ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮತ್ತಿತರರ ವಿರುದ್ಧದ ಸರ್ಕಾರಿ ಜಮೀನು ಕಬಳಿಕೆ ಆರೋಪ ಪ್ರಕರಣದಲ್ಲಿ ಏನೂ ಕ್ರಮ ಜರುಗಿಸದ ಅಧಿಕಾರಿಗಳನ್ನು ಹೈಕೋರ್ಟ್ ಬುಧವಾರ (ಜ.29) ತೀವ್ರ ತರಾಟೆಗೆ ತೆಗೆದುಕೊಂಡಿದೆ.
ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡಲು ಹೈಕೋರ್ಟ್ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್.ಆರ್ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಟಿ ವೆಂಕಟೇಶ್ ನಾಯ್ಕ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿದೆ.
“ಪ್ರತಿವಾದಿಗಳು ಪ್ರಭಾವಿಗಳು (ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ ತಮ್ಮಣ್ಣ ಮುಂತಾದವರು) ಎಂದು ನೀವು ಐದು ವರ್ಷ ಏನೂ ಮಾಡಿಲ್ಲ ತಾನೆ? ನಿಮಗೆ ಇನ್ನೆರಡು ವಾರ ಸಮಯ ಕೊಡುತ್ತೇನೆ. ನೀವು ಅಸಮರ್ಥರು ಎಂದಾದರೆ ನಿಮ್ಮನ್ನು ಎಲ್ಲಿಗೆ ಕಳಿಸಬೇಕೊ ಅಲ್ಲಿಗೆ ಕಳಿಸುತ್ತೇನೆ. ಹದಿನೈದು ದಿನ ಜೈಲಿನಲ್ಲಿ ಇದ್ದು ಬಂದರೆ ಸರಿಹೋಗ್ತೀರಿ” ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಹೈಕೋರ್ಟ್ ನ್ಯಾಯಾಧೀಶರು ಮೌಖಿಕವಾಗಿ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಜನವರಿ 7ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ನ್ಯಾಯಾಲಯದ ಮುಂದೆ ಬರಬೇಕು ಎಂದು ಹೈಕೋರ್ಟ್ ಆದೇಶಿಸಿದ್ದ ಹಿನ್ನೆಲೆ, ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಪೀಠದ ಮುಂದೆ ಹಾಜರಾಗಿ, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪೀಠಕ್ಕೆ ವಿವರಿಸಲು ಮುಂದಾಗಿದ್ದರು.
ಈ ವೇಳೆ ನ್ಯಾಯಾಧೀಶರು ಕಠಾರಿಯಾ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಹಂತದಲ್ಲಿ “ನಿಮ್ಮ ವಿರುದ್ದ ಈಗಲೇ ನ್ಯಾಯಾಂಗ ನಿಂದನೆಯ ಆರೋಪ ನಿಗದಿಗೊಳಿಸುವ ಪ್ರಕ್ರಿಯೆ ಆರಂಭಿಸಲಾಗುವುದು”ಎಂದು ಕಿಡಿಕಾರಿದ್ದಾರೆ. “ನೀವೆಲ್ಲಾ ಕೋರ್ಟ್ ಆದೇಶಗಳನ್ನು ಪಾಲನೆ ಮಾಡುವವರೆಗೆ ನಿಮ್ಮ ಸಂಬಳ ಕಟ್ ಮಾಡಿದರೆ ಗೊತ್ತಾಗುತ್ತದೆ” ಎಂದು ಹರಿಹಾಯ್ದಿದ್ದಾರೆ.
ಕೊನೆಗೆ, “ಇನ್ನೆರಡು ವಾರಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರೊಳಗೆ ಆದೇಶ ಪಾಲಿಸಿದರೆ ಸರಿ. ಇಲ್ಲಾ ಅಂದರೆ ಎಲ್ಲ ಪ್ರತಿವಾದಿಗಳನ್ನೂ ಬೆಂಗಾವಲಿನಲ್ಲಿ ಕರೆಯಿಸಿಬಿಡುತ್ತೇನೆ. ಅಧಿಕಾರಿಗಳನ್ನು ಎಲ್ಲಿಗೆ ಕಳುಹಿಸಬೇಕೊ ಅಲ್ಲಿಗೆ ಕಳುಹಿಸುತ್ತೇನೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಲ್ಲದೆ, “ಯಾವುದಾದರೂ ವಿಷಯಕ್ಕೆ ಎಸ್ಐಟಿ ರಚಿಸುವುದು ಸರ್ಕಾರಕ್ಕೆ ರೂಢಿಯಾಗಿಬಿಟ್ಟಿದೆ” ಎಂದು ಚಾಟಿ ಬೀಸಿದ್ದಾರೆ.
ಅಂತಿಮವಾಗಿ, ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 21ಕ್ಕೆ ಮುಂದೂಡಿದೆ ಎಂದು ವರದಿಯಾಗಿದೆ.
ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ


