ಮಧ್ಯಪ್ರದೇಶದ ಪೊಲೀಸರು ಪತ್ರಕರ್ತರ ಗುಂಪನ್ನು ಬಂಧಿಸಿ ಅರೆಬೆತ್ತಲಾಗಿ ನಿಲ್ಲಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಪೋಸ್ಟ್ ಹರಿದಾಡುತ್ತಿದೆ.
ಪೋಸ್ಟ್ ಜೊತೆಗೆ ಹಂಚಿಕೊಂಡಿರುವ ಫೋಟೋದಲ್ಲಿ ಎಂಟು ಮಂದಿ ಇದ್ದು, ಒಳ ಉಡುಪು ಮಾತ್ರ ಧರಿಸಿ ಅರೆಬೆತ್ತಲೆಯಾಗಿ ನಿಂತಿದ್ದಾರೆ. ಏಪ್ರಿಲ್ 2 ರಂದು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
“ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ಮತ್ತು ಅವರ ಪುತ್ರ ಗುರುದತ್ ವಿರುದ್ಧ ಅಸಭ್ಯವಾಗಿ ಟೀಕಿಸಲಾಗಿದೆ ಎಂದು ಆರೋಪಿಸಿ ಬಂಧನಕ್ಕೊಳಕ್ಕಾಗಿರುವ ರಂಗಭೂಮಿ ಕಲಾವಿದ ನೀರಜ್ ಕುಂದರ್ ಕುರಿತು ವರದಿ ಮಾಡಲು ಹೋಗಿದ್ದೆ” ಎಂದು ಫೋಟೋದಲ್ಲಿ ಗುರುತಿಸಲ್ಪಟ್ಟಿರುವ ಸ್ಥಳೀಯ ಪತ್ರಕರ್ತ, ಯೂಟ್ಯೂಬರ್ ಕನಿಷ್ಕ್ ತಿವಾರಿ ಹೇಳಿರುವುದಾಗಿ ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಅವರ ಬಂಧನದ ಬಗ್ಗೆ ವಿಚಾರಿಸಲು ನಾವು ಕೊತ್ವಾಲಿ ಪೊಲೀಸ್ ಠಾಣೆಗೆ ಹೋಗಿದ್ದೆವು. ಆದರೆ ಪೊಲೀಸರು ನಮ್ಮನ್ನು ಬಂಧಿಸಿದರು. ಸುಮಾರು 18 ಗಂಟೆಗಳ ಕಾಲ ಲಾಕ್‌ಅಪ್‌ನಲ್ಲಿ ಇರಿಸಿದರು. ನಮ್ಮನ್ನು ಥಳಿಸಲಾಯಿತು ಹಾಗೂ ನಿಂದಿಸಲಾಯಿತು. ನಮ್ಮ ಬಟ್ಟೆಗಳನ್ನು ಕಳಚುವಂತೆ ಹೇಳಲಾಯಿತು” ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಚರಕದ ಮುಂದೆ ಕೂತ ತೇಜಸ್ವಿ ಸೂರ್ಯ: ಮಿತಿಮೀರಿದ ಬೂಟಾಟಿಕೆ ಎಂದ ಜನತೆ
ನೀರಜ್ ಕುಂದರ್ ಅವರು ಸಿಧಿ ಜಿಲ್ಲೆಯ ಇಂದ್ರಾವತಿ ನಾಟ್ಯ ಸಮಿತಿಯ ನಿರ್ದೇಶಕರಾಗಿದ್ದು, ವಿಂಧ್ಯ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಕುಂದರ್ ಅವರು ಅನುರಾಗ್ ಮಿಶ್ರಾ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಐಡಿಯನ್ನು ರಚಿಸಿದ್ದರು. ಬಂಧನದ ನಂತರ ಕುಂದರ್ ಅವರ ಪೋಷಕರು ಮತ್ತು ತಿವಾರಿ ಸೇರಿದಂತೆ ಅನೇಕರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
ನೀರಜ್ ಕುಂದರ್ ಅವರನ್ನು ಬೆಂಬಲಿಸಿ ಪೊಲೀಸ್ ಠಾಣೆಗೆ ತೆರಳಿದ ಮತ್ತೊಬ್ಬ ರಂಗಭೂಮಿ ಕಲಾವಿದ ನರೇಂದ್ರ ಬಹದ್ದೂರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, “ತಮ್ಮೆಲ್ಲರನ್ನು ವಿವಸ್ತ್ರಗೊಳಿಸಿ ಥಳಿಸಲಾಯಿತು” ಎಂದಿದ್ದಾರೆ.
“ನಾವು ಮನವಿ ಪತ್ರ ನೀಡಲು ಹೋಗಿದ್ದೆವು. ಆದರೆ ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡಲು ನಿರ್ಧರಿಸಿದ್ದರು. ಪತ್ರಕರ್ತ ಕನಿಷ್ಕ್ ತಿವಾರಿ ಅವರನ್ನೂ ಥಳಿಸಲಾಗಿದೆ. ಕನಿಷ್ಕ್ ಅವರು ಸ್ಥಳೀಯ ಪೊಲೀಸರು ಮತ್ತು ಶಾಸಕ ಕೇದಾರನಾಥ್ ಶುಕ್ಲಾ ಅವರ ಹಗರಣಗಳನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ವಿರೋಧ ಎದುರಿಸುತ್ತಿದ್ದಾರೆ” ಎಂದು ನರೇಂದ್ರ ಬಹುದ್ದೂರ್ ಸಿಂಗ್ ತಿಳಿಸಿದ್ದಾರೆ.
‘ದಿ ಕ್ವಿಂಟ್’ನೊಂದಿಗೆ ಮಾತನಾಡಿರುವ ಸಿಧಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಮುಖೇಶ್ ಕುಮಾರ್ ಶ್ರೀವಾಸ್ತವ, “ಯಾವುದೇ ಪತ್ರಕರ್ತರು ಇರಲಿಲ್ಲ. ಆದರೆ ದುಷ್ಕರ್ಮಿಗಳನ್ನು ಬಂಧಿಸಲಾಯಿತು” ಎಂದಿದ್ದಾರೆ.
“ಏಪ್ರಿಲ್ 2 ರಂದು ಈ ಘಟನೆ ನಡೆದಿದೆ. ಕನಿಷ್ಕ್ ತಿವಾರಿ ಮತ್ತು ಇತರ ಕೆಲವು ಜನರು ಕೊತ್ವಾಲಿ ಪೊಲೀಸ್ ಠಾಣೆಗೆ ಹೋಗಿದ್ದರು. ಒಬ್ಬ ರಂಗಭೂಮಿ ಕಲಾವಿದ ನೀರಜ್ ಕುಂದರ್ ಬಂಧನದ ಬಗ್ಗೆ ಗಲಾಟೆಯನ್ನು ಮಾಡಿದರು. ಐಪಿಸಿ ಸೆಕ್ಷನ್ 151ರ ಅಡಿಯಲ್ಲಿ ಕನಿಷ್ಕ್ ಮತ್ತು ಇತರರನ್ನು ಬಂಧಿಸಲಾಯಿತು. ಬಳಿಕ ಏಪ್ರಿಲ್ 3 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು” ಎಂದು ಮುಖೇಶ್ ಕುಮಾರ್ ತಿಳಿಸಿದ್ದಾರೆ.
ಕನಿಷ್ಕ್ ಮತ್ತು ಇತರರು ಅರೆಬೆತ್ತಲೆಯಾಗಿ ನಿಲ್ಲಿಸಿರುವ ಫೋಟೋ ವೈರಲ್ ಆಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಶ್ರೀವಾಸ್ತವ, “ಅವರ ಬಳಿ ಯಾವುದಾದರೂ ಆಯುಧ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಅನುಸರಿಸುವ ಸಾಮಾನ್ಯ ವಿಧಾನ ಇದಾಗಿದೆ. ಫೋಟೋ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ಫೋಟೋ ಕ್ಲಿಕ್ಕಿಸಿ ಹಂಚಿದವರು ಯಾರೆಂದು ಶೀಘ್ರ ಪತ್ತೆ ಹಚ್ಚಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
ಆದಾಗ್ಯೂ, ಪೊಲೀಸರ ಹೇಳಿಕೆಯನ್ನು ಅಲ್ಲಗಳೆಯಲಾಗಿದೆ. ನೀರಜ್ ಕುಂದರ್ ಬಂಧನದ ಬೆಳವಣಿಗೆಗಳನ್ನು ವರದಿ ಮಾಡಲು ಹೋಗಿದ್ದಾಗಿ ಕನಿಷ್ಕ್ ತಿವಾರಿಯವರು ದಿ ಕ್ವಿಂಟ್‌ಗೆ ತಿಳಿಸಿದ್ದಾರೆ. ಈ ಹಿಂದೆ ಜಿಲ್ಲೆಯ ಸ್ಥಳೀಯ ರಾಜಕಾರಣಿಗಳು ಮತ್ತು ಪೊಲೀಸರ ವಿರುದ್ಧ ವರದಿ ಮಾಡಿದ್ದಕ್ಕಾಗಿ ತಮ್ಮ ಮೇಲೆ ಹಲ್ಲೆ ನಡೆಸಿ ಅವಮಾನ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ನಾನೊಬ್ಬ ಪತ್ರಕರ್ತ. ರಾಜಕಾರಣಿಗಳ ಬಗ್ಗೆ ವಿಶೇಷವಾಗಿ ಶಾಸಕ ಕೇದಾರನಾಥ್ ಶುಕ್ಲಾ ಮತ್ತು ಇಲ್ಲಿನ ಪೊಲೀಸ್ ಇಲಾಖೆ ಬಗ್ಗೆ ಕಟುವಾಗಿ ಪ್ರಶ್ನಿಸುತ್ತಿದ್ದೇನೆ. ನನ್ನ ಯೂಟ್ಯೂಬ್ ಚಾನೆಲ್ mpsandeshnews24 170K ಚಂದಾದಾರರನ್ನು ಹೊಂದಿದೆ. ವಿಮರ್ಶಾತ್ಮಕ ಪತ್ರಿಕೋದ್ಯಮದ ಕಾರಣ ನನ್ನನ್ನು ಟಾರ್ಗೆಟ್ ಮಾಡಲಾಗಿದೆ” ಎಂದು ಕನಿಷ್ಕ್ ಸ್ಪಷ್ಟಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: ಮುಸ್ಲಿಮರ ವ್ಯಾಪಾರಕ್ಕೆ ವಿರೋಧಿಸಿರುವ ಪ್ರತಾಪ್ ಸಿಂಹ ಗುಜರಿ ಸಾಮಾನು ಖರೀದಿಸಲಿ; ದಸಂಸ ವಿನೂತನ ಪ್ರತಿಭಟನೆ



ಪತ್ರಕರ್ತರ ಮೇಲಿನ ಈ ದೌರ್ಜನ್ಯ ಕಂಡನಾರ್ಹ.