ಇತರ ವಿದ್ಯಾರ್ಥಿಗಳು ಸುತ್ತಲೂ ನಿಂತು ವೀಕ್ಷಿಸುತ್ತಿರುವ ನಡುವೆ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಹಿಡಿದು ಮನಸೋಇಚ್ಛೆ ಥಳಿಸಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೊ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಆರೋಪಿ ಶಿಕ್ಷಕನನ್ನು ಸಂದೀಪ್ ಭಾರ್ತಿ ಎಂದು ಗುರುತಿಸಲಾಗಿದ್ದು, ಅವನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಯು 8 ನೇ ತರಗತಿಯಲ್ಲಿ ಕಲಿಯುತ್ತಿದ್ದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರೇವಾದ ಖಜುಹಾ ಕಾಲಾದಲ್ಲಿನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯ ಪೋಷಕರನ್ನು ಸಂಪರ್ಕಿಸಿದ ನಂತರ ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ರೇವಾ ಎಸ್ಪಿ ನವನೀತ್ ಭಾಸಿನ್ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಪರೀಕ್ಷೆಯಲ್ಲಿ ತಪ್ಪು ಬರೆದಿದ್ದಕ್ಕೆ ದಲಿತ ಬಾಲಕನನ್ನು ಥಳಿಸಿ ಕೊಂದ ಸವರ್ಣೀಯ ಶಿಕ್ಷಕ; ಭುಗಿಲೆದ್ದ ಹಿಂಸಾಚಾರ
ಶಿಕ್ಷಕನೂ ವಿದ್ಯಾರ್ಥಿಯನ್ನು ನೆಲಕ್ಕೆ ಕೆಡವಿ ಕಪಾಳಮೋಕ್ಷ ಮಾಡುವುದು ವೀಡಿಯೊದಲ್ಲಿ ದಾಖಲಾಗಿದೆ. ಅಲ್ಲದೆ ಹತ್ತಿರದಲ್ಲಿ ಇತರ ವಿದ್ಯಾರ್ಥಿಗಳು ಅದನ್ನು ಗಮನಿಸುತ್ತಿದ್ದರೂ ಶಿಕ್ಷಕನು ತನ್ನ ಕೃತ್ಯವನ್ನು ಮುಂದುವರೆಸುತ್ತಾನೆ. ಈ ವೇಳೆ ವಿದ್ಯಾರ್ಥಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕೂಡಾ ಪ್ರಯತ್ನಿಸುತ್ತಾರೆ.
ಒಂದು ಹಂತದಲ್ಲಿ ಶಿಕ್ಷಕನು ಥಳಿಸುವುದನ್ನು ನಿಲ್ಲಿಸಿದ ನಂತರ ವಿದ್ಯಾರ್ಥಿಯು ತನ್ನ ಕೆಸರು ಮೆತ್ತಿದ ಬಟ್ಟೆಗಳೊಂದಿಗೆ ಎದ್ದು ನಿಂತರ, ಶಿಕ್ಷಕನ ಮುಖಾಮುಖಿಯಾಗುತ್ತಾರೆ. ಇಲ್ಲಿ ಕೆಲವೆ ಕ್ಷಣದ ಮಾತಿನ ನಂತರ ಶಿಕ್ಷಕ ಮತ್ತೊಮ್ಮೆ ಬಾಲಕನತ್ತ ನುಗ್ಗಿ, ಅವರ ಕುತ್ತಿಗೆಯಿಂದ ಹಿಡಿದು ಆಸುಪಾಸಿನಲ್ಲಿ ಇರುವ ವಿದ್ಯಾರ್ಥಿಗಳ ಗುಂಪಿನೆಡೆಗೆ ತಳ್ಳುತ್ತಾನೆ.
ಇದರ ನಂತರ ಶಿಕ್ಷಕನು ಮತ್ತೆ ವಿದ್ಯಾರ್ಥಿಯ ಕಡೆಗೆ ಹೋಗುತ್ತಿರುವಾಗ, ಬೇರೊಬ್ಬ ಹುಡುಗನು ಶಿಕ್ಷಕನ ಗಮನವನ್ನು ಕ್ಯಾಮೆರಾದ ಕಡೆಗೆ ಸೆಳೆಯುತ್ತಾರೆ. ಹೀಗಾಗಿ ವಿಡಿಯೊ ಕೂಡಾ ಕೊನೆಗೊಳ್ಳುತ್ತದೆ.
“ಶಿಕ್ಷಕ ವಿದ್ಯಾರ್ಥಿಗೆ ಏಕೆ ಹೊಡೆದಿದ್ದಾರೆ ಎಂಬುದನ್ನು ನಿರ್ಧರಿಸಲು ಹೆಚ್ಚಿನ ತನಿಖೆಯ ಅಗತ್ಯವಿದೆ. ತನಿಖೆಯ ಫಲಿತಾಂಶಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ಭಾಸಿನ್ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಬಾಲಕನನ್ನು ಹೊಡೆದು ಕೊಂದ ಸವರ್ಣೀಯ ಶಿಕ್ಷಕ
ಉತ್ತರ ಪ್ರದೇಶದ 10 ನೇ ತರಗತಿಯ ವಿದ್ಯಾರ್ಥಿಯೊಬ್ಬರು ಒಂದು ಪದವನ್ನು ತಪ್ಪಾಗಿ ಬರೆದಿದ್ದಕ್ಕಾಗಿ ತನ್ನ ಶಿಕ್ಷಕರಿಂದ ನಿರ್ದಯವಾಗಿ ಥಳಿಸಲ್ಪಟ್ಟು, ಕೊಲಗೀಡಾಗಿದ್ದರು. ಈ ತಿಂಗಳ ಆರಂಭದಲ್ಲಿ ಮಧ್ಯಪ್ರದೇಶದಲ್ಲಿ ಟ್ಯೂಷನ್ ಶಿಕ್ಷಕನೊಬ್ಬ ಹೋಂ ವರ್ಕ್ ಮಾಡದ ಎಂಟು ವರ್ಷದ ವಿದ್ಯಾರ್ಥಿಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿತ್ತು.


