ಡಿ.ಕೆ.ಶಿವಕುಮಾರ್ ರ ಬಂಧನಕ್ಕೆ ಒಕ್ಕಲಿಗರ ಸಂಘಗಳು ಸೇರಿ ಮಾಡಿದ ಪ್ರತಿಭಟನೆಯ ಕುರಿತು ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಿಜೆಪಿ ಸಚಿವ ಸಿ.ಟಿ.ರವಿ ಆಕ್ಷೇಪಣೆ ಎತ್ತಿ ಮಾತನಾಡಿದರು. ಜಾತಿಯ ಆಧಾರದಲ್ಲಿ ಪ್ರತಿಭಟಿಸಬೇಡಿ ಎಂದು ಅವರು ಹೇಳಲಿಲ್ಲ. ಈ ಮಾತನ್ನು ಬೇರೆ ಕೆಲವರು ಹೇಳಿದ್ದಾರೆ. ಆರ್.ಅಶೋಕ್ ಸೇರಿದಂತೆ ಹಲವರು ತಪ್ಪು ಮಾಡಿದ್ದಾರೆ, ಅನುಭವಿಸುತ್ತಾರೆ ಅಷ್ಟೇ ಹೊರತು ಇದಕ್ಕೆ ಜಾತಿಯ ಬಣ್ಣ ಬಳಿಯಬೇಡಿ ಎಂದು ಹೇಳಿದರು. ಆದರೆ, ಸಿ.ಟಿ.ರವಿ ತಾನು ಭಿನ್ನವಾಗಿ ಹೇಳಬೇಕು ಎಂಬ ಕಾರಣಕ್ಕೆ ಆಶ್ಚರ್ಯಕರವಾದ ಮಾತುಗಳನ್ನು ಹೇಳಿದರು.
‘ಒಕ್ಕಲಿಗ ಸಮುದಾಯದಲ್ಲಿ ಶಾಂತವೇರಿ ಗೋಪಾಲಗೌಡ, ಕುವೆಂಪು, ಕೆಂಗಲ್ ಹನುಮಂತಯ್ಯರಂಥವರು ಇದ್ದರು. ಅವರನ್ನು ಬಿಟ್ಟು ಡಿ.ಕೆ.ಶಿವಕುಮಾರ್ ಥರದವರನ್ನು ನಿಮ್ಮ ನಾಯಕರೆಂದು ಆರಿಸಿಕೊಳ್ಳುತ್ತೀರಾ (ಡಿಕೆಶಿ ಹೆಸರು ಹೇಳದಿದ್ದರೂ, ಅದೇ ಉದ್ದೇಶದಿಂದ ಹೇಳಿದ್ದು) ಯೋಚಿಸಿ’ ಎಂಬುದು ರವಿಯವರ ಹೇಳಿಕೆಯಾಗಿತ್ತು.

ವಿಪರ್ಯಾಸವೆಂದರೆ, ಕೆಂಗಲ್ ಹನುಮಂತಯ್ಯನವರು ಸಿ.ಟಿ.ರವಿಯವರ ಪಕ್ಷದ ಹಿಂದಿನ ಅವತಾರವಾಗಿದ್ದ ಜನಸಂಘದಲ್ಲೇನೂ ಇರಲಿಲ್ಲ. ಅವರು ಕಾಂಗ್ರೆಸ್ ನಾಯಕರಾಗಿದ್ದರು. ಸಿ.ಟಿ.ರವಿಯವರ ಸಂಘಟನೆ ಆರೆಸ್ಸೆಸ್ ಬ್ರಿಟಿಷರ ಪರವಾಗಿ ಕೆಲಸ ಮಾಡಿದರೆ, ಹನುಮಂತಯ್ಯನವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು 9 ಸಾರಿ ಜೈಲು ಅನುಭವಿಸಿದ್ದರು.
ಇನ್ನು ಶಾಂತವೇರಿ ಗೋಪಾಲಗೌಡರು. ಅವರು ಕಾಂಗ್ರೆಸ್ ವಿರುದ್ಧ ಇದ್ದರು. ಆದರೆ, ಬಿಜೆಪಿ ಹಾಗೂ ಆರೆಸ್ಸೆಸ್‍ಅನ್ನು ಸಂಪೂರ್ಣವಾಗಿ ವಿರೋಧಿಸುವ ಸಮಾಜವಾದಿ ಆಶಯದ ಪಕ್ಷದಲ್ಲಿದ್ದರು. ಸಿ.ಟಿ.ರವಿಯವರ ಪಕ್ಷ ಅಥವಾ ಅವರ ಪೂರ್ವಸೂರಿಗಳು ಭೂಮಾಲೀಕರ ಪರವಾಗಿದ್ದರೆ, ಗೋಪಾಲಗೌಡರು ಗೇಣೀದಾರರ ಪರವಾಗಿದ್ದರು. ಇನ್ನು ರವಿಯವರೇ ಕೊಂಡಾಡಿದ ಗೌಡರ ಸರಳತೆ, ಅತ್ಯಂತ ಕೆಳಸ್ತರದಲ್ಲಿದ್ದ ಜನರ ಪರವಾಗಿ ದನಿಯೆತ್ತುವುದೂ ಸಹಾ ರವಿಯವರ ಪಕ್ಷದ ಧೋರಣೆಯಲ್ಲ. ಹಾಗೆಯೇ ಗೋಪಾಲಗೌಡರು ಜಾತಿ ರಾಜಕಾರಣ ಮಾಡಿರಲಿಲ್ಲ. ರವಿ ಬಂದಿರುವ ಮಲೆನಾಡಿನಿಂದಲೇ ಬಂದ ಗೋಪಾಲಗೌಡರು ಕಾಂಗ್ರೆಸ್ಸಿಗೆ ಸಲ್ಲುವ ವ್ಯಕ್ತಿಯಾಗಿರಲಿಲ್ಲ; ಬಿಜೆಪಿಗಂತೂ ಹತ್ತಿರವೂ ಬರುತ್ತಿರಲಿಲ್ಲ.

ಸಿ.ಟಿ.ರವಿಯಂತಹ ವ್ಯಕ್ತಿಗಳು ಕುವೆಂಪು ಅವರ ಹೆಸರಂತೂ ಹೇಳುವುದೇ ಅಪಚಾರ. ಜಾತಿ, ಧರ್ಮ, ಜನಾಂಗಗಳ ಕಾರಣಕ್ಕೆ ದೂರವಿಡುವ ಸಂಸ್ಕೃತಿಯ ರವಿ, ವಿಶ್ವಮಾನವ ತತ್ವವನ್ನು ಹೇಳಿದ ಕುವೆಂಪು ಅವರ ಹೆಸರನ್ನು ಹೇಳಿದ್ದು ವಿಪರ್ಯಾಸ. ರವಿ ಪ್ರತಿಪಾದಿಸುವ ಹಿಂದಿ, ಹಿಂದೂ ಮತ್ತು ಹಿಂದೂರಾಷ್ಟ್ರದ ಕಟುವಿರೋಧಿಗಳಾಗಿದ್ದ ಕುವೆಂಪು ಆರೆಸ್ಸೆಸ್‍ಅನ್ನು ವಿರೋಧಿಸುತ್ತಿದ್ದರಷ್ಟೇ ಅಲ್ಲ, ತಮ್ಮನ್ನು ಒಕ್ಕಲಿಗರೆಂದು ಕರೆಯುವುದನ್ನೂ ಇಷ್ಟಪಡುತ್ತಿರಲಿಲ್ಲ. ಅವರು ಬದುಕಿರುವಷ್ಟು ಕಾಲ ಆದಿಚುಂಚನಗಿರಿ ಮಠಕ್ಕೆ ಭೇಟಿಯೂ ಕೊಡಲಿಲ್ಲ. ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸಿದರು. ಸ್ವತಃ ಅವರ ಮಗನ ಅಂತರ್ಜಾತಿ ಮದುವೆಗೆ ಬೆಂಬಲವಾಗಿ ನಿಂತರು.
ಈಗ ಸಿ.ಟಿ.ರವಿಯ ಮಾತನ್ನೇ ಪರಿಗಣಿಸಿ ಕುವೆಂಪು, ಶಾಂತವೇರಿ ಗೋಪಾಲಗೌಡರು, ಕೆಂಗಲ್ ಹನುಮಂತಯ್ಯರವರನ್ನು ಒಕ್ಕಲಿಗ ಸಮುದಾಯ ಆದರ್ಶವಾಗಿ ಪರಿಗಣಿಸಿದರೆ, ಬಿಜೆಪಿ ಒಕ್ಕಲಿಗ ಸಮುದಾಯದ ಮೊದಲ ಶತ್ರುವಾಗಿಬಿಡುತ್ತದೆ. ಜೊತೆಗೆ ಆರೆಸ್ಸೆಸ್‍ನ ಸಿದ್ಧಾಂತದ ಕಡುವಿರೋಧಿಗಳಾಗಿ ಬದಲಾಗಲೇಬೇಕಾಗುತ್ತದೆ. ಹೀಗಾಗಿಯೇ ಉಳಿದವರು ಅಂತಹ ದೊಡ್ಡವರ ಹೆಸರನ್ನು ಹೇಳುವುದಕ್ಕೆ ಹೆದರುತ್ತಾರೆ. ಒಕ್ಕಲಿಗರ ಸಂಘದ ಬೃಹತ್ ಕಾರ್ಯಕ್ರಮವೊಂದರಲ್ಲಿ ಕುವೆಂಪು ಅವರ ಫೋಟೋ ಹಾಕಿಕೊಂಡಿದ್ದಕ್ಕೆ ದೊಡ್ಡ ವಿರೋಧ ಕೇಳಿ ಬಂದಿತ್ತು.
ದುರಂತವೆಂದರೆ, ಸಿ.ಟಿ.ರವಿ ‘ಇವರು ನಿಮ್ಮ ಆದರ್ಶ’ ಎಂದು ತನ್ನ ಪರಿವಾರದ ಹೆಸರುಗಳನ್ನು ಹೇಳುವುದು ಸಾಧ್ಯವಿಲ್ಲ. ಹಾಗಾಗಿ ಈ ಸದ್ಯ ಡಿ.ಕೆ.ಶಿವಕುಮಾರ್‍ರ ಮೇಲೆ ಕೇಂದ್ರ ಸರ್ಕಾರ ಮುಗಿಬಿದ್ದಿರುವ ಸಂದರ್ಭದಲ್ಲಿ ಒಕ್ಕಲಿಗರು ಬಿಜೆಪಿಯ ವಿರುದ್ಧ ತಿರುಗಿ ಬೀಳುತ್ತಿರುವುದನ್ನು ರವಿ ಗ್ರಹಿಸಿದ್ದಾರೆ. ಜಾತಿಯಾಚೆ ಯೋಚಿಸಿ ಎಂದು ‘ಸಂಘಪರಿವಾರದ ಮೂಲದವರಲ್ಲದ’ ಅಶ್ವತ್ಥನಾರಾಯಣ ಹೇಳುತ್ತಿದ್ದರೆ, ಜಾತಿ-ಧರ್ಮಗಳನ್ನು ಬಳಸಿಯೇ ರಾಜಕಾರಣ ಮಾಡುವ ಅಭ್ಯಾಸದ ರವಿಗೆ ಒಕ್ಕಲಿಗ ಹೆಸರುಗಳನ್ನೇ ಮುಂದೆ ಮಾಡುವ ಆಲೋಚನೆ ಬಂದಿದೆ. ಆದರೆ, ಅದಕ್ಕೆ ಅವರು ಆರಿಸಿಕೊಂಡಿರುವ ಹೆಸರುಗಳು ಮಾತ್ರ ಅವರ ವಿರೋಧಿ ಪಾಳೆಯದ್ದು ಎಂಬುದನ್ನು ನೆನಪಿಸುವ ಅಗತ್ಯವಿದೆ.


