಾಶ್ಚಿಮಾತ್ಯ ಪಡೆಗಳಿಗೆ ಸೋಲು; ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ, ಅತ್ಯಂತ ದುರ್ಗತಿಗೆ ಈಡಾಗಿರುವ ಭೂ ಪರಿಸರ – ಇವೆಲ್ಲವೂ ಸೇರಿವೆ. ಜಗತ್ತನ್ನೊಂದು ’ಜಾಗತಿಕ ಗ್ರಾಮ’ವನ್ನಾಗಿಸುವ ಆಶಾಭಾವನೆಯನ್ನು, ’ಬ್ರೆಕ್ಸಿಟ್’ನ ಹಣೆಬರಹವನ್ನು ಅಂತಿಮಗೊಳಿಸುವ ಮೂಲಕ ನಿರ್ಣಾಯಕವಾಗಿ ಹೊಸಕಿ ಹಾಕಿದ್ದು 2021ರಲ್ಲೇ. ಕೋವಿಡ್‌ನಿಂದಾಗಿ ಒಂದಾದ ಮೇಲೊಂದು ದೇಶಗಳು ತಮ್ಮದೇ ದೇಶಗಳ ಒಳಗೂ ಸಹ ಜನರ ಮುಕ್ತ ಓಡಾಟಕ್ಕೆ ನಿರ್ಬಂಧಗಳನ್ನು ವಿಧಿಸುತ್ತಿದ್ದು, ಜಗತ್ತನ್ನು ಕೋವಿಡ್ ಹಿಂದೆಂದಿಗಿಂತಲೂ ಹೆಚ್ಚು ದೂರದೂರ ಮಾಡಿಟ್ಟಿದೆ.

ಅಮೆರಿಕದಲ್ಲೇನೋ ಡೊನಾಲ್ಡ್ ಟ್ರಂಪ್‌ನ ಅಧ್ಯಕ್ಷಗಿರಿ ಕೊನೆಗೊಂಡಿದೆಯಾದರೂ, ಸಾಂಪ್ರದಾಯಿಕತೆ ಮತ್ತು ಸಂಪ್ರದಾಯವಾದಗಳು ಜಗತ್ತಿನಾದ್ಯಂತ ತೀವ್ರ ರೀತಿಯಲ್ಲಿ ಗಟ್ಟಿಗೊಳ್ಳುತ್ತಲೇ ಸಾಗಿವೆ. ಅಲ್ಲಿಇಲ್ಲಿ ಉಳಿದುಕೊಂಡಿರುವ ಪ್ರಜಾಪ್ರಭುತ್ವವು ಅರ್ಥವಾಗದಂತಹ ಸುಸ್ತಿನ ಚಿಹ್ನೆಗಳನ್ನು ಈ ವರ್ಷ ತೋರ್ಪಡಿಸಿತು. ಈ ವರ್ಷದುದ್ದಕ್ಕೂ ನಾಗರಿಕ ಹಕ್ಕುಗಳು ಮೊಟಕುಗೊಳ್ಳುತ್ತಲೇ ಬಂದವು. ಮೂಲಭೂತವಾದಿಗಳು ಮತ್ತು ಅವರ ಖಾಸಗಿ ’ಸೇನೆ’ಗಳು ಸಾಮಾಜಿಕ ಕ್ಷೇತ್ರಗಳು ಮತ್ತು ಸಾಂಸ್ಥಿಕ ಆಶ್ರಯತಾಣಗಳನ್ನು ಆಕ್ರಮಿಸುವುದರಲ್ಲಿ ಹೆಚ್ಚುಹೆಚ್ಚು ಯಶಸ್ವಿಯಾದವು. ಆಘಾತಕಾರಿ ಪ್ರಮಾಣದ ಮೃಗೀಯ ಕ್ರೂರತೆಯ ಹಿಂಸೆ ಮತ್ತು ಅನೇಕ ಛಾಯೆಗಳ ಭಯೋತ್ಪಾದನೆ ದಿನನಿತ್ಯದ ವಿದ್ಯಮಾನವಾಯಿತು. ಪ್ರಭುತ್ವದ ಗೂಢಚಾರಿಕೆ ಹಾಗೂ ನಾಗರಿಕರ ಖಾಸಗಿತನದ ಮೇಲೆ ಪ್ರಭುತ್ವದ ಆಕ್ರಮಣ ಮಾಮೂಲಿ ಸಂಗತಿಯಾಯಿತು. ಅಡೆತಡೆಯಿಲ್ಲದೆ ಹರಿದಾಡುವ (ಸಟ್ಟಾ) ಬಂಡವಾಳ ಹಾಗೂ ತೆರಿಗೆಗಳ್ಳತನಕ್ಕೆ ಅವಕಾಶ ನೀಡುವ ಡಿಜಿಟಲ್ ಕರೆನ್ಸಿ ಒಟ್ಟಾಗಿ ಜಗತ್ತಿನ ಜನಸಂಖ್ಯೆಯ ಬಹುದೊಡ್ಡ ಭಾಗಕ್ಕೂ ಅತಿ ಶ್ರೀಮಂತರಿಗೂ ನಡುವಿನ ಕಂದರವನ್ನು ಮತ್ತಷ್ಟು ಹಿಗ್ಗಿಸಿವೆ. ಒಂದೆಡೆ ಬಹುತೇಕ ದೇಶಗಳಲ್ಲಿ ಉದ್ಯೋಗಾವಕಾಶಗಳು ಪಾತಾಳ ಕಂಡರೆ, ಮತ್ತೊಂದೆಡೆ ಕೆಲವೇ ಕುಬೇರರ ಸಂಪತ್ತು ಸಾಮಾನ್ಯರ ಊಹೆಗೂ ನಿಲುಕದಷ್ಟು ಪ್ರಮಾಣಕ್ಕೆ ಹೆಚ್ಚಳವಾಗಿದೆ. ಕೃತಕ ಬುದ್ಧಿಮತ್ತೆಗೂ ಮನುಷ್ಯರ ಆಲೋಚನಾ ಶಕ್ತಿಗೂ ನಡುವಿನ ಕೊಂಡಿಯು ಮಾನವ ನಡವಳಿಕೆಯನ್ನು ಬದಲಿಸುವತ್ತಲೇ ನಡೆದಿದೆ. ನೆಲಮೂಲ ಭಾಷೆಗಳು ಸಾಮೂಹಿಕ ಮೂಗತನದ ಸ್ಥಿತಿಯನ್ನು ತಲುಪುತ್ತಿವೆ. ಸಾಹಿತ್ಯವು ಮಾಧ್ಯಮಗಳಿಗೆ ಹೆಚ್ಚೆಚ್ಚು ನಿಕಟವಾಗುತ್ತ, ಸಹಜ ಮತ್ತು ಡಿಜಿಟಲ್‌ಗಳ ಒಂದು ಅಮಲೇರಿಸುವಂಥ ಪೋಸ್ಟ್-ಟ್ರೂಥ್ ಮಿಶ್ರಣವನ್ನು ಹುಟ್ಟುಹಾಕುತ್ತಿದೆ. ಕಲೆ, ಸಿನಿಮಾ, ರಂಗಭೂಮಿಗಳು ಮಂಕಾಗಿದ್ದವು. ಇವೆಲ್ಲವೂ 2021ನ್ನು ಒಂದು ವಿಶೇಷವಾಗಿ ಮರೆಯಲೇಬೇಕಾದ ವರ್ಷ ಎನಿಸುವುದಕ್ಕೆ ಕಾರಣಗಳು.

ಚಿಂತನೆಗಳು, ವಿಚಾರಧಾರೆಗಳು ಹಾಗೂ ರಾಷ್ಟ್ರಗಳು ಸಿಲುಕಿಕೊಂಡಿರುವ ಬಿಕ್ಕಟ್ಟಿನ ಸ್ವರೂಪವನ್ನು 2021 ಎತ್ತಿತೋರಿಸಿತು. ಹಿಂದಿನ ಕಾಲಗಳಲ್ಲಿ ಅಸ್ಮಿತೆ (ಐಡೆಂಟಿಟಿ) ಎನ್ನುವುದು ಜನಾಂಗ, ಧರ್ಮ, ರಾಷ್ಟ್ರ, ಜೆಂಡರ್ ಹಾಗೂ ಭಾಷೆಗೆ ಸಂಬಂಧಿಸಿದ್ದಾಗಿತ್ತು. 2021ರಲ್ಲಿ ಅಸ್ಮಿತೆಯು ಹೆಚ್ಚುಹೆಚ್ಚಾಗಿ ತಂತ್ರಜ್ಞಾನಗಳ ಜೊತೆ ಬೆಸೆದುಕೊಳ್ಳುತ್ತಿದೆ; ಸಂಪರ್ಕ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನದ ಧಣಿಗಳು ಪ್ರಭುತ್ವಗಳಿಗಿಂತಲೂ ಪ್ರಬಲವಾಗಿವೆ. “ಇಪ್ಪತ್ತನೆಯ ಶತಮಾನದ ಕೊನೆಯ ಭಾಗದ, ದಂತಕತೆಯಂಥ ನಮ್ಮ ಕಾಲದಲ್ಲಿ ನಾವೆಲ್ಲರೂ ಸೂತ್ರೀಕರಣ ಮತ್ತು ಕೃತಕ ಸೃಷ್ಟಿಯ ಜಂಟಿ ಉತ್ಪನ್ನವಾಗಿರುವ, ಯಂತ್ರ ಮತ್ತು ಜೀವಿ ಈ ಎರಡರ ಮಿಶ್ರತಳಿಗಳಾಗಿದ್ದೇವೆ (Cyborgs). ನಮಗೆ ನಮ್ಮ ರಾಜಕೀಯವನ್ನು ನೀಡುತ್ತಿರುವುದು ಇದೇ” ಎಂದು ಡೋನಾ ಹ್ಯಾರಾವೇ ಹೇಳಿದ್ದರು. ಆ ಮಾತು 2021ರಲ್ಲಿ ಹಿಂದಿಗಿಂತಲೂ ಸತ್ಯವಾಗಿ ಕಾಣುತ್ತವೆ. ಈ ವರ್ಷ ರೋಬೋಗಳಿಗೆ ಪೌರತ್ವ ಗುರುತಿನ ಸಂಖ್ಯೆಗಳನ್ನು (citizenship identity numbers) ನೀಡುವ ಕಾರ್ಯ ಆರಂಭವಾಗಿದೆ; ಇದು ಸದ್ಯದ ಭವಿಷ್ಯದಲ್ಲೇ ಅವುಗಳನ್ನು ರಾಜಕೀಯ ಘಟಕಗಳಂತೆ (political entities) ಪರಿಗಣಿಸುವ ನಿಟ್ಟಿನ ಒಂದು ಹೆಜ್ಜೆಯಾಗಿದೆ. ಮನುಷ್ಯರ ನೆನಪನ್ನೆಲ್ಲಾ ಈಗ ಯಂತ್ರಗಳಿಗೆ ಔಟ್-ಸೋರ್ಸ್ ಮಾಡಲಾಗಿದೆ; ವರ್ತಮಾನದ ಕ್ಷಣಗಳೊಂದಿಗೆ ಅದರ ಸಂಬಂಧ ಜಡವಾದುದು, ಲೌಖಿಕ ಇಹಜೀವನಕ್ಕೆ ಸಂಬಂಧವಿಲ್ಲದ್ದು ಆಗಿರುತ್ತದೆ. ಚರಿತ್ರೆ, ಅಥವಾ ಚರಿತ್ರೆಯೆಂಬ ವಿಚಾರ ಈಗ ಹಾದಿಯ ಕೊನೆ ಮುಟ್ಟಿದಂತಿದೆ. ಇಹದ ನಿಶ್ಚಲತೆಯ ಈ ಕಾಲಘಟ್ಟದಲ್ಲಿ ಮಾನವ ಬುದ್ಧಿಶಕ್ತಿಯು ಮುಂದಕ್ಕೆ ಚಲಿಸುವ ಬದಲು ಅಡ್ಡಡ್ಡವಾಗಿ, ಮನುಷ್ಯ-ಯಂತ್ರ-ಮಿದುಳು ಎಂಬಂತಹ ಒಂದು ಹೊಸ ಸಂಸ್ಕೃತಿಯತ್ತ ಚಲಿಸುತ್ತಿರುವಂತಿದೆ.

ಈ ಜಾಗತಿಕ ಬದಲಾವಣೆಗಳಿಗೆ ಅನುಗುಣವಾಗಿ ಭಾರತದಲ್ಲಿ ಈ ಕೆಳಕಂಡ ಬೆಳವಣಿಗೆಗಳಾದವು: ಪ್ರಭುತ್ವಕ್ಕೂ ಅಂತರರಾಷ್ಟ್ರೀಯ ಐಟಿ ಕಾರ್ಪೊರೇಟ್ ವಲಯಕ್ಕೂ ನಡುವೆ ಕಿತ್ತಾಟಗಳು; ದೇಶದ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸುವಿಕೆ ಹಾಗೂ ಸಂವಿಧಾನದಲ್ಲಿ ಅಂತರ್ಗತವಾಗಿರುವ ತತ್ವಗಳ ಮೇಲೆ ಹೆಚ್ಚೆಚ್ಚು ದಾಳಿಗಳು; ಸತತವಾಗಿ ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಇಂಧನ ಮತ್ತು ಗ್ಯಾಸ್ ಬೆಲೆಗಳ ತೀವ್ರ ಹೆಚ್ಚಳ; ದೇಶದೊಳಗಿನ ಉಪವಲಯಗಳಲ್ಲಿ ಆಂತರಿಕ ಮಿಲಿಟರೀಕರಣದ ಹೆಚ್ಚಳ ಹಾಗೂ ಸಶಸ್ತ್ರ ಪಡೆಗಳಿಗೂ ನಾಗರಿಕರಿಗೂ ನಡುವೆ ಹೆಚ್ಚಿದ ಘರ್ಷಣೆಗಳು; ಭಾರತೀಯರು ಎಂದು ಹೆಮ್ಮೆ ಪಡುವ ಕಾರಣಗಳಿಗಾಗಿ ಪುರಾತನ ಕಾಲದ ಕಡೆ ಹೊರಳುವುದು, ಮತ್ತೊಂದೆಡೆ ವಿಜ್ಞಾನ ಮತ್ತು ಔಷಧಿ ಕ್ಷೇತ್ರದಲ್ಲಿ ಶೋಚನೀಯ ಸಾಧನೆ; ಔಷಧೀಯ ಆಮ್ಲಜನಕ ಇರಬಹುದು, ನೈಸರ್ಗಿಕ ಆಮ್ಲಜನಕ ಇರಬಹುದು – ಅದರ ಕೊರತೆಯಿಂದ ಸಾವುಗಳು ಸಂಭವಿಸುತ್ತಿದ್ದರೆ ಪ್ರಭುತ್ವ ಅದನ್ನು ನಿರಾಕರಿಸುವುದು ಮತ್ತು ಅದರ ಅಂಕಿಅಂಶಗಳನ್ನು ತಿರುಚಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು; ಇತ್ಯಾದಿ. ಎಲ್ಲಾ ದಿಕ್ಕಿನ ಇಂಥ ಕತ್ತಲೆಯಲ್ಲಿ ಮಿಂಚಿದ ಒಂದೇ ಒಂದು ಆಶಾಕಿರಣವೆಂದರೆ, ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂತೆಗೆಸಲು ಯಶಸ್ವಿಯಾದ ರೈತರ ಅಮೋಘವಾದ ಶಾಂತಿಯುತ ಚಳವಳಿ. ಸಾಮಾಜಿಕ ಪರಿವರ್ತನೆಗೆ ಪ್ರಜಾ ಚಳವಳಿ ಒಂದು ಹಾದಿ ಎಂಬ ನಂಬಿಕೆಯನ್ನು ಅದು ಜೀವಂತವಾಗಿರಿಸಿದೆ. ಅಂಥ ಇನ್ನೊಂದು ಬೆಳ್ಳಿ ಕಿರಣವೆಂದರೆ ಒಲಿಂಪಿಕ್ಸ್ ಮತ್ತಿತರ ಸ್ಪರ್ಧಾತ್ಮಕ ಆಟೋಟಗಳಲ್ಲಿ ಕ್ರೀಡಾಪಟುಗಳ ಸಾಧನೆಗಳು. ಆದಾಗ್ಯೂ ಇವು ಗಾಢವಾಗುತ್ತಿರುವ ಕತ್ತಲೆಯ ನಡುವಿನ ಬೆಳ್ಳಿ ಕಿರಣಗಳು ಮಾತ್ರ.

ವರ್ಷದ ಕೊನೆಯೆಂದರೆ ಸಾಮಾನ್ಯವಾಗಿ ಕ್ರಿಸ್ಮಸ್ ಸಂಭ್ರಮದ ಕಾಲ. ಆದರೆ 2021ರ ಕ್ರಿಸ್ಮಸ್ ಸಮಯದಲ್ಲಿ, ಸ್ಪಷ್ಟವಾಗಿ ಪ್ರಭುತ್ವದ ಬೆಂಬಲದೊಂದಿಗೆ ಹಿಂದುತ್ವ ಮೂಲಭೂತವಾದಿಗಳಿಂದ ಚರ್ಚ್‌ಗಳ ಧ್ವಂಸ, ಪ್ರಾರ್ಥನಾ ಸಭೆಗಳ ಮೇಲೆ ದಾಳಿ ನಡೆದಿವೆ. 2022ರ ವರ್ಷವು ಬದಲಾವಣೆಯನ್ನು ತರುವುದೆಂದು ನಾವು ಆಶಿಸಲು ಬಯಸುತ್ತೇವೆ. ಆದರೆ ಕೇವಲ ಚುನಾವಣಾ ಗೆಲುವುಗಳನ್ನು ಯಾವುದೇ ಬದಲಾವಣೆಯ ಚಿಹ್ನೆಗಳನ್ನಾಗಿ ನೋಡಲು ಸಾಧ್ಯವಿಲ್ಲ. ಭಾರತದ ಯುವ ಪೀಳಿಗೆಯ ಮನಸ್ಸುಗಳನ್ನು ದ್ವೇಷ ಮತ್ತು ತಿರಸ್ಕಾರದ ವಿಷದಿಂದ ತುಂಬಲಾಗಿದೆ. ಮಧ್ಯಮ ವರ್ಗದ ಕೆಲ ವಿಭಾಗಗಳಲ್ಲಿ ತಮ್ಮ ಸಾಪೇಕ್ಷ ಶ್ರೀಮಂತಿಕೆಯಿಂದಾಗಿ ಈಗಲೂ ದುರಹಂಕಾರ ತುಂಬಿದೆ. ಬಹುಪಾಲು ಭಾರತೀಯರು ಕಾಣಬಯಸುವ ಭವಿಷ್ಯ ಏನು ಎಂಬ ಬಗ್ಗೆ ರಾಜಕೀಯ ವರ್ಗಗಳಿಗೆ ಯಾವುದೇ ಸುಳಿವು ಇಲ್ಲ. 2022ರಲ್ಲಿ ಮತ್ತು ಅದರಾಚೆಗೂ ಸಹ ಈ ಪರಿಸ್ಥಿತಿಯನ್ನು ಬದಲಿಸಲು ನಾವೆಲ್ಲರೂ ಅನೇಕ ರಂಗಗಳಲ್ಲಿ ಶ್ರಮಿಸಬೇಕಿದೆ. ಅಂತಹ ಬದಲಾವಣೆಗಾಗಿ ದುಡಿಯುವ ತುಡಿತವಿರುವ ಎಲ್ಲರಿಗೂ 2022ರ ವರ್ಷವು ಸಾಧನೆಯ ವರ್ಷವಾಗಲಿ ಎಂದು ಹಾರೈಸುತ್ತೇನೆ.

ಉಲ್ಲೇಖಗಳು:
ಡೋನಾ ಹಾರಾವೇ: ’ಎ ಸೈಬೋರ್ಗ್ ಮ್ಯಾನಿಫೆಸ್ಟೊ’.
ಡಬ್ಲ್ಯೂ.ಬಿ.ಯೇಟ್ಸ್: ’ಈಸ್ಟರ್ 1916’.

  • (ಕನ್ನಡಕ್ಕೆ): ಸಿರಿಮನೆ ನಾಗರಾಜ್
ಪ್ರೊ ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ತಾಲಿಬಾನಿಗಳಿಂದ ಹತರಾದ ದಾನಿಶ್ ಸಿದ್ದೀಕಿಗೆ ಮರಣೋತ್ತರವಾಗಿ ’ವರ್ಷದ ಪತ್ರಕರ್ತ’ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...