ಲೋಕಾಯುಕ್ತ ಪುನರ್‌ಸ್ಥಾಪಿಸಿದ್ದು ಬಿಜೆಪಿಯಲ್ಲ, ಮೂರು ಪಕ್ಷಗಳಿಗೆ ಆ ಸ್ವತಂತ್ರ ಸಂಸ್ಥೆ ಲೋಕಾಯುಕ್ತ ಬೇಕಿಲ್ಲ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅಭಿಪ್ರಾಯಪಟ್ಟಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಆತನ ಪುತ್ರ ಪ್ರಶಾಂತ್ ಮಾಡಾಳ್ ರವರ ಭಾರೀ ಭ್ರಷ್ಟಾಚಾರವನ್ನು ಬಯಲಿಗೆಳೆದ ನಂತರ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಲೋಕಾಯುಕ್ತ ಪುನರ್ ಸ್ಥಾಪಿಸಿದ್ದು ನಾವು ಎಂದು ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ತಮ್ಮ ಪಕ್ಷದ ಶಾಸಕರ ಕಮಿಷನ್ ದಂಧೆಯನ್ನು ಮರೆಮಾಚುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಎಸಿಬಿ ರದ್ದುಗೊಳಿಸಿ, ಲೋಕಾಯುಕ್ತ ಮರುಸ್ಥಾಪನೆಯಾಗಿದ್ದು ಹೇಗೆ ಎಂಬ ಚರ್ಚೆಗಳು ನಡೆಯುತ್ತಿವೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಚ್ಚಲಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು, ನಾವು ರಾಜ್ಯದಲ್ಲಿ ಭ್ರಷ್ಟಾಚಾರ ಸಮಗ್ರವಾಗಿ ನಿಗ್ರಹಿಸುವ ಉದ್ದೇಶದಿಂದ ಪುನರಾರಂಭಿಸಿದ್ದೇವು. ಶಾಸಕರ ಪುತ್ರ ಹಣ ಪಡೆದ ವಿಚಾರದ ಬಗ್ಗೆ ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ತನಿಖೆ ಮಾಡಲಿ ಎಂಬುದು ನಮ್ಮ ನಿಲುವಾಗಿದೆ.
1/2 pic.twitter.com/ba5r3jthB1— Basavaraj S Bommai (@BSBommai) March 3, 2023
2016 ರಲ್ಲಿ ಲೋಕಾಯುಕ್ತ ಅಧಿಕಾರವನ್ನು ಮೊಟಕುಗೊಳಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಎಸಿಬಿ ರಚನೆ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳು ದಾಖಲಾಗಿದ್ದವು. ಮುಖ್ಯವಾಗಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರ ಸಮಾಜ ಪರಿವರ್ತನಾ ಸಮುದಾಯ, ವಕೀಲರ ಸಂಘ ಮತ್ತು ವಕೀಲ ಚಿದಾನಂದ ಅರಸ್‌ರವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆದಿತ್ತು.
ಕರ್ನಾಟಕ ಹೈಕೋರ್ಟ್‌ನ ಜಸ್ಟೀಸ್ ಬಿ ವೀರಪ್ಪ ಹಾಗೂ ಜಸ್ಟೀಸ್ ಕೆ.ಎಸ್. ಹೇಮಲೇಖ ಅವರಿದ್ದ ಪೀಠವು ಸುಧೀರ್ಘ ವಿಚಾರಣೆಯ ನಂತರ ಆಗಸ್ಟ್ 12, 2022 ರಂದು ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಪಡಿಸಿಬೇಕು, ಲೋಕಾಯುಕ್ತವನ್ನು ಬಲಪಡಸಿಬೇಕು ಎಂದು ತೀರ್ಪು ನೀಡಿತ್ತು. ಅಲ್ಲದೆ ಎಸಿಬಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಲು ಕೋರ್ಟ್ ಆದೇಶಿಸಿತ್ತು.
ಹೈಕೋರ್ಟ್ ಆದೇಶ ನೀಡಿದ ನಂತರವಷ್ಟೇ ಲೋಕಾಯುಕ್ತ ಮರುಸ್ಥಾಪನೆಯಾಗಿದೆ: ಎಸ್.ಆರ್ ಹಿರೇಮಠ
ಎಸಿಬಿ ರದ್ದಾಗಬೇಕು ಮತ್ತು ಲೋಕಾಯುಕ್ತ ಮರು ಸ್ಥಾಪಿಸಬೇಕು ಎಂದು ಪಿಐಎಲ್ ಹೂಡಿ ಹೋರಾಡಿದ್ದ ಸಮಾಜ ಪರಿವರ್ತನಾ ಸಮುದಾಯದ ಮುಖಂಡರಾದ ಎಸ್.ಆರ್ ಹೀರೇಮಠರವರನ್ನು ನಾನುಗೌರಿ.ಕಾಂ ಮಾತನಾಡಿಸಿತು. ಅವರು “ನಾವು ಇಷ್ಟೆಲ್ಲಾ ಹೋರಾಟ ಮಾಡುತ್ತಿರುವುದು ನಮ್ಮ ಆತ್ಮತೃಪ್ತಿಗೆ ಹೊರತು ಕ್ಲೈಮ್ ಮಾಡಿಕೊಳ್ಳುವುದಕ್ಕಲ್ಲ. ನಾವು 12ನೇ ಶತಮಾನದ ಶರಣದ ಹೋರಾಟದಿಂದ ಪ್ರೇರಿತರಾಗಿದ್ದೇವೆ. ಲೋಕಾಯುಕ್ತ ವಿಚಾರಕ್ಕೆ ಹೇಳುವುದಾದರೆ ‘ಯಶಸ್ಸಿಗೆ ಹಲವಾರು ತಂದೆಗಳು, ಸೋಲು ತಬ್ಬಲಿ’ ಎಂಬ ಗಾದೆ ಮಾತಿನಂತೆ ಬಿಜೆಪಿ ಈಗ ತಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ 2018ರ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಲೋಕಾಯುಕ್ತ ಪುನರ್ ಸ್ಥಾಪಿಸುತ್ತೇವೆಂದು ತಮ್ಮ ಪ್ರಣಾಳಿಕೆಯಲ್ಲಿ ಅವರು ಹೇಳಿದ್ದರು. ಆ ಕುರಿತು ಹಲವರು ಅವರಿಗೆ ಪದೇ ಪದೇ ನೆನಪು ಮಾಡಿದರೂ ಸಹ ಲೋಕಾಯುಕ್ತ ಮರುಸ್ಥಾಪಿಸಿರಲಿಲ್ಲ. ಕೊನೆಗೆ ಹೈಕೋರ್ಟ್ ಆದೇಶ ನೀಡಿದ ನಂತರವಷ್ಟೇ ಲೋಕಾಯುಕ್ತ ಮರುಸ್ಥಾಪನೆಯಾಗಿದ್ದು ಎಲ್ಲರಿಗೂ ತಿಳಿದಿದೆ” ಎಂದರು.
“ಅಧಿಕಾರದಲ್ಲಿರುವ ಯಾರಿಗೂ, ಯಾವುದೇ ಪಕ್ಷಗಳಿಗೂ ಲೋಕಾಯುಕ್ತ ಬೇಕಾಗಿಲ್ಲ. ಸಿದ್ದರಾಮಯ್ಯನವರು ಹಿಂದೆ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ ಸಂತೋಷ್ ಹೆಗ್ಡೆಯವರು ನೀಡಿದ್ದ ವರದಿಯನ್ನು ಜಾರಿ ಮಾಡಿ ಎಂದು ಆಗ್ರಹಿಸಿದ್ದರು. ಬಿಜೆಪಿಯವರನ್ನು ಟೀಕಿಸಿ ಮಾತನಾಡಿದ್ದರು. ಆದರೆ ಅವರು ಅಧಿಕಾರಕ್ಕೆ ಬಂದ ನಂತರ ಆ ವರದಿಯನ್ನು ಜಾರಿ ಮಾಡಲಿಲ್ಲ ಮಾತ್ರವಲ್ಲ, ಲೋಕಾಯುಕ್ತದ ರೆಕ್ಕೆಗಳನ್ನೆ ಕಿತ್ತು ಹಾಕಿದರು” ಎಂದು ಹಿರೇಮಠರವರು ಅಸಮಾಧಾನ ವ್ಯಕ್ತಪಡಿಸಿದರು.
ಎಷ್ಟು ರಾಜ್ಯಗಳಲ್ಲಿ ಎಸಿಬಿ ಇದೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಆದರೆ ಲೋಕಾಯುಕ್ತ ಸರಿಯಾದ ದಾರಿಯಲ್ಲಿ ನಡೆಯುತ್ತಿರುವಾಗ ಅದನ್ನು ಬಲಹೀನಗೊಳಿಸಿದ್ದು ಏಕೆ? ಅವು ಸ್ಥಾಪನೆಯಾದ ಹಿನ್ನೆಲೆ ಅವರಿಗೆ ಗೊತ್ತಿಲ್ಲವೇ? ಎಷ್ಟು ನಾಚಿಕೆಗೇಡುತನದಿಂದ ತಾವು ಮಾಡಿದ ಆ ಕೆಲಸವನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ಇನ್ನು ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿಯವರು ನಿರ್ಗತಿಕ ಎಂದು ಹೇಳಿ ಗೋಮಾಳ ಸೇರಿ 20 ಎಕರೆ ಭೂಮಿ ಕಬಳಿಸಿದ್ದರು. ಅವರ ತಂದೆ ಎಚ್.ಡಿ ದೇವೇಗೌಡರು ತಮ್ಮ ಹೆಂಡತಿಯ ತಂಗಿಯ ಹೆಸರಿನಲ್ಲಿ 20 ಎಕರೆ ಜಮೀನು ಮಾಡಿದ್ದರು. ಈ ಕುರಿತು ನಾವು ದೂರು ನೀಡಿದ್ದೆವು. 2014ರಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಅವೆಲ್ಲವೂ ಹೊರ ಬರುತ್ತವೆ ಎಂದು ಲೋಕಾಯುಕ್ತ ಮುಚ್ಚಿದ್ದನ್ನು ಪ್ರಶ್ನಿಸದೇ ಸುಮ್ಮನಿದ್ದರು. ಒಟ್ಟಿನಲ್ಲಿ ಮೂರು ಪಕ್ಷಗಳ ಭ್ರಷ್ಟರು ಲೋಕಾಯುಕ್ತವನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುವುದಿಲ್ಲ. ಇದನ್ನು ಈ ಪೀಳಿಗೆಯ ಯುವಜನರು ಪ್ರಶ್ನಿಸಬೇಕು ಎಂದರು.
ಇದೇ ರೀತಿಯ ಮಾತುಗಳನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಸಹ ಹೇಳಿದ್ಧಾರೆ. ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಅವರು, “ಬಿಜೆಪಿಯವರು ಎಸಿಬಿಯನ್ನು ತೆಗೆದಿಲ್ಲ, ಅದನ್ನು ತೆಗೆದಿದ್ದು ಹೈಕೋರ್ಟ್. ಹಾಗಾಗಿ ಅದರ ಕ್ರೆಡಿಟ್ ಬಿಜೆಪಿಗೆ ಸಿಗುವುದಿಲ್ಲ ಎಂದಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಎಸಿಬಿ ತೆಗೆದು ಲೋಕಾಯುಕ್ತ ತರುತ್ತೇವೆ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು 24 ತಿಂಗಳು ಆದರೂ ಆ ಕೆಲಸ ಮಾಡಲಿಲ್ಲ. ಕೊನೆಗೆ ಹೈಕೋರ್ಟ್ ಆ ಕೆಲಸ ಮಾಡಿತು” ಎಂದಿದ್ದಾರೆ.
“ಯಾವ ಸರ್ಕಾರಗಳಿಗೂ ಲೋಕಾಯುಕ್ತ ಬೇಕಾಗಿಲ್ಲ. ಏಕೆಂದರೆ ಅದರ ಕೆಲಸವೇ ಅಧಿಕಾರದಲ್ಲಿರುವವರ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು. ಆದ್ದರಿಂದ ಯಾರಿಗೂ ತಮ್ಮ ಮೇಲೆಯೇ ದಾಳಿ ಮಾಡುವ ಸ್ವತಂತ್ರ ಮತ್ತು ಬಲಿಷ್ಟ ಸಂಸ್ಥೆ ಬೇಕಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್‌ರವರು ಈ ವಿಚಾರಕ್ಕೆ ಪ್ರತಿಕ್ರಿಯಿಸಿ “ಸುಳ್ಳು ಹೇಳುವದರಲ್ಲಿ ನಿಸ್ಸೀಮರು ಯಾರಾದರು ಇದ್ದರೆ ಅದು ಭಾರತೀಯ ಜನತ ಪಕ್ಷ. #BhrashtaBJP” ಎಂದು ಸಂತೋಷ್ ಹೆಗ್ಡೆಯವರ ಮಾತುಗಳನ್ನು ಟ್ವೀಟ್ ಮಾಡಿದ್ದಾರೆ.
ಸುಳ್ಳು ಹೇಳುವದರಲ್ಲಿ ನಿಸ್ಸೀಮರು ಯಾರಾದರು ಇದ್ದರೆ ಅದು ಭಾರತೀಯ ಜನತ ಪಕ್ಷ.#BhrashtaBJP pic.twitter.com/pH5v7vyRQo
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 4, 2023
ಇದನ್ನೂ ಓದಿ: ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಭ್ರಷ್ಟಾಚಾರ ಬಯಲಿಗೆ: 40% ಕಮಿಷನ್ ಆರೋಪಕ್ಕೆ ಇಷ್ಟು ಸಾಕ್ಷಿ ಸಾಕಲ್ಲವೇ?


