“ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ?” ಜನಪ್ರಿಯ ಕನ್ನಡ ಚಿತ್ರಗೀತೆಯ ಈ ಸಾಲನ್ನು ಗಮನಿಸಿ. ಮಾನವನಿಗೆ ದಾನವನು ವಿರುದ್ಧನಾದವನು ಎಂದು ಧ್ವನಿಸುತ್ತದೆ. ಇದು ವ್ಯಾಪಕವಾಗಿ ಪ್ರಚಲಿತವಿರುವ ಪರಿಕಲ್ಪನೆಯೇ ಆಗಿದೆ. ಆಕೃತಿಯಲ್ಲಿ ನೋಡಲು, ದೇವತೆಗಳೆಂದರೆ ನಸುನಗುತ್ತಿರುವ ಮುಖಗಳು, ಸಾಧಾರಣವಾಗಿ ಬಿಳಿಯರು, ಸುಂದರರು, ಗಂಡಸರಾದರೆ ಮೀಸೆಗಳಿಲ್ಲದವರು, ಕಿರೀಟಾದಿಯಾಗಿ ವಿವಿಧ ಆಭರಣಗಳೊಂದಿಗೆ ಕಂಗೊಳಿಸುತ್ತಿರುವವರು, ಅಭಯ (ಹೆದರದಿರಿ ನಾವಿದ್ದೇವೆ) ಮುದ್ರೆ, ವರದ (ಬೇಕಾದ್ದನ್ನು ಕೊಡುವೆವು) ಮುದ್ರೆಗಳನ್ನು ಕರಗಳಲ್ಲಿ ಹೊಂದಿರುವವರು, ಕೈಗಳಲ್ಲಿ ಆಯುಧಗಳಿದ್ದು ಅದು ಅವರ ಭಕ್ತರನ್ನು ಮತ್ತು ಶಿಷ್ಟರನ್ನು ರಾಕ್ಷಸರಿಂದ ರಕ್ಷಿಸಲು ಹೊಂದಿರುವಂತವರು.
ಇನ್ನು ಈ ದಾನವರು, ಕೆಂಪಾದ ಕಣ್ಣುಗಳು, ಉರುಟು ಮತ್ತು ಒರಟು ಮುಖಗಳು, ಸಾಧಾರಣವಾಗಿ ಕರಿಯರು, ಗಂಡಸರಾದರೆ ಕಡ್ಡಾಯವಾಗಿ ಗಿರಿಜಾ ಮೀಸೆಯನ್ನು ಹೊಂದಿರುವವರು. ಬಾಯಿಂದ ಹೊರಬಂದಿರುವ ಕೋರೆ ಮತ್ತು ದಾಡೆಗಳು, ತಲೆಯ ಮೇಲೆ ಕೊಂಬುಗಳು, ಕೈಗಳಲ್ಲಿ ಬಹುದೊಡ್ಡ ಆಯುಧಗಳು; ಅವು ಶಿಷ್ಟರನ್ನು, ಸಾತ್ವಿಕರನ್ನು ಹಿಂಸಿಸಲು ಎಂದೇ ಹಿಡಿದಿರುವ, ಹಿಂಸೆಯಲ್ಲಿ ಆನಂದವನ್ನು ಕಾಣುವಂತಹ ಸ್ಯಾಡಿಸ್ಟ್‌ಗಳು ಮತ್ತು ಲೋಕಕಲ್ಯಾಣಕ್ಕೆ ತೊಡಕಾಗುವವರು.
ಈಗ ಇದೇ ವಿಷಯವನ್ನು ಸಾಮಾಜಿಕವಾಗಿ ಅರ್ಥೈಸಿಕೊಳ್ಳಲು ಪ್ರಯತ್ನಿಸೋಣ. ಬಿಳಿಯ ಸುಂದರ ದೇವತೆಗಳು ಆರ್ಯರಾದರೆ, ಈ ಕರಿಯರೆಂಬುವರು ದ್ರಾವಿಡರು ಅಥವಾ ಇನ್ನಿತರ ಅರಣ್ಯಕ ಬುಡಕಟ್ಟುಗಳ ಮೂಲ ನಿವಾಸಿಗಳು. ಇವರಿಬ್ಬರಿಗೂ ಅಧಿಕಾರದ ಶಕ್ತಿಗಾಗಿ ನಡೆದ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಾಡಲೇಬೇಕಾದಂತಹ ಸಂಘರ್ಷಗಳೇ ದೇವ-ದಾನವರ ಯುದ್ಧಗಳು!
ಇದೇ ದಿಕ್ಕಿನಲ್ಲಿ ಮಹಿಷಾಸುರ ಮರ್ಧಿನಿ ಚಾಮುಂಡಿ ಎಂಬ ದೇವತೆ ಮಹಿಷ ಎಂಬ ರಾಕ್ಷಸನ ಕತೆಯನ್ನು ಗಂಭೀರವಾಗಿ ಸಿದ್ಧಸ್ವಾಮಿ ತಮ್ಮ ಮಹಿಷ ಮಂಡಲ ಕೃತಿಯಲ್ಲಿ ಗಮನಿಸಿದ್ದಾರೆ. ಆದರೆ, ಇಡೀ ಮೈಸೂರು ಮಹಿಷನ ಊರಾಗಿದ್ದುದ್ದನ್ನೂ ಚರ್ಚಿಸುತ್ತಾರೆ. ಇರಲಿ ಮೊದಲು ಈ ರಾಕ್ಷಸರು ಯಾರು ಎಂಬುದನ್ನು ಗಮನಿಸೋಣ.
ನಿಜ ಹೇಳಬೇಕೆಂದರೆ, ಈ ನೆಲದ ಮೂಲನಿವಾಸಿಗಳೇ ರಾಕ್ಷಸರು. ತಮ್ಮದೇ ಆದಂತಹ ಗಣಗಳಲ್ಲಿ, ತಮ್ಮದೇ ಆದಂತಹ ಉದಾತ್ತ ಸಂಸ್ಕೃತಿಯಲ್ಲಿ ಬಾಳುತ್ತಿದ್ದವರು. ಅರಣ್ಯಕರೂ, ಆದಿವಾಸಿಗಳೂ, ಕೆಲವು ಗಣಗಳು ಅಲೆಮಾರಿಗಳೂ ಆಗಿದ್ದರೂ, ಅವರಿಗಿದ್ದ ಲಾಂಛನಗಳೆಂದರೆ ಪ್ರಕೃತಿಯಲ್ಲಿನ ಪ್ರಾಣಿಗಳು. ಇವರು ಗ್ರಾಮಗಳನ್ನೂ ಮತ್ತು ಕಾಡನ್ನೂ ರಕ್ಷಿಸುತ್ತಿದ್ದವರು, ರಕ್ಷಸರು. ತಮ್ಮ ಅರಣ್ಯದ ವೈದ್ಯ ಪದ್ಧತಿಯನ್ನು ಕಂಡುಕೊಂಡವರು, ಬೇಷಜರು.
ಇವರಿಗೇಕೆ ಆರ್ಯ ವೈದಿಕರೊಂದಿಗೆ ವೈಷಮ್ಯ ಬೆಳೆಯಿತು? ಮೂಲ ನಿವಾಸಿಗಳಾಗಿ ಬದುಕಿದ್ದ ಈ ಅರಣ್ಯಕರ ಪ್ರಧಾನ ಸಂಪತ್ತೂ ಹಾಗೂ ಸಹಜವಾದ ನೆಲೆಯೂ ಆಗಿದ್ದ ಅರಣ್ಯವು ವೈದಿಕರಿಂದಾಗಿ ಕ್ಷೀಣಿಸತೊಡಗಿತು. ವೈದಿಕ ಬ್ರಾಹ್ಮಣರ ಬಹು ಮುಖ್ಯವಾದ ಆಚರಣೆಯೆಂದರೆ ಯಾಗಗಳು. ಪೂಜೆ ಎಂಬುದು ಬ್ರಾಹ್ಮಣರ ವಿಷಯವೇ ಅಲ್ಲ. ಅದು ದ್ರಾವಿಡರ ಸಂಸ್ಕೃತಿ. ಪೂ- ಎಂದರೆ, ಹೂವನ್ನು ಅರ್ಪಿಸುವುದು ಪೂಜೆಗೆ ಮೊದಲಾಯಿತು ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಯಾಗಕ್ಕೆ ಎಷ್ಟೋ ಪ್ರಮಾಣದಲ್ಲಿ ಅರಣ್ಯದ ಉತ್ಪನ್ನಗಳು ನೇರವಾಗಿ ಬೇಕಾಗಿತ್ತು. ಈ ರೀತಿಯ ವನ ನಾಶದ ಜೊತೆ, ಅವರ ಯಾಗಶಾಲೆಗಳ, ವಾಸಸ್ಥಳ ಮತ್ತು ಆಶ್ರಮಗಳ ನಿರ್ಮಾಣಕ್ಕೂ, ಸಾಗುವಳಿಗೂ ಅರಣ್ಯ ನಾಶ ಮಾಡಬೇಕಿತ್ತು. ಆಗ ಈ ಅರಣ್ಯಕರು ಸಹಜವಾಗಿಯೇ ಪ್ರತಿಭಟಿಸಿದರು.
“ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯಕಪರ್ದಿನಿ ಶೈಲಸುತೆ” ಎಂದು ಶಂಕರಾಚಾರ್ಯ ತಮ್ಮ ಆಯಿಗಿರಿ ನಂದಿನಿಯಲ್ಲಿ ಹಾಡಿ ಹೊಗಳಿರುವುದನ್ನು ಕಾಣುತ್ತೇವೆ.
ಅದೆಲ್ಲಾ ಸರಿ, ಈ ಹಾಡನ್ನು ಕೇಳುತ್ತಾ ಒಂದು ರಾಜಕೀಯ ತಕರಾರು ಎದ್ದೇಳುತ್ತದೆ. ಮಹಿಷನನ್ನು ಕೊಂದವಳು ಚಾಮುಂಡಿ ಎಂದು ಈ ನಾಡಿನ ಜನತೆ ನಂಬಿದೆ. ಆದರೆ, ಆಯಿಗಿರಿ ನಂದಿನಿಯಲ್ಲಿ ಮಹಿಷನನ್ನು ಕೊಂದ ದೇವಿಯನ್ನು ನಂದಿನಿ ಎಂದು ವಿವರಿಸಲಾಗಿದೆ. ಪರ್ವತನ ಮಗಳು ಎಂದು ಬಣ್ಣಿಸಲಾಗಿದೆ. ಅವಳು ಓರ್ವ ಗಿರಿಕನ್ಯೆಯಾಗಿದ್ದು, ಆಕೆ ಹೇಗೆ ತನ್ನ ವನಗಳಲ್ಲಿ, ಬೆಟ್ಟಗಳಲ್ಲಿ, ತನ್ನದೇ ವಿಶ್ವದಲ್ಲಿ ವಿಹರಿಸುತ್ತಿದ್ದಳು ಎಂದು ವರ್ಣಿಸಿದ್ದಾರೆ. ಅಷ್ಟೇ ಅಲ್ಲ ವಿಂದ್ಯಾಪರ್ವತದಲ್ಲಿ ನೆಲಸಿರುವವಳೆಂದೂ ಹೇಳುತ್ತಾರೆ.
ಯಾವುದೇ ವೀರೋಚಿತವಾದ ಮಹಿಳೆಯನ್ನು ದುರ್ಗಾದೇವಿಗೆ ಸಮೀಕರಿಸುವುದು, ಆ ಉಪಮೆಯು ಕ್ರಮೇಣ ರೂಪಕಾಲಂಕಾರಕ್ಕೆ ತಿರುಗಿ, ನಂತರ ಅವಳೂ ಮತ್ತು ದುರ್ಗೆಯು ಒಂದೇ ಎಂದಾಗುವುದು ಅಪರೂಪದ ಸಂಗತಿಗಳೇನಲ್ಲ.
ಆದರೆ, ಇದೇ ಆಯಿಗಿರಿ ನಂದಿನಿಯಲ್ಲಿ ಮತ್ತೊಂದು ನಮ್ಮ ಜನಪದರಿಗೆ ಹತ್ತಿರವಾಗುವ ಸೂಚನೆಯನ್ನು ಶಂಕರಾಚಾರ್ಯರು ಕೊಡುತ್ತಾರೆ. ಅದೇನೆಂದರೆ, “ಭಗವತಿ ಹೇ ಶಿತಿಕಂಠ ಕುಟುಂಬಿನಿ, ಭೂರಿಕುಟುಂಬಿನಿ ಭೂರಿಕೃತೆ” ಎಂಬ ಸಾಲಿನಲ್ಲಿ, ನೀಲಕಂಠನ ಸಂಗಾತಿ ಎಂದು ಅವಳನ್ನು ಕರೆಯುವುದಲ್ಲದೇ, ಆ ನೀಲಕಂಠನಿಗೆ ಹಲವು ಸಂಸಾರಗಳು ಅಥವಾ ಕುಟುಂಬಗಳಿದ್ದವು ಎಂದು ತಿಳಿಸುತ್ತಾರೆ.
ಇಲ್ಲಿ ನಮಗೆ ಆಯಿಗಿರಿ ನಂದಿನಿಯನ್ನು ಚಾಮುಂಡಿಯ ಹತ್ತಿರಕ್ಕೆ ಶಂಕರಾಚಾರ್ಯರು ತರುತ್ತಾರೆ.
ದೇವೀರಿ ಮತ್ತು ಪಾರ್ವತಿಯೆಂಬ ಇಬ್ಬರು ಹೆಂಡತಿಯರ ಸಂಸಾರವನ್ನು ನಿಭಾಯಿಸುತ್ತಿದ್ದ ನಂಜುಂಡೇಶ್ವರನೆಂಬ ಆಯುರ್ವೈದ್ಯದ ವೈದ್ಯ ಪಂಡಿತ ಚಾಮುಂಡಿ ಎಂಬುವಳ ವ್ಯಾಮೋಹಕ್ಕೆ ಬಿದ್ದ. ನಂತರ ತನ್ನ ಸಂಸಾರವನ್ನು ನಿಭಾಯಿಸುತ್ತಿದ್ದ ಇವನು, ತನ್ನ ಜೀವನೋಪಾಯವನ್ನು ನಿಭಾಯಿಸುತ್ತಿದ್ದ ಅವಳು ಹೇಗೋ, ಎಂತೋ ಒಬ್ಬರನ್ನೊಬ್ಬರು ಕದ್ದು ಮುಚ್ಚಿಯಾದರೂ ಕಾಣುವ ಸೆಳೆತದಲ್ಲಿ ಬೆಟ್ಟದಿಂದ ಇಳಿದು ಬರುತ್ತಿದ್ದಳು. ಹಾಗಾದರೆ, ಆಗಾಗಲೇ ಬೆಟ್ಟವು ಅವಳ ಅಧೀನಕ್ಕೆ ಬಂದಾಗಿತ್ತು. ಮಹಿಷಾಸುರನ ಮರಣಾನಂತರದ ಕಾಲವದು.
ಅಸಲಿಗೆ ಈ ಮಹಿಷಾಸುರ ಯಾರು? ಮೈಸೂರು ಎಂಬ ಹೆಸರಿನ ಮೂಲ, ಮಹಿಸೂರು, ಮಹಿಷೂರು ಎಂದಾಗುತ್ತದೆ. ಇನ್ನೂ ಕನ್ನಡದ ಮೂಲವನ್ನು ಹುಡುಕಿದರೆ ಎರುಮೈ ನಾಡು ಎಂದು ವಿದ್ವಾಂಸರು ಗುರುತಿಸುತ್ತಾರೆ. ಅಂದರೆ, ಮೈಸೂರು ಎಮ್ಮೆಗಳ ನಾಡು ಅಥವಾ ಮಹಿಷಗಳ ಊರು ಎಂದಾಯ್ತು. ಹಾಗಾದರೆ ಅಲ್ಲಿ ಎಮ್ಮೆಗಳು ಯಥೇಚ್ಛವಾಗಿದ್ದವೇ? ಹೌದು ಎನ್ನುತ್ತದೆ ಬುಡಕಟ್ಟುಗಳ ಅಧ್ಯಯನ.
ಎಮ್ಮೆಗಳ ಪ್ರಾಣಿ ಲಾಂಛನವನ್ನು ಹೊಂದಿರುವ ಬುಡಕಟ್ಟು ಎಲ್ಲಿವೆಯೆಂದು ಕಣ್ಣು ಹಾಯಿಸಿದರೆ, “ತೋಡಾ” ಬುಡಕಟ್ಟು ಸಿಗುತ್ತದೆ. ಈ ಬುಡಕಟ್ಟಿನ ಜನ ಈಗ ನೀಲಗಿರಿಯಲ್ಲಿ ವ್ಯಾಪಕವಾಗಿ ಕಾಣಸಿಗುತ್ತಾರೆ. ಊಟಿ, ಕೊಡೈಕೆನಾಲ್ ಇತ್ಯಾದಿ ಭಾಗಗಳಲ್ಲಿರುವ ಈ ಜನರೇ ಪ್ರಧಾನವಾಗಿ ಆಗಿನ ಮಹಿಷೂರಿನ ನಿವಾಸಿಗಳಾಗಿದ್ದರೂ ಆಶ್ಚರ್ಯವಿಲ್ಲ. ಅವರು ತಮ್ಮ ಸಂಪತ್ತನ್ನು ಅಳೆಯುತ್ತಿದ್ದದ್ದೇ ತಮ್ಮ ಬಳಿ ಇರುವ ಎಮ್ಮೆಗಳಿಂದ. ಎಮ್ಮೆಗಳು ಅವರ ಕುಲಕ್ಕೆ ಮುಖ್ಯವಾದ ಪ್ರಾಣಿಗಳು ಮಾತ್ರವಲ್ಲ, ಅವರ ಕುಲದ ಲಾಂಛನ ಕೂಡ. ಡಬ್ಲ್ಯು ಹೆಚ್ ಆರ್ ರಿವರ್‍ಸ್ ತೋಡಾ ಬುಡಕಟ್ಟಿನ ಬಗ್ಗೆ ಬರೆಯುತ್ತಾ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾರೆ. ತೋಡಾದ ಹಿರಿಯರೊಬ್ಬರ ಬಳಿ ಇಂಗ್ಲೆಂಡಿನ ರಾಜಕುಮಾರ ಭಾರತಕ್ಕೆ ಬರುತ್ತಾನೆಂದೂ ಆತ ಬಹಳ ಶ್ರೀಮಂತನೆಂದೂ ತಿಳಿಸಿದಾಗ, ಆ ಹಿರಿಯರು ಆ ಇಂಗ್ಲೆಂಡ್ ರಾಜಕುಮಾರನ ಬಳಿ ಎಷ್ಟು ಎಮ್ಮೆಗಳಿವೆ ಎಂದು ಕೇಳಿದರಂತೆ. ಎಮ್ಮೆಗಳಿಂದ ಬಹಳ ಸಂಪದ್ಭರಿತವಾಗಿರುವ ಊರು ಎರುಮೈ ನಾಡಾಗಿದ್ದಿತ್ತು. ಚಾಮುಂಡಿಯು ಗೌಳಿಗಿತ್ತಿಯಾಗಿ ಜನಪದಗಳಲ್ಲಿ ಕೇಳಿದ್ದೇವೆ. ಹಸುವಿನ ಮುಖ್ಯ ಬಳಕೆದಾರರಾದ ಆರ್ಯರು ಎಮ್ಮೆಗಳನ್ನು ಒಲ್ಲದೇ ಹೋದರೆ? ಇದು ಹಸುವನ್ನು ಸಾಕುವವರ ಮತ್ತು ಎಮ್ಮೆಗಳನ್ನು ಸಾಕುವವರ ನಡುವೆ ನಡೆದ ಸಂಘರ್ಷವೇ? ಅಧ್ಯಯನಗಳು ತಿಳಿಸಬೇಕು.
ಇರಲಿ, ಮಹಿಷಾಸುರನ ವಿಷಯಕ್ಕೇ ಮರಳಿ ಬಂದರೆ, ಒಂದು ಊರಿಗೆ ಆ ಊರಿನ ಶ್ರೇಷ್ಠ ನಾಯಕನ ಹೆಸರನ್ನು ಇಡಲು ಸಾಧ್ಯತೆಗಳಿವೆ. ದುಷ್ಟನೋ, ಜನರಿಗೆ ಪೀಡಕನೋ ಆಗಿರುವಂತಹ ಕೇಡಿಯ ಹೆಸರನ್ನು ಇಟ್ಟುಕೊಂಡು ತಮ್ಮ ಊರನ್ನು ಗುರುತಿಸಲು ಇಷ್ಟಪಡುವುದಿಲ್ಲ. ಅಂದಹಾಗೆ, ಮಹಿಷಾಸುರನೆಂಬ ಆ ವ್ಯಕ್ತಿ ಐತಿಹಾಸಿಕನೇ ಆಗಿದ್ದ ಪಕ್ಷದಲ್ಲಿ ಆತ ಒಳ್ಳೆಯವನೇ, ಶೀಲವಂತನೇ ಇರಬೇಕು. ಹಾಗಿದ್ದರೂ ಆತ ಏಕೆ ದುಷ್ಟನೆಂದು ಬಿಂಬಿಸಲ್ಪಟ್ಟ?
ತೋಡಾ ಬುಡಕಟ್ಟಿನಲ್ಲಿ ವಿಗ್ರಹಾರಾಧನೆ ಇಲ್ಲ. ಅವರಲ್ಲೂ ಪುರೋಹಿತ ವರ್ಗವಿದ್ದರೂ ನಿರಾಕಾರವಾದ ಖಾಲಿ ಗೋಡೆಯನ್ನು ಆರಾಧಿಸುವವರು. ಇವರ ಈ ಆಚರಣೆಯ ಪದ್ಧತಿಯೇ ಮೊದಲಾಗಿ ಇತರ ಭಿನ್ನ ಸಂಸ್ಕೃತಿಯ ನೇರಪಾಲನೆಗಳಿಂದ ಸಂಘರ್ಷಗಳು ಸಮಕಾಲಿನ ಆರ್ಯ ಜನಾಂಗದೊಡನೆ ಉಂಟಾಗಿರುವ ಸಾಧ್ಯತೆಗಳಿವೆ. ಈ ಬಗೆಯ ಸಂಘರ್ಷಗಳು ನಡೆದು, ಕ್ರಮೇಣ ತೋಡಾ ಬುಡಕಟ್ಟನ್ನು ತಾವಿದ್ದ ಎಡೆಯಿಂದ ಮೂಲೆಗುಂಪಾಗಿಸುತ್ತಾ ಸಮೀಪದ ನೀಲಗಿರಿಯಲ್ಲಿ ನೆಲೆಯೂರುವಂತೆ ಮಾಡಿರುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ.
ಮಹಿಷಾಸುರನ ಹೆಸರು ಖಂಡಿತವಾಗಿ ಅದಿರದೇ ಬೇರಿನ್ನಿನೋ ಇದ್ದು, ಮಹಿಷ ಲಾಂಛನದ ಬುಡಕಟ್ಟಿನ ಒಡೆಯನಾದ್ದರಿಂದ ಆತನನ್ನು ಮಹಿಷಾಸುರನೆಂದು ಕರೆಯುತ್ತಾರೆ. ಪುರಾಣದಲ್ಲಿ ಮಹಿಷನು ನೇರ ಕೋಣವಾಗಿ ಬರದೇ ವಿವಿಧ ರೂಪಗಳನ್ನು ತಳೆಯುತ್ತಾ ನಾಗರಹಾವಾಗಿಯೂ ಬಂದು ಕೊನೆಗೆ ಚಾಮುಂಡಿಯನ್ನು ಕೊಲ್ಲಲು ಕೋಣದ ರೂಪ ತಾಳಿ ಆಕೆಯಿಂದ ಹತನಾಗುತ್ತಾನೆ. ಇದನ್ನು ವಾಸ್ತವಿಕ ನೆಲಗಟ್ಟಿನಿಂದ ನೋಡಲು ಯತ್ನಿಸಿದರೆ, ಮಹಿಷನು ಮೂಲದಲ್ಲಿ ಮಹಿಷಕುಲದವನಾಗಿರದೇ ನಾಗಕುಲದ ನೆಲೆಯಿಂದ ಬಂದಿದ್ದು, ನಂತರ ತೋಡಾದಂತಹ ಮಹಿಷ ಲಾಂಛನದ ಬುಡಕಟ್ಟಿನವರೊಂದಿಗೆ ಸೇರಿ ಮಹಾನ್ ಸಂಘರ್ಷ ನಡೆಸಿದನೇ? ಆತನಿಗೆ ನೆರವು ನೀಡಿದ ತೋಡಾ ಬುಡಕಟ್ಟನ್ನು ಬುಡಮೇಲು ಮಾಡಲು ಆರ್ಯರು ಯತ್ನಿಸಿದರೇ? ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಮಹಿಷಾಸುರ ಬೌದ್ಧನೇ? ಈ ಪ್ರಶ್ನೆಗೆ ನನ್ನಲ್ಲಿ ಸಮರ್ಥ ಉತ್ತರವಿಲ್ಲ. ಆದರೆ ಅದೊಂದು ವಾದವಿದೆ. ವಿಜಯಾ ಮಹೇಶ್‌ರವರು ತಮ್ಮ ಚರಿತ್ರೆಯ ಮರುಶೋಧದಲ್ಲಿ ಕೆಲವು ಕುತೂಹಲಕರವಾದ ಮತ್ತು ಸತ್ಯನಿಷ್ಠವಾದ ಸಂಗತಿಗಳನ್ನು ಪ್ರಸ್ತುತಪಡಿಸುತ್ತಾರೆ. ೧೯೨೯ರಲ್ಲಿ ಪ್ರಕಟವಾದ ಮೈಸೂರು ವಿಶ್ವವಿದ್ಯಾಲಯದ ’ಹ್ಯಾಂಡ್ ಬುಕ್ ಆನ್ ಇಂಡಿಯನ್ ಇಕನಾಮಿಕ್ಸ್ ಕಾನ್ಫರೆನ್ಸ್’ನಲ್ಲಿ ದಾಖಲಾಗಿರುವ ಕೆಲವು ಅಂಶಗಳನ್ನು ವಿವರಿಸುತ್ತಾ, “ಬೆಟ್ಟಗಳಲ್ಲಿ ನೆಲಸುವ ಬುಡಕಟ್ಟುಗಳ ಜನರನ್ನು ರಾಕ್ಷಸರು ಮತ್ತು ಅಸುರರೆಂದು ಕರೆಯಲಾಗುತ್ತಿತ್ತು. ಹೀಗೆ ಹಲವಾರು ಅಸುರರ ಮುಖ್ಯಸ್ಥರು ವಿವಿಧ ಭಾಗಗಳಲ್ಲಿ ಅಧಿಕಾರದಲ್ಲಿದ್ದರು. ಹರಿಹರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದವನು ಗುಹಾಸುರ. ಚಿತ್ರದುರ್ಗವನ್ನು ಆಳುತ್ತಿದ್ದವನು ಹಿಡಿಂಬಾಸುರ, ರಾಮನಗರದಲ್ಲಿದ್ದವನು ಬಕಾಸುರ ಮತ್ತು ಮಹಿಷಾಸುರ ಮೈಸೂರಿನಲ್ಲಿ ಎಂದು ದಾಖಲಿಸಿದ್ದಾರೆ.
ಹೀಗೇ ಮುಂದುವರಿಯುತ್ತಾ “ದಾನವಂತ ಮಹಿಷನ ರಾಜ್ಯದಲ್ಲಿ ಅನಾಗರಿಕವಾದ ಯಜ್ಞಯಾಗಾದಿಗಳಿಗೆ ಆಸ್ಪದವಿರಲಿಲ್ಲ. ಮನ ಬಂದಂಗೆ ವೃಕ್ಷಗಳನ್ನು ಕಡಿಯುವುದಿರಲಿ, ಸಾವಿರಾರು ಗೋವುಗಳನ್ನು ಕಡಿದು ಯಜ್ಞಕ್ಕೆ ಹಾಕುವುದಾಗಲಿ ಯಾವುದಕ್ಕೂ ಆರ್ಯರಿಗೆ ಅವಕಾಶವಿರಲಿಲ್ಲ. ಪ್ರತಿಯೊಬ್ಬನೂ ಉಳುಮೆ ಮಾಡಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಯಾವೊಬ್ಬನೂ ಸುಮ್ಮನೆ ಕೂತು ಉಣ್ಣುವುದಕ್ಕೆ ಆಸ್ಪದವಿರಲಿಲ್ಲ. ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿದ್ದ ಮಹಿಷಾಸುರನು ಇವೆಲ್ಲವನ್ನೂ ಕಾಪಾಡಲೆಂದೇ ತನ್ನ ಸೇನಾಪತಿಗಳಾದ ಚಾಮರ, ಉಗ್ರವೀರ್ಯ, ಉಗ್ರಾಸ್ಯ, ಕರಾಲ, ಬಿಡಾಲ, ಅಂಧಕಾಸುರ, ಬಾಷ್ಕಲ ಮುಂತಾದ ಬಲಾಢ್ಯ ದೈತ್ಯವೀರರನ್ನು ನೇಮಿಸಿದ್ದ. ಕರಾಲ, ದುರ್ದರ, ಜಿಷ್ಟು, ಬಾಷ್ಕಲ ಇವರನ್ನೊಳಗೊಂಡ ಪಡೆಯು ಆರ್ಯರು ನಡೆಸುತ್ತಿದ್ದ ಯಜ್ಞ ಯಾಗಾದಿಗಳನ್ನು ಸುಟ್ಟು ಬೂದಿ ಮಾಡಲೆಂದೇ ನೇಮಿಸಲಾಗಿತ್ತು. ಮಹಿಷಾಸುರನು ಈ ಪಡೆಯನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ. ಮಹಾನು, ಮಹಾಮೌಳಿ, ಮಹಾಧನು ಇವರುಗಳು ಮಹಿಷ ಮಂಡಲದ ಮತ್ತೊಂದು ವಿಶೇಷ ಸೇನಾಪತಿಗಳ ಪಡೆಯಾಗಿತ್ತು. ಉಗ್ರಾಸ್ಯ, ಜ್ಞಾಲಾಸ್ಯ, ಚಾಮರ ಇವರುಗಳದ್ದು ಕಬ್ಬಿಣದ ಶಿರಸ್ತ್ರಾಣಗಳನ್ನು ತಯಾರಿಸುತ್ತಿದ್ದ ಒಂದು ತಂಡವಾಗಿತ್ತು. ಸೈನ್ಯಕ್ಕೆ ಬೇಕಾದ ಈ ಶಿರಸ್ತ್ರಾಣಗಳನ್ನು ಭಾರತದ ಇತರ ಕಡೆಗಳಿಂದ ಅಸುರರು ಬಂದು ಪಡೆದುಕೊಳ್ಳುತ್ತಿದ್ದರು. ಇವರ ನೈಪುಣ್ಯಕ್ಕೆ ಆಧಾರವಾಗಿ ಎಂ ಎಲ್ ಶಿಂಡ್ಗೆ ಎಂಬ ಪ್ರಸಿದ್ಧ ಇತಿಹಾಸಕಾರರು ತಮ್ಮ ಸಂಶೋಧನಾ ಕೃತಿಯಾದ ’ದ ಲಾಂಗ್ವೇಜ್ ಆಫ್ ದ ಹರಪ್ಪನ್ಸ್’ನಲ್ಲಿ ಅಸುರರು ಮೆಟಲ್ ಕಾಸ್ಟಿಂಗ್ ಮತ್ತು ಕಬ್ಬಿಣದ ಬಳಕೆಯಲ್ಲಿ ಅಪ್ರತಿಮ ಕೌಶಲ್ಯವನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಇನ್ನೂ ಮುಂದುವರಿದು “ಮಹಾನ್ ಬೌದ್ಧ ರಾಜನಾಗಿದ್ದ ದಾನವಂತ ಮಹಿಷಾಸುರನು ಅಸುರರಿಗೆ ಧ್ಯಾನ ಮಾಡಲಿಕ್ಕೆಂದೇ ಸಾವಿರಾರು ವನಗಳನ್ನು ನಿರ್ಮಿಸಿದ್ದ. ಅದು ಸಾವಿರಾರು ಪ್ರಾಣಿ ಪಕ್ಷಿಗಳ ನೆಲೆವೀಡಾಗಿತ್ತು. ಯಾವುದೇ ಕಾರಣಕ್ಕೂ ಅಲ್ಲೆಲ್ಲಾ ಯಜ್ಞಗಳನ್ನು ಆರ್‍ಯರು ನಡೆಸಲು ಸಾಧ್ಯವಿರಲಿಲ್ಲ. ಮೂಲತಃ ಧ್ಯಾನಿ ಆಗಿದ್ದ ಮಹಿಷಾಸುರನು ತನ್ನ ಆಳ್ವಿಕೆಯಲ್ಲಿ ಅಪಾರ ಗೌರವಕ್ಕೆ, ದಕ್ಷ ಆಡಳಿತಕ್ಕೆ, ಗಂಭೀರ ನಡೆ ನುಡಿಗಳಿಗೆ, ವಿದ್ಯೆಗೆ ಹೆಸರುವಾಸಿಯಾಗಿದ್ದನು. ಸ್ವತಃ ಮಹಿಷಾಸುರನೇ ಮಕ್ಕಳ ಕಾಯಿಲೆಗಳಿಗೆ ನಿಸರ್ಗ ಚಿಕಿತ್ಸೆ ನೀಡುವುದರಲ್ಲಿ ಪರಿಣಿತಿಯನ್ನು ಹೊಂದಿದ್ದನು” ಎಂದು ಮುಂದುವರಿಸುತ್ತಾರೆ. ಈ ಎಲ್ಲಾ ವಿವರಣೆಗಳು ಅರಣ್ಯವಾಸಿಗಳಾಗಿದ್ದ ಬುಡಕಟ್ಟು ಜನಾಂಗದವರಿಗೆ ಧಾರಾಳವಾಗಿ ಅನ್ವಯಿಸುತ್ತದೆ. ರಾವಣಾಸುರನು ಅಶೋಕವನವನ್ನು ಬೆಳೆಸಿದಂತೆ, ಮಧುದೈತ್ಯನು ಮಧುವನ ಬೆಳೆಸಿದಂತೆ ಅಸುರರೆಲ್ಲಾ ಅರಣ್ಯ ಪ್ರಿಯರಾಗಿದ್ದರು ಮತ್ತು ವನಸಂರಕ್ಷಣೆ ಮಾಡುತ್ತಿದ್ದರು.
ಅವನು ತೋಡಾ ಬುಡಕಟ್ಟಿನವನೇ ಆಗಲಿ, ನಾಗ ಕುಲದವನೇ ಆಗಲಿ, ಬೌದ್ಧ ಅರಸನೇ ಆಗಲಿ ಈಗ ಚರ್ಚೆಯ ವಿಷಯ ಅದಲ್ಲ. ಆರ್ಯರ ಯಜ್ಞಯಾಗಾದಿಗಳನ್ನು ಮಹಿಷನು ವಿರೋಧಿಸಿದನೆಂದ ಮಾತ್ರಕ್ಕೆ ಅವನು ದುಷ್ಟನೇಕಾಗುತ್ತಾನೆ? ಅವನ ಸಂಸ್ಕೃತಿಗೆ ಒಗ್ಗದ, ಅವನ ಸ್ಥಳೀಯ ಅರಣ್ಯಗಳನ್ನು ರಕ್ಷಿಸುವ ಸಲುವಾಗಿ ಆತನು ಕ್ರಮ ತೆಗೆದುಕೊಳ್ಳಬಾರದೇಕೆ? ಅವನನ್ನು ರಾಜಕೀಯ ಪಿತೂರಿಯಿಂದಾಗಿ ಕೊಂದ ದೇವತೆಗಳು ಜಯ ಜಯ ಹೇ ಮಹಿಷಾಸುರ ಮರ್ಧಿನಿ ಎಂದು ಹಾಡುತ್ತಾ ಹೂಮಳೆ ಸುರಿದರು. ಹಾಡಿ ಹೊಗಳಿದರು. ಆದರೆ, ಮಹಿಷ ಮಂಡಲದ ಜನಕ್ಕೆ ಇದು ಸೂತಕದ ದಿನ. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಇಂದಿಗೂ ಧೂಪವಿಟ್ಟು ಗೌರವ ಸಲ್ಲಿಸುತ್ತಾರೆ. ಕೆಲವು ಮನೆಯವರು ಚಾಮುಂಡಿಯ ದೇವಸ್ಥಾನಕ್ಕೆ ಹೋಗುವುದು ನಿಷಿದ್ಧ ಎಂದೂ ಹೇಳುತ್ತಾರೆ. ಒಟ್ಟಿನಲ್ಲಿ ಮಹಿಷನೂರಿನ ದೇಸೀ ಮೂಲವನ್ನು ಹುಡುಕುವ ಸಚೇತನ ಕೃತಿ ಮಹಿಷ ಮಂಡಲ ಹಲವು ಸಾಂಸ್ಕೃತಿಕ ಮತ್ತು ಚಾರಿತ್ರಿಕ ಒಳನೋಟಗಳಿಗೆ ಪ್ರೇರಣೆ.


