Homeಚಳವಳಿಕುಂದಾಪುರ: ದಲಿತರಿಗೆ ಸಾಮಾಜಿಕ ಬಹಿಷ್ಕಾರ - ಕುಡಿಯುವ ನೀರಿಗೂ ಅಡ್ಡಿ

ಕುಂದಾಪುರ: ದಲಿತರಿಗೆ ಸಾಮಾಜಿಕ ಬಹಿಷ್ಕಾರ – ಕುಡಿಯುವ ನೀರಿಗೂ ಅಡ್ಡಿ

ನಮ್ಮ ಸಂವಿಧಾನವು ಅಸ್ಪೃಶ್ಯತೆ ಆಚರಣೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ಆರ್ಟಿಕಲ್ 17ರ ಪ್ರಕಾರ ಯಾವುದೇ ರೂಪದ ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧವಾಗುತ್ತದೆ..

- Advertisement -
- Advertisement -

ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಕರಾವಳಿಯ ಅವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮಡಿ-ಮೈಲಿಗೆ, ಮೂಢ ನಂಬಿಕೆ, ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಠ ಪದ್ದತಿಗಳು ಇಂದಿಗೂ ಒಳಗೊಳಗೆ ನಡೆಯುತ್ತಿವೆ. ಅಜಲು ಪದ್ದತಿಯಂತ ಅಮಾನುಷ ಸಂಪ್ರದಾಯ ಆಚರಿಸುವಂತೆ ದಲಿತರಿಗೆ ಮೇಲು ವರ್ಗದವರು ಬಲವಂತ ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕಂದಾವರ ಗ್ರಾಮದಲ್ಲಿ ಮೊನ್ನೆ ಸವರ್ಣೀಯರು 28 ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ! ಅಷ್ಟೇ ಅಲ್ಲ, ಆ ದಲಿತರ ಕೇರಿಗೆ ಗ್ರಾಮ ಪಂಚಾಯತಿಯಿಂದ ಕುಡಿಯುವ ನೀರು ಸರಬರಾಜು ಆಗದಂತೆ ನೋಡಿಕೊಳ್ಳಲಾಗಿದೆ. ಇದರ ಹಿಂದೆ ರಾಜಕೀಯ, ಜಾತಿ ಅಹಂಕಾರ ಕೆಲಸ ಮಾಡಿದೆ ಮಾತ್ರವಲ್ಲ ಸಂವಿಧಾನದ, ನೆಲದ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಕಂದಾವರ ಗ್ರಾಮ ಪಂಚಾಯತ್‌ನ ಇಬ್ಬರು ಮಹಿಳಾ ಸದಸ್ಯೆಯರು ಮತ್ತು ಒಬ್ಬ ಪರುಷ ಸದಸ್ಯ ದಲಿತರಿಗೆ ಜಾತಿನಿಂದನೆ ಮಾಡಿ ಕಿರುಕುಳ ಕೊಟ್ಟ ಕುರಿತು ಕುಂದಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ರಾಪಂ ಸದಸ್ಯ ರಾಮಚಂದ್ರ ಶೆರೇಗಾರ್, ಅನುಪಮಾ ಶೆಟ್ಟಿ ಮತ್ತು ಜಯಶ್ರೀ ಶೆಟ್ಟಿ ದಲಿತರಿಗೆ ಗ್ರಾಮ ಪಂಚಾಯತ್‌ನಿಂದ ನೀರು ಸಿಗದಂತೆ ಮಾಡಿ ನೀರಿಗಾಗಿ ಪ್ರಯತ್ನಿಸಿದ ದಲಿತರ ಮೇಲೆಡ ದೌರ್ಜನ್ಯ ನಡೆಸಿದ್ದಾರೆಂದು ದೂರಲಾಗಿದೆ. ಈ ಜಾತಿ ಬಲದ ಸದಸ್ಯರ ಚಿತಾವಣೆಯಿಂದ ದಲಿತ ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೂ ಒಳಗಾಗಿವೆ. ಈ ಪಂಚಾಯತ್ ಸದಸ್ಯರ ಮೇಲೀಗ ದಲಿತ ದೌರ್ಜನ್ಯದ ಕೇಸು ಹಾಕಲಾಗಿದೆ.

ಸುಮಾರು 28 ದಲಿತ ಕುಟುಂಬಗಳು ಕಂದಾವರದ ಸರಕಾರಿ ಭೂಮಿ ಸರ್ವೆ ನಂಬರ್ 152/ಪಿ1ರಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು. ಗುಡಿಸಲು ಕಟ್ಟಿಕೊಂಡು ಉಳಿದಿದ್ದ ದಲಿತರು, ಸದರಿ ಜಾಗ ತಮಗೆ ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಕೇಳಿಕೊಳ್ಳುತ್ತ ಬಂದಿದ್ದರು. ಮೂರು ವರ್ಷದ ಹಿಂದೆ ಅಂದಿನ ಜಿಲ್ಲಾಧಿಕಾರಿ ಮೇರಿ ಪ್ರಿಯಾಂಕಾ ಎಂಟು ಎಕರೆ ಜಾಗ ದಲಿತ ಕುಟುಂಬಗಳಿಗೆ ಮಂಜೂರು ಮಾಡಿದ್ದರು. ತಮ್ಮ ಬೇಡಿಕೆ ಈಡೇರಿಸಿದ ಡಿಸಿ ಮೇರಿ ಪ್ರಿಯಾಂಕ ಅವರ ಹೆಸರನ್ನೇ ತಮ್ಮ ಕೇರಿಗೆ ಇಡಲು ದಲಿತರು ಯೋಚಿಸಿದ್ದರು. ಆದರೆ ದಲಿತರ ಆ ಕೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮೂರು ವರ್ಷದಿಂದಲೂ ಇರಲಿಲ್ಲ. ಗ್ರಾಮ ಪಂಚಾಯತಿಗೆ ಪದೇ ಪದೇ ನೀರು ಸರಬರಾಜು ವ್ಯವಸ್ಥೆ ಮಾಡುವಂತೆ ವಿನಂತಿಸಿಕೊಂಡರೂ ಆಡಳಿತಗಾರರು ದಲಿತರ ಸಮಸ್ಯೆ ಪರಿಹಾರಕ್ಕೆ ಮನಸ್ಸು ಮಾಡಲಿಲ್ಲ.

ದಲಿತರು ಕುಡಿಯುವ ನೀರಿಗಾಗಿ ಪ್ರಯತ್ನ ಮಾಡುತ್ತಲೇ ಇದ್ದರು. ಅಂತೂ ಎಪ್ರಿಲ್ 14ರಂದು ಜರುಗಿದ ಕಂದಾವರ ಗ್ರಾಮ ಪಂಚಾಯತ್ ಸಭೆಯಲ್ಲಿ ದಲಿತರ ಕೇರಿಗೆ ನೀರೊದಗಿಸುವ ನಿರ್ಣಯ ಕೈಗಳ್ಳಲಾಗಿತ್ತು. ಆದರೆ ದಲಿತರೆ ಕೊಳವೆ ಮಾರ್ಗ ನಿರ್ಮಿಸಿಕೊಂಡರಷ್ಟೇ ನೀರು ಪೂರೈಸುವ ಷರತ್ತು ವಿಧಿಸಲಾಗಿತ್ತು. ಈ ಷರತ್ತಿನಂತೆ ದಲಿತರಾದ ಸುರೇಶ್ ಎಂಬುವವರು ಪೈಪ್ ಲೈನ್ ತಾವೇ ಹಾಕಿಸಿಕೊಂಡು ಪಂಚಾಯತದ ಆಡಳಿತಗಾರರಿಗೆ ನೀರು ಒದಗಿಸಲು ಮನವಿ ಮಾಡಿದ್ದಾರೆ. ಆದರೆ ಆರೋಪಿ ಸದಸ್ಯರು ನೀರು ಕೊಡಲು ಒಪ್ಪದೆ ದಲಿತರಿಗೆ ಅವಾಚ್ಯವಾಗಿ ಬೈಯುತ್ತ ಜಾತಿ ನಿಂದನೆ ಮಾಡಿದ್ದಾರೆಂದು ದಲಿತ ಮುಂದಾಳುಗಳು ಆರೋಪಿಸಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಲಿಖಿತ ಆದೇಶ ಮಾಡಿದರೂ ಸಹ ಗ್ರಾ.ಪಂ ಆಡಳಿತಗಾರರು ದಲಿತರೆಂಬ ಕಾರಣಕ್ಕೆ ನೀರು ಪೊರೈಕೆ ಮಂದಾಗಲಿಲ್ಲ ಎನ್ನಲಾಗಿದೆ.

ದಲಿತರು ಈಗ ಬೇರೆ ದಾರಿಯಿಲ್ಲದೆ ತಮಗೆ ನೀರು ಕೊಡಲು ಅಡ್ಡಿಪಡಿಸಿದ ಮತ್ತು ಜಾತಿ ನಿಂದನೆಗೈದು ದೌರ್ಜನ್ಯವೆಸಗಿದ ಪಂಚಾಯತ್‌ನ ಮೂರು ಸದಸ್ಯರ ಮೇಲೆ ಕೇಸು ದಾಖಲಿಸಿದ್ದಾರೆ.

ನಮ್ಮ ಸಂವಿಧಾನವು ಅಸ್ಪೃಶ್ಯತೆ ಆಚರಣೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ಆರ್ಟಿಕಲ್ 17ರ ಪ್ರಕಾರ ಯಾವುದೇ ರೂಪದ ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂಬುದನ್ನು ಪತ್ರಿಕೆ ಮತ್ತೊಮ್ಮೆ ನೆನಪಿಸುತ್ತಿದೆ.


ಇದನ್ನೂ ಓದಿ: ಬಹುಜನ ಭಾರತ; ದಲಿತ ದ್ವೇಷವನ್ನು ಪ್ರತಿಭೆಯಿಂದ ಗೆದ್ದವರು ಪಲ್ವಂಕರ್ ಸೋದರರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...