ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಸರ್ಕಾರ ರಚನೆಯಾಗಿ ಬಹಳ ಸಮಯದ ನಂತರ ಕೊನೆಗೂ ಶನಿವಾರ (ಡಿ.21) ಖಾತೆ ಹಂಚಿಕೆಯಾಗಿದೆ.
ಸಿಎಂ ಹುದ್ದೆ ಬಿಟ್ಟು ಕೊಟ್ಟಿದ್ದ ಏಕನಾಥ್ ಶಿಂದೆ ಅವರಿಗೆ ಇದೀಗ ಗೃಹ ಖಾತೆಯೂ ಕೈ ತಪ್ಪಿದ್ದು ನಿರಾಸೆಯಾಗಿದೆ. ಪ್ರಬಲ ಖಾತೆಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಸಿಎಂ ದೇವೇಂದ್ರ ಫಡ್ನವಿಸ್ ಯಶಸ್ವಿಯಾಗಿದ್ದಾರೆ.
ಉಪಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂದೆ ಅವರಿಗೆ ನಗರಾಭಿವೃದ್ಧಿ, ವಸತಿ ಮತ್ತು ಲೋಕೋಪಯೋಗಿ ಇಲಾಖೆಯನ್ನು ಕೊಟ್ಟು ಸಮಾಧಾನ ಮಾಡಲಾಗಿದೆ. ಮತ್ತೊಬ್ಬರು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು, ಯೋಜನೆ ಮತ್ತು ಅಬಕಾರಿ ಖಾತೆ ನೀಡಲಾಗಿದೆ.
ಸಿಎಂ ದೇವೇಂದ್ರ ಫಡ್ನವಿಸ್ ಅವರು ಗೃಹ ಖಾತೆಯ ಜೊತೆಗೆ ಇಂಧನ (ನವೀಕರಿಸಬಹುದಾದ ಇಂಧನ ಹೊರತುಪಡಿಸಿ), ಕಾನೂನು ಮತ್ತು ನ್ಯಾಯಾಂಗ, ಸಾಮಾನ್ಯ ಆಡಳಿತ, ಮಾಹಿತಿ ಮತ್ತು ಪ್ರಚಾರ ಮತ್ತು ಇತರ ಯಾವುದೇ ಸಚಿವರಿಗೆ ಹಂಚಿಕೆಯಾಗದ ಖಾತೆಗಳನ್ನೂ ನೋಡಿಕೊಳ್ಳಲಿದ್ದಾರೆ.
ಮಹಾರಾಷ್ಟ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಅವರು ಪ್ರಮುಖ ಖಾತೆಗಳಲ್ಲಿ ಒಂದಾದ ಕಂದಾಯ ಪಡೆದುಕೊಂಡಿದ್ದಾರೆ. ಕಳೆದ ಮಹಾಯುತಿ ಸರ್ಕಾರದಲ್ಲಿ ಕಂದಾಯ ಇಲಾಖೆಯನ್ನು ನಿಭಾಯಿಸಿದ್ದ ಪ್ರಭಾವಿ ಶಾಸಕ ರಾಧಾಕೃಷ್ಣ ವಿಖೆ ಪಾಟೀಲ್ ಅವರಿಗೆ ಈ ಬಾರಿ ಜಲಸಂಪನ್ಮೂಲ (ಗೋದಾವರಿ, ಕೃಷ್ಣಾ ಕಣಿವೆ ಇಲಾಖೆ) ನೀಡಲಾಗಿದೆ. ಬಿಜೆಪಿ ನಾಯಕ ಹಾಗೂ ಮಾಜಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರಿಗೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಹಂಚಿಕೆ ಮಾಡಲಾಗಿದೆ.
ಸಿಎಂ ಫಡ್ನವಿಸ್ ಅವರಿಗೆ ಆಪ್ತರಾಗಿರುವ ಬಿಜೆಪಿಯ ಗಿರೀಶ್ ಮಹಾಜನ್ ಅವರಿಗೆ ಜಲಸಂಪನ್ಮೂಲ ಮತ್ತು ವಿಪತ್ತು ನಿರ್ವಹಣಾ ಖಾತೆಗಳನ್ನು ಕೊಡಲಾಗಿದೆ. ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ ಗಣೇಶ್ ನಾಯಕ್ ಅವರಿಗೆ ಅರಣ್ಯ ಖಾತೆ ನೀಡಲಾಗಿದೆ. ಶಿವಸೇನೆಯ ಗುಲಾಬ್ರಾವ್ ಪಾಟೀಲ್ ಅವರಿಗೆ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆ ಮತ್ತು ಶಿವಸೇನೆಯ ಮತ್ತೊಬ್ಬ ಶಾಸಕ ದಾದಾಜಿ ಭೂಸೆ ಅವರಿಗೆ ಶಾಲಾ ಶಿಕ್ಷಣ ಖಾತೆ ನೀಡಲಾಗಿದೆ.
ಶಿವಸೇನೆಯ ಉದಯ್ ಸಾಮಂತ್ ಮೂರನೇ ಬಾರಿಗೆ ಕೈಗಾರಿಕೆ ಖಾತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂದೆ ಸರ್ಕಾರಗಳಲ್ಲಿ ಖಾತೆಯನ್ನೇ ಹೊಂದಿದ್ದರು.
ಬಿಜೆಪಿಯ ಪಂಕಜಾ ಮುಂಡೆ ಪರಿಸರ, ಹವಾಮಾನ ಬದಲಾವಣೆ ಮತ್ತು ಪಶುಸಂಗೋಪನೆ ಖಾತೆಗಳನ್ನು ಪಡೆದರೆ, ಅವರ ಸೋದರ ಸಂಬಂಧಿ ಮತ್ತು ಎನ್‌ಸಿಪಿ ನಾಯಕ ಧನಂಜಯ್ ಮುಂಡೆ ಅವರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ರಕ್ಷಣೆ ಖಾತೆಗಳು ದೊರೆತಿವೆ.
ಎನ್‌ಸಿಪಿಯ ಹಸನ್ ಮುಶ್ರಿಫ್ ಅವರು ವೈದ್ಯಕೀಯ ಶಿಕ್ಷಣ ಖಾತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಪಕ್ಷದ ಇನ್ನೊಬ್ಬ ಶಾಸಕ ಮಾಣಿಕ್ರಾವ್ ಕೊಕಾಟೆಗೆ ಕೃಷಿ ಖಾತೆಯನ್ನು ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ : 10 ವರ್ಷಗಳಲ್ಲಿ ಪಶ್ಚಿಮ ಘಟ್ಟದಲ್ಲಿ 58.22 ಚದರ ಕಿ.ಮೀ ಅರಣ್ಯ ನಾಶ


