ಒಳ ಮೀಸಲಾತಿ ಚರ್ಚೆಯ ಹಿನ್ನಲೆಯಲ್ಲಿ ಮೂಡಿಬರುತ್ತಿರುವ ಈ ವಿಶೇಷ ಸಂಚಿಕೆಯಲ್ಲಿ ಕರ್ನಾಟಕದ ಹಲವು ಹೋರಾಟಗಾರರು ಮತ್ತು ಸಾಹಿತಿಗಳ ಸಂದರ್ಶನ ನಡೆಸಿದ್ದವು. ಈ ಸಂದರ್ಶನಗಳನ್ನು ಹುಲಿಕುಂಟೆ ಮೂರ್ತಿ ಮತ್ತು ವಿಕಾಸ್ ಮೌರ್ಯ ಸಂಯೋಜಿಸಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಅನುಸೂಯ ಕಾಂಬಳೆ ಉತ್ತರಿಸಿದ್ದಾರೆ. ಪ್ರಶ್ನೆಗಳು ಇಲ್ಲಿವೆ.
1. ಒಳಮೀಸಲಾತಿಯ ಬಗ್ಗೆ ನಿಮ್ಮ ನಿಲುವೇನು?
ಮೀಸಲಾತಿ ಜಾರಿಗೆ ಬಂದ ಸಂದರ್ಭ ಮತ್ತು ಬದಲಾದ ಇಂದಿನ ಪರಿಸ್ಥಿತಿ ಎರಡೂ ಬೇರೆ ಬೇರೆ. ಮೀಸಲಾತಿ ನಿಗದಿಗೊಳಿಸಿದಾಗ ಪಟ್ಟಿಯಲ್ಲಿ ಆರು ಜಾತಿಗಳಿದ್ದವು. ಈಗ ನೂರಾಒಂದು ಜಾತಿಗಳನ್ನು ಆ ಪಟ್ಟಿಗೆ ಸೇರಿಸಿದಾಗಲೂ ಪ್ರತಿಶತ ಮೀಸಲಾತಿಯನ್ನು ಹೆಚ್ಚಿಸಿಲ್ಲ. ವಿಪರೀತ ಖಾಸಗೀಕರಣದಿಂದಾಗಿ ಸರ್ಕಾರಿ ವಲಯದ ಶಿಕ್ಷಣ ಮತ್ತು ನೌಕರಿಯಲ್ಲಿ ಮೀಸಲಾತಿ ಸಾಂಕೇತಿಕವಾಗಿ ಮಾತ್ರ ಉಳಿದಿದೆ. ಮೀಸಲಾತಿಯಲ್ಲಿ ಹೆಚ್ಚಳ ಆಗಬೇಕು ಮತ್ತು ಖಾಸಗಿ ಕ್ಷೇತ್ರಕ್ಕೂ ಮೀಸಲಾತಿಯನ್ನು ವಿಸ್ತರಿಸಬೇಕು ಎಂಬ ಹೋರಾಟಗಳು ಹುಟ್ಟಬೇಕಾದ ಸಂದರ್ಭದಲ್ಲಿ ಒಳಮೀಸಲಾತಿಯ ಚರ್ಚೆ ಮುನ್ನಲೆಗೆ ಬಂತು. ಒಳಮೀಸಲಾತಿಯಿಂದ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಸಮಾನತೆ ಬರುತ್ತದೆ ಎಂದು ಹೇಳುತ್ತಿದ್ದಾರೆ.
ಹೀಗೆ ಹೇಳುವವರು ಸಮಾನತೆಯನ್ನು ಯಾವ ಮಾನದಂಡಗಳಿಂದ ಆಳೆಯುತ್ತಿದ್ದಾರೆ ಗೊತ್ತಿಲ್ಲ. ಆದರೆ ಇದುವರೆಗೂ ಮೀಸಲಾತಿಯ ಫಲಾನುಭವಿಗಳಾಗದ ಜನರಿಗೆ ಮೀಸಲಾತಿ ದೊರೆಯುವಂತೆ ಮಾಡುವುದು ನ್ಯಾಯ. ಅದಕ್ಕಾಗಿ ಒಳಮೀಸಲಾತಿಯ ಅವಶ್ಯಕತೆ ಇದೆ.
2. ಒಳಮೀಸಲಾತಿ ಮತ್ತು ಮೀಸಲಾತಿ ಎರಡರ ತಾತ್ವಿಕತೆಯೂ ಭಿನ್ನವೇ ಅಥವಾ ಒಂದೆಯೇ?
ಒಳಮೀಸಲಾತಿ ಮತ್ತು ಮೀಸಲಾತಿ ಎರಡರ ತಾತ್ವಿಕತೆಯೂ ಒಂದೇ. ಆದರೆ ಪರಿಸ್ಥಿತಿ ಭಿನ್ನ. ಪಟ್ಟಿಯಲ್ಲಿರುವ ಎಲ್ಲ ಕೆಳಜಾತಿಗಳನ್ನು ಒಂದು ಸಮೂಹವಾಗಿ ನಿಗದಿಗೊಳಿಸಿ ನೀಡಿದ್ದ ಮೀಸಲಾತಿಯನ್ನು ಇಂದು ಜಾತಿ-ಜಾತಿಗಳಾಗಿ ಒಡೆದು ಹಂಚಿಕೆ ಮಾಡಲು ಸೂಚಿಸುತ್ತಿದೆ. ಇದರಿಂದಾಗಿ ಸಮುದಾಯಗಳು ಒಂದೊಂದು ಪ್ರತ್ಯೇಕ ಜಾತಿಗಳಾಗಿ ಒಡೆದಿವೆ. ಒಳಮೀಸಲಾತಿ ಇಂದು ಒಂದುಗೂಡುವಿಕೆಯ ಆಶಯವಾಗಿ ಜಾರಿಗೊಳ್ಳಲಿ.
3. ಮೀಸಲಾತಿಗೆ ಶೇ.50 ರ ಮಿತಿ ಹೇರಿಕೆ, ಶೇ.3 ರಷ್ಟಿರುವ ಸಮುದಾಯಗಳಿಗೆ ಶೇ. 10 ಮೀಸಲಾತಿ ಕಲ್ಪಿಸಿರುವುದರ ವಿರುದ್ಧ ಹೋರಾಟಗಳಾಗಲಿಲ್ಲವೇಕೆ?
ಜಾತಿ ಇರುವವರೆಗೆ ಮೀಸಲಾತಿ ಇರಬೇಕು ಮತ್ತು ಒಳಮೀಸಲಾತಿ ಜಾರಿಗೊಳ್ಳಬೇಕು ಎಂಬ ಬಿಕ್ಕಟ್ಟಿನ ಸಂದರ್ಭವಿದು. ಮೀಸಲಾತಿಯನ್ನು ಉಳಿಸಿಕೊಳ್ಳುವ ಮತ್ತು ಸಂವಿಧಾನದ ಉಳುವಿಗಾಗಿ ಹೋರಾಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಿದ ಮೀಸಲಾತಿ ಒಂದು ರಾಜಕೀಯ ವಿಷಯವಾಗಿದೆ. ಪ.ಜಾ, ಪ.ಪಂ.ಗಳ ಜನರಷ್ಟೇ ಅಲ್ಲ, ಆ ಹತ್ತು ಪ್ರತಿಶತ ಮೀಸಲಾತಿಗೆ ಒಳಪಡದ ಎಲ್ಲ ಜಾತಿ ಜನರೂ ಹೋರಾಡಬೇಕಿದೆ. ಐವತ್ತರಿಂದ ಅರವತ್ತು ಪ್ರತಿಶತಕ್ಕೆ (ಸುಪ್ರೀಂ ಕೋರ್ಟ್ ಆದೇಶ ಮೀರಿಯೂ) ಹೆಚ್ಚಿದ್ದರಿಂದ ಬಾಕಿ ಉಳಿದ ನಲವತ್ತು ಪ್ರತಿಶತ ಮೀಸಲಾತಿ ಕೆಲವೇ ಜಾತಿ ಜನರಿಗೆ ಲಭಿಸುತ್ತದೆ. ಈ ಅಸಮಾನತೆಯನ್ನು ತೊಲಗಿಸಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಎಲ್ಲಾ ಜಾತಿಗಳಿಗೂ ಮೀಸಲಾತಿಯನ್ನು ನಿಗದಿಗೊಳಿಸಿ ನೂರಕ್ಕೆ ನೂರರಷ್ಟು ಜಾತಿ ಜನಸಂಖ್ಯಾವಾರು ಮೀಸಲಾತಿಯನ್ನು ಜಾರಿಗೊಳಿಸಬೇಕು. ಇದರಿಂದಾಗಿ ಭಾರತೀಯ ವ್ಯವಸ್ಥೆಯಲ್ಲಿ ರಾಜಕೀಯ, ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಗಳನ್ನಿಡಲು ಸಾಧ್ಯವಾಗುತ್ತದೆ.
4. ಸ್ಪೃಶ್ಯರನ್ನು ಪರಿಶಿಷ್ಠ ಜಾತಿ ಪಟ್ಟಿಯಿಂದ ಹೊರಗಿಡಬೇಕೆಂಬುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ.ಜಾ, ಪ.ಪಂ.ಗಳ ಮೀಸಲಾತಿಯನ್ನು ಜಾರಿಗೊಳಿಸುವಾಗ ಕಾರಣಗಳನ್ನು ಸಂವಿಧಾನದಲ್ಲಿ ಸ್ಪಷ್ಟಪಡಿಸಲಾಗಿದೆ. ಅಸ್ಪೃಶ್ಯತೆಯ ನೋವು-ಅವಮಾನಗಳಿಗೆ ಒಳಗಾದವರು ಎಂಬುದೂ ಮುಖ್ಯವಾಗಿದೆ. ಆದ್ದರಿಂದ ಅಸ್ಪೃಶ್ಯ ಜಾತಿಗಳ ಪಟ್ಟಿಯಿಂದ ಸ್ಪೃಶ್ಯ ಜಾತಿಗಳನ್ನು ಹೊರತೆಗೆದು ಅವರಿಗೆ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕು.
5. ಕೆಲವು ಬಲಗೈ ರಾಜಕಾರಣಿಗಳು ಒಳಮೀಸಲಾತಿ ವಿರುದ್ಧವಾಗಿ ದನಿ ಎತ್ತಿದ ಕಾರಣಕ್ಕೆ ಹೊಲೆಮಾದಿಗರ ನಡುವೆ ಭಿನ್ನತೆ ಉಂಟಾಯಿತು ಎನ್ನಲಾಗುತ್ತದೆ. ನಿಜಕ್ಕೂ ಆಯಾ ದಲಿತ ಜಾತಿಗಳನ್ನು ಪ್ರತಿನಿಧಿಸುವ ಪ್ರಾಮಾಣಿಕ ರಾಜಕಾರಣಿಗಳು ಇಂದಿಗೂ ಇದ್ದಾರೆಯೇ?
ಪ್ರಾಮಾಣಿಕ ರಾಜಕಾರಣಿಗಳು ಇದ್ದಾರೆ. ಸಮುದಾಯಗಳ ಕಾಳಜಿ ಉಳ್ಳವರಾಗಿದ್ದಾರೆ. ಒಳಮೀಸಲಾತಿ ಅವರನ್ನು ಒಡೆದು ಅಳುತ್ತಿರುವುದು ನಿಜ. ಕರ್ನಾಟಕದಲ್ಲಿ ಆಯಾ ಪ್ರದೇಶವಾರು ಎಡಗೈ ಮತ್ತು ಬಲಗೈಗಳವರ ಪರಿಸ್ಥಿತಿ ಭಿನ್ನವಾಗಿದ್ದರಿಂದ ಕೆಲವು ಭಾಗದಲ್ಲಿ ಎಡಗೈನವರು ಕೆಲವು ಭಾಗದಲ್ಲಿ ಬಲಗೈನವರು ಹೆಚ್ಚು ಮೀಸಲಾತಿಯ ಸೌಲಭ್ಯವನ್ನು ಪಡೆದಿದ್ದಾರೆಂಬ ವಾದವಿತ್ತಾದ್ದರಿಂದ ಅದು ಪರಸ್ಪರ ವಿರುದ್ಧ ಧ್ವನಿಯಾಗಿ ಕಂಡಿದೆ. ಪ್ರದೇಶವಾರು ಆಯಾ ಜಾತಿಗಳು ಪಡೆದ ಮೀಸಲಾತಿಯ ವರದಿಯೊಂದು ಸಿದ್ಧವಾಗಿದ್ದರೆ ವಾಸ್ತವದ ಅರಿವು ಮೂಡಿ ಒಂದಾಗಬಹುದಾಗಿತ್ತು. ಇದರಿಂದಾಗಿ ಇಬ್ಬರ ನಡುವೆ ಭಿನ್ನತೆ ಉಂಟಾಯಿತು. ಈಗ ಇಬ್ಬರಿಗೂ ಒಳಮೀಸಲಾತಿಯಿಂದಾಗಿ ರಾಜಕೀಯವಾಗಿ ಅಧಿಕಾರ ವಂಚಿತರಾಗುತ್ತಿರುವುದು ಮನದಟ್ಟಾಗಿದೆ.
6. ಒಳಮೀಸಲಾತಿ ದಲಿತರನ್ನು ಒಡೆದು ಆಳುತ್ತದೆ ಎಂದು ಆರಂಭದಲ್ಲಿ ಭಯ ಬೀಳಿಸಿದ್ದಿದೆ. ಆದರೆ ಈಗ ಒಳಮೀಸಲಾತಿ ಜಾರಿಯಾಗದಿದ್ದರೆ ದಲಿತರ ಒಗ್ಗಟ್ಟು ಸಂಪೂರ್ಣ ಮುರಿದು ಬೀಳುತ್ತದೆ ಎಂಬ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಒಳಮೀಸಲಾತಿ ಇಟ್ಟುಕೊಂಡು ಒಡೆದು ಆಳುತ್ತಿರುವ ವಾಸ್ತವ ಸತ್ಯ. ಕಳೆದ ಲೋಕಸಭಾ ಚುನಾವಣೆ ಇದಕ್ಕೆ ನಿದರ್ಶನ. ಎರಡೂ ಬಣಗಳವರು ಒಳಮೀಸಲಾತಿ ಆದಷ್ಟು ಬೇಗ ಜಾರಿಗೆ ಬರಲಿ ಎಂಬ ಆಶಯವುಳ್ಳವರಾಗಿದ್ದಾರೆ. ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನ ತೀರ್ಪೂ ಬಂದಿದೆ. ಒಳಮೀಸಲಾತಿಗೂ ರಾಜಕೀಯಕ್ಕೂ ನೇರಾನೇರ ಸಂಬಂಧವಿರುವುದರಿಂದ ತಮ್ಮ ಒಗ್ಗಟ್ಟಿನಲ್ಲಿ ರಾಜಕೀಯ ಅಧಿಕಾರವಿದೆ ಎಂಬ ಅರಿವು ಮೂಡಿದೆ.
7. ಸದಾಶಿವ ಆಯೋಗದ ವರದಿ ಜಾರಿ ಮಾಡುವುದರ ಕುರಿತು ನಿಮ್ಮ ಅನಿಸಿಕೆ ಏನು?
ಸದಾಶಿವ ಆಯೋಗದ ವರದಿ ಜಾರಿಗೆ ಬರಲಿ. ಎಲ್ಲಾ ಜಾತಿಗಳಿಗೂ ಮೀಸಲಾತಿಯನ್ನು ನಿಗದಿಗೊಳಿಸುವ ಸಂಬಂಧವಾಗಿ, ನೂರಕ್ಕೆ ನೂರರಷ್ಟು ಜಾತಿ ಜನಸಂಖ್ಯಾವಾರು ಮೀಸಲಾತಿ ನೀಡಲು ಮತ್ತು ಖಾಸಗಿ ವಲಯಕ್ಕೂ ಮೀಸಲಾತಿಯನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಸರ್ಕಾರವು ಆಯೋಗಗಳನ್ನು ರಚಿಸಲಿ.

(ಬರಹಗಾರ್ತಿ ಅನಸೂಯ ಸಾಹಿತ್ಯದಲ್ಲಿ ದಲಿತ ಸಂವೇದನೆಯನ್ನು ದಾಖಲಿಸಿದ ಪ್ರಮುಖರಲ್ಲಿ ಒಬ್ಬರು. ‘ಮುಳ್ಳು ಕಂಟಿಯ ನಡುವೆ’ ಸೇರಿದಂತೆ ಹಲವು ಕವನಸಂಕಲನಗಳು ಪ್ರಕಟವಾಗಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹಗಳ ಬಗ್ಗೆ ಅಧ್ಯಯನ ಮಾಡಿರುವುದಲ್ಲದೆ ಕನ್ನಡದ ಸಾಹಿತ್ಯದ ಮೇಲೆ ಬಾಬಾಸಾಹೇಬರ ಪ್ರಭಾವದ ಬಗ್ಗೆಯೂ ಪ್ರಬಂಧ ಮಂಡಿಸಿದ್ದಾರೆ.)


