ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯನ್ನು ಬಂಡಾಯ ಶಿವಸೇನಾ ಸಚಿವ ಏಕನಾಥ್ ಶಿಂಧೆ ಹುಟ್ಟುಹಾಕಿದ್ದಾರೆ. ಏಕನಾಥ್ ಶಿಂಧೆ ಅವರು ಪಕ್ಷದ ವಿರುದ್ಧ ಬಂಡಾಯದಲ್ಲಿ ಬಿಜೆಪಿಯ ಪಾತ್ರವಿಲ್ಲ ಎಂದು ಬಿಜೆಪಿ ಮಹಾರಾಷ್ಟ್ರ ಘಟಕದ ಮುಖ್ಯಸ್ಥರು ತಿಳಿಸಿದ್ದಾರೆ.
ಸಚಿವ ಏಕನಾಥ್ ಶಿಂಧೆ ಅವರು ಪಕ್ಷದ ವಿರುದ್ಧ ಬಂಡಾಯ ಎದ್ದಿರುವಲ್ಲಿ ಬಿಜೆಪಿ ಪಾತ್ರವಿದೆ ಆರೋಪ ಕೇಳಿ ಬಂದಿದೆ. ಇದರ ಹಿನ್ನೆಲೆ, ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಲ್ಲಿ ತಮ್ಮ ಪಕ್ಷವು ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ಬಿಜೆಪಿಯ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಶುಕ್ರವಾರ ಪ್ರತಿಪಾದಿಸಿದ್ದಾರೆ.
ಆದರೂ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ “ಕೆಲವು ಕೆಲಸಕ್ಕಾಗಿ” ಗುರುವಾರ ದೆಹಲಿಗೆ ಭೇಟಿ ನೀಡಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ‘ನಿಮ್ಮ ಸಚಿವ ಶರದ್ ಪವಾರ್‌ಗೆ ಬೆದರಿಸುತ್ತಿದ್ದಾರೆ’: ಪ್ರಧಾನಿ ಮತ್ತು ಅಮಿತ್ ಶಾಗೆ ಶಿವಸೇನೆ ನಾಯಕ ಸಂಜಯ್ ರಾವತ್
ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ಉಂಟಾಗಿರುವ ಬಿಕ್ಕಟ್ಟಿನಲ್ಲಿ ಬಿಜೆಪಿ ಪಾತ್ರ ವಹಿಸಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದ ಹಿನ್ನೆಲೆ ಚಂದ್ರಕಾಂತ್ ಪಾಟೀಲ್ ಅವರ ಹೇಳಿಕೆಗಳು ಬಂದಿವೆ.
ಇತ್ತ ಬಂಡಾಯ ಸೇನೆಯ ನಾಯಕ ಏಕನಾಥ್ ಶಿಂಧೆ, ಗುವಾಹಟಿಯಲ್ಲಿನ ತಮ್ಮ ಬಂಡಾಯ ಶಾಸಕರನ್ನು ಉದ್ದೇಶಿಸಿ ಮಾತನಾಡುತ್ತಾ, “ರಾಷ್ಟ್ರೀಯ ಪಕ್ಷ” ತನ್ನ ಬಂಡಾಯವನ್ನು ಬೆಂಬಲಿಸಿದ್ದು, ಎಲ್ಲಾ ಸಹಾಯವನ್ನು ಭರವಸೆ ನೀಡಿದೆ ಎಂದು ಬಿಜೆಪಿ ಹೆಸರು ಉಲ್ಲೇಖಿಸದೆ ತಿಳಿಸಿದ್ದರು.
ಕೊಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಕಾಂತ್ ಪಾಟೀಲ್, ”ಈಗಿನ ಶಿವಸೇನೆ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ಆಂತರಿಕ ಕಚ್ಚಾಟಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಸದ್ಯ 2024ರ ಚುನಾವಣೆಯ ತಯಾರಿಯಲ್ಲಿ ಬಿಜೆಪಿ ನಿರತವಾಗಿದೆ” ಎಂದು ಮಾಹಿತಿ ನೀಡಿದ್ದರು.
“ಪವಾರ್ ಮತ್ತು ಶಿವಸೇನೆಯ ಸಂಜಯ್ ರಾವತ್ ತಮ್ಮ ವಾಕ್ ಸ್ವಾತಂತ್ರ್ಯದ ಹಕ್ಕನ್ನು ವಿಪರೀತವಾಗಿ ಚಲಾಯಿಸುತ್ತಿದ್ದಾರೆಂದು. ನಾನು ದಿನನಿತ್ಯದ ಸುದ್ದಿಗಳನ್ನು ನೋಡುತ್ತಿಲ್ಲ, ಹಾಗಾಗಿ ಶಿವಸೇನೆಯಲ್ಲಿ ನಿಖರವಾಗಿ ಏನಾಗುತ್ತಿದೆ ಎಂದು ತಿಳಿದಿಲ್ಲ ಎಂದಿದ್ದಾರೆ. ಮುಂಬೈ ಮೂಲದ ಬಿಜೆಪಿ ಕಾರ್ಯಾಧ್ಯಕ್ಷ ಮೋಹಿತ್ ಕಾಂಬೋಜ್ ಅವರು ಬಂಡಾಯ ಶಿವಸೇನಾ ನಾಯಕರೊಂದಿಗೆ ಗುವಾಹಟಿಯಲ್ಲಿದ್ದಾರೆ ಎಂಬ ವರದಿಗಳ ಬಗ್ಗೆ ಕೇಳಿದಾಗ, “ಅವರಿಗೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ, ಅವರು ಯಾರಿಗಾದರೂ ಸಹಾಯ ಮಾಡಲು ಹೋಗಿರಬಹುದು, ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.
ಇತ್ತ, ಮಹಾರಾಷ್ಟ್ರ ಮೈತ್ರಿಕೂಟದ ನಾಯಕ ಶರದ್ ಪವಾರ್ ಅವರಿಗೆ ಒಕ್ಕೂಟ ಸರ್ಕಾರದ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಶಿವಸೇನೆ ಶುಕ್ರವಾರ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ತಮ್ಮ ಸಚಿವರ ಇಂತಹ ಬೆದರಿಕೆಗಳನ್ನು ಒಪ್ಪುತ್ತಾರೆಯೆ ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ‘ಶಿಂಧೆ ನಮ್ಮ ನಾಯಕ’ ಎಂದು ಉಪ ಸಭಾಪತಿಗೆ ಪತ್ರ ಕಳುಹಿಸಿದ ಬಂಡಾಯ ಶಾಸಕರು


