ಎತ್ತಿಂದೆತ್ತ ಲೆಕ್ಕ ಹಾಕಿದರೂ ಮಹಾಲಕ್ಷ್ಮಿ ಲೇಔಟ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯನ ಗೆಲುವಿಗೆ ಯಾವ ಆತಂಕಗಳೂ ಕಾಣುತ್ತಿಲ್ಲ. ಹದಿನೈದೂ ಕ್ಷೇತ್ರಗಳಲ್ಲಿ ಅನರ್ಹ ಶಾಸಕರನ್ನು ಸೋಲಿಸೋದೆ ನನ್ನ ಗುರಿ ಅಂತ ಗುಡುಗಿದ್ದ ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿ, ಮೊದಮೊದಲು ಕೆ.ಗೋಪಾಲಯ್ಯನನ್ನು ಸೋಲಿಸುವ ಪಣ ತೊಟ್ಟವರಂತೆಯೇ ಅಖಾಡಕ್ಕಿಳಿದಿದ್ದುಂಟು. ಲಿಂಗಾಯತರು ಮತ್ತು ಒಬಿಸಿ ಜಾತಿಗಳ ಮಿಶ್ರಣವೂ ಇದೆಯೆಂಬಂತೆ ಕಂಡುಬಂದರು ಒಕ್ಕಲಿಗ ಮತಗಳೇ ಇಲ್ಲಿ ನಿರ್ಣಾಯಕ. ಹಾಗಾಗಿ ಕುಮಾರಸ್ವಾಮಿ ಅಬ್ಬರಿಸಿದ್ದನ್ನು ಕಂಡವರು ಗೋಪಾಲಯ್ಯನ ಗೆಲುವು ಸುಲಭವಿಲ್ಲ ಅಂತಲೇ ಆರಂಭಿಕ ತರ್ಕ ಶುರುಹಚ್ಚಿಕೊಂಡಿದ್ದರು. ಆದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನ ಘೋಷಿಸಿದ ತರುವಾಯ ಆ ತರ್ಕಗಳೆಲ್ಲ ದಂಗಾಗಿಹೋಗಿವೆ! ಸ್ವತಃ ಜೆಡಿಎಸ್ ಕಾರ್ಯಕರ್ತರೇ ದಿಗ್ಭ್ರಾಂತರಾಗಿದ್ದಾರೆ.
ಚಾರ್ಟರ್ಡ್ ಅಕೌಂಟೆಂಟ್ ಡಾ. ಗಿರೀಶ್ ನಾಶಿ ಎಂಬ ಆಮದು ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್ ಗೋಪಾಲಯ್ಯನ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಟ್ಟಂತೆ ಕಾಣುತ್ತೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್‌ನಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ನಾಶಿ, ನಿನ್ನೆ ಮೊನ್ನೆಯವರೆಗು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಾಳೆಯದಲ್ಲೇ ಗುರುತಿಸಿಕೊಂಡಿದ್ದವರು. ಯಾವಾಗ ಸಿದ್ದರಾಮಯ್ಯನವರು ತನ್ನ ಕುಲಸ್ಥ, ಶಂಕರಮಠ ವಾರ್ಡ್ ಕಾರ್ಪೊರೇಟರ್ ಎಂ.ಶಿವರಾಜುಗೆ ಉಪಚುನಾವಣೆಯ ಟಿಕೆಟ್ ಕೊಡಿಸಲು ಒಲವು ತೋರಿದರೊ, ಆನಂತರವೇ ಡಾ.ನಾಶಿ ಜೆಡಿಎಸ್ ಅಂಗಳಕ್ಕೆ ಬಂದು ನಿಂತದ್ದು. ಹಾಗಾಗಿ ಜೆಡಿಎಸ್‌ನೊಳಗೆ ಹಿಂಬಾಲಕರ ಯಾವ ಬಲವೂ ನಾಶಿಗಿಲ್ಲ. ಅವರು ಜಾತಿಯಲ್ಲಿ ಲಿಂಗಾಯತರಾದರು, ಲಿಂಗಾಯತ ಮತಗಳು ಯಡ್ಯೂರಪ್ಪನವರ ಕಾರಣಕ್ಕೆ ಬಿಜೆಪಿಯತ್ತ ವಾಲುವವೇ ವಿನಾಃ ನಾಶಿಯತ್ತ ತಿರುಗಲಾರವು.

ಹಾಗೆ ನೋಡಿದರೆ, ಇಲ್ಲಿ ಜೆಡಿಎಸ್ ಅಭ್ಯರ್ಥಿಗಳಾಗಲು ಕೊರತೆಯೇನು ಇರಲಿಲ್ಲ. ಜೆಡಿಎಸ್‌ನ ರಾಜ್ಯ ಕಾರ್ಯಾಧ್ಯಕ್ಷರಾಗಿದ್ದ, ಸ್ಥಳೀಯ ಆರ್.ವಿ.ಹರೀಶ್ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಜಾತಿಯಿಂದ ನಾಯ್ಡು ಆದರು ಹರೀಶ್‌ಗೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ರಾಜಕೀಯ ಬೇರುಗಳಿವೆ. 2008ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಗೊಂಡು ಕೇಸರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹರೀಶ್ 39,427 ಮತ ಪಡೆದಿದ್ದರು. ಕಾಂಗ್ರೆಸ್‌ನ ನೆ.ಲ.ನರೇಂದ್ರ ಬಾಬು ಗೆದ್ದ ಆ ಚುನಾವಣೆಯಲ್ಲಿ ಗೋಪಾಲಯ್ಯ ಗಳಿಸಿದ್ದು ಕೇವಲ 28,097 ಮತಗಳನ್ನಷ್ಟೆ. ಆ ನಂತರ ಜೆಡಿಎಸ್ ಸೇರಿದ್ದ ಹರೀಶ್ ಈಗ ಟಿಕೆಟ್ ತನ್ನ ಕೈತಪ್ಪಿ ನಾಶಿಗೆ ಒಲಿದಿದ್ದರಿಂದ ಮುನಿಸಿಕೊಂಡು ಜೆಡಿಎಸ್ ಸದಸ್ಯತ್ವಕ್ಕೇ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಯಲ್ಲಾಪುರ ಉಪಸಮರದಲ್ಲಿ ದೇಶಪಾಂಡೆ ಹಠಕ್ಕೆ ಹೆದರಿದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್!
ಇನ್ನು ನಾಗಪುರ ವಾರ್ಡ್‌ನ ಬಿಬಿಎಂಪಿ ಕಾರ್ಪೊರೇಟರ್ ಭದ್ರೇಗೌಡ ಕೂಡಾ ಜೆಡಿಎಸ್ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಅವರನ್ನಾದರು ಅಖಾಡಕ್ಕಿಳಿಸಿದ್ದರೆ ಒಕ್ಕಲಿಗ ಓಟ್‌ಬೇಸ್ ಆಧಾರದಲ್ಲಿ ಗೋಪಾಲಯ್ಯನಿಗೆ ಪ್ರತಿಸ್ಪರ್ಧೆ ಒಡ್ಡುವ ಅವಕಾಶ ಜೆಡಿಎಸ್‌ಗೆ ಇರುತ್ತಿತ್ತು. ಆದರೆ ಇಂತಹ ಅವಕಾಶಗಳನ್ನೆಲ್ಲ ಹಠಾತ್ತನೆ ಕೈಚೆಲ್ಲಿ, ಸದ್ಯದ ಮಟ್ಟಿಗೆ ಗೋಪಾಲಯ್ಯನೆದುರು ಪೇಲವದಂತೆ ಕಾಣುವ ನಾಶಿಯನ್ನು ಕಣಕ್ಕಿಳಿಸಿರುವ ಜೆಡಿಎಸ್ ವರಿಷ್ಠರ ಲೆಕ್ಕಾಚಾರಗಳನ್ನೇ ಗುಮಾನಿಯಿಂದ ನೋಡುವಂತಾಗಿದೆ. ಡಾ.ನಾಶಿ ಚುನಾವಣೆಯಿಂದಲೇ ಹಿಂದೆ ಸರಿದಿದ್ದಾರೆ ಎಂಬ ವದಂತಿಯೂ ಕ್ಷೇತ್ರದಲ್ಲಿ ಹಬ್ಬಿತ್ತು. ಕೊನೆಗೆ ಜೆಡಿಎಸ್ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿಯೇ ನಾಶಿಯನ್ನು ಕೂರಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿ ನಮ್ಮ ಅಭ್ಯರ್ಥಿ ಕಣದಲ್ಲಿದ್ದಾರೆ ಎಂದು ಘೋಷಿಸಬೇಕಾಯ್ತು. ಹಾಗಿದೆ ಜೆಡಿಎಸ್ ಅಭ್ಯರ್ಥಿಯ ಪರಿಸ್ಥಿತಿ ಇಲ್ಲಿ.
ಜೆಡಿಎಸ್ ಲಿಂಗಾಯತ ಅಭ್ಯರ್ಥಿಯನ್ನು, ಕಾಂಗ್ರೆಸ್ ಕುರುಬ ಸಮುದಾಯದ ಶಿವರಾಜ್‌ರನ್ನು ಕಣಕ್ಕಿಳಿಸಿರೋದರಿಂದ, ಒಕ್ಕಲಿಗ ಮತಗಳು ಸಾರಾಸಗಟಾಗಿ ಗೋಪಾಲಯ್ಯನತ್ತ ತಿರುಗಲು ಯಾವ ಅಡ್ಡಿಯೂ ಇಲ್ಲ. ಇನ್ನು ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಮುನಿಸಿಕೊಂಡಿದ್ದ ಮಾಜಿ ಉಪಮೇಯರ್ ಎಸ್.ಹರೀಶ್ ಕೊಂಚ ಮೆತ್ತಗಾಗಿರೋದು ಗೋಪಾಲಯ್ಯನ ಪಾಲಿಗೆ ಪ್ಲಸ್ ಪಾಯಿಂಟ್.
ಏಳು ವಾರ್ಡ್ಗಳ ಪೈಕಿ ನಾಲ್ಕರಲ್ಲಿ ಜೆಡಿಎಸ್ ಕಾರ್ಪೊರೇಟರುಗಳಿದ್ದರೆ, ಎರಡರಲ್ಲಿ ಕಾಂಗ್ರೆಸ್ ಮತ್ತು ಒಂದರಲ್ಲಿ ಬಿಜೆಪಿ ಅಸ್ತಿತ್ವ ಉಳಿಸಿಕೊಂಡಿದ್ದವು. ಗೋಪಾಲಯ್ಯನ ಮಡದಿ, ವೃಷಭಾವತಿನಗರ ವಾರ್ಡ್ ಪ್ರತಿನಿಧಿಸುವ ಹೇಮಲತಾ ಮತ್ತು ಮಾರಪ್ಪನ ಪಾಳ್ಯದ ಎಂ.ಮಹಾದೇವರನ್ನು ಈಗಾಗಲೇ ಜೆಡಿಎಸ್ ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉಚ್ಚಾಟಿಸಿದೆ. ಅವರಿಬ್ಬರಲ್ಲದೆ ಜೆಡಿಎಸ್ ಟಿಕೆಟ್ ಕೈತಪ್ಪಿದ ನಾಗಪುರ ವಾರ್ಡ್‌ನ ಕಾರ್ಪೊರೇಟರ್ ಭದ್ರೇಗೌಡ ಕೂಡಾ ತಟಸ್ಥವಾಗುಳಿಯುವ ಸಾಧ್ಯತೆಗಳಿವೆ. ಇನ್ನು ಕಾಂಗ್ರೆಸ್‌ಗೆ ಇಲ್ಲಿ ವಿಪರೀತ ನಿರೀಕ್ಷೆಗಳೇನು ಇದ್ದಂತಿ ಕಾಣುತ್ತಿಲ್ಲ.


