(ಲಂಕೇಶ್ ಪತ್ರಿಕೆಗೆ 20 ವರ್ಷ ತುಂಬಿದಾಗ ನಡೆದ ವಿಚಾರ ಸಂಕಿರಣದಲ್ಲಿ ಲೇಖಕರು ಮಂಡಿಸಿದ ಪ್ರಬಂಧ ಇದು)
ಕನ್ನಡ ಪತ್ರಿಕೋದ್ಯಮಕ್ಕೆ ಸುಮಾರು 150 ವರ್ಷಗಳ ಇತಿಹಾಸವಿದೆ. ಸಾವಿರಾರು ಸಣ್ಣ ಪುಟ್ಟ ದೊಡ್ಡ ಪತ್ರಿಕೆಗಳು ಸಂದರ್ಭಾನುಸಾರ ಹುಟ್ಟಿಸತ್ತಿವೆ. ಉಳಿದಿರುವ ಕೆಲವು ಅನೀಮಿಕ್ ಆಗಿ ನರಳುತ್ತಿವೆ. ಆದರೆ ಇಪ್ಪತ್ತು ವಸಂತಗಳನ್ನು ದಾಟಿ ಮುಂದಡಿಯಿಡುತ್ತಿರುವ ’ಲಂಕೇಶ ಪತ್ರಿಕೆ’ ಈ ದೀರ್ಘ ಇತಿಹಾಸದಲ್ಲಿ ಏಕಪ್ರಕಾರವಾಗಿ ಮಿಂಚುತ್ತಿರುವ ನಕ್ಷತ್ರ.
ಸ್ವಾತಂತ್ರ್ಯಪೂರ್ವ ಪತ್ರಿಕೆಗಳ ಜವಾಬ್ದಾರಿ ಹಾಗೂ ಪಾತ್ರಗಳನ್ನು ಹೋಲಿಸಿ ನೋಡಿದಾಗ ಸ್ವಾತಂತ್ರ್ಯೋತ್ತರ ಪತ್ರಿಕೆಗಳ ಪಾತ್ರ-ಜವಾಬ್ದಾರಿಗಳು ಹಲವಾರು ವಿಷಯಗಳಲ್ಲಿ ಭಿನ್ನ. ಪರಕೀಯರ ದಾಸ್ಯದಿಂದ ಬಿಡುಗಡೆ ಪಡೆಯಬೇಕೆಂಬುದು ಸ್ವಾತಂತ್ರ್ಯಪೂರ್ವ ಪತ್ರಿಕೆಗಳ ಮುಖ್ಯ ಉದ್ದೇಶವಾಗಿತ್ತು. ಅದನ್ನು ಅವು ಹಾಗೂ ಹೀಗೂ ಈಡೇರಿಸಿಕೊಂಡವು. ಸ್ವಾತಂತ್ರ್ಯ ಬರುವವರೆಗೂ ಆಂತರಿಕ ವೈರುಧ್ಯಗಳು, ಕಲಹಗಳು, ಶೋಷಣೆ, ಇವುಗಳನ್ನು ಒತ್ತಟ್ಟಿಗಿಡಬೇಕೆಂಬ ಅಲಿಖಿತ ಒಪ್ಪಂದ ಆಗಿನ ರಾಷ್ಟ್ರೀಯ ನಾಯಕರು ಮತ್ತು ಪತ್ರಕರ್ತರ ನಡುವೆ ಇತ್ತು. ಅದನ್ನು ಬಹುತೇಕ ಮುಖ್ಯ ಪತ್ರಿಕೆಗಳು ಪಾಲಿಸಿದವು. ನಮ್ಮ ನಮ್ಮಲ್ಲಿನ ಜಗಳವನ್ನು ಬಗೆಹರಿಸಿಕೊಳ್ಳಬೇಕಲ್ಲದೆ ಮೂರನೆಯವರೂ, ಪರಕೀಯರೂ ಆದ ಬ್ರಿಟಿಷರ ಮಧ್ಯಸ್ಥಿಕೆಯಲ್ಲಿ ಬೇಡ, ಅದು ಸಾಧ್ಯವೂ ಇಲ್ಲವೆಂದು ಗಾಂಧೀಜಿ, ನೆಹರೂ ಮೊದಲಾದ ನಾಯಕರಿಗೆ ಮನವರಿಕೆಯಾದ್ದರ ಫಲ ಇದು.
ಆದರೆ ಸ್ವಾತಂತ್ರ್ಯಾನಂತರ ಏನಾಯಿತು? ಅಲ್ಲಿಯವರೆಗೆ ದೇಶೀ ಪಟ್ಟಭದ್ರರು, ಶೋಷಕರಿಂದಲೂ ಸ್ವಾತಂತ್ರ್ಯಪಡೆಯಲು ಕಾದು ನಿಂತಿದ್ದವರ ಆಸೆಗಳಿಗೆ ಸ್ವತಂತ್ರ ಭಾರತದ ಸರ್ಕಾರ, ಪತ್ರಿಕೆಗಳು ಸ್ಪಂದಿಸಿದವೇ? ತಮ್ಮ ಹಿಂದಿನ ಮಾತನ್ನು ಉಳಿಸಿಕೊಂಡವೇ? ಒಂದೇ ಮಾತಿನಲ್ಲಿ ಹೇಳಬೇಕೆಂದರೆ ’ಇಲ್ಲ’. ಇಷ್ಟಕ್ಕೂ ಅಧಿಕಾರ ಹಸ್ತಾಂತರವಾದದ್ದು ಭಾರತೀಯ ಫ್ಯೂಡಲ್ ಶಕ್ತಿಗಳಿಗೆ. ಪತ್ರಿಕೋದ್ಯಮ ಕೇಂದ್ರೀಕೃತವಾದದ್ದೂ ಹೊಸ ಬಂಡವಾಳಶಾಹಿಗಳ ಕೈಯಲ್ಲಿ.
ಅಧಿಕಾರದಲ್ಲಿದ್ದವರು ಹಲವಾರು ಸಬೂಬುಗಳನ್ನು ಹೇಳಿ ಈ ನಿರ್ಭಾಗ್ಯರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳದೆ ಮುಂದೂಡುತ್ತಾ ಬಂದರು. ಈ ಬಹುಸಂಖ್ಯಾತರ ಸಹನೆ ಮೀರಿದಾಗ ಅಸಂಘಟಿತ, ಸಂಘಟಿತ ಚಳವಳಿಗಳು ಪ್ರಾರಂಭವಾದವು. ಅದು 1970ರ ದಶಕ. ಈ ದಶಕದಲ್ಲಿ ನನ್ನಂಥ ಹಲವಾರು ಜನ ಸಮಾಜವಾದ, ಕಮ್ಯುನಿಸಂಗಳಿಂದ ಆಕರ್ಷಿತರಾದೆವು. ಶ್ರೀಮತಿ ಇಂದಿರಾಗಾಂಧಿಯವರು ಸಮಾಜವಾದಿ ಲೇಪನದ ಮಾತುಗಳನ್ನಾಡತೊಡಗಿದಾಗ ಬಹುತೇಕ ಸಮಾಜವಾದಿಗಳು ಕ್ಲೀನ್‌ಬೌಲ್ಡ್ ಆಗಿ ’ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇವೆಂದು, ಕಾಂಗ್ರೆಸ್ ಸೇರಿದರೆ, ಕಮ್ಯುನಿಸ್ಟರು ಕಾಂಗ್ರೆಸ್ಸಿಗೆ ’ರಚನಾತ್ಮಕ ಬೆಂಬಲ’ ಕೊಡಲು ಮುಂದಾದರು. ಅಂದರೆ ಯಾರು ದೀನ-ದಲಿತರನ್ನು ಸಂಘಟಿಸಿ ಹೋರಾಟ ಮಾಡುತ್ತಿದ್ದರೋ ಅವರೇ ಒಂದು ರೀತಿ ವ್ಯವಸ್ಥೆಯ ಬೆಂಬಲಿಗರಾದರು. ೧೯೭೪ರ ವೇಳೆಗೆ ದೇಶದಲ್ಲೆಡೆ ಭ್ರಷ್ಟಾಚಾರ ತಾಂಡವವಾಡತೊಡಗಿದಾಗ ಜೆ.ಪಿ.ಚಳವಳಿ ಪ್ರಾರಂಭವಾದದ್ದು, ಜನತಾಂತ್ರಿಕ ಶಕ್ತಿಗಳ ವಿರುದ್ಧ ತುರ್ತುಪರಿಸ್ಥಿತಿ ಘೋಷಣೆಯಾದದ್ದು ಈಗ ಇತಿಹಾಸ.

ಕರ್ನಾಟಕ ಈ ಇತಿಹಾಸದ ಒಂದು ಭಾಗ. ಆದರೆ ಕರ್ನಾಟಕದ ವೈಶಿಷ್ಟ್ಯವೂ ಒಂದಿದೆ. ಇಲ್ಲಿ ಪ್ರಗತಿಪರ ಜನತಾಂತ್ರಿಕ ಶಕ್ತಿಗಳು ಯಾವಾಗಲೂ ಒಂದು ಹೆಜ್ಜೆ ಮುಂದೆ. ಅದಕ್ಕೆ ಬ್ರಾಹ್ಮಣೇತರ ಹಿಂದುಳಿದ ವರ್ಗಗಳ ಚಳವಳಿ, ದಲಿತ ಚಳವಳಿ, ಸಮಾಜವಾದಿ ರೈತ ಚಳವಳಿ ಕೆಲವು ಉದಾಹರಣೆಗಳು. ಪುರೋಹಿತಶಾಹಿಯನ್ನು, ಊಳಿಗಮಾನ್ಯ ಶಕ್ತಿಗಳನ್ನು ಪ್ರತಿಭಟಿಸಿದ ಇತಿಹಾಸ ಕರ್ನಾಟಕಕ್ಕಿತ್ತು. ಆದರೆ ಈ ಚಳವಳಿಗಳ ಸಾಂಸ್ಕೃತಿಕ ಆಯಾಮ ದುರ್ಬಲವಾಗಿತ್ತು. ಅದು ನಿಚ್ಚಳವಾದದ್ದು ಬೂಸಾ ಚಳವಳಿಯ ಸಂದರ್ಭದಲ್ಲಿ. ಬರಹಗಾರರ ಒಕ್ಕೂಟ ಬೂಸಾ ಚಳವಳಿಯ ನೇರ ಪ್ರತಿಫಲ. 1974ರಲ್ಲಿ ಸಾಂಸ್ಕೃತಿಕ ಏಕಸ್ವಾಮ್ಯದ ವಿರುದ್ಧ ಪ್ರತಿಭಟಿಸಿ ಒಕ್ಕೂಟ ಪ್ರಾರಂಭವಾಯ್ತು. ಕುವೆಂಪು ’ಒಕ್ಕೂಟ’ದ ಉದ್ಘಾಟನಾ ಭಾಷಣದಲ್ಲಿ ಆಡಿದ ಮಾತುಗಳು ಗಮನಾರ್ಹ.
’ಐದು ಸಾವಿರ ವರ್ಷಗಳಿಂದ ನಡೆದು ಬಂದಿರುವ ಒಂದೇ ವರ್ಗದ ಬೌದ್ಧಿಕ ದಬ್ಬಾಳಿಕೆಯನ್ನು ಪ್ರತಿಭಟಿಸಿ ಸಾಹಿತ್ಯ, ಕಲೆ, ವೃತ್ತಪತ್ರಿಕೆ, ಸಂಸ್ಕೃತಿ, ಸಂವಹನ ಮಾಧ್ಯಮಗಳು, ರೇಡಿಯೋ, ಸಿನಿಮಾ, ಎಲ್ಲಾ ಜನಸಾಮಾನ್ಯರಿಗೆ ತಲುಪಬೇಕು. ಇದು ಬೌದ್ಧಿಕ ವಿಕೇಂದ್ರೀಕರಣವಾಗಬೇಕೆಂದು ಪಣ ತೊಟ್ಟ ದಿನ……’ ಇದು ಕುವೆಂಪು ಅವರ ಆಶಯ. ಈ ವಿವರಗಳನ್ನಿಲ್ಲಿ ಕೊಡಲು ಕಾರಣವಿದೆ. ಈ ವಿವರಗಳು ಪ್ರಸ್ತುತ ಪ್ರಬಂಧಕ್ಕೆ ಒಂದು ಚಾರಿತ್ರಿಕ ಹಿನ್ನೆಲೆಯನ್ನು ಒದಗಿಸುತ್ತವೆ. ಆದರೆ ’ಒಕ್ಕೂಟ’ ಒಕ್ಕೂಟವಾಗಿ ಕೆಲಸ ಮಾಡಲಿಲ್ಲ. 1977ರಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಬಂದ ’ಜನತಾ ಸರ್ಕಾರ ಎಲ್ಲರನ್ನೂ ಭ್ರಮನಿರಸನಗೊಳಿಸಿತು.

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು, ಕರ್ನಾಟಕದಲ್ಲಿ ಗುಂಡೂರಾಯರ ದರ್ಬಾರು ಆರಂಭವಾಯಿತು. ಜನಸಮುದಾಯದ ಸಮಸ್ಯೆಗಳು ಹೆಚ್ಚುತ್ತಲೇ ಹೋದವು. ರೈತ ಚಳವಳಿ, ದಲಿತ ಚಳವಳಿ, ಕನ್ನಡ ಚಳವಳಿ, ಕಾರ್ಮಿಕ ಚಳವಳಿಗಳು ತೀವ್ರವಾಗುತ್ತಾ ಹೋದವು. ರಾಜಕೀಯನಾಯಕರಂತೂ ಗರಬಡಿದವರಂತೆ ಸುಮ್ಮನಿದ್ದರು. ಸ್ಥಾಪಿತ ಹಿತಾಸಕ್ತಿಗಳ ಹಿಡಿತದಲ್ಲಿದ್ದ ಪತ್ರಿಕಾ ಮಾಧ್ಯಮ ಎಂದಿನಂತೆ ನಿರ್ಲಿಪ್ತವಾಗಿತ್ತು. ಒಂದೊಂದು ಸಂದರ್ಭವೂ ತನಗೆ ತಕ್ಕ ನಾಯಕನನ್ನು ಹುಟ್ಟುಹಾಕುತ್ತದೆ ಅನ್ನುವ ಮಾತಿದೆ. ಆದರೆ ನಾಯಕನಾದವನು ಸಂದರ್ಭವನ್ನು ಬಳಸಿಕೊಳ್ಳುತ್ತಾನೆನ್ನುವುದೂ ನಿಜವೇ.
ಸಂದರ್ಭ ಲಂಕೇಶರನ್ನು ಸೃಷ್ಟಿಸಿತೋ, ಲಂಕೇಶರು ಸಂದರ್ಭವನ್ನು ಉಪಯೋಗಿಸಿಕೊಂಡರೋ, ಅದು ಒತ್ತಟ್ಟಿಗಿರಲಿ, ಆದರೆ ಸಾಹಿತ್ಯ, ಅಧ್ಯಾಪನ, ಸಿನಿಮಾ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಕೆಲಸ ಮಾಡಿದ್ದ ಲಂಕೇಶರು ಈ ಅದ್ಭುತವನ್ನು ಸೃಷ್ಟಿ ಮಾಡಿದರು. ಅದೇ ’ಲಂಕೇಶ್ ಪತ್ರಿಕೆ’. ಒಕ್ಕೂಟದ ಪ್ರಣಾಳಿಕೆಯನ್ನು ತಮ್ಮದೇ ರೀತಿಯಲ್ಲಿ ಅನುಷ್ಠಾನಗೊಳಿಸಲು ಪತ್ರಿಕ ಪ್ರಯತ್ನಿಸಿದೆ ಎಂದು ನನ್ನ ಭಾವನೆ. ಪತ್ರಿಕೆಯ ಮೂಲಕ ಬೆಳಕಿಗೆ ಬಂದ ಬರಹಗಾರರು ಅಸಂಖ್ಯ.
ನಾನು ವಿದ್ಯಾರ್ಥಿಯಾಗಿದ್ದಾಗ ಗೆಳೆಯರ ಜೊತ ಖಾಸಗಿಯಾಗಿ ಮಾತನಾಡುತ್ತಿದ್ದಾಗ ಬಳಸುತ್ತಿದ್ದ ’ಶಿಷ್ಟವಲ್ಲವೆಂದುಕೊಂಡಿದ್ದ ಅನೇಕ ನುಡಿಕಟ್ಟುಗಳು ಮೊದಲ ಬಾರಿಗೆ ಅಚ್ಚಿನಲ್ಲಿ ಬಳಕೆಯಾಗಿ ನನಗೆ ಕಚಗುಳಿಯಿಟ್ಟದ್ದು ಕೂಡ ನಿಜ. ಖೂಳರು, ಪಿಂಪ್‌ಗಳು, ತಲೆಹಿಡುಕರು, ತಗಡು, ಹುಳಾಪಾರ್ಟಿ ಒದ್ದೋಡಿಸಿ, ಮುಂತಾದ ಪದಗಳವು. ಇತರ ಪತ್ರಿಕೆಗಳ ವರದಿಗಳಿಗಿಂತ ತೀರಾ ಭಿನ್ನವಾದ, ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಬಲ್ಲ ವಿಶ್ಲೇಷಣೆಗಳು ಅಲ್ಲಿ ಅಚ್ಚಾಗುತ್ತಿದ್ದವು. ಪತ್ರಿಕೆಯ ’ಟಿಪ್ಪಣಿ’ಗಳಂತೂ ಗಂಭೀರ ಚಿಂತನೆಗೆ ಹಚ್ಚುತ್ತಿದ್ದವು. ಈ ಹಂತದಲ್ಲಿ ಒಂದು ಮಾತು ನೆನಪಿಗೆ ಬರುತ್ತಿದೆ. ’ಪತ್ರಿಕೆ ಬಹಳ ಕಾಲ ನಡೆಯಲಾರದು. ಲಂಕೇಶರ ಸ್ಟಾಕು ಮುಗಿದರೆ ಅದು ಫನಾ’ – ನಮ್ಮ ಖ್ಯಾತ ವಿಮರ್ಶಕ -ಬುದ್ಧಿಜೀವಿಯೊಬ್ಬರು ಹೇಳಿದ ಮಾತಿದು.
ಪತ್ರಿಕೆ ಹುಟ್ಟಿದ ಸಂದರ್ಭವನ್ನು ವಿವರಿಸಿಯಾಗಿದೆ. ಇನ್ನು ಅದು ನಿರ್ವಹಿಸಿರುವ ಪಾತ್ರದ ಬಗ್ಗೆ. ನಮ್ಮನ್ನು ಕಾಡಿರುವ ರಾಜ್ಯ ಮತ್ತು ರಾಷ್ಟ್ರದ ಸಮಸ್ಯೆಗಳು ಹಲವಾರು. ಮುಖ್ಯವಾದವೆಂದರೆ ವಿದ್ಯೆ, ನಿರುದ್ಯೋಗದ ಫಲವಾದ ಬಡತನ, ಜಾತೀಯತೆ, ಭ್ರಷ್ಟಾಚಾರ ಮತ್ತು ಫ್ಯಾಸಿಸ್ಟ್ ಧೋರಣೆ. ಇವು ಉಲ್ಬಣಿಸಲು ಕಾರಣವಾಗಿರುವುದು: ಜಡತೆ ಮತ್ತು ನಿಷ್ಕ್ರಿಯತೆ. ಪತ್ರಿಕೆ ಈ ಒಂದೊಂದು ಸಮಸ್ಯೆಯ ಬಗ್ಗೆಯೂ ದೃಢ ನಿಲುವು ತಾಳಿತ್ತು. ಲಂಕೇಶರಂತೂ ಪತ್ರಿಕೆಯ ಪ್ರಾರಂಭಕ್ಕೆ ಮುನ್ನವೂ ಈ ವಿಷಯಗಳ ಬಗ್ಗೆ ಸ್ಪಷ್ಟವಾಗಿಯೇ ಇದ್ದರು. ಅಷ್ಟೇ ಅಲ್ಲ, ಅವರು ವೈಯಕ್ತಿಕವಾಗಿ, ಸಂಘಟಿತವಾಗಿ ತೀವ್ರವಾಗಿ ಪ್ರತಿಭಟಿಸುತ್ತಿದ್ದರು. ನನಗೆ ನೆನಪಾಗುತ್ತಿರುವುದು, ಅವರು ಚಿಕ್ಕಮಗಳೂರು ಉಪಚುನಾವಣೆ ಸಂದರ್ಭದಲ್ಲಿ ತಮಗೆ ಜಾರಿ ಮಾಡಿದ ಶಿಸ್ತು ಉಲ್ಲಂಘನೆ ನೋಟಿಸನ್ನು ಪ್ರತಿಭಟಿಸಿ ಸರ್ಕಾರಕ್ಕೆ ಬರೆದ ಪತ್ರ ಮತ್ತು ಅದಕ್ಕೂ ಮುಂಚೆ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಮೌನ ಮರವಣಿಗೆ ಮಾಡಿಸಿದ ಕ್ರಮ.

1980ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿ ಬಂದಿತ್ತು. ಇಂದಿರಾಜಿ ಪ್ರಧಾನಿ, ಗುಂಡೂರಾವ್ ಮುಖ್ಯಮಂತ್ರಿ. ಕರ್ನಾಟಕ ಸರ್ಕಾರವಂತೂ ಜನತಾಂತ್ರಿಕ ಚಳವಳಿಗಳನ್ನು ಹತ್ತಿಕ್ಕುತ್ತಿದ್ದ ಸಂದರ್ಭ. ಹಲವಾರು ಗೋಲಿಬಾರ್‌ಗಳೂ ಆಗಿ ಜನರನ್ನು ಆಹುತಿ ತೆಗೆದುಕೊಂಡವು. ಆದರೆ ನಮ್ಮ ಮತ್ತು ರಾಜಕಾರಣಿಗಳ ನಿಷ್ಕ್ರಿಯತೆ ಎದ್ದು ಕಾಣುವಂತಿತ್ತು. ಆಗ ಪತ್ರಿಕೆ ’ಈ ಗರಕ್ಕೆ ಯಾವ ಮದ್ದು?’ ’ಈ ಸರ್ಕಾರವನ್ನು ಒದ್ದೋಡಿಸಿ’ ಎಂಬ ಶೀರ್ಷಿಕೆಗಳಡಿಯಲ್ಲಿ ವಿವರಿಸಿ ಜನರನ್ನು ಹುರಿದುಂಬಿಸಿತು. ಗೋಕಾಕ್ ಚಳವಳಿಯನ್ನು ಪೂರ್ಣ ಬೆಂಬಲಿಸಿದ ಪತ್ರಿಕೆ, ಅದು ದಾರಿ ತಪ್ಪುತ್ತಿದೆ ಎನ್ನಿಸಿದಾಗ ಡಾ.ರಾಜ್ ಕುಮಾರರಿಗೆ ಬರೆದ ಪತ್ರ ನಿಜಕ್ಕೂ ಚರಿತ್ರಾರ್ಹ. ಆ ಛಾತಿ, ನೈತಿಕ ಸೈರ್ಯ ಯಾರಿಗೂ, ಯಾವ ಪತ್ರಿಕೆಗೂ ಇರಲಿಲ್ಲ.
ಗೋಯೆಂಕಾ ಕುಟುಂಬ ನಿಯಂತ್ರಿತ ಪತ್ರಿಕೆಗಳು ನೆಹರೂ ಕುಟುಂಬದ ವಿರೋಧಿಗಳು. ಬಲಪಂಥೀಯರ ಬೆಂಬಲಿಗರು. ಇತರ ಅನೇಕ ಪತ್ರಿಕೆಗಳಿಗೆ ಸಾಮಾನ್ಯವಾಗಿ ಸ್ಪಷ್ಟ ನಿಲುವೇ ಇದ್ದಂತಿಲ್ಲ. ಇದಕ್ಕೆ ಕಾರಣ ಬಹುತೇಕ ಪತ್ರಿಕೆಗಳಿಗೆ, ಸರಕಾರದ ಜಾಹಿರಾತು ಮತ್ತಿತರ ರಿಯಾಯಿತಿ ಸವಲತ್ತುಗಳನ್ನು ಕಳೆದುಕೊಂಡು, ಅದರ ಕೆಂಗಣ್ಣಿಗೆ ತುತ್ತಾಗಬೇಕಾಗುತ್ತದೆಂಬ ಭಯ. ಆದರೆ ’ಪತ್ರಿಕೆ’ಗೆ ಜಾಹಿರಾತುದಾರರ ಮುಲಾಜಿಲ್ಲ. ’ಲಂಕೇಶ್ ಪತ್ರಿಕೆ’ ಪ್ರಮಾಣದ ಯಾವುದೇ ಪತ್ರಿಕೆಯೂ ಇಪ್ಪತ್ತು ವರ್ಷಗಳಷ್ಟು ದೀರ್ಘ ಕಾಲ ಜಾಹೀರಾತಿಲ್ಲದೆ ಪ್ರಕಟವಾದದ್ದೇ ಇಲ್ಲ. ಇದೊಂದು ಚಾರಿತ್ರಿಕ ದಾಖಲೆ. ಗಾಂಧೀಜಿಯವರ ’ಯಂಗ್ ಇಂಡಿಯಾ’, ’ಹರಿಜನ’ ಪತ್ರಿಕೆಗಳೂ ಜಾಹಿರಾತು ಪ್ರಕಟಿಸುತ್ತಿರಲಿಲ್ಲ, ನಿಜ. ಆದರೆ ಅವು ಗಾತ್ರದ ದೃಷ್ಟಿಯಿಂದ ಪತ್ರಿಕೆಯ ಪ್ರಮಾಣದಲ್ಲಿ ಪ್ರಕಟವಾಗುತ್ತಿರಲಿಲ್ಲ. ಅಷ್ಟು ಕಾಲ ಪ್ರಕಟವಾದವೂ ಅಲ್ಲ ಅವು. ಮಿಗಿಲಾಗಿ ಗಾಂಧೀಜಿಗೆ ಧನ ಸಹಾಯ ಮಾಡುವ ಜನರೂ ಹೇರಳವಿದ್ದರು. ಈ ಹಿನ್ನೆಲೆಯಲ್ಲಿ ’ಪತ್ರಿಕೆ’ಯ ದಾಖಲೆ ಚಾರಿತ್ರಿಕ ಮಹತ್ವದ್ದು.
ಇಲ್ಲಿ ನಾನು ಹೇಳಬೇಕಾಗಿದ್ದುದು ಬೇರೆ. ಅದು ಸರ್ವಾಧಿಕಾರಿ ಧೋರಣೆಯನ್ನು ಪ್ರತಿಭಟಿಸಿ, ವ್ಯಕ್ತಿ ಮತ್ತು ಸಮುದಾಯಗಳ ಸ್ವಾತಂತ್ರ್ಯಕ್ಕಾಗಿ ಹೋರಾಡುವುದನ್ನು ಕುರಿತು. ಅದು ಇಂದಿರಾ ಇರಲಿ, ಸಮಾಜವಾದಿಗಳೇ ಆಗಲಿ, ಕಮ್ಯುನಿಸ್ಟರೇ ಆಗಲಿ, ಸಾಮಾಜಿಕವಾಗಿ ಪ್ರತಿಷ್ಟಿತರಾದವರಿರಲಿ, ಅಧಿಕಾರ ಸ್ಥಾನದಿಂದ ಅವರು ದರ್ಪ ತೋರಿಸುತ್ತಾರೆಂದ ಕೂಡಲೇ ಪತ್ರಿಕೆ ಅದನ್ನು ಪ್ರತಿಭಟಿಸುತ್ತಾ ಬಂದಿದೆ. ಗಂಗಾಧರ ಮೊದಲಿಯಾರ್, ಬಾಬಯ್ಯ ಮತ್ತಿತರ ಅನೇಕರ ಪ್ರಸಂಗದಲ್ಲಿ ಅದನ್ನು ಗಮನಿಸಬಹುದು. ಪತ್ರಿಕೆಯ ಬಳಗದ ಬಹುತೇಕ ಎಲ್ಲರೂ ಎಡಪಂಥೀಯರಾದರೂ ಎಡಪಂಥೀಯರ ಪಾಳೇಗಾರಿ ಮನೋಭಾವವನ್ನು ಕಂಡಾಗ ಅವರನ್ನು ವಿರೋಧಿಸಿ ಕಟುವಾಗಿ ಟೀಕಿಸಿದ ಸಂದರ್ಭಗಳಿವೆ. ಜಾರ್ಜ್ ಫರ್ನಾಂಡಿಸ್, ನಂಜುಂಡಸ್ವಾಮಿ, ಜೆ.ಎಚ್. ಪಟೇಲ್ ಅವರನ್ನು ಮೊದಲಿಗೆ ಎಚ್ಚರಿಸಿ, ನಂತರ ಅವರ ಮೇಲೆ ದಾಳಿ ಮಾಡಿದ ನಿಷ್ಟುರ ಧೋರಣೆ ಪತ್ರಿಕೆಯದು.
ನನಗೆ ಮತ್ತೆ ಇಲ್ಲಿ ಗಾಂಧೀಜಿಯವರು ನೆನಪಾಗುತ್ತಾರೆ. ಒಂದು ಹಂತದಲ್ಲಿ ಗಾಂಧೀಜಿ ತಮ್ಮದೇ ಪಕ್ಷದ ರೈತ ನಾಯಕರನ್ನು ಟೀಕಿಸಿದ್ದುಂಟು. ಬಿಹಾರಿನ ಸ್ವಾಮಿ ಸಹಜಾನಂದ ಸರಸ್ವತಿ ಮತ್ತು ರಾಹುಲ ಸಾಂಕೃತ್ಯಾಯನರು 1937-38ರಲ್ಲಿ ಗಾಂಧೀಜಿಯ ಟೀಕೆಗೆ ತುತ್ತಾಗಿದ್ದರು.

ಪತ್ರಿಕೆ ಈ ರೀತಿಯ ನಿಲುವು ತೆಗೆದುಕೊಂಡಾಗ, ಇವರು ಸಮಾಜವಾದಿಗಳನ್ನೂ, ರೈತ, ದಲಿತ ನಾಯಕರನ್ನೂ ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಾರಲ್ಲ ಎಂದು ನನ್ನಂಥವರು ಗೊಂದಲಗೊಂಡು ಬೇಸರಪಟ್ಟದ್ದುಂಟು. ಈ ನಿಲುವು ಒಮ್ಮೊಮ್ಮೆ ಕಠೋರ-ನಿರ್ದಯಿ ಎನ್ನಿಸಬಹುದು. ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಈ ನಿಲುವು ಸರಿ. ಪತ್ರಿಕಾ ಧರ್ಮವೆಂದರೆ ಇದೇ ಎನ್ನಿಸಿದೆ. ಹಾಗೆಂದು ಕೆಳಗೆ ಬಿದ್ದವರನ್ನು ಅದೂ ಎಂದೂ ಹೊಸಕಿ ಹಾಕಿಲ್ಲ, ಬದಲಾಗಿ ಸಾಂತ್ವನ ಹೇಳಿದೆ. ಗುಂಡೂರಾಯರು ಅಧಿಕಾರ ಕಳೆದುಕೊಂಡಾಗ ‘ರಾಯರೇ ಹೋಗಿ ಬನ್ನಿ’ ಎಂದು ಬೀಳ್ಕೊಟ್ಟಿದೆ. ಸಂಜಯಗಾಂಧಿ, ಇಂದಿರಾ ಮಡಿದಾಗ ಅವರಲ್ಲಿದ್ದ ಒಳ್ಳೆಯ ಗುಣಗಳನ್ನು ಮೆಚ್ಚಿ ಮರುಗಿದೆ.
ವಿದ್ಯೆ, ಜಾತಿ ಮತ್ತು ಅವಕ್ಕೆ ತಳುಕು ಹಾಕಿಕೊಂಡಿರುವ ಮೀಸಲಾತಿ ನಮ್ಮಲ್ಲಿ ಹಲವಾರು ವಾಗ್ವಾದಗಳಿಗೆ, ಸಂಘರ್ಷಗಳಿಗೆ ಕಾರಣವಾಗಿದೆ. ಈ ಬಗ್ಗೆ ಪತ್ರಿಕೆಯದು ಆರೋಗ್ಯಕರ ನಿಲುವು. ನೈಜ ಜನತಂತ್ರವನ್ನು ಗಟ್ಟಿಗೊಳಿಸುವಂಥ ಈ ನಿಲುವು ಸಂಕೀರ್ಣವೂ, ಭೋದಪ್ರದವೂ ಆಗಿದೆ. ಮೀಸಲಾತಿಯ ಪರ ಅಥವಾ ವಿರುದ್ಧ ಅನ್ನುವುದಕ್ಕಿಂತ, ನಮ್ಮ ವಿಶಿಷ್ಟ ಸಾಮಾಜಿಕ ಸಂದರ್ಭವನ್ನು ವಿವರಿಸುತ್ತಾ ಮೀಸಲಾತಿ ಹೇಗೆ ಅನಿವಾರ್ಯವಾಗಿದೆಯೆಂದು ’ಪತ್ರಿಕೆ’ ವಿವರಿಸಿದೆ. ಹಳ್ಳಿ-ಪಟ್ಟಣಗಳಲ್ಲಿರುವ ಶಾಲೆಗಳು, ಬಡವ-ಬಲ್ಲಿದರಿಗಿರುವ ಸಾಧ್ಯತೆಗಳು, ಈ ಮಧ್ಯ ಸರ್ಕಾರ ಮತ್ತು ಸಮಾಜ ನಿರ್ಮಿಸಿರುವ ಗೋಡೆಗಳ ಬಗ್ಗೆ ಹೇಳುತ್ತಾ ’ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸಲಾರದ ಯಾವುದೇ ಸಮಾಜ ಮೀಸಲಾತಿಯ ಆಶ್ರಯದಲ್ಲಿರಬೇಕಾಗುತ್ತದೆ.
ಉದ್ಯೋಗದಲ್ಲಿ ಮೀಸಲಾತಿ ಎಲ್ಲಿಯವರೆಗೆ ಅಗತ್ಯ ಕಂಡುಬರುತ್ತದೋ ಅಲ್ಲಿಯವರೆಗೆ ಈ ಸಮಾಜದಲ್ಲಿ ಅನ್ಯಾಯ, ತಾರತಮ್ಯ ನಡೆದಿದೆ ಎಂಬುದನ್ನೂ, ಮಕ್ಕಳಿಗೆ ಅವಮಾನ ಆಗಿದೆ ಎಂಬುದನ್ನೂ….. ಸುಲಭವಾಗಿ ಊಹಿಸಬಹುದು’ ಎಂದು ’ಪತ್ರಿಕೆ’ ಬರೆದು ಮೀಸಲಾತಿಯನ್ನು ತಾಳಿಕೊಳ್ಳುವ ವಾತಾವರಣವನ್ನು ಸೃಷ್ಟಿಸಲು ಸಹಾಯಕವಾಗಿದೆ. ಹಾಗೆಯೇ ಮೀಸಲಾತಿ ಪಡೆಯಲೇಬೇಕಾದ ಅನಿವಾರ್ಯತೆಗೆ ಸಿಕ್ಕಿರುವವರ ಕೀಳರಿಮೆಯನ್ನೂ ಅದು ಗುರ್ತಿಸಿದೆ. ಹಾಗೆಯೇ, ಮೀಸಲಾತಿಯನ್ನು ತಾತ್ವಿಕವಾಗಿ ವಿರೋಧಿಸಿದ ವಿಶ್ವೇಶ್ವರಯ್ಯನವರಿಗೆ ಈ ನಾಡು, ಜನರ ಬಗೆಗಿದ್ದ ತೀವ್ರ ಪ್ರೀತಿ, ಶುದ್ಧ ಹಸ್ತವನ್ನು ಮೀಸಲಾತಿಯ ಫಲಾನುಭವಿಗಳು ಮೈಗೂಡಿಕೊಳ್ಳಬೇಕೆಂದು ಎಚ್ಚರಿಸಿದೆ.
ನಮ್ಮ ಎಲ್ಲ ಬುದ್ಧಿಜೀವಿಗಳು, ರಾಜಕಾರಣಿಗಳು, ಪಕ್ಷಗಳು ದೇಶದ ’ಸಮಗ್ರತೆ’, ’ಏಕತೆ’ಗಳ ಬಗ್ಗೆ ಕೊರೆಯುವುದು, ಬೋರ್ ಹೊಡೆಸುತ್ತದೆ. ’ಸಮಗ್ರತೆ’ ’ಏಕತೆ’ ಹೇಗೆ ಸಾಧ್ಯವೆನ್ನುವ ಬಗ್ಗೆ ಭಾರತೀಯ ಪತ್ರಿಕೋದ್ಯಮ ತಲೆ ಕೆಡಿಸಿಕೊಂಡಂತಿಲ್ಲ. ಸಂಘ ಪರಿವಾರದವರೂ ಏಕತೆ, ಸಮಗ್ರತೆ ಬಗ್ಗೆ ಮಾತನಾಡುತ್ತಾರೆ. ಆದರೆ ಮನೆಮುರುಕರೂ, ಇತರರೂ ಪ್ರತಿಪಾದಿಸುವ ಈ ವಿಚಾರದಲ್ಲಿರುವ ವ್ಯತ್ಯಾಸವೇನೆಂಬುದನ್ನು ಸ್ಪಷ್ಟಪಡಿಸುತ್ತಿರುವುದು ’ಪತ್ರಿಕೆ’ಯೊಂದೇ. ’ಷಾ ಬಾನು’ ವಿಚಾರವನ್ನೆತ್ತಿಕೊಂಡು ಬೇರೆಲ್ಲಾ ಪತ್ರಿಕೆಗಳು ಮುಸ್ಲಿಂ ಮತೀಯವಾದವನ್ನು ಮಾತ್ರ ಖಂಡಿಸಿದವು. ಆದರೆ ಅದಕ್ಕೆ ನೀರು, ಗೊಬ್ಬರ ಹಾಕಿ ಕಾಂಗ್ರೆಸ್ ಗಿಡದಂತೆ ಬೆಳೆಸಿದ ಕಾಂಗ್ರೆಸ್ ಪಕ್ಷದ ಮತ್ತು ಇತರ ರಾಜಕಾರಣಿಗಳ ಹುನ್ನಾರವನ್ನು ’ಪತ್ರಿಕೆ’ ಬಯಲಿಗೆಳೆಯಿತು.
ಮತೀಯವಾದ, ಅದು ಹಿಂದೂ ಆಗಲಿ, ಮುಸ್ಲಿಂ ಆಗಲಿ ಹೇಗೆ ಸಾಮಾಜಿಕ ನೆಮ್ಮದಿಯನ್ನಷ್ಟೇ ಅಲ್ಲ, ದೇಶವನ್ನೇ ನಾಶ ಮಾಡಬಲ್ಲದೆಂದು ’ಪತ್ರಿಕೆ’ ಹೇಳಿದೆ. ರಾಮಮಂದಿರ-ಬಾಬ್ರಿ ಮಸೀದಿ ವಿವಾದದಲ್ಲಿ ಅದು ತಳೆದ ನಿಲುವು ನಮ್ಮ ಬಹುಮುಖೀ ಸಂಸ್ಕೃತಿಯ ರಾಷ್ಟ್ರವನ್ನು ಗಂಡಾಂತರದಿಂದ ರಕ್ಷಿಸುವ ನಿಲುವು. ಹಿಂದೂ ಮತಾಂಧರು ಜಗತ್ತಿನೆಲ್ಲೆಡೆ ’ಪವಿತ್ರ ಇಟ್ಟಿಗೆ’ ಶೇಖರಿಸುವ, ಸನ್ನಿಯನ್ನು ಹಬ್ಬಿಸುತ್ತಿದ್ದಾಗ ’ಇಟ್ಟಿಗೆ ಪವಿತ್ರವಲ್ಲ-ಜೀವ ಪವಿತ್ರ’ವೆಂದು ’ಪತ್ರಿಕೆ’ ದಿಟ್ಟವಾಗಿ ಹೇಳಿತು. ವಿವಾದದ ಹಿನ್ನೆಲೆಯನ್ನು ಸರಳವಾಗಿ ಎಳೆ ಎಳೆಯಾಗಿ ಬಿಡಿಸುತ್ತಾ, ’ರಾಮ ಜನ್ಮಭೂಮಿಗೆ ಇವತ್ತು ಪವಿತ್ರ ಇಟ್ಟಿಗೆ ಸಾಗಿಸುತ್ತಿರುವ ಆರ್‌ಎಸ್‌ಎಸ್‌ಗಳು, ಭಾಜಪಗಳು, ವಿಶ್ವ ಹಿಂದೂ ಪರಿಷತ್ತಿನವರು ತಾವು ದೇಶಪ್ರೇಮಿಗಳಂದೂ ಧರ್ಮಪ್ರೇಮಿಗಳೆಂದೂ ಭ್ರಮಿಸಿದಂತಿದೆ. ಹನ್ನೆರಡು ಕೋಟಿ ಮುಸ್ಲಿಮರನ್ನು ಮೂರು ಕೋಟಿ ಕ್ರಿಶ್ಚಿಯನ್ನರನ್ನೂ ಭಾರತ ಪಡೆದಿದೆ. ಪಾಕಿಸ್ತಾನಕ್ಕಿಂತ ಹೆಚ್ಚು ಸಂಖ್ಯೆಯ ಮುಸ್ಲಿಮರನ್ನು ಪಡೆದ ಭಾರತದಲ್ಲಿ ಆರ್‌ಎಸ್‌ಎಸ್‌ಗಳ ಚಳುವಳಿ ದುರಂತಮಯವಾಗಿ ನೀಚಾತಿನೀಚವಾಗಿ ಪರಿಣಮಿಸಲಿದೆ. ಭಾರತ ತನ್ನ ಕಷ್ಟ ಕೋಟಲೆಗಳ ನಡುವೆ ಬೆಳೆಸಿರುವ ಜಾತ್ಯತೀತ ಸಿದ್ಧಾಂತ ಮತ್ತು ವೈವಿಧ್ಯಮಯದಲ್ಲಿನ ಏಕತೆಯನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿರುವ ದುಷ್ಟರಿಗೆ ಎಲ್ಲ ಸಹಜ ಜೀವಿಗಳು ಪಾಠ ಕಲಿಸಬೇಕಾಗಿದೆ’ ಎಂದು ಬರೆಯಿತು.

ಧರ್ಮದ ಮೂಲಕ ಸರಳವಾಗಿ ಬದುಕುವ ನಿಯಮದಲ್ಲಿ, ಜಾತ್ಯತೀತ ನ್ಯಾಯದಲ್ಲಿ ನಂಬಿಕೆ ಇರುವವರಲ್ಲ ಇವತ್ತು ಒಂದಾಗಬೇಕಿದೆ. ಎಲ್ಲ ಧರ್ಮಗಳಲ್ಲಿ ಕೊಬ್ಬಿ ಬೆಳೆದವರು, ದುಷ್ಟ ಜಂತುಗಳ ವಿರುದ್ಧ ಸಮರ ಸಾರಬೇಕಾಗಿದೆ. ಇದು ಈ ದೇಶದ ಅಲ್ಪಸಂಖ್ಯಾತ ಸಜ್ಜನರಿಗೆ ಸಾಧ್ಯವಾಗದಿದ್ದರೆ ಈ ದೇಶ ಒಡೆದು ಹೋಗಲಿದೆ. ಮತೀಯವಾದದ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ಮತ್ತೆ ಮತ್ತೆ ನೆನಪಾಗುವುದು ಗಾಂಧೀಜಿ. ಅವರಿಗೆ ಮತೀಯವಾದ ಕಾಡ್ಗಿಚ್ಚಿನಂತ, ಕಿಚ್ಚು ಹಚ್ಚಿದವರನ್ನೂ ಸುಟ್ಟುಬಿಡುತ್ತದೆಂದು ಅವರಿಗೆ ಅರಿವಿತ್ತು. ’ಬೆಂಕಿಯೊಡನೆ ಸರಸ ಬೇಡ’ ಎನ್ನುವ ನಿಲುವು ಅವರದು. ಅದೇ ಧೋರಣೆ ಪತ್ರಿಕೆಯದು. ಸೂಕ್ಷ್ಮವಾಗಿ ನೋಡಿದಾಗ ಪತ್ರಿಕೆಯ ಟೀಕೆಟಿಪ್ಪಣಿಗಳಲ್ಲಿ ಗಾಂಧೀವಾದವನ್ನು ಅಪ್ಡೇಟ್ ಮಾಡುವ ಪ್ರಯತ್ನವಿದೆಯೆಂದು ಅನ್ನಿಸಿದೆ. ಆ ಬಗ್ಗೆ ಆಳವಾದ, ಗಂಭೀರವಾದ ಅಧ್ಯಯನದ ಅವಶ್ಯಕತೆಯಿದೆ.
ಪ್ರಗತಿರಂಗದ ಪ್ರಾರಂಭ ಒಂದು ರೀತಿಯಲ್ಲಿ, ಗಾಂಧೀಯುಗದ ನಂತರದಲ್ಲಿ ಪರಿಷ್ಕೃತ ಗಾಂಧೀವಾದಿ ಸಂಘಟನೆಯ, ರಾಜಕಾರಣದ ಪ್ರಯೋಗವೆನಿಸುತ್ತದೆ. ಎಲ್ಲರಿಗೆ ವಿದ್ಯೆ, ಆರೋಗ್ಯ, ವಿಕೇಂದ್ರೀಕರಣ, ಸಾರ್ವಜನಿಕ ಜೀವನದಲ್ಲಿ ಸ್ವಚ್ಛತೆ ಈ ರಂಗದ ಉದ್ದೇಶವಾಗಿತ್ತು. ಆದರೆ 1947ರಿಂದ 1980ರ ದಶಕದವರೆಗೆ ನಡೆದ ಅಧಿಕಾರ ರಾಜಕಾರಣ, ಭ್ರಷ್ಟತೆ ಇಂಥದೊಂದು ಪ್ರಯತ್ನವನ್ನು ಆಗಗೊಡದಿದ್ದುದು ಚಾರಿತ್ರಿಕ ದುರಂತ, ಈ ಪ್ರಯತ್ನ ಮಾಡಿದ ಪತ್ರಿಕಾ ಬಳಗ ಖ್ಯಾತ ಇತಿಹಾಸಕಾರ ಆರಾಲ್ಡ್ ಟಾಯ್ಬಿ ಹೇಳುವ ರೀತಿಯ (creative minority) ಸೃಜನಶೀಲ ಅಲ್ಪಸಂಖ್ಯಾತರೇ. ಆದರೆ ಎಲ್ಲಾ ಪ್ರಯತ್ನಗಳೂ ಯಶಸ್ವಿಯಾಗಬೇಕೆಂದೇನೂ ಇಲ್ಲ. ಸಂದರ್ಭ ಕೂಡಾ ಅದಕ್ಕೆ ಅನುಕೂಲಕರವಾಗಿರಬೇಕು. ಪ್ರಗತಿರಂಗ ಹುಟ್ಟಿದ ಸಂದರ್ಭ ಅಂಥ ಅನುಕೂಲಕರವಾದುದೇನೂ ಆಗಿರಲಿಲ್ಲವೆನಿಸುತ್ತದೆ. ಅಂಥ ಸಂದರ್ಭದಲ್ಲಿ ಹಿಂದೆ ಸರಿಯಬೇಕಾದುದು ಅನಿವಾರ್ಯ ಮತ್ತು ಕ್ಷೇಮ. ಪ್ರಗತಿರಂಗದ ಈ ಸೃಜನಶೀಲ ಅಲ್ಪಸಂಖ್ಯಾತರು ಮಾಡಿದ್ದು ಅದನ್ನೇ. ಆದರೆ ಹಿಂದೆ ಸರಿಯುವುದರಿಂದ ಎಲ್ಲ ಹಾದಿಗಳು ಮುಚ್ಚುತ್ತವೆಂದೇನಲ್ಲ, ಪ್ರಯತ್ನ ಯಾರಿಂದಲಾದರೂ ಪುನರಾರಂಭವಾಗುತ್ತದೆ. ಅದು ಚಾರಿತ್ರಿಕ ನಿಯಮ.
ಪತ್ರಿಕೆ ಸಾಧಿಸಿದ್ದೇನು ಎನ್ನುವ ಪ್ರಶ್ನೆ ಉಳಿದಿದೆ. ಅದರ ಉದ್ದೇಶ ಈಡೇರಿದೆಯೇ? ಈಡೇರಿದ್ದರೆ ಎಷ್ಟು ಮಾತ್ರ? ಭ್ರಷ್ಟತೆ, ಅನ್ಯಾಯ, ಜಾತಿವಾದ, ಮತೀಯತೆ, ದಬ್ಬಾಳಿಕೆ ಕಡಿಮೆಯಾಗಿವೆಯೇ? ಸಾಮಾಜಿಕ ನ್ಯಾಯ, ವಿಕೇಂದ್ರೀಕರಣ, ನೆಮ್ಮದಿ ಕಿಂಚಿತ್ತಾದರೂ ದೂರವಾಗಿವೆಯೇ?
ಈ ಪ್ರಶ್ನೆಗಳಿಗೆ ’ಇಲ್ಲ’ವೆಂದೇ ಉತ್ತರ. ಆದರೆ ಚಾರಿತ್ರಿಕ ಪ್ರಕ್ರಿಯೆ ನಿರಂತರವಾದದ್ದು. ಊರು ಇರುವವರೆಗೂ, ಜನರಿರುವವರೆಗೂ ಹೊಲಸು ಇದ್ದೇ ಇರುತ್ತದೆ. ಅದನ್ನು ಸ್ವಚ್ಛ ಮಾಡುವುದು ಪ್ರಜ್ಞಾವಂತ ಮನುಷ್ಯನ ಕರ್ತವ್ಯ. ಮಾವೋತ್ಸೆ ತುಂಗ ಹೇಳುವ ಮಾತಿನೊಂದಿಗೆ ನನ್ನ ಮಾತುಗಳನ್ನೂ ಮುಗಿಸುತ್ತೇನೆ. ’ಮನೆಯಲ್ಲಿ ನಿತ್ಯವೂ ಕಸ ಬೀಳುತ್ತದೆ. ಅದನ್ನು ನಿತ್ಯವೂ ಗುಡಿಸುತ್ತಿರಬೇಕು. ಅದಕ್ಕಾಗಿ ಮನುಷ್ಯರ ಜೊತೆಗೆ ಪೊರಕೆಯೂ ಬೇಕು’. ಈ ಕಸ ಗುಡಿಸುವವರ ಮತ್ತು ಪೊರಕೆಯ ಕೆಲಸವನ್ನು ಪತ್ರಿಕಾ ಬಳಗ ಮತ್ತು ಪತ್ರಿಕೆ ಮಾಡುತ್ತಿರುವ ರೀತಿ ಅನನ್ಯ. ಗಾಂಧೀಜಿಯವರ ಮಾತುಗಳಲ್ಲಿ ಹೇಳುವುದಾದರೆ ಇದು ಭಂಗಿಯ ಕೆಲಸ. (1999)

ಪ್ರೊ. ಎಸ್ ಚಂದ್ರಶೇಖರ್
ಖ್ಯಾತ ಇತಿಹಾಸ ಪ್ರಾಧ್ಯಾಪಕರು. ತಮ್ಮ ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ ಕನ್ನಡ ತಿಳಿವನ್ನು ವಿಸ್ತರಿಸಿದವರು. ಮೈಸೂರು ರಾಜಕೀಯ 1881-1940: ಕೆಲವು ಒಳನೋಟಗಳು, ಅಂಬೇಡ್ಕರ್ ಮತ್ತು ಗಾಂಧಿ, ಅಂಬೇಡ್ಕರ್ – ಮರು ಚಿಂತನೆ ಅವರು ಕೆಲವು ಪುಸ್ತಕಗಳು. ನಿವೃತ್ತ ಜೀವನದಲ್ಲಿಯೂ ತಮ್ಮ ಪ್ರಖರ ಚಿಂತನೆಗಳನ್ನು ಪತ್ರಿಕೆಗಳಲ್ಲಿ ಮಂಡಿಸುತ್ತಾ ಕನ್ನಡ ಬೌದ್ಧಿಕ ಜಗತ್ತನ್ನು ವಿಸ್ತರಿಸುತ್ತಿದ್ದಾರೆ.



??