Homeಅಂಕಣಗಳುಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

- Advertisement -
- Advertisement -

ಸದರಿ ಬಿಜೆಪಿ ಸರಕಾರ ರಚನೆಗೊಂಡಿದ್ದೆ ಭ್ರಷ್ಟತೆಯಿಂದ. ಭ್ರಷ್ಟತೆಯಿಂದ ರಚನೆಗೊಂಡ ಸರಕಾರ ಪ್ರಾಮಾಣಿಕವಾಗಿ ಆಡಳಿತ ನಡೆಸಬೇಕೆನ್ನುವುದೇ ಮೂರ್ಖತನ, ಆದ್ದರಿಂದ ಇದು ನಲವತ್ತು ಪರಸೆಂಟಿನ ಸರಕಾರ ಎಂದು ಮೂದಲಿಸಿದರೆ ಅಲ್ಲಿ ಯಾರಿಗೂ ಅವಮಾನವಾಗುವುದಿಲ್ಲವಂತಲ್ಲಾ. ಇದನ್ನ ತಿಳಿಯದ ಕಾಂಗ್ರೆಸ್ಸಿಗರು ಪೇಸಿಎಂ ಪೋಸ್ಟರುಗಳನ್ನು ಕಂಡಕಂಡಲ್ಲಿ ಹಚ್ಚತೊಡಗಿದ್ದಾರೆ. ಅಷ್ಟಕ್ಕೂ ಸಿಎಂಗೂ ಕೂಡ ಇಂತಹ ಅವಹೇಳನಕಾರಿಯಾದ ಪೋಸ್ಟರ್ ಬಗ್ಗೆ ಏನೂ ಅನ್ನಿಸುವುದಿಲ್ಲ, ಏಕೆಂದರೆ ಅವರಿರುವ ಪಾರ್ಟಿಯೇ ಹಾಗೆ, ಅದಕ್ಕೆ ಅವಮಾನ ಮಾಡುವಂತಹ ಪದಗಳೇಯಿಲ್ಲ. ಬಿಜೆಪಿಗಳ ವಿಷಯದಲ್ಲಿ ಅವರಿಗೆ ಸರಿಯಾಗಿ ತಾಗುವ ಕಟು ಟೀಕೆಯ ಪದ ಕನ್ನಡ ಭಾಷೆಯಲ್ಲೇ ಇಲ್ಲದಂತಾಗಿದೆಯಂತಲ್ಲಾ. ಇಂತಹ ಪಾರ್ಟಿಗೆ ಇಲ್ಲವೇ ಇಲ್ಲದ ಮಾನ ಹರಾಜಾಗಿ ಹೋಗಿದೆಯೆಂದು ನಾರಾಯಣಸ್ವಾಮಿ ಎಂಬ ವಿಧಾನಪರಿಷತ್ ಸದಸ್ಯ ಕಾಂಗ್ರೆಸ್ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದಾರಂತಲ್ಲಾ. ಅದಕ್ಕಾಗಿ ಯಾವ ಲಾಯರ್ ಹಿಡಿಯುವುದು ಲಾಯರ್ ಫೀಜ್‌ನ ಯಾರಿಂದ ವಸೂಲು ಮಾಡಬೇಕೆಂಬ ಚಿಂತೆಗೆ ಬಿದ್ದಿದ್ದಾರಂತಲ್ಲಾ, ಥೂತ್ತೇರಿ.

******

ಭ್ರಷ್ಟನ ಅಥವಾ ಲಫಂಗನ ಕೊನೆಯ ಅಸ್ತ್ರ ಜಾತಿಯಂತಲ್ಲಾ. ನಮ್ಮ ಎಲ್ಲಾ ಸರಕಾರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಸೇರಿಕೊಂಡಿರುವ ಲಫಂಗರು ತಾವು ಮಾಡುವ ಭ್ರಷ್ಟ ಕೆಲಸ ಅಥವಾ ವ್ಯಭಿಚಾರದ ಕೆಲಸ- ಇಂತಹ ಯಾವುದೇ ಕೃತ್ಯ ಬಯಲಾದಾಗ ಆತ ಬಳಸುವ ಕಟ್ಟಕಡೆಯ ಅಸ್ತ್ರ ಜಾತಿಯಾಗಿರುತ್ತದೆ. ಏಕೆಂದರೆ ಭಾರತದಲ್ಲಿ ಅದು ಹುಟ್ಟಿನಾಗಿನಿಂದ ಜಾತಿ ಒಂದು ಶಾಪವಾಗಿ ಪರಿಣಮಿಸಿದೆ. ಭ್ರಷ್ಟ ಅಥವಾ ಲಫಂಗನ ಕೃತ್ಯ ಬಯಲಿಗೆಳೆದಾಗ ಆತ ಕೂಗಿಕೊಳ್ಳುವುದೇ “ನೋಡ್ರಪ್ಪ ನಾನು ಇಂಥ ಜಾತಿಲುಟ್ಟಿದ್ದೆ ತಪ್ಪಾ, ನನಿಗೇನಾದ್ರು ಅನ್ಲಿ ನಮ್ಮ ಜಾತಿನೆ ಹಿಡಿದು ಬೈತ ಕುಂತವುರಲ್ಲಾ” ಎಂಬ ಆಕ್ರಂದನ ಅಪರಾಧಿಯ ಬಾಯಲ್ಲಿ ಬರತ್ತಂತಲ್ಲಾ. ಆ ಆಕ್ರಂದನ ಬಂದಿದ್ದೇ ತಡ ಜಾತಿ ಮನಸ್ಸುಗಳು ಮುತ್ತಿಗೊಳ್ಳುತ್ತವೆ. ತಮ್ಮವನನ್ನ ರಕ್ಷಿಸುತ್ತವೆ. ಈಗ ಕರ್ನಾಟಕದಲ್ಲಿ ಆಗುತ್ತಿರುವುದೂ ಅದೆ. ನಲವತ್ತು ಪರಸೆಂಟಿನ ಆರೋಪವೆದುರಿಸುತ್ತಿರುವ ಸರ್ಕಾರದ ಮುಂದಾಳಾದ ಬೊಮ್ಮಾಯಿ ಕುರಿತ ಪೋಸ್ಟರುಗಳು ರಾರಾಜಿಸಿದ ಕೂಡಲೇ ಅನಾದಿಕಾಲದಿಂದಲೂ ನರಿ ಬುದ್ಧಿಯಲ್ಲೇ ಬದುಕುತ್ತಿರುವ ಜನ ಬೇರೆ ದಾರಿಕಾಣದೆ, ನೋಡಿ ಲಿಂಗಾಯಿತ ಮುಖ್ಯಮಂತ್ರಿಗಳನ್ನು ಕಂಡರಾಗದ ಕಾಂಗೈಗಳು ಹೇಗೆ ಭ್ರಷ್ಟತೆಯ ಆಪಾದನೆ ಮಾಡಿ ಅಪಮಾನ ಮಾಡುತ್ತಿವೆ. ಇದು ನಿಜ್ಕಕೂ ಸಾದ ಲಿಂಗಾಯಿತರಿಗೆ ಮಾಡುತ್ತಿರುವ ಅವಮಾನವೆಂದು ಬೊಬ್ಬೆಹೊಡೆದವಂತಲ್ಲಾ, ಥೂತ್ತೇರಿ.

*****

ಕಾಂಗ್ರೆಸ್ ಪಕ್ಷದ ಸಮಸ್ಯೆಗಳು, ಸ್ಫೋಟಗಳು ಯಾವುದನ್ನು ತಲೆಗೆ ಹಚ್ಚಿಕೊಳ್ಳದ ರಾಹುಲಗಾಂಧಿ ಕೇರಳದ ಮುಖಾಂತರ ಕರ್ನಾಟಕವನ್ನು ಪ್ರವೇಶಿಸಲಿದ್ದಾರೆ. ಈ ನಡಿಗೆ ಕಾಂಗ್ರೆಸ್ ರಾಜಕಾರಣದಲ್ಲಿ ಹಿಂದೆಂದೂ ಕಾಣದಿದ್ದ ಸಂತೋಷವನ್ನು ಕೊಟ್ಟಿದೆಯಂತಲ್ಲಾ. ನಡೆಯುವ ಮಾರ್ಗದ ಊರುಗಳ ಮಾಹಿತಿ ಪಡೆಯುತ್ತ, ಅಲ್ಲಿನ ಸಾಹಿತಿಗಳು, ಕಲಾವಿದರು, ಜಾನಪದ ವಿದ್ವಾಂಸರು, ಸ್ವಾತಂತ್ರ್ಯ ಹೋರಾಟಗಾರರ ವಿವರಗಳನ್ನು ರಾಹುಲಗಾಂಧಿ ಪಡೆಯುತ್ತ ಹೋಗುತ್ತಿರಬೇಕಾದರೆ ಈ ಬಗ್ಗೆ ಕಾಂಗ್ರೆಸ್ಸಿನ ರಾಜಕಾರಣಿಗಳನ್ನ ಅವರು ಕೇಳುತ್ತಿಲ್ಲವಂತಲ್ಲಾ. ರಾಹುಲಗಾಂಧಿ ಏನಾದರೂ ಪಾರ್ಟಿ ಸದಸ್ಯರಿಗೆ ಈ ಕೆಲಸ ವಹಿಸಿದ್ದಾದರೆ ಕಲೆ, ಸಾಹಿತ್ಯ, ಸಂಗೀತ, ಜಾನಪದದ ವಿಷಯದಲ್ಲಿ ಗಂಧಗಾಳಿಯಿಲ್ಲದ ಅವರು ತಮ್ಮ ಹತ್ತಿರದ ದೂರದ ಸಂಬಂಧಿಗಳನ್ನ ಕರೆಸಿ ರಾಹುಲಗಾಂಧಿ ಎದುರು ನಿಲ್ಲಿಸಿ ಫೋಟೊ ತೆಗೆಸಿಕೊಳ್ಳಬಲ್ಲರು ಎಂದು ಊಹಿಸಿದ್ದಾರಲ್ಲಾ. ಈ ಊಹೆ ರಾಹುಲಗಾಂಧಿಗೆ ಮೊದಲೇ ಹೊಳೆದು ಕಾಂಗೈ ರಾಜಕಾರಣದ ಆವರಣದಿಂದ ಹೊರಗಿರುವ ನಿಷ್ಠಾವಂತ ವ್ಯಕ್ತಿಗಳನ್ನು ನೇಮಿಸಿದ್ದಾರಂತಲ್ಲಾ. ಈ ನಡುವೆ ಮುಂದಿನ ಚುನಾವಣೆಗೆ ಹೇಳಿಕೊಂಡು ಹೋಗಲು ಯಾವ ಸಾಧನೆಯೂ ಇಲ್ಲದ ಬಿಜೆಪಿಯ ರಾಷ್ಟ್ರೀಯ ನಾಯಕರು ಭಾರತ ಜೋಡೋ ಯಾತ್ರೆ ವಿಫಲಗೊಳಿಸಲು ಪರಿಕರಗಳನ್ನು ತಯಾರಿಸುತ್ತಿದ್ದಾರಂತಲ್ಲಾ, ಥೂತ್ತೇರಿ.

******

ಮೋದಿಯವರು ಎಪ್ಪತ್ತು ವರ್ಷಗಳ ಹಿಂದೆಯೇ ಭಾರತದಿಂದ ಕಾಲ್ತೆಗೆದ ಚೀತಾಗಳನ್ನು ತರಿಸಿ ಅವುಗಳನ್ನು ಬೋನಿನಿಂದ ಹೊರಬಿಟ್ಟು ಕ್ಲಾಪ್ ತೆಗೆಯದೆ ಕ್ಯಾಮರಾ ಕ್ಲಿಕ್ಕಿಸಿದ್ದು ಭಾರತದಾದ್ಯಂತ ಸುದ್ದಿಯಾಗಿದ್ದು ಹಳೆ ವಿಷಯ. ಸಂಘಿಗಳ ಪ್ರಕಾರ ಮೋದಿ ಕ್ಯಾಮರ ಕ್ಲಿಕ್ಕಿಸಿಲ್ಲ ಚಿರತೆಗಳ ಫೋಟೊ ತೆಗೆಯುವ ಫೋಟೊಗಾಗಿ ಕ್ಯಾಮರ ಹಿಡಿದು ನಿಂತಿದ್ದರು. ಮಾಧ್ಯಮದವರು ಫೋಟೊ ತೆಗೆಯಲು ಪೋಸು ಕೊಡುವಾಗ ತಾವೇ ಫೋಟೊ ತೆಗೆವ ಅಗತ್ಯವಿಲ್ಲ ಎಂಬುದು ಅಜ್ಞಾನಿಗಳಿಗೆ ಅರಿವಾಗಬೇಕೆಂದು ಹೇಳಿರುವ ಬಿಜೆಪಿಗಳು ಈ ಬಗ್ಗೆ ದೇಶದ್ರೋಹದ ಕೇಸು ಹಾಕಲು ಇನ್ನೂ ರೆಡಿಯಾಗಿಲ್ಲವಂತಲ್ಲಾ. ಇದೇನಾದರಾಗಲಿ ನಮಗೆ ಕಿವಿ ಮತ್ತು ಕಣ್ಣು ಸರಿಯಾಗಿದ್ದು, ಅವನ್ನು ಸರಿಯಾಗಿ ತೆರೆದುಕೊಂಡರೆ, ನಮ್ಮ ನಡುವೆ ಹಿಂಡುಹಿಂಡಾಗಿ ಬದುಕಿದ್ದ ಕಾಗೆಯೇ ಕಣ್ಮರೆಯಾಗುತ್ತಿವೆಯಲ್ಲಾ. ಕೆಲವು ಊರುಗಳಲ್ಲಂತೂ ಇಲ್ಲವೇ ಇಲ್ಲ. ಸತ್ತವನಿಗೆ ಕೂಳು ಹಾಕುವಾಗ ಅದನ್ನು ತಿನ್ನಲು ಬರುತ್ತಿದ್ದ ಈ ಕಾಗೆಗಳು ಕಾಣೆಯಾಗುತ್ತಿರುವ ಬಗ್ಗೆ ಯಾವ ಪಕ್ಷಿ ತಜ್ಞನೂ ಬಾಯಿಬಿಟ್ಟಿಲ್ಲ. ಹೊಲದಲ್ಲಿ ಮನೆ ಮೇಲೆ ಎದುರಿನ ಮರದ ಮೇಲೆ ಕುಳಿತು ಕಾಕಾ ಎನ್ನುತ್ತಿದ್ದ ಕಾಗೆ ನಿರ್ನಾಮವಾದರೆ ಗತಿಯೇನು. ಪಕ್ಷಿ ತಜ್ಞರು ನಿಜವಾದ ಕಾರಣ ಹೇಳಿ ಎಚ್ಚರಿಸಬಲ್ಲರೆ? ಅದಕ್ಕಿಂತ ಕಾಗೆ ಕಣ್ಮರೆಯಾದರೆ ಕೋಗಿಲೆಯೂ ನಿರ್ನಾಮವಾಗುತ್ತವಲ್ಲಾ ಎನ್ನಲು ನೋವಾಗುತ್ತದೆಯಲ್ಲಾ, ಥೂತ್ತೇರಿ.


ಇದನ್ನೂ ಓದಿ: ಭಾರತಕ್ಕೆ ಚೀತಾಗಳು ಬಂದಿವೆ ಇನ್ನು ಭಯವಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...