ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನಾಳೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಆದೇಶ ನೀಡಿದ್ದು, ಆದೇಶದ ವಿರುದ್ಧ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಇಂದು ಸಂಜೆ 5 ಗಂಟೆಗೆ ವಿಚಾರಣೆ ನಡೆಸಲಿದೆ.
16 ಬಂಡಾಯ ಶಾಸಕರು ತಮ್ಮ ಅನರ್ಹತೆಯ ಸಾಧ್ಯತೆ ಬಗ್ಗೆ ಇನ್ನೂ ಪ್ರತಿಕ್ರಿಯಿಸದ ಕಾರಣ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ಆದೇಶ ಕಾನೂನುಬಾಹಿರವಾಗಿದೆ ಎಂದು ಉದ್ಧವ್ ಠಾಕ್ರೆ ತಂಡವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಉದ್ಧವ್ ಠಾಕ್ರೆ ನೇತೃತ್ವದ ಮ,ಹಾ ವಿಕಾಸ್ ಅಘಾಡಿ ಒಕ್ಕೂಟವು ತನ್ನ ಬಹುಮತವನ್ನು ಕಳೆದುಕೊಂಡಿದೆ ಎಂದು ತಿಳಿಸಿದ ಒಂದು ದಿನದ ನಂತರ ರಾಜ್ಯಪಾಲರು ಬಹುಮತ ಸಾಬೀತಿಗೆ ಆದೇಶಿಸಿದರು.
ಬಂಡಾಯ ನಾಯಕರ ಬಣದ ಪರ ವಕೀಲ ಎನ್.ಕೆ ಕೌಲ್, “ಬಹುಮತ ಸಾಬೀತು ಪಡಿಸುವ ವಿಚಾರಕ್ಕೂ ಅನರ್ಹತೆಯ ವಿಚಾರಣೆ ಬಾಕಿ ಉಳಿದಿರುವ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ನಾಳೆ ಬಹುಮತ ಸಾಬೀತುಪಡಿಸಲು ಉದ್ಧವ್ ಸರ್ಕಾರಕ್ಕೆ ರಾಜ್ಯಪಾಲರ ಸೂಚನೆ
ಗುರುವಾರ ಬೆಳಗ್ಗೆ 11 ಗಂಟೆಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಎಂವಿಎ ಸರ್ಕಾರಕ್ಕೆ ಸೂಚಿಸಿರುವ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರ ಮನವಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ.ಬಿ ಪಾರ್ದಿವಾಲಾ ಅವರ ರಜಾಕಾಲದ ಪೀಠ ಪರಿಗಣಿಸಿದೆ. ಬುಧವಾರ ಸಂಜೆ 5 ಗಂಟೆಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ರಾಜ್ಯಪಾಲರು “ಜೆಟ್ ಸ್ಪೀಡ್” ನಲ್ಲಿ ವರ್ತಿಸಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಟೀಕಿಸಿದ್ದು, ಬಂಡಾಯ ಶಾಸಕರ ಅನರ್ಹತೆಯ ಬಗ್ಗೆ ಸುಪ್ರೀಂ ಕೋರ್ಟ್ ಇನ್ನೂ ನಿರ್ಧರಿಸದಿರುವಾಗ ವಿಧಾನಸಭೆ ಮತದಾನದ ಕರೆ ಕಾನೂನುಬಾಹಿರ ಎಂದು ಆರೋಪಿಸಿದ್ದಾರೆ. 16 ಶಾಸಕರಿಗೆ ಅನರ್ಹತೆ ನೋಟಿಸ್‌ಗಳನ್ನು ಸಲ್ಲಿಸಿದ್ದು, ನ್ಯಾಯಾಲಯವು ಅವರ ಸ್ಥಾನಮಾನವನ್ನು ನಿರ್ಧರಿಸುವವರೆಗೆ ಬಹುಮತ ಸಾಬೀತಿನಲ್ಲಿ ಭಾಗವಹಿಸುವಂತಿಲ್ಲ ಎಂದು ಶಿವಸೇನೆ ವಾದಿಸಿದೆ.
ಬಂಡಾಯ ಬಣದ ನಾಯಕ ಏಕನಾಥ್ ಶಿಂಧೆ ಸೇರಿದಂತೆ 16 ಶಾಸಕರನ್ನು ಅನರ್ಹಗೊಳಿಸುವಂತೆ ಉದ್ಧವ್ ಠಾಕ್ರೆ ತಂಡ ಡೆಪ್ಯುಟಿ ಸ್ಪೀಕರ್‌ಗೆ ಮನವಿ ಮಾಡಿತ್ತು, ನಂತರ ಬಂಡಾಯ ಪಾಳಯವು ಈ ಕ್ರಮವನ್ನು ಕಾನೂನುಬಾಹಿರ ಎಂದು ಕರೆದು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ತಮ್ಮ ಸಂಭಾವ್ಯ ಅನರ್ಹತೆಯ ನೋಟಿಸ್‌ಗೆ ಪ್ರತಿಕ್ರಿಯಿಸಲು ನ್ಯಾಯಾಲಯವು ಬಂಡಾಯ ಸೇನಾ ಶಾಸಕರಿಗೆ ಜುಲೈ 12 ರವರೆಗೆ ಕಾಲಾವಕಾಶ ನೀಡಿದೆ.
ಇದನ್ನೂ ಓದಿ: ‘ಯಾರಿಗೂ ಹೇಳಬೇಡಿ’: ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಬಂಧನಕ್ಕೆ ಕಾರಣ!


