ಪ್ರೀತಿಯ ಬಾಪೂ,
ಭರತಖಂಡವೆಂಬ ಈ ಪರ್ಯಾಯ ದ್ವೀಪದಲ್ಲಿ ಅಕ್ಟೋಬರ್ 2, 1869ರಲ್ಲಿ ನೀನು ಕಣ್ತೆರೆದು 150 ವರ್ಷಗಳು ಸಂದಿವೆ. ಇಲ್ಲಿಂದ ನಿರ್ಗಮಿಸಿ ಏಳು ದಶಕಗಳಾಗಿವೆ. ಅಂದು ನೀನು ಈ ನೆಲದಲ್ಲಿ ಕಣ್ಬಿಟ್ಟಾಗ ಅದು ಬ್ರಿಟಿಷರ ದಾಸ್ಯ ಶೃಂಖಲೆಯಲ್ಲಿತ್ತು. ನೀನು ನಿರ್ಗಮಿಸುವಾಗ ಅದು ಜಗತ್ತಿನ ಭೂಪಟದ ಮೇಲೆ ತನ್ನದೇ ಆದ ಗಡಿಯನ್ನು ಗುರುತಿಸಿಕೊಂಡು ಜನ ಪ್ರಭುತ್ವ ಸರ್ಕಾರ ಹೊಂದಿತ್ತು. ಅದಕ್ಕಾಗಿ ನೀನು ದುಡಿದದ್ದು, ಜನರನ್ನು ಸ್ವರಾಜ್ಯ, ಸ್ವತಂತ್ರದತ್ತ ಹುಚ್ಚೆಬ್ಬಿಸಿದ್ದು ಈಗ ಇತಿಹಾಸ. ಸತ್ಯ, ಅಹಿಂಸೆ, ಸ್ವರಾಜ್ಯ, ಸ್ವಾವಲಂಬನೆಗಳಿಗೆ ಅರ್ಥ ತುಂಬಿ, ಅವುಗಳೆಂದರೆ ಹೀಗೇ ಎಂದು ಪ್ರಯೋಗಿಸಿ, ಪ್ರಾಮಾಣಿಸಿ ತೋರಿದ ಸಂತ ಎಂದು ಜಗತ್ತಿನಲ್ಲೇ ಹೆಸರಾದೆ. ದಾಸ್ಯವೇ ಧರ್ಮ, ರಾಜನಿಷ್ಠೆಯೇ ದೇಶಪ್ರೇಮ, ರಾಜನೇ ಸಾಕ್ಷಾತ್ ದೇವರು ಎಂದು ನಂಬಿ ತಲೆತಗ್ಗಿಸಿ, ನಡುಬಗ್ಗಿಸಿ, ಡೊಗ್ಗುಸಲಾಮು ಹಾಕುವುದೇ ಜೀವನ ಎಂದು ನಂಬಿದ ಜನಕ್ಕೆ, ನಾವೇ ಸರ್ಕಾರ, ನಾವೇ ಆಡಳಿತ ನಾವು ಮಾಡಿದ್ದೇ ಸಂವಿಧಾನ ಎಂದು ಗಟ್ಟಿ ಮಾತು ಹೇಳಿ, ಆ ಸಂವಿಧಾನವನ್ನೇ ಪ್ರಜಾಸಂಹಿತೆ ಎಂದು ನೀಡಿ ಹೋದೆಯಲ್ಲಾ, ಇಂದು ಅದರ ಗತಿ ಏನಾಗಿದೆ ನೋಡು. ಪ್ರಜಾಪ್ರಭುತ್ವದ ಚೌಕಟ್ಟಿಗೆ ಸರ್ವಾಧಿಕಾರ, ಧರ್ಮಾಧಿಕಾರ ಮತ್ತು ಏಕ ಸಂಸ್ಕೃತಿಯ ವೃತ್ತ ಪರಿಧಿಯನ್ನು ಹೊದಿಸಲು ಪ್ರಯತ್ನಿಸುತ್ತಿದ್ದೇವೆ. ನಿನ್ನೆದೆಗೆ ಗುಂಡು ಬೀಳುವ ನಾಲ್ಕು ದಿನ ಮೊದಲು, ಅಂದರೆ, ದಿನಾಂಕ 26, ಜನವರಿ 1948 ರಂದು ಈ ದೇಶಕ್ಕೆಂದು ನೀನು ಸಿದ್ಧ ಮಾಡಿಸಿಕೊಟ್ಟು ಹೋದ ಭಾರತೀಯ ಸಂವಿಧಾನದ ಮೂಲ ಸಂರಚನೆಗೆ ಭಂಗ ಬರುತ್ತಿದೆಯೇನೋ ಎನ್ನುವ ಭಾಸವೂ, ಭ್ರಮೆಯೂ ಆಗುತ್ತಿದೆ.
ಆವತ್ತು, ಅಂದರೆ ದಿನಾಂಕ 30. 1. 1948 ರಂದು ಸಂಜೆ ಸರಿಯಾಗಿ 5 ಗಂಟೆ 17 ನಿಮಿಷಕ್ಕೆ ನೀನು ಪ್ರಾರ್ಥನಾ ಸಭೆಗೆ ಹೋಗುವಾಗ ನಿನ್ನೆದೆಗೆ ಹೊಡೆದ ಮೂರು ಗುಂಡುಗಳ ಸದ್ದು ಈಗ ಮತ್ತೆ ಜನಸಮುದಾಯದೆದೆಯಲ್ಲಿ ಮಾರ್ದನಿಸುತ್ತಿದೆ. “ನೀನು ಜೀವಸಹಿತ ಇದ್ದರೆ ಈ ದೇಶದ ಬಹುಸಂಖ್ಯಾತರಿಗೆ ಭವಿಷ್ಯವಿಲ್ಲ, ನಿನ್ನ ನಿರ್ಗಮನವೇ ಸ್ವತಂತ್ರ ಭಾರತದ ಏಳಿಗೆ ಎಂದು ನಂಬಿ ನಿನ್ನನ್ನು ಸಾಯಿಸಿದೆ” ಎಂದು ಹೇಳಿಕೆ ನೀಡಿದ ನಾಥೋರಾಮ್ ವಿನಾಯಕ ಗೋಡ್ಸೆ ಗಲ್ಲಿಗೇರಿ ಎಪ್ಪತ್ತು ವರ್ಷಗಳಾದರೂ ಆತನ ಭ್ರಮೆ ವಾಸ್ತವವಾಗಿಲ್ಲ. ಭ್ರಮೆಗಳು ವಾಸ್ತವವಾಗುವುದಾದರೆ ಅವು ಭ್ರಮೆಗಳೆಂತು? ನೀನು ಹತ್ಯೆಯಾದಾಗ ನಿನಗಷ್ಟೇ ಅಲ್ಲ, ಇಡೀ ದೇಶದ ಜನರ ಆಂತರಿಕ ಭದ್ರತೆಯ ಜವಾಬ್ದಾರಿ ಹೊತ್ತ ಅಂದಿನ ಗೃಹಮಂತ್ರಿ ‘ಸರದಾರ್’ ಬಿರುದಿನ ವಲ್ಲಭಬಾಯಿ ಪಟೇಲರು ಸಾಕ್ಷಿಯಾಗಿ ಅಲ್ಲಿಯೇ ಇದ್ದರಲ್ಲ? ಪ್ರಧಾನಿ ನೆಹರೂ ಮತ್ತು ಗೃಹ ಮಂತ್ರಿ ವಲ್ಲಭ ಬಾಯಿ ಪಟೇಲರ ನಡುವೆ ಉಂಟಾದ ತೀವ್ರ ಭಿನ್ನಾಭಿಪ್ರಾಯಗಳನ್ನು ಕೂಡಲೇ ಬಗೆಹರಿಸುವಂತೆ ಅಂದಿನ ಗೌರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್‍ರ ಕೋರಿಕೆಯ ಮೇರೆಗೆ ನೀನು ಹೇಳಿ ಕರೆಸಿಕೊಂಡಿದ್ದ ಪಟೇಲರೋಂದಿಗೆ ಚರಕ ತಿರುಗಿಸುತ್ತಲೇ ಮಾತನಾಡಿ, ಪ್ರಾರ್ಥನಾ ಸಮಯ ಮೀರಿತೆಂದು ತಡಬಡಾಯಿಸುತ್ತ, ತಡವಾಗುತ್ತಿರುವುದರ ಬಗ್ಗೆ ನೆನಪಿಸದಿದ್ದಕ್ಕೆ ಅಬು ಮತ್ತು ಮನು ಹುಡುಗಿಯರನ್ನು ಬೈಯುತ್ತ ಹೊರಬಂದೆಯಲ್ಲಾ, ಅವತ್ತು ಹೇಗೆ ನಿನ್ನ ಹತ್ಯೆಗೈಯಲು ಶಸ್ತ್ರಸಮೇತ ಸುಸಜ್ಜಿತರಾಗಿ, ನಾಥೋರಾಮ್ ಗೋಡ್ಸೆ, ನಾರಾಯಣ ಅಪ್ಟೆ ಮತ್ತು ವಿಷ್ಣು ಕರಕರೆ, ಯಾವ ಅಡೆತಡೆಯೂ ಇಲ್ಲದೆ ನೀನಿದ್ದ ಬಿರ್ಲಾ ಭವನದ ಒಳಗೋಡೆಯೊಳಗೆ ನಡೆದುಬಂದರೋ, ಹಾಗೆಯೇ ಇವತ್ತ್ತು ಕೂಡ ದೇಶದ ಹೊರಗಿನ ಮತ್ತು ಒಳಗಿನ ಮತಾಂಧ ಭಯೋತ್ಪಾದಕರು ಭದ್ರತಾ ವಲಯಗಳನ್ನು ದಾಟಿ ಬರುತ್ತಿದ್ದಾರೆ. ಮೌಢ್ಯ, ಸ್ವಾರ್ಥ, ಭ್ರಷ್ಟಾಚಾರ ಮತ್ತು ಶೋಷಣೆಗಳ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುವ ಚಿಂತಕರ ಮನೆಗಳ ಕಾಂಪೌಂಡುಗಳೊಳಗೆ ನುಗ್ಗಿ ಅವರನ್ನು ಕೊಲ್ಲುತ್ತಿದ್ದಾರೆ.
ಅವತ್ತು, ಬಿರ್ಲಾ ಭವನಕ್ಕೆ ಕೂಗಳತೆಯ ದೂರದಲ್ಲಿರುವ ಬಿರ್ಲಾಮಂದಿರದ ಹಿಂದಿನ ಪೋದು,ಪೊದೆಗಳ ನಡುವೆ ಅದೇ ಮೂರು ಜನ ರಿಹರ್ಸಲ್ ನಡೆಸಿದ್ದುದು ನಿನಗಾಗಲೀ, ನಿನ್ನ ಭದ್ರತಾ ವ್ಯವಸ್ಥೆಗೆ ನಿಯೋಜಿತರಾದ ಭದ್ರತಾ ಅಧಿಕಾರಿಗಾಗಲೀ ಗೊತ್ತಾಗಲೇ ಇಲ್ಲ. ಅವರ ಭಾವಚಿತ್ರಗಳು ಇದ್ದ ಕಡತ ದೆಹಲಿಯ ಗುಪ್ತಚರ ವಿಭಾಗದ ಅಧಿಕಾರಿಯ ಟೇಬಲ್ಲಿನ ಮೇಲಿದ್ದುದು ಅಲ್ಲಿಯೇ ಉಳಿದಿತ್ತಲ್ಲ? ಆವತ್ತಿನಿಂದ ಇವತ್ತಿಗೂ ಇಂಥ ಕೃತ್ಯಗಳಿಗೆ ಬಳಕೆಯಾಗುತ್ತಿರುವುದು ಯಾರು ಗೊತ್ತಾ? ಯಾರನ್ನು ನೀನು, “ ದೇಶವೊಂದರ ಯುವಜನತೆ ಎಂದರೆ ಆ ದೇಶದ ಉಪ್ಪು ಇದ್ದ ಹಾಗೆ, ಉಪ್ಪೇ ತನ್ನ ಉಪ್ಪಿನ ಗುಣವನ್ನು ಕಳೆದುಕೊಂಡರೆ, ಅದನ್ನು ಹೇಗೆ ತುಂಬಬೇಕು ವiತ್ತು ಎಲ್ಲಿಂದ ತರಬೇಕು”, ಎಂದಿದ್ದೆಯಲ್ಲಾ, ಆ ಯುವಕರೇ ಇವರು. ಅವರ ದುರ್ಬಳಕೆಗೆ ಮಾತ್ರ ಯಾವುದೇ ಧರ್ಮದ ಚೌಕಟ್ಟಿಲ್ಲ, ಭಾಷೆಯ ಮಿತಿಯಿಲ್ಲ ಮತ್ತು ಪ್ರಾದೇಶಿಕ ಎಲ್ಲೆಯಿಲ್ಲ. ಧರ್ಮನಿರಪೇಕ್ಷತೆ ಅಥವಾ ಜಾತ್ಯತೀತತೆ ಎನ್ನುವ ಅಪ್ಪಟ ಮೌಲ್ಯವನ್ನು ಇಲ್ಲಿ ಕಾಣಬಹುದು ನೋಡು! ನೀನು ಹೇಳಿದ ಸ್ವಾವಲಂಬಿ ಮತ್ತು ಸುಸ್ಥಿರ ಉದ್ಯೋಗಾವಕಾಶಗಳು ಈ ಯುವಕರಿಗಿದ್ದಿದ್ದರೆ, ಅವರಾದರೂ ಯಾಕ್ಹೋದಾರು ಹೇಳು? ನಿರುದ್ಯೋಗಿ ಯುವಕರ ತಲೆಕೆಡಿಸಿ, ಮತಾಂಧತೆಯ ಮತ್ತು ಉಣಿಸಿ ದುರ್ಬಳಕೆ ಮಾಡಿಕೊಳ್ಳುವುದೇ ಧರ್ಮರಕ್ಷಣೆಯಾಗಿದೆ ನೋಡು. ಉಪ್ಪಿನ ಮೇಲಿನ ಕರಭಾರ ವಿರೋಧಿಸಲು ಅಂದು ನೀನು ದಂಡಿಯಾತ್ರೆ ಕೈಗೊಂಡೆ. ಇವತ್ತು ಈ ಯುವಜನತೆಯ ದುರ್ಬಳಕೆಯ ವಿರುದ್ಧ ಯಾವ ಸತ್ಯಾಗ್ರಹ ಹೂಡಲಿ ಹೇಳು? ಇಂದಿನ ಸತ್ಯಾಗ್ರಹ ಮಾದರಿಗಳು ದಿಕ್ಕು ತಪ್ಪಿವೆ. ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕುವ ಒತ್ತಡ ತಂತ್ರಗಳಾಗಿವೆ. ಅನುಸರಿಸುವ ಮಾರ್ಗಗಳು ಹಾಕಿಕೊಂಡ ಗುರಿಗಳನ್ನು ಸಮರ್ಥಿಸುವುದಿಲ್ಲ ಎನ್ನುವ ನಿನ್ನ ಮಾತುಗಳು ಮರೆತುಹೋಗಿವೆ.
ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿತವಾಗಿರುವ ‘ನ್ಯಾಯ’, ತೋಳ ಕುರಿಮರಿ ನ್ಯಾಯವಾಗುತ್ತಿದೆ. ‘ಸ್ವಾತಂತ್ರ್ಯ’, ಖಾಸಗೀ ಆಸ್ತಿ ಗಳಿಕೆಯ, ಮೋಜು-ಮಸ್ತಿಗಳ ಸ್ವೇಚ್ಛೆಯಾಗುತ್ತಿದೆ. ‘ಸಮಾನತೆ’, ಎನ್ನುವದು ಅಸಮಾನತೆಯನ್ನು ಆನಂದಿಸುವ ವ್ಯಸನವಾಗುತ್ತಿದೆ. ‘ಬಂಧುತ್ವ’ ಎನ್ನುವುದು ಯಾದವೀಕಲಹವಾಗಿ ಮನೆ, ಮಠ, ಮಂದಿರ, ಮಸೀದಿ ಮತ್ತು ಸಾಮಾಜಿಕ ಸಂಬಂಧಗಳ ಬಲೆಯ ಎಳೆಗಳನ್ನು ಕತ್ತರಿಸುವ ಸಮೂಹ ಸನ್ನಿಯಾಗುತ್ತಿದೆ. ಯಾವುದನ್ನು ನೀನು ‘ಗ್ರಾಮ ಸ್ವರಾಜ್ಯ’, ಎಂದೆಯೊ ಅಂಥ ಗ್ರಾಮ ಘಟಕಗಳು ಕೌಟುಂಬಿಕ ಕೃಷಿ, ಗುಡಿ ಕೈಗಾರಿಕೆ ಮತ್ತು ಕಸುಬುಗಳನ್ನು ಕಳೆದುಕೊಂಡು ನಿನ್ನ ಹೆಸರಿನಲ್ಲಿ ಸರ್ಕಾರ ಜಾರಿಗೊಳಿಸುತ್ತಿರುವ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನ ಫಲಾನುಭವಿಗಳಾಗುತ್ತಿದ್ದಾರೆ.
ಇನ್ನು ನೀನು ಆಶಿಸಿದ ರಾಮರಾಜ್ಯದ ಗತಿ ಏನಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಲು ಒಂದು ಮಾತನ್ನು ಹೇಳಲೇಬೇಕಿದೆ. ಅಂದು ಸಂಜೆ ಹಂತಕರ ಗುಂಡಿಗೆ ನೀನು ಬಲಿಯಾಗುವ ಮೊದಲು, ಅಂದರೆ, ಮಧ್ಯಾಹ್ನ 3 ಗಂಟೆಗೆ ನಿನ್ನ ಊರುಗೋಲುಗಳಾದ ಅಬಾ ಮತ್ತು ಮನು ಹುಡುಗಿಯರಿಗೆ ನೀನು ಹೇಳಿದ್ದೇನು? “ಆ ರಾಮನ ಕೃಪೆ ಇರುವವರೆಗೆ ನನ್ನ ಜೀವಕ್ಕೆ ಯಾವುದೇ ಅಪಾಯವಿಲ್ಲ; ಒಂದುವೇಳೆ ನಾನು ಸಾಯುವುದು ಆ ದೇವರಿಗೆ ಬೇಕಿದ್ದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ; ನನ್ನ ಸಾವಿನ ಸಂದರ್ಭಕ್ಕೆ ನೀವೇ ಸಾಕ್ಷಿಯಾಗಿರುತ್ತೀರಿ; ಆಗ ನನ್ನ ಬಾಯಿಂದ, ಹೇ ರಾಮ್, ಹೇ ರಾಮ್ ಎನ್ನುವ ಧ್ವನಿ ಬರದಿದ್ದರೆ ನನ್ನನ್ನೊಬ್ಬ ಆಷಾಢಭೂತಿ ಎಂದು ಪರಿಗಣಿಸಿ; ಹೇ ರಾಂ ಎಂದರೆ ಮಾತ್ರ ಅದನ್ನು ಜತ್ತಿಗೆ ಕೂಗಿ ಹೇಳಿ”, ಎಂದಿದ್ದೆಯಲ್ಲಾ ಬಾಪು, ಯಾವ ನಿಸ್ತಂತು ಸಂದೇಶ ನಿನ್ನ ಮನಸ್ಸಿನಲ್ಲಿ ಬಂದಿತ್ತು ಹೇಳು? ಇವತ್ತು ನಾವು ಎಲ್ಲಿಗೆ ಬಂದು ತಲುಪಿದ್ದೇವೆ ಎಂದರೆ, ನೀನು ಅಂದು ‘ಹೇ ರಾಂ, ಹೇ ರಾಂ’, ಅಂತ ಅನ್ನಲೇ ಇಲ್ಲ ಎನ್ನುವಷ್ಟರಮಟ್ಟಿಗೆ. ‘ಹೇ ರಾಂ’, ‘ಹೇ ರಾಂ’, ಎಂದ ನಿನ್ನ ಹೃದಯ ಧ್ವನಿ ಇಂದು ‘ಜೈ ರಾಂ’, ಎನ್ನುವ ಸಮರ ಧ್ವನಿಯಾಗುತ್ತಿದೆ. ಪ್ರತಿಸ್ಪರ್ಧಿಯಾಗಿ, ‘ಜೈ ಜೆಹಾದ್’ಗಳು ಮೊಳಗುತ್ತಿವೆ. ‘ಜಯ ಭಾರತ ಜನನಿಯ ತನುಜಾತೆ’, ‘ಸರ್ವ ಜನಾಂಗದ ಶಾಂತಿಯ ತೋಟ’, ಎನ್ನುವ ಕವಿವಾಣಿಗಳು ಬದುಕಿನ ಮಾರ್ಗಗಳಾಗುತ್ತಿಲ್ಲ. “ರಘುಪತಿ ರಾಘವ ರಾಜಾ ರಾಂ, ಸಬಕೋ ಸನ್ಮತಿ ದೇ ಭಗವಾನ್’ ಎಂದು ಅದೆಷ್ಟು ಗಟ್ಟಿಯಾಗಿ ಭಜಿಸಿಕೊಂಡರೂ ಅಧಿಕಾರಾರೂಢರಾರಿಗೂ ಸನ್ಮತಿ ಬಂದಂತೆ ಕಾಣುತ್ತಿಲ್ಲ. ಬದಲಾಗಿ ಅವರು ಈಗ ಏನೆನ್ನುತ್ತಾರೆ ಗೊತ್ತಾ? “ನಾಥೋ ರಾಂ ಗೋಡ್ಸೆ ಒಬ್ಬ ದೇಶಪ್ರೇಮಿ”, “ಈ ದೇಶಕ್ಕೆ ಸ್ವಾತಂತ್ರ್ಯ ಉಪವಾಸ ಮಾಡಿದ ಕಾರಣಕ್ಕೆ ಬರಲಿಲ್ಲ, ಅಂಥ ಮಾತುಗಳನ್ನು ಕೇಳಿದಾಗಲೆಲ್ಲ ರಕ್ತ ಕುದಿಯುತ್ತದೆ”, ಎಂದು ನಿನ್ನ ಹೆಸರು ಹೇಳುವ ಧೈರ್ಯವಿಲ್ಲದೆ ಪರೋಕ್ಷವಾಗಿ ಅಸಹನೆಯನ್ನು ಹೊರಹಾಕುತ್ತಿದ್ದಾರೆ. ಇವರ ಕುದಿಯುವ ರಕ್ತವನ್ನು ತಣ್ಣಗಾಗಿಸಲೆಂದೇ ನೀನು ವiತ್ತೆ ಹುಟ್ಟಿ ಬಾ ಎನ್ನುವ ಕೋರಿಕೆ. ಬೇಕಾದರೆ ಹೇಳು, ನೀನು ಅಂದು ಕೊನೆಯುಸಿರೆಳೆಯುವ ಮೊದಲು ಪ್ರಾರ್ಥನಾಸ್ಥಳಕ್ಕೆ ದೀರ್ಘ ಹೆಜ್ಜೆ ಇಡುವಾಗ ಅಬಾ ಮತ್ತು ಮನು ಅವರ ಹೆಗಲ ಮೇಲೆ ಕೈಯಿಟ್ಟು ನಡೆದಿದ್ದೆಯಲ್ಲಾ, ಅಂಥ ಎರಡು ಊರುಗೋಲುಗಳಾಗಲು ನಿನಗೀಗ, ‘ನಿರ್ಭಯ” ಮತ್ತು ‘ದಿಶಾ” ರನ್ನು ಕಳುಹಿಸಿದ್ದೇವೆ. ಅವರ ಹೆಗಲ ಮೇಲೆ ಕೈಯಿಟ್ಟು ಮರು ಜೇವಣಿಗೆ ಕೊಟ್ಟು ಬರಬಹುದು.
ಪಾಪ, ಆ ಮನು ಆದರೂ ಯಾರು? ನಿನ್ನ ಮೊದಲ ಮಗ, ದಾರಿ ಬಿಟ್ಟ ದುಂದುಗಾರ, ಕುಡುಕ, ಲಂಪಟ, ಜೂಜುಗಾರ ಎಂದೆಲ್ಲಾ ಆದ ಹರಿಲಾಲನ ಮಗಳು ಮನೋರಮಾ ಹೌದಲ್ವ? ಅಂದು ಬಿರ್ಲಾ ಭವನದಲ್ಲಿ ನಿನ್ನ ರಕ್ಷಣೆಗಿರಬೇಕಾಗಿದ್ದ ರಕ್ಷಣಾಧಿಕಾರಿ ಮೆಹ್ರಾ ಸಾಹೇಬರು ತೀವ್ರ ಜ್ವರದಿಂದಾಗಿ ಬಂದಿರಲಿಲ್ಲ. ಎಡ ಬಲ ಇದ್ದದ್ದು ಇವರಿಬ್ಬರು ಹುಡುಗಿಯರು ಮಾತ್ರ. ನಮಸ್ಕರಿಸುವ ನೆಪದಲ್ಲಿ ನಿನ್ನ ಮುಂದೆ ಬಂದ ಗೋಡ್ಸೆಯನ್ನು ತಡೆಯಲು ಹೋದ ಆ ಹುಡುಗಿ, ಆತ ತಳ್ಳಿದ ರಭಸಕ್ಕೆ ತನ್ನ ಕೈಲಿದ್ದ ನಿನ್ನ ಉಗುಳು ತಟ್ಟೆ ಮತ್ತು ದಿನಚರಿ ಪುಸ್ತಕಗಳೊಂದಿಗೆ ಕೆಳಗೆ ಬಿದ್ದು ಹೌಹಾರಿ ಮೇಲೇಳುವುದರೊಳಗೆ ನೀನು ಉರುಳಿ ಬಿದ್ದಿದ್ದೆ. ಹೋ! ಹರಿಲಾಲ ಎಂದಾಕ್ಷಣ ನೆನಪಾಯ್ತು ನೋಡು ಆತನ ಬಗೆಗಿನ ಇಂದಿನ ಚರ್ಚೆ. ನೀನು ಮಾತ್ರ ಓದಿ ಬ್ಯಾರಿಸ್ಟರ್ ಆದೆ, ಮಕ್ಕಳನ್ನು ಓದಲು ಬಿಡಲಿಲ್ಲ, ಪಿತೃತ್ವದ ಜವಾಬ್ದಾರಿಯನ್ನು ನಿಭಾಯಿಸಲಿಲ್ಲ ಎನ್ನುವುದು. ಹೆತ್ತ ಕರುಳು ಕಸ್ತೂರಬಾ ಅದೆಷ್ಟು ಹೇಳಿದರೂ ನೀನು ಕೇಳಲಿಲ್ಲ. ಹೊರಗಿನ ಶಾಲಾ ಕಾಲೇಜುಗಳಲ್ಲಿ ಕಲಿಯುವುದಕ್ಕಿಂತ ನೀನೇ ಮನೆಯಲ್ಲಿ ಹೇಳಿಕೊಡುವ ಅನುಭಾವ ಆಧಾರಿತ ಶಿಕ್ಷಣವೇ ಮೇಲು ಎಂದು ಹೇಳುತ್ತಿದ್ದ ನಿನ್ನ ಮಾತುಗಳು ಹೊರಗಿನ ಜನಕ್ಕೆ ಬಿಡು, ಸ್ವತಃ ಕಸ್ತೂರಬಾ ಮತ್ತು ಮಕ್ಕಳಿಗೇ ಇಷ್ಟ ಆಗಿರಲಿಲ್ಲ ಎನ್ನುವುದು ನಿನಗೆ ಅದೆಷ್ಟು ತಿಳಿದಿತ್ತೋ ಏನೋ. ನಿನ್ನ ಪ್ರಯೋಗಗಳ ಹಟವೇ ನಿನ್ನದಾಗಿತ್ತು ಎನ್ನುವುದು ಅವರ ವಾದ.
ಇವತ್ತು ನೋಡು, ಇಡೀ ಭಾರತದಲ್ಲಿನ ರಾಜಕೀಯ ನೇತಾರರು ತಮ್ಮ ಮಕ್ಕಳನ್ನು ತಮ್ಮ ವೃತ್ತಿ ವಾರಸುದಾರರನ್ನಾಗಿ ಬೆಳೆಸುವ ಪರಿಯನ್ನು. ನಿನ್ನ ತತ್ವಗಳೊಂದಿಗೆ ನೀನೊಂದಿಷ್ಟು ರಾಜಿ ಮಾಡಿಕೊಂಡಿದ್ದರೂ ನಿನ್ನ ಚಿತೆಗೆ ಅಗ್ನಿಸ್ಪರ್ಶ ಮಾಡಲು ದೇವದಾಸ ಮತ್ತು ರಾಮದಾಸರ ಬದಲು ಅಲ್ಲಿಯೇ ಪರದೇಶಿಯಾಗಿ ಶರಾಬಿನ ಗುಂಗಲ್ಲಿ ನಿಂತಿದ್ದ ಹರಿಲಾಲನಿಗೆ ಅವಕಾಶವಾಗುತ್ತಿತ್ತು. ಕಸ್ತೂರಬಾ ಆತ್ಮ ಕೂಡ ಅದನ್ನೇ ಬಯಸಿತ್ತಲ್ವ? ಇವತ್ತಿನ ನಮ್ಮ ನಾಯಕರಿಗೆ ಪಕ್ಷಾತೀತವಾಗಿ ಅವರ ಮಕ್ಕಳೇ ಅವರ ಆಡಳಿತದ ಮೊದಲ ಆದ್ಯತೆಯಾಗಿದೆ. ತಲೆತಲಾಂತರವಾಗಿ ಅವರನ್ನು ಸಿರಿಲಾಲರನ್ನಾಗಿ ಮಾಡುವುದೇ ಅವರ ಸಾರ್ವಜನಿಕ ಬದುಕು ಎಂದುಕೊಂಡಿದ್ದಾರೆ. ಇವರಷ್ಟೇ ಏಕೆ, ಧರ್ಮ ದಂಡಾಧಿಕಾರಿಗಳೆನಿಸಿಕೊಂಡ ಮಠಪೀಠಗಳ ಮುಖ್ಯಸ್ಥರುಗಳು ಕೂಡ ಇದೇ ದಾರಿ ಹಿಡಿದಿದ್ದಾರೆ. ಯಾವುದನ್ನು ನೀನು ತ್ಯಾಗ ಎಂದುಕೊಂಡಿದ್ದೆಯೋ ಅದುವೇ ಇವರ ಆಸ್ತಿ ಅಧಿಕಾರದಾಹವಾಗಿದೆ. ನಿನ್ನ ಪ್ರಯೋಗಮುಖಿ ಬದುಕು ಇವರ ಭೋಗಮುಖಿ ಅನ್ವೇಷಣೆಗಳಾಗಿವೆ. ನಿನ್ನ ಚರಕ, ಖಾದಿ, ಕೈ ಕಸುಬುಗಳು, ಆರೋಗ್ಯಮುಖಿ ಸರಳಜೀವನ, ಅದ್ಯಯನ ಕಾಳಜಿ ಮತ್ತು ಅಭಿವ್ಯಕ್ತಿ ವಿಧಾನಗಳು ಇವತ್ತು ಸಂಗ್ರಹಾಲಯದ ಆಂಟಿಕ್‍ಗಳಾಗುತ್ತಿವೆ. ನೀನು ಮುಂದುರುಳಿಸಬಯಸಿದ ರಾಮರಾಜ್ಯದ ಅಭಿವೃದ್ಧಿ ಇತಿಹಾಸ ಚಕ್ರವನ್ನು ರಿವರ್ಸ್ ಗೇರಿಗೆ ಬದಲಿಸುತ್ತಿದ್ದೇವೆ.
‘ಹಮ್ಮು ಮಾಡಿ ಬ್ರಹ್ಮ ಕೆಟ್ಟ, ನಮ್ಮ ಮನೆಯೊಳಗೊಬ್ಬ ಸುಮ್ಮಸುಮ್ಮನೆ ಕೆಟ್ಟ’, ಎನ್ನುವುದೊಂದು ಕನ್ನಡದ ಗಾದೆ ಮಾತು. ಹಣಬಲವಿದ್ದರೆ ಜನಬಲವಿದ್ದೇ ಇರುತ್ತದೆ ಎನ್ನುವ ಹಮ್ಮು ಒಂದು ಕಡೆಯಾದರೆ, ಜನರನ್ನು ಮರುಳು ಮಾಡುವ ಬೌದ್ಧಿಕ ಕೌಶಲ್ಯದ ಹಮ್ಮು ಮತ್ತೊಂದು ಕಡೆ. ಸ್ವಾತಂತ್ರ್ಯದ ಸಮಯ ಹತ್ತಿರವಾಗುತ್ತಿದ್ದ ದಿನಗಳಲ್ಲಿ ನಿನ್ನ ಭಾಷಣವೆಂದರೆ ಲಕ್ಷಾಂತರ ಜನ ಸೇರುತ್ತಿದ್ದರು. ನಿನ್ನ ಒಂದು ಕರೆಗೆ ದೇಶಕ್ಕೆ ದೇಶವೇ ಎದ್ದು ನಿಲ್ಲುತ್ತಿತ್ತು. ಇಂದು ನಮ್ಮ ನೇತಾರರ ಭಾಷಣಕ್ಕೆ ದಿನಗೂಲಿ ಕೊಟ್ಟು ಬಸ್ಸು ಲಾರಿಗಳಲ್ಲಿ ಜನ ಕರೆತರಬೇಕಿದೆ. ಪ್ರಜಾಸತ್ತಾತ್ಮಕ ಪರಮಾಧಿಕಾರವೆನ್ನುವುದು ಪರಮ ಭ್ರಷ್ಟಾಚಾರಕ್ಕೆಡೆಮಾಡಿಕೊಟ್ಟಿದೆ. ಬಹುಮತ ಎನ್ನುವುದು ತುರ್ತು ಪರಿಸ್ಥಿತಿ ಹೇರಿಕೆಗೂ ಬಳಕೆಯಾಗಿದೆ, ಸಂವಿಧಾನ ಬದಲಿಸಲೂ ಕುಮ್ಮಕ್ಕಾಗುತ್ತಿದೆ. ನೀನು ಹೇಳಿದ ಆಸ್ತಿಗಳ ದತ್ತಿ ಒಡೆತನ ಕಾರ್ಪೊರೇಟ್ ವಲಯದ ಖಾಸಗೀ ಧುರಿಣರ ಏಕವ್ಯಕ್ತಿ ಮಾಲಿಕತ್ವವಾಗುತ್ತಿದೆ. ಹಂಚಿಕೆಯ ನ್ಯಾಯ ಕರಗಿ ಕ್ರೋಡೀಕರಣದತ್ತ ನಡೆಯುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ರೈಲು ಹಳಿ ತಪ್ಪುತ್ತಿದೆ. ಅದು ಸರಿದಾರಿಯಲ್ಲಿ ಸಾಗಲು ನಿನ್ನ ಚಾಲಕತ್ವ ಹೊರತು ಬೇರೆ ದಾರಿ ಕಾಣುತ್ತಿಲ್ಲ. ಸರ್ವೋದಯದ ಸೈರನ್ನಿನ ಬಟನ್ ಒತ್ತಬೇಕಿದೆ. ನೀನು ಮೃತ್ಯುವಿನತ್ತ ಹೆಜ್ಜೆ ಹಾಕುವಾಗ ಸೂರ್ಯ ಪಶ್ಚಿಮದಲ್ಲಿ ಅಸ್ತಂಗತನಾಗುತ್ತಿದ್ದ. ಮರುದಿನ ಬೆಳಿಗ್ಗೆ ನೀನಿರುವುದಿಲ್ಲ ಎಂದು ಮಿರುಗುವ ಬೊಕ್ಕ ತಲೆಯ ಮೇಲೆ ತನ್ನ ಕೆಂಪು ಕಿರಣಗಳನ್ನು ಬಿಟ್ಟು ಚುಂಬಿಸಿ ಕಳುಹಿಸಿದ. ಇದೀಗ ದಶಕಗಳ ಕತ್ತಲೆ ಕಳೆದು ಮತ್ತೆ ತನ್ನ ಬೆಳಗಿನ ಬಂಗಾರದ ಕಿರಣಗಳೊಂದಿಗೆ ನಿನ್ನನ್ನು ಸ್ವಾಗತಿಸಲು ರೆಡಿ ಇದ್ದಾನೆ. ನೀನಾದರೂ ಇಂದಿನ ಪ್ರಕ್ಷುಬ್ಧ ಸ್ಥಿತಿಯನ್ನು ಸ್ತಬ್ಧ ಮಾಡಲು ಮತ್ತು ಸರ್ವೋದಯದುದಯಕ್ಕಾಗಿ ಸತ್ಯಾಗ್ರಾಹಿಯಾಗಿ ಹುಟ್ಟಿ ಬಾ ಬಾಪು, ಮತ್ತೆ ಹುಟ್ಟಿ ಬಾ.


