ಅನ್ನಭಾಗ್ಯ ಪಡಿತರ ಯೋಜನೆಯಡಿ ಮೈಸೂರಿನಲ್ಲಿ ಆಹಾರ ನಿಗಮದ ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಮ್‌ಸಿ ಗೋದಾಮುಗಳಲ್ಲಿ ದುಡಿಯುವ ಹಮಾಲಿ ಕಾರ್ಮಿಕರಿಗೆ ಸಮರ್ಪಕ ಕಾರ್ಮಿಕ ಕಾನೂನುಗಳು ಜಾರಿಯಾಗದ ಹಿನ್ನೆಲೆ ಜುಲೈ 10ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಲೋಡಿಂಗ್ ಹಾಗೂ ಅನ್‌ಲೋಡಿಂಗ್ ಕಾರ್ಮಿಕರ ಒಕ್ಕೂಟದ ಮುಖಂಡರು, ಜುಲೈ 10ಕ್ಕೆ ಪಡಿತರ ಯೋಜನೆಗೆ ಅನ್ನಭಾಗ್ಯವೆಂದು ಹೆಸರಿಟ್ಟು 12 ವರ್ಷ ತುಂಬುತ್ತದೆ. ಆದರೆ, ಅದನ್ನು ಜಾರಿ ಮಾಡುವ ಹಮಾಲಿ ಕಾರ್ಮಿಕರ ಬದುಕು ಇನ್ನೂ ಅತಂತ್ರವಾಗಿದೆ ಎಂದಿದ್ದಾರೆ.
ಆಹಾರ ನಿಗಮದ ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಮ್‌ಸಿ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಎತುವಳಿ ಲೋಡಿಂಗ್ ಹಾಗೂ ಅನ್ ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಸರ್ಕಾರ 2024-2026 ಟೆಂಡರ್ ನಿಯಮಾವಳಿ ಪ್ರಕಾರ ಇಎಸ್ಐ ಮತ್ತು ಪಿಎಫ್ ಪಾವತಿಸುವುದು ಕಡ್ಡಾಯ ಮಾಡಿದೆ. ಮೈಸೂರು ಜಿಲ್ಲೆಯಲ್ಲಿ ಇದು ಇನ್ನೂ ಜಾರಿಯಾಗಿಲ್ಲ. ಇಎಸ್ಐ ಕಟ್ಟದೆ ಇರುವ ಕಾರಣದಿಂದ ಆನಾರೋಗ್ಯಕ್ಕೀಡಾದ ಕಾರ್ಮಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಕೈಯಿಂದ ಹಣ ಪಾವತಿಸಬೇಕಾದ ಸಂದರ್ಭ ಬಂದಿದೆ. ಇಎಸ್ಐ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ” ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ವರದಾರಾಜು ಹೇಳಿದ್ದಾರೆ.
2025ರ ಫೆಬ್ರವರಿ ಮಾಹೆಯಿಂದಲೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರು ಕಾರ್ಮಿಕರಿಂದ ಇಎಸ್ಐ ಮತ್ತು ಪಿಎಫ್ ವಂತಿಗೆ ಕಡಿತ ಮಾಡಿದ್ದು, ಇಲ್ಲಿಯವರೆಗೂ ಪಾವತಿ ಮಾಡದೇ ಇರುವುದು ಕಾನೂನೂ ಬಾಹಿರ ಮತ್ತು ಕ್ರಿಮಿನಲ್ ಅಪರಾಧ. ಹಾಗಾಗಿ, ಇದರ ಬಗ್ಗೆ ತುರ್ತಾಗಿ ಗಮನವಹಿಸಿ, ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.
2025ರ ಫೆಬ್ರವರಿಯಲ್ಲಿ ಚಿಲ್ಲರೆ ಮತ್ತು ಸಗಟು ಟೆಂಡರ್ ಆಗಿದ್ದು, ಹಲವು ತಾಲೂಕುಗಳಿಗೆ ಟೆಂಡರ್ ಆಗದೆ ಉಳಿದಿರುವ ಕಾರಣ ಆ ತಾಲೂಕುಗಳಿಗೆ ಕೂಲಿ ಹೆಚ್ಚಳವಾಗದೇ ಅಲ್ಲಿ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. 2025ರ ಫೆಬ್ರವರಿಯಿಂದ ಕ್ವಿಂಟಾಲ್ 5.54 ರೂಪಾಯಿ ನಷ್ಟವಾಗುತ್ತಿದೆ. ಆ ತಾಲೂಕಿಗೆ ತಕ್ಷಣವೇ ಸಗಟು ಮತ್ತು ಚಿಲ್ಲರೆ ಸಾಗಾಣಿಕೆ ಟೆಂಡರ್ ಆದೇಶ ಮಾಡಬೇಕು. ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದ್ದಲ್ಲಿ ಆ ತಾಲೂಕುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಕೂಡಲೇ ಹೊಸ ದರ ಚಿಲ್ಲರೆ ಸಾಗಾಣಿಕೆ ಕ್ವಿಂಟಾಲ್ ಗೆ 23.62 ರೂಪಾಯಿ ಹಾಗೂ ಸಗಟು ಸಾಗಾಣಿಕೆ ಟೆಂಡರ್ ಕ್ವಿಂಟಾಲ್‌ಗೆ 10.92 ರೂಪಾಯಿ ನಿಗದಿ ಮಾಡಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಿಲ್ಲರೆ ಸಾಗಾಣಿಕೆಗೆ ಯಾವುದೇ ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕ ಕಾಯ್ದೆ ಪ್ರಕಾರ ನಿಯಮಾವಳಿಗಳನ್ನು ಪಾಲಿಸುತಿಲ್ಲ. ಸರಿಯಾದ ಸಮಯಕ್ಕೆ ಸಂಬಳ (ಕೂಲಿ) ಪಾವತಿ ಮಾಡುತ್ತಿಲ್ಲ. ಸಂಬಳ ಪಾವತಿ ರಸೀದಿ ಅಥವಾ ಸಂಬಳ ಚೀಟಿ (WAGE SLIP ) ಇಎಸ್ಐ ಮತ್ತು ಪಿಎಫ್ ವಂತಿಕೆ ಪಾವತಿ ರಸೀದಿ ನೀಡುತ್ತಿಲ್ಲ. ಹಾಗಾಗಿ, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸಂಬಳ ಪಾವತಿಸಲು ಹಾಗೂ ಆಯಾ ತಿಂಗಳು ಇಎಸ್ಐ ಮತ್ತು ಪಿಎಫ್ ವಂತಿಕೆ ಪಾವತಿಸಿ ರಸೀದಿ ನೀಡಲು ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.
2023ರ ಜುಲೈನಿಂದ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರು ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೂಲಿ ದರ 1.90 ರೂಪಾಯಿ ಕಡಿಮೆ ಪಾವತಿ ಮಾಡಿದ್ದು, ಇದರ ಬಗ್ಗೆ 2024ರ ಸೆಪ್ಟಂಬರ್ 20 ರಂದು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಆದರೆ, ಇದುವರೆಗೆ ಪಾವತಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಎಲ್ಲಾ ಕಾರಣಗಳನ್ನು ಮುಂದಿಟ್ಟು ಜುಲೈ 10ರಂದು ಮೈಸೂರು ಜಿಲ್ಲೆಯಾದ್ಯಂತ ಕೆಲಸ ಬಂದ್ ಮಾಡಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಕರಿನಾಯಕ ಮಾಹಿತಿ ನೀಡಿದ್ದಾರೆ.