ಕೆನಡಾದಲ್ಲಿರುವ ದಕ್ಷಿಣ ಏಷ್ಯಾದ 25 ಸಮುದಾಯಗಳ ಸದಸ್ಯರು ದೇಶದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಕೆನಡಾದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಅದರ ಅಂಗ ಸಂಸ್ಥೆಗಳನ್ನು ದ್ವೇಷದ ಗುಂಪುಗಳು ಅಥವಾ ತೀವ್ರ ಬಲಪಂಥೀಯ ಉಗ್ರಗಾಮಿ ಸಂಘಟನೆಗಳ ಪಟ್ಟಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಖಲಿಸ್ತಾನ್ ಪ್ರತ್ಯೇಖವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅನ್ನು 2023ರಲ್ಲಿ ಹತ್ಯೆಗೈದ ವಿಚಾರ ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿರುವ ನಡುವೆ ಆರ್‌ಎಸ್ಎಸ್ ವಿರೋಧಿ ಕೂಗು ಕೇಳಿ ಬಂದಿರುವುದು ಮಹತ್ವ ಪಡೆದುಕೊಂಡಿದೆ.
ಕೆನಡಾದಲ್ಲಿ ಸಿಖ್ ವಿರೋಧಿ ಹಿಂಸಾಚಾರದ ಹಿಂದೆ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಪಾತ್ರವಿದೆ ಎಂದು ಕೆನಡಾದ ಮುಸ್ಲಿಮರ ರಾಷ್ಟ್ರೀಯ ಮಂಡಳಿಯು ಪ್ರಕಟಿಸಿದ 2023ರ ವರದಿಯನ್ನು ದಕ್ಷಿಣ ಏಷ್ಯಾದ ಸಮುದಾಯಗಳ ಸದಸ್ಯರ ಹೇಳಿಕೆ ಉಲ್ಲೇಖಿಸಿದೆ.
ಕೆನಡಾದಲ್ಲಿ ಸಂಘಪರಿವಾರ ಮತ್ತು ಆರ್‌ಎಸ್‌ಎಸ್ ಸಂಬಂಧಿತ ಗುಂಪುಗಳು ಹಿಂದೂ ಪ್ರಾಬಲ್ಯದ ಕೃತ್ಯಗಳ ಹಿಂದೆ ಇದೆ ಎಂದು 2023ರ ವರದಿ ಹೇಳಿತ್ತು.
“ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ಅಂಗವಾಗಿದೆ. ಇದು ಯುರೋಪಿಯನ್ ಫ್ಯಾಸಿಸಂನಿಂದ ಪ್ರೇರಿತವಾದ “ಹಿಂದುತ್ವ” ಅಥವಾ ಹಿಂದೂ ರಾಷ್ಟ್ರೀಯತೆಯನ್ನು ಉತ್ತೇಜಿಸುವ ಅರೆಸೈನಿಕ ಸಂಘಟನೆಯಾಗಿದೆ” ಎಂದು ದಕ್ಷಿಣ ಏಷ್ಯಾದ ಸಮುದಾಯಗಳ ಸದಸ್ಯರ ಹೇಳಿಕೆ ತಿಳಿಸಿದೆ.
“ಆರ್‌ಎಸ್‌ಎಸ್‌ನ ಸಂಸ್ಥಾಪಕರು ಸ್ಪಷ್ಟವಾಗಿ ಫ್ಯಾಸಿಸ್ಟ್ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ನಾವು ಇದರ ಜ್ವಲಂತ ಉದಾಹರಣೆಗಳನ್ನು ನೋಡಿದ್ದೇವೆ. 200 ಮಿಲಿಯನ್ ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವನ್ನು ಹಿಂದೂ ಜನಾಂಗೀಯ-ರಾಷ್ಟ್ರೀಯ ರಾಜ್ಯವನ್ನಾಗಿ ಮಾಡುವ ಗುರಿಯತ್ತ ಭಾರತದ ಸರ್ಕಾರ ಕೊಂಡೊಯ್ಯುತ್ತಿದೆ ಮತ್ತು ಇತರ ಅಲ್ಪಸಂಖ್ಯಾತ ಜನಸಂಖ್ಯೆಗಳಾದ ಸಿಖ್, ದಲಿತ, ಆದಿವಾಸಿ (ಸ್ಥಳೀಯ ಜನರು) ಹಾಗೂ ಕ್ರಿಶ್ಚಿಯನ್ನರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾಡಲಾಗಿದೆ” ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಕೆನಡಿಯನ್ ಕೌನ್ಸಿಲ್ ಆಫ್ ಇಂಡಿಯನ್ ಮುಸ್ಲಿಮ್ಸ್ (ಸಿಸಿಐಎಂ) ಕೆನಡಿಯನ್ ಕೌನ್ಸಿಲ್ ಆಫ್ ಮುಸ್ಲಿಂ ವುಮೆನ್, ಮಾಂಟ್ರಿಯಲ್, ಕೆನಡಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ಡೆಮಾಕ್ರಸಿ ಇನ್ ಇಂಡಿಯಾ, ಕೆನಡಿಯನ್ಸ್ ಅಗೇನ್ಸ್ಟ್ ಒಪ್ರೆಶನ್ ಅಂಡ್ ಪರ್ಸಿಕ್ಯೂಶನ್ (ಸಿಎಒಪಿ), ಕೆನಡಿಯನ್ಸ್ ಫಾರ್ ಇಂಡಿಯನ್ ಡೆಮಾಕ್ರಸಿ (ಸಿಐಡಿ) ಮತ್ತು ಪ್ಯಾಲೆಸ್ತೀನಿಯನ್ ಅಂಡ್ ಜ್ಯೂವಿಶ್ ಯೂನಿಟಿ (ಪಿಎಜೆಯು) ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
“ಹಿಂದೂ ರಾಷ್ಟ್ರೀಯತಾವಾದಿ ಸರ್ಕಾರದ ಅಡಿಯಲ್ಲಿ, ಭಾರತದಲ್ಲಿ ಆಗಾಗ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳನ್ನು ನಿರ್ಭಯದಿಂದ ಮತ್ತು ಸಹಭಾಗಿತ್ವದಿಂದ ನಡೆಸಲಾಗಿದೆ. ಇತ್ತೀಚಿನ ವರದಿಗಳಲ್ಲಿನ ಪುರಾವೆಗಳು ಈ ಉಗ್ರಗಾಮಿ ಗುಂಪುಗಳ ಜಾಲವು ಸಿಖ್ಖರು, ಕೆನಡಾ ಮತ್ತು ಯುಎಸ್‌ನಲ್ಲಿರುವ ಇತರ ವಲಸೆ ಭಾರತೀಯ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಖಚಿತಪಡಿಸುತ್ತದೆ. ಕೆನಡಾ ಮತ್ತು ವಿಶ್ವದಾದ್ಯಂತ ಹಿಂದೂ ರಾಷ್ಟ್ರೀಯತಾವಾದಿಗಳು ಮತ್ತು ಅವರ ಅಂಗ ಸಂಸ್ಥೆಗಳ ವ್ಯಾಪಕವಾದ ಜಾಲ ಹಬ್ಬಿದೆ. ಈಗ ಕೆನಡಾದಲ್ಲಿ ಈ ಜಾಲವು ಗೊಂದಲದ ಮಾದರಿಯ ಬಲಾತ್ಕಾರ, ಸಂಘಟಿತ ಅಪರಾಧ ಮತ್ತು ಮಾರಣಾಂತಿಕ ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದೆ” ಎಂದು ಬಹಿರಂಗ ಪತ್ರದಲ್ಲಿ ಹೇಳಲಾಗಿದೆ.
ಕೆನಡಾ ಸರ್ಕಾರವು ದಕ್ಷಿಣ ಏಷ್ಯನ್ನರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ರಕ್ಷಣೆ ಒದಗಿಸಲು ಆರ್‌ಎಸ್‌ಎಸ್ ಮತ್ತು ಅದರ ಅಂಗ ಸಂಸ್ಥೆಗಳ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪ್ರಭಾವವನ್ನು ತನಿಖೆ ಮಾಡಬೇಕು. ಕೆನಡಾದಲ್ಲಿ ಆರ್‌ಎಸ್‌ಎಸ್ ಮತ್ತು ಅದರ ಅಂಗ ಸಂಸ್ಥೆಗಳನ್ನು ದ್ವೇಷದ ಗುಂಪುಗಳು ಅಥವಾ ತೀವ್ರ ಬಲಪಂಥೀಯ ಉಗ್ರಗಾಮಿ ಗುಂಪುಗಳಾಗಿ ಪಟ್ಟಿ ಮಾಡುವಂತೆ ಬಹಿರಂಗ ಪತ್ರವು ಒತ್ತಾಯಿಸಿದೆ.
ಸೌಜನ್ಯ : thewire.in
ಇದನ್ನೂ ಓದಿ : ಮುಂದುವರಿದ ಇಸ್ರೇಲ್ ಆಕ್ರಮಣ | ಗಾಝಾದಲ್ಲಿ 84 ಸಾವು, ಲೆಬನಾನ್‌ನಲ್ಲೂ ಹಲವರ ಹತ್ಯೆ


