ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಸಮಿತಿಯ ಚುನಾವಣೆಯಲ್ಲಿ, 1983ರ ಭಾರತದ ವಿಶ್ವಕಪ್ ವಿಜೇತ ತಂಡದ ನಾಡಿನ ಹೆಮ್ಮೆಯ ಆಟಗಾರ ನೇತೃತ್ವದ ಬಳಗ ಪ್ರಚಂಡ ಬಹುಮತದಿಂದ ಆಯ್ಕೆಯಾಗಿರುವುದು ಸಂತೋಷದಾಯಕ ವಿಚಾರವಾಗಿದೆ.

ಮೋಸದಾಟ ಎಲ್ಲಾ ಹಂತದ ಕ್ರಿಕೆಟ್‍ನಲ್ಲೂ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಸ್ವಚ್ಛ, ಪಾರದರ್ಶಕ, ಭ್ರಷ್ಟಾಚಾರ ರಹಿತವಾದ ಆಡಳಿತದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ರೋಜರ್ ಬಿನ್ನಿ ನೇತೃತ್ವದ ತಂಡದಲ್ಲಿ ನಿಷ್ಕಳಂಕ ವೃತ್ತಿಪರ ಮಾಜಿ ಆಟಗಾರರು ಹಾಗೂ ಶಾವೀರ್ ತಾರಾಪೂರ್‌ರಂತಹ ಅಂತರ ರಾಷ್ಟ್ರೀಯ ಅಂಪೈರ್ ಇರುವುದು ಪಾರದರ್ಶಕ ಆಡಳಿತದ ದೃಷ್ಟಿಯಿಂದ ಸಮಾಧಾನಕರವಾದ ವಿಷಯವಾಗಿದೆ.
ಹಾಗೆಯೇ ಕೆಎಸ್‍ಸಿಎಯಿಂದ ಬಿಸಿಸಿಐ ಪ್ರತಿನಿಧಿಯಾಗಿ ಬ್ರಿಜೇಶ್ ಪಟೇಲ್ ಅವರನ್ನು ನಾಮನಿರ್ದೇಶನ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಏಕೆಂದರೆ ಭಾರತದ ಖ್ಯಾತನಾಮ ಆಟರಾರರಾಗಿದ್ದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಅಂತಹವರು ಕೆಎಸ್‍ಸಿಎ ಯ ಪದಾಧಿಕಾರಿಗಳಾಗಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಬುಡಮಟ್ಟದಿಂದ ಬದಲಾವಣೆಗಳನ್ನು ಮಾಡುವ ದೃಢ ಸಂಕಲ್ಪವನ್ನು ಮಾಡಿ ಯಾವುದೇ ಲಾಭಿಗೆ ಮಣಿಯದೇ ಅತ್ಯಂತ ನಿಷ್ಠೆಯಿಂದ ಅದರಲ್ಲಿ ಸಫಲತೆಯನ್ನು ಕಂಡರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೇ ಬಹುಪಾಲು ಜಿಲ್ಲಾ ಕೇಂದ್ರಗಳಲ್ಲಿ ಉತ್ಕೃಷ್ಟ ಮಟ್ಟದ ಕ್ರಿಡಾಂಗಣಗಳನ್ನು ನಿರ್ಮಿಸಿ ವಲಯವಾರು ಕ್ರಿಕೆಟ್ ಪಂದ್ಯಾವಳಿಗಳಿಗೆ ಹೆಚ್ಚಿನ ಒತ್ತು ಕೊಟ್ಟು ಅಲ್ಲಿಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟು ಗ್ರಾಮೀಣ ಭಾಗದ ಆಟಗಾರರ ಆಶಾಕಿರಣವಾದರು. ಹಾಗೆಯೇ ಕೆಎಸ್‍ಸಿಎ ಲೀಗ್ ಪಂದ್ಯಾವಳಿಗಳ ಆಯೋಜನೆಯಲ್ಲಿಯೂ ಅನೇಕ ಬದಲಾವಣೆ ತರುವುದರ ಮೂಲಕ ಕೆಎಸ್‍ಸಿಎ ಆಡಳಿತದ ಆಧಾರ ಸ್ಥಂಭಗಳಾದರು. ಇಂತಹ ಪಾರದರ್ಶಕ, ವೃತ್ತಿಪರ ಆಡಳಿತದ ಅವಶ್ಯಕತೆಯಿರುವುದರಿಂದ, ಹಾಗೂ ಮೋಸದಾಟದಂತಹ ಪಿಡುಗನ್ನು ಹಬ್ಬಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿರುವುದಿಂದ ಶುದ್ಧ ಹಸ್ತದ ಅನಿವಾರ್ಯತೆ ಕೆಎಸ್‍ಸಿಎಗೆ ಇದೆ.
‘ಕ್ರಿಕೆಟ್ ಜಂಟಲ್ ಮ್ಯಾನ್ಸ್ ಗೇಮ್’ ಎಂದು ಕರೆಯುತ್ತಾರೆ. ಆದರೆ ಕ್ರಿಕೆಟ್ ಮತ್ತು ಮೋಸದಾಟಕ್ಕೆ ಅವಿನಾಭಾವ ಸಂಬಂಧವಿದೆಯೇನೋ ಎನ್ನುವಷ್ಟರಮಟ್ಟಿಗೆ ಅದು ಒಂದಕ್ಕೊಂದು ಬೆರೆತುಹೋಗಿದೆ. ಕ್ರಿಕೆಟ್‍ನ ಎಲ್ಲಾ ಮಟ್ಟದ ಪಂದ್ಯಾವಳಿಗಳು ಇದಕ್ಕೆ ಹೊರತಲ್ಲ. ಮೊದಮೊದಲು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸೌತ್ ಆಫ್ರಿಕಾ ತಂಡದ ಆಗಿನ ನಾಯಕ ಹ್ಯಾನ್ಸಿ ಕ್ರೋನಿಯೆ ಪ್ರಕರಣದ ಮೂಲಕ ಇದರ ವಾಸನೆ ಬಡಿದ ಮೇಲೆ ಜಗಜ್ಜಾಹಿರಾಯಿತು. ಇಡೀ ಕ್ರಿಕೆಟ್ ಜಗತ್ತು ಮೂಕವಿಸ್ಮಿತವಾಗಿ ಕ್ರಿಕೆಟ್ ಆಟಗಾರರನ್ನು ಖಳನಾಯಕರಂತೆ ಕಾಣಲು ಪ್ರಾರಂಭಿಸಿತು. ಕ್ರಿಕೆಟ್ ಪ್ರಿಯರು ಹುಚ್ಚರಂತೆ ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದವರು ಕ್ರಿಕೆಟ್ ಬಗ್ಗೆ ತಾತ್ಸಾರ ಮನೋಭಾವನೆ ತಾಳಲು ಪ್ರಾರಂಭಿಸಿದರು. ಇನ್ನೇನೂ ಮೋಸದಾಟ ಮರೆತು ಕ್ರಿಕೆಟನ್ನು ಆಸ್ವಾದಿಸಬೇಕು ಎಂದುಕೊಳ್ಳುತ್ತಿದ್ದ ಹಾಗೆಯೇ ಪದೇಪದೇ ಇಂತಹ ಪ್ರಕರಣಗಳು ಆಗಾಗ್ಗೆ ಕೇಳಿಬರುತ್ತಲೇ ಇದ್ದವು. ಅವು ಕೇವಲ ಅಂತರರಾಷ್ಟ್ರೀಯ ಮಟ್ಟಕ್ಕೆ ಮಾತ್ರ ಸೀಮಿತಕೊಳ್ಳದೇ ಐಪಿಎಲ್ ( ಇಂಡಿಯನ್ ಪ್ರೀಮಿಯರ್ ಲೀಗ್) ನಂತಹ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲೂ ಈ ಪೆಡಂಭೂತ ಕಾಡಲು ಶುರು ಮಾಡಿತು. ಆದರೂ ಐಪಿಎಲ್ ಎಡಬಿಡದೇ ಸಾಗಿಕೊಂಡು ಬಂದಿದೆ. ಅದರ ಉದ್ದೇಶ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಕೊಡುವುದೇ ಆಗಿದ್ದರೂ ಹಣದಾಹ ಮೂಲೋದ್ದೇಶಕ್ಕೆ ಧಕ್ಕೆ ಬರುವ ಹಾಗೆ ಮಾಡುತ್ತಿದೆ.
ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಐಪಿಎಲ್, ಆಟಗಾರರಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ತಂದುಕೊಟ್ಟರೆ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದ ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ರಾಷ್ಟ್ರ, ರಾಜ್ಯಮಟ್ಟದಲ್ಲಿ ಹೆಸರು ತಂದುಕೊಡುವ ಪಂದ್ಯಾವಳಿಯಾಗಿದೆ. ಸಾಮಾನ್ಯವಾಗಿ ಕೆಎಸ್‌ಸಿಎ ಮೊದಲ ಡಿವಿಶನ್‍ನಲ್ಲಿ ಆಡುವ ಆಟಗಾರರು ಮತ್ತು ಕೆಲವೇ ಕೆಲವು ಎರಡನೇ ಡಿವಿಶನ್ ಲ್ರಿಕೆಟ್ ಲೀಗ್ ಆಡುವ ಆಟಗಾರರು ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆ. ಇದು ಅವರಿಗೆ ಕ್ರಿಕೆಟ್ ಜಗತ್ತಿನಲ್ಲಿ ಬೆಳೆಯಲು ಕೆಎಸ್‍ಸಿಎ ಒದಗಿಸಿರುವ ಸುವರ್ಣಾವಕಾಶವಾಗಿದೆ. ಅನೇಕ ಕನಸುಗಳನ್ನು ಹೊತ್ತು ಬರುವ ಅದೆಷ್ಟೋ ಆಟಗಾರರ ಭವಿಷ್ಯಕ್ಕೆ ಇದು ದಾರಿದೀಪವಾಗಿದೆ. ಅಷ್ಟೇ ಅಲ್ಲದೇ ಎಲ್ಲಾ ಆಟಗಾರರು ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಹಂಬಲಕ್ಕೆ ಆಸರೆಯಾಗಿ ಇದು ನೇರ ಪ್ರಸಾರವನ್ನು ಕೂಡ ಕಾಣುತ್ತದೆ. ಹಾಗೂ ಒಂದಷ್ಟು ಹಣವನ್ನು ತಂದುಕೊಡುತ್ತದೆ. ಈ ಕಾರಣಕ್ಕಾಗಿಯೇ ಅನೇಕ ಯುವ ಆಟಗಾರರ ಗಮನ ಕೆಪಿಎಲ್ ಸೆಳೆಯಲು ಕಾರಣವಾಗಿದೆ.
ಹೀಗೆ ಕನಸು ಕಂಡು ಬರುವ ಆಟಗಾರರು ಅವಕಾಶಗಳನ್ನು ಪಡೆದುಕೊಂಡು ಯಾರದೋ ಹಣದಾಹಕ್ಕೆ ಬಲಿಯಾಗಿ ಅತಿ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗಬಹುದೆಂಬ ಭ್ರಮೆಯಲ್ಲಿ ಇಂತಹ ಮೋಸದಾಟದ ಬಲೆಗೆ ಬೀಳುತ್ತಿರುವುದು ಕ್ರಿಕೆಟ್ ಜಗತ್ತಿನ ಕಳಂಕವಾಗಿದೆ. 2019-20ನೇ ಸಾಲಿನ ಕೆಪಿಎಲ್ ಕ್ರಿಕೆಟ್ ಟೂರ್ನಿ ಬಹಳ ಸಾಂಗವಾಗಿ ನೆರವೇರಿತು ಎಂದು ಕೆಎಸ್‍ಸಿಎ ನಿಟ್ಟುಸಿರು ಬಿಡುತ್ತಿರಬೇಕಾದರೆಯೇ ಮೋಸದಾಟದ ಸುದ್ದಿ ಹೊರಬಂದಿದೆ.
ಕ್ರಿಕೆಟ್ ಮೋಸದಾಟದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಫಾಕ್ ಮತ್ತು ಡ್ರಮ್ಮರ್ ಭವೇಶ್ ಬಾಫ್ನಾ ಇದರಲ್ಲಿ ಭಾಗಿಯಾಗಿದ್ದಾರೆಂಬ ಸ್ಪೋಟಕ ಮಾಹಿತಿ ಪೋಲಿಸ್ ತನಿಖೆಯಿಂದ ಗೊತ್ತಾಗಿ ಅವರನ್ನು ಬಂಧಿಸಲಾಗಿದೆ. ಅವರನ್ನು ತೀವ್ರವಾದ ವಿಚಾರಣೆಗೆ ಒಳಪಡಿಸಲಾಗಿ ಆರೋಪಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬುಕ್ಕಿಗಳ ಸಂಪರ್ಕ ಹೊಂದಿದ್ದಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ. ಇದು ಕೇವಲ ಇಲ್ಲಿ ಮಾತ್ರವಿದೆಯೆಂದು ಅರ್ಥವಲ್ಲ. ಇಂತಹ ಅನೇಕ ಮಂದಿ ಮೋಸದಾಟದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ನ್ಯಾಯಯುತವಾದ ತನಿಖೆ ನಡೆಸಿದರೆ ಸಿಕ್ಕಿಬೀಳುತ್ತಾರೆ.

ಕೆಎಸ್ಸಿಎ ಇದರ ಆಳ, ಅಗಲ, ಮತ್ತು ಇದರ ಮೂಲವನ್ನು ಅದರ ಪ್ರಗತಿಗೆ ಹುಡುಕಲೇ ಬೇಕಾಗಿದೆ. ಇಲ್ಲದಿದ್ದರೆ ಅದು ಪಡೆದುಕೊಂಡಿರುವ ಹೆಸರನ್ನು ಮಣ್ಣು ಪಾಲು ಮಾಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ನಾನು 1993ರಿಂದ ಒಬ್ಬ ಕ್ರಿಕೆಟ್ ಕ್ಲಬ್‍ನ ಕೆಎಸ್‍ಸಿಎ ಲೀಗ್ ಪಂದ್ಯಾವಳಿಗಳ ಆಟಗಾರನಾಗಿ ಕ್ರಿಕೆಟನ್ನು ತುಂಬ ಹತ್ತಿರದಿಂದ ಬಲ್ಲವನಾಗಿ ಕ್ರಿಕೆಟ್ ಅತ್ಯಂತ ಪ್ರೀತಿಯಿಂದ, ನಿಷ್ಠೆಯಿಂದ ಹೇಗೆ ಆಡಬಹುದು ಎಂಬುದನ್ನು ಬಲ್ಲೆ. ಯಾವುದೇ ಹಣದಾಹಕ್ಕೆ ಬಲಿಯಾಗದೇ ಆಟಕ್ಕೆ ಗೌರವ ಕೊಟ್ಟು ನಿಷ್ಠೆಯಿಂದ ಆಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಯುವ ಆಟಗಾರರು ಇತ್ತ ಕಡೆ ಗಮನಹರಿಸಿ, ತಾತ್ಕಾಲಿಕವಾದ ಇಷ್ಟಗಳನ್ನು ಪೂರೈಸುವ ಆಮಿಷಗಳಿಗೆ ಬಲಿಯಾಗದೇ ಭವಿಷ್ಯವನ್ನು ರೂಪಿಸುವ ಆಟದ ಕಡೆ ಮನಸ್ಸನ್ನು ನೆಡಬೇಕಾಗುತ್ತದೆ. ಹಾಗೆಯೇ ಅಧಿಕಾರದ ಚುಕ್ಕಾಣಿ ಹಿಡಿಯುವವರು ಕೆಎಸ್‌ಸಿಎ ಗೆ ಇರುವ ಮಾನ್ಯತೆ ಮತ್ತು ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಡಬೇಕಾಗುತ್ತದೆ ಆಗ ಮಾತ್ರ ಕ್ರಿಕೆಟ್ ಪ್ರೀಮಿಗಳು ಕ್ರಿಕೆಟ್ ಆಟಗಾರರ ಬಗ್ಗೆ ಅಭಿಮಾನ ಮತ್ತು ವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ.


