Homeಕರ್ನಾಟಕಪಾಡ್ದನ, ಉಡುಪಿ ಹೋಟೆಲ್, ಯಕ್ಷಗಾನಗಳ ಒಟ್ಟಿಗೆ ಅಪಾರ ತುಳುವರ ಕೊಡುಗೆ: ಡಾ. ಪುರುಷೋತ್ತಮ ಬಿಳಿಮಲೆ

ಪಾಡ್ದನ, ಉಡುಪಿ ಹೋಟೆಲ್, ಯಕ್ಷಗಾನಗಳ ಒಟ್ಟಿಗೆ ಅಪಾರ ತುಳುವರ ಕೊಡುಗೆ: ಡಾ. ಪುರುಷೋತ್ತಮ ಬಿಳಿಮಲೆ

‘ತುಳು' ಪದದ ಅರ್ಥ ನಿಷ್ಪತ್ತಿ ಈಗ ಖಚಿತಗೊಂಡಿದೆ. ಅದು ‘ಜಲವಾಚಕ' ಎಂದು ಮಹಾಪಂಡಿತರಾದ ಗೋವಿಂದ ಪೈ ಮತ್ತು ಸೇಡಿಯಾಪು ಕೃಷ್ಣ ಭಟ್ಟರು ಸಾಧಿಸಿ ತೋರಿಸಿದ್ದಾರೆ.

- Advertisement -

ವಿದ್ವಾಂಸರ ಪ್ರಕಾರ ಕರ್ನಾಟಕದಲ್ಲಿ ಒಟ್ಟು 72 ಭಾಷೆಗಳಿವೆ. ಅದರಲ್ಲಿ ಸ್ವತಂತ್ರ ಭಾಷೆಗಳೂ ಇವೆ, ಉಪ ಭಾಷೆಗಳೂ ಇವೆ. ಈ ಉಪ ಭಾಷೆಗಳ ಪರಿಕಲ್ಪನೆಯು ಗ್ರೀಕ್‍ನಿಂದ ಬಂದಿದೆ. ಅಲ್ಲಿಯ ಆಳರಸರ ಭಾಷೆಗಿಂತ ಹೊರತಾದುದೆಲ್ಲವನ್ನೂ ಅವರು ಉಪಭಾಷೆಗಳೆಂದೇ ಕರೆದರು. ಆದರೆ ಉಪಭಾಷೆಯನ್ನು ಮಾತಾಡುವವರಿಗೆ ಅದು ಸ್ವತಂತ್ರ ಭಾಷೆಯೇ ಹೌದು. ಉದಾಹರಣೆಗೆ ಸುಳ್ಯ ತಾಲೂಕಿನಲ್ಲಿ ಹುಟ್ಟಿ ಬೆಳೆದ ನನ್ನ ತಾಯ್ನುಡಿ ಅರೆ ಭಾಷೆ. ನನ್ನ ತಾಯಿ, ತಂದೆ, ಕಾಡು, ಗಿಡ, ಮರ ಬಳ್ಳಿ, ಹೊಳೆ, ಊರು, ಬಂಧುಗಳೆಲ್ಲಾ ಮೂರ್ತಗೊಂಡದ್ದು ಅರೆಭಾಷೆಯಲ್ಲಿಯೇ. ಹಾಗಾಗಿ ನನಗೆ ಅರೆಭಾಷೆಯೇ ಸ್ವತಂತ್ರ ಭಾಷೆ. ಅದು ಬೇರಾವ ಭಾಷೆಯ ಉಪಭಾಷೆಯೂ ಅಲ್ಲ. ಹೀಗಾಗಿ ಇವತ್ತು ನಾವು ಉಪಭಾಷೆಗಳ ಪರಿಕಲ್ಪನೆಯನ್ನು ಮರು ಪರಿಶೀಲಿಸಬೇಕಾಗಿದೆ.

PC : Wikipedia, (ರಾಬರ್ಟ್ ಕಾಲ್ಡವೆಲ್‍)

ಏನೇ ಇರಲಿ, ಕರ್ನಾಟಕದ ಪ್ರಮುಖ ಭಾಷೆಗಳಲ್ಲಿ ಒಂದಾದ ತುಳುವಿಗೆ ದ್ರಾವಿಡ ಭಾಷಾ ವರ್ಗದಲ್ಲಿಯೇ ವಿಶಿಷ್ಟವಾದ ಸ್ಥಾನವಿದೆ. 1856ರಷ್ಟು ಹಿಂದೆಯೇ ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣವನ್ನು ಬರೆದ ರಾಬರ್ಟ್ ಕಾಲ್ಡವೆಲ್‍ನು ‘ತುಳು ಚೆನ್ನಾಗಿ ಬೆಳವಣಿಗೆ ಹೊಂದಿದ ಭಾಷೆ’ ಎಂದು ಕೊಂಡಾಡಿದ್ದಾನೆ. ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾ ವಿಜ್ಞಾನಿಗಳಾದ ತಮಿಳಿನ ಡಾ. ಪಿ ಎಸ್ ಸುಬ್ರಮಣ್ಯಂಅವರ ಪ್ರಕಾರ ಮೂಲ ದ್ರಾವಿಡದಿಂದ ಕ್ರಿ.ಶ. ಪೂರ್ವ 8ನೇ ಶತಮಾನದ ಹೊತ್ತಿಗೆ ತುಳು ಸ್ವತಂತ್ರ ಭಾಷೆಯಾಗಿ ಬೆಳೆಯತೊಡಗಿತು. ಈಗ ಈ ಭಾಷೆಗೆ 2500 ವರ್ಷಗಳಿಗೂ ಮಿಗಿಲಾದ ಶ್ರೀಮಂತ ಇತಿಹಾಸವಿದೆ. ಪುರಾತತ್ವ ಶಾಸ್ತ್ರಜ್ಞರು ತುಳುನಾಡಿನ ಜನರ ಇತಿಹಾಸವನ್ನು 25 ಶತಮಾನಗಳಷ್ಟು ಹಿಂದೆ ಕೊಂಡೊಯ್ದಿದ್ದಾರೆ. ಈ ಸುದೀರ್ಘ ಕಾಲಾವಧಿಯಲ್ಲಿ ತುಳುನಾಡಿನ ಗಡಿ ರೇಖೆಗಳು ಆಗಾಗ ಬದಲಾಗಿವೆ. ಐತಿಹಾಸಿಕವಾಗಿ ಅದು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಪಶ್ಚಿಮಘಟ್ಟ, ಉತ್ತರದಲ್ಲಿ ಸೀತಾನದಿ ಮತ್ತು ದಕ್ಷಿಣದಲ್ಲಿ ಚಂದ್ರಗಿರಿಹೊಳೆಯ ನಡುವಣ ಪ್ರದೇಶವಾಗಿತ್ತು. ಮಂಗಳೂರು ಇದರ ಕೇಂದ್ರ ಸ್ಥಾನ. ಆದರೆ ಪ್ರಸ್ತುತ ತಲಪಾಡಿಯಿಂದ ದಕ್ಷಿಣ ಭಾಗದ ತುಳು ಪ್ರದೇಶಗಳು ಕಾಸರಗೋಡಾಗಿ ಕೇರಳಕ್ಕೆ ಸೇರಿವೆ. ಉಳಿದ ತುಳುನಾಡು ದಕ್ಷಿಣ ಕನ್ನಡಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಾಗಿ ಒಡೆದಿದೆ. ಆದರೆ ವಲಸೆಗೆ ಹೆಸರಾದ ತುಳುವರು ಇಂದು ವಿಶ್ವದಾದ್ಯಂತ ಹರಡಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಮುಂಬೈ ಮಹಾನಗರ ಮತ್ತು ದುಬೈ ದೇಶಗಳು ತುಳುವರ ಕರ್ಮ ಭೂಮಿ. ನಾನೊಮ್ಮೆ ಜೋರ್ಡಾನ್‍ನಲ್ಲಿ ಪಯಣಿಸುತ್ತಿದ್ದಾಗ ಸಿಕ್ಕ ಟ್ಯಾಕ್ಸಿ ಚಾಲಕ ಮೂಡಬಿದಿರೆಯವರಾಗಿದ್ದರು.

PC : Puthiyaseithi, (ಡಾ. ಪಿ ಎಸ್ ಸುಬ್ರಮಣ್ಯಂ)

‘ತುಳು’ ಪದದ ಅರ್ಥ ನಿಷ್ಪತ್ತಿ ಈಗ ಖಚಿತಗೊಂಡಿದೆ. ಅದು ‘ಜಲವಾಚಕ’ ಎಂದು ಮಹಾಪಂಡಿತರಾದ ಗೋವಿಂದ ಪೈ ಮತ್ತು ಸೇಡಿಯಾಪು ಕೃಷ್ಣ ಭಟ್ಟರು ಸಾಧಿಸಿ ತೋರಿಸಿದ್ದಾರೆ. ತುಳುನಾಡಿನ ಮಣ್ಣಿನ ಗುಣ, ಬೀಳುವ ಮಳೆ ಮತ್ತು ಅಲ್ಲಿ ಹರಿಯುವ ನದಿಗಳನ್ನು ನೋಡಿದರೆ ಇದನ್ನು ಅಲ್ಲಗಳೆಯಲಾಗದು. ತುಳು ಪದಕ್ಕೆ ನೀರು ಎಂಬುದು ಅರ್ಥವೇ ಹೌದಾದರೆ, ನೀರು ಯಾವುದೇ ಭೇದವನ್ನು ಮಾಡುವುದಿಲ್ಲ. ಇಂದಿಗೆ ‘ತುಳು ಸಂಸ್ಕೃತಿ’ ಎಂಬುದು ಅನೇಕ ಸಂಸ್ಕೃತಿಗಳ ಒಂದು ಸಮುಚ್ಚಯ. ಚರಿತ್ರೆ ಪೂರ್ವಕಾಲದಲ್ಲಿ ವಾಸಿಸುತ್ತಿದ್ದ ಕೋಶರರು, ಕಡಲ ಕಾಳಗದಲ್ಲಿ ನಿಷ್ಣಾತರಾಗಿದ್ದ ಕದಂಬರು, ಕದಿರೆಯಲ್ಲಿ ವಾಸವಾಗಿದ್ದ ಬೌದ್ಧರು, ನಾಥರು, ಕಾರ್ಕಳ-ಮೂಡಬಿದಿರೆಗಳನ್ನಾಡಿದ ಜೈನರು, ಉಡುಪಿಯಲ್ಲಿ ಉದ್ಭವಗೊಂಡ ಮಾಧ್ವರು, ಮಂಗಳೂರನ್ನು ಬೆಳೆಸಿದ ಕ್ರೈಸ್ತರು, ಶತಮಾನಗಳಿಂದ ಕರಾವಳಿಯ ಬದುಕಿನ ಭಾಗವಾಗಿರುವ ಮುಸಲ್ಮಾನರು-ಇವರೆಲ್ಲ ತುಳು ಸಂಸ್ಕೃತಿಯನ್ನು ಬೆಳೆಸಿದವರು. ತುಳುನಾಡಿನ ಕುರಿತು ಟಾಲೆಮಿ ಮಾಡಿದ ಉಲ್ಲೇಖಗಳು, ಗ್ರೀಕ್ ಪ್ರಹಸನದಲ್ಲಿ ಕಂಡುಬರುವ ತುಳುಪದಗಳು, ಅಶೋಕನ ಶಾಸನದಲ್ಲ್ಲಿ ಉಲ್ಲೇಖಿತವಾದ ‘ಸತಿಯ ಪುತ’, ತಮಿಳಿನ ಸಂಗಂ ಸಾಹಿತ್ಯದಲ್ಲಿ ದೊರೆಯುವ ‘ಕೋಶರ್’ ಜನವರ್ಗದ ಉಲ್ಲೇಖ, ಪಾಡ್ದನಗಳಲ್ಲಿ ಹಾಗೂ ತಮಿಳಿನ ಪ್ರಾಚೀನ ಕೃತಿಗಳಲ್ಲಿ ಕಂಡು ಬರುವ ‘ಭೂತಾಳ ಪಾಂಡ್ಯ’ನ ಉಲ್ಲೇಖ, ತುಳುನಾಡಿನಲ್ಲಿ ಯಹೂದಿ ವ್ಯಾಪಾರಿ ಅಬ್ರಹಾಂ ಬೆನ್ 800 ವರ್ಷಗಳ ಹಿಂದೆ ಪಿಸುಗುಟ್ಟಿದ ತುಳು ಪದಗಳು, ಇವೆಲ್ಲವುಗಳನ್ನು ಗಮನಿಸಿದರೆ, ತುಳು ಭಾಷೆಯನ್ನಾಡುವ ಜನಸಮುದಾಯವೊಂದು ಕ್ರಿಸ್ತಶಕದ ಹಿಂದು-ಮುಂದಿನ ಕಾಲದಲ್ಲಿ ಇಂದಿನ ಕೇರಳದ ಕಾಸರಗೋಡಿನಿಂದ ಭಟ್ಕಳದ ಸಮೀಪದ ಕಾಸರಕೋಡಿನವರೆಗೆ ಹರಡಿಕೊಂಡಿತ್ತೆಂದು ಭಾವಿಸಬಹುದು.

ತೌಳವ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವವರು ಅಲ್ಲಿನ ವಿಶಿಷ್ಟವಾದ ನಾಗಾರಾಧನೆ, ಭೂತಾರಾಧನೆ ಮತ್ತು ಯಕ್ಷಗಾನಗಳ ಬಗ್ಗೆ ಗಮನ ಹರಿಸುತ್ತಾರೆ. ಇಲ್ಲಿನ ಜನರು ನಾಗನ ಭಕ್ತರು, ಇಲ್ಲಿ ಬಗೆಯ ಭೂತಗಳಿವೆ. ಈ ದೈವಗಳ ಹುಟ್ಟು, ಸಾಧನೆ ಮತ್ತು ಸಾವಿಗೆ ಸಂಬಂಧಿಸಿದ ಕಥನಗಳನ್ನು ಪಾಡ್ದನಗಳೆಂದು ಕರೆಯತ್ತಾರೆ. ಪಾಡ್ದನಗಳು ತುಳುವಿನ ಅತ್ಯಂತ ಶ್ರೀಮಂತವಾದ ಮೌಖಿಕ ನಿರೂಪಣೆಗಳು. ಪ್ರಖ್ಯಾತವಾದ ಸಿರಿ ಪಾಡ್ದನಕ್ಕೆ ಇದೀಗ ವಿಶ್ವ ಮನ್ನಣೆ ದೊರಕಿದೆ. ಭೂತಾರಾಧನೆಯು ಕರಾವಳಿಯ ಎಲ್ಲ ತುಳುವರನ್ನೂ ಒಳಗೊಂಡ ವಿಶಿಷ್ಟ ಆರಾಧನಾ ಸಂಪ್ರದಾಯ. ಬಬ್ಬರ್ಯ ಮತ್ತು ಆಲಿ ಭೂತಗಳೆಂಬ ಹೆಸರಿನ ಎರಡು ಭೂತಗಳು ತುಳುನಾಡಿನ ಕೋಮು ಸೌಹಾರ್ದತೆಗೆ ಹಿಡಿದ ಕನ್ನಡಿಗಳಾಗಿವೆ. ಮುಸಲ್ಮಾನರಲ್ಲಿ ದೈವಾರಾಧನೆ ಇಲ್ಲ. ಹಿಂದೂ ದೇವರುಗಳಲ್ಲಿ ಮುಸಲ್ಮಾನರು ಇರುವುದು ಸಾಧ್ಯವಿಲ್ಲ. ಆದರೆ ಭೂತಾರಾಧನೆಯಲ್ಲಿ ಇವೆರಡೂ ಸಾಧ್ಯವಾಗಿದೆ. ಇದೇ ತುಳುನಾಡಿನ ಚೆಲುವು.

ತುಳುವರು ಯಕ್ಷಗಾನದ ಮೂಲಕ ಭಾರತೀಯ ಪುರಾಣಗಳನ್ನು ಪುನಾರಚಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪುರಾಣದ ಖಳನಾಯಕರೆಲ್ಲ ನಾಯಕರಾಗಿ ಮಾರ್ಪಟ್ಟಿದ್ದಾರೆ. ತುಳುನಾಡಿಗೆ ಮಾತ್ರ ಸೀಮಿತವಾಗಿರುವ ಕಂಬಳ, ಆಟಿ ಕಳೆಂಜ, ಕಂಗಿಲು, ಸಿದ್ಧವೇಶ ಇತ್ಯಾದಿಗಳು ತುಳು ಸಂಸ್ಕೃತಿಯ ಅನನ್ಯತೆಗೆ ಸಾಕ್ಷಿ. ಮಾತೃಪ್ರ್ರಧಾನ ಕುಟುಂಬ ವ್ಯವಸ್ಥೆ ಇನ್ನೂ ಚಾಲ್ತಿಯಲ್ಲಿರುವ ಪ್ರದೇಶವಿದು. ತುಳುನಾಡಿನ ಇನ್ನೊಂದು ಕುತೂಹಲದ ವಿಷಯವೆಂದರೆ ಅಲ್ಲಿನ ಸ್ಥಳನಾಮಗಳು. ಸುಬ್ರಹ್ಮಣ್ಯ ಸಮೀಪದಲ್ಲಿರುವ ‘ಕನ್ನರ ಪಾಡಿ’ ಪದದಲ್ಲಿನ ‘ಕನ್ನರು’ ಯಾರು? ಪ್ರಖ್ಯಾತ ಸಂಶೋಧಕರಾದ ಶ್ರೀ ಶಂಭಾ ಜೋಷಿಯವರು ‘ಕನ್ನರ’ದಿಂದಲೇ ಕನ್ನಡ ಬಂದಿದೆ ಎಂದು ವಾದಿಸಿದ್ದಾರೆ. ಇದೇ ರೀತಿ ಗುತ್ತಿ (ಗುತ್ತಿಗಾರು) ಅಜೆ (ಕರ್ಮಜೆ), ಅಡ್ಕ (ಪೇರಡ್ಕ), ಪಳ್ಕೆ (ಕೊಸರ ಪಳ್ಕೆ), ಇಲ (ಕಮಿಲ, ಪುತ್ತಿಲ), ಪಾಡಿ (ಕಂದ್ರಪ್ಪಾಡಿ), ಕದರಿ, ಕೋಡಿ, ಕುಂಜ, ಮಾಳ, ಕಾರ್ (ಕಾರ್ಕಳ), ಮೊಗರು, ಮೊಗ್ರ, ಇಡ್ಯ, ಚಾರ್ವಾಕ, ಚೇರು, ಪನ್ನೆ, ಮೊದಲಾದ ಕುತೂಹಲಕಾರೀ ಪದಗಳನ್ನು ಇನ್ನೂ ತುಳುವರು ಉಳಿಸಿಕೊಂಡಿದ್ದಾರೆ. ಇಂಥ ಪದಗಳು ಇವತ್ತು ಮೂಲ ದ್ರಾವಿಡದಲ್ಲಿ ಮಾತ್ರ ಸಿಗುತ್ತವೆ. ಸ್ವತಂತ್ರ ತುಳು ಲಿಪಿಯನ್ನು ಶಾಲೆಗಳಲ್ಲಿ ಕಲಿಸುವ ಪ್ರಯತ್ನವೂ ಇದೀಗ ನಡೆಯುತ್ತಿದೆ.

PC : Ruthumana

ಚಾರಿತ್ರಿಕವಾಗಿ ತುಳುನಾಡು ಕನ್ನಡ ಅರಸರ ಕೈ ಕೆಳಗೇ ಕೆಲಸ ಮಾಡುತ್ತಾ ಬಂದಿರುವುದರಿಂದ ಕನ್ನಡವೇ ತುಳುನಾಡಿನ ಅಧಿಕೃತ ಭಾಷೆಯಾಯಿತು. ಅದು ಈಗಲೂ ಮುಂದುವರಿದಿದೆ. ತುಳು ನಾಡನ್ನಾಳಿದ ಅಳುಪರು, ಬಂಗರು, ಅಜಿಲರು, ಸಾವಂತರು, ಮತ್ತು ಭೈರರಸರು ಅಲ್ಲಿನ ವರ್ಣರಂಜಿತ ಇತಿಹಾಸಕ್ಕೆ ಕಾರಣರಾದವರು.

ಬಸರೂರಿನ ತುಳುವ ವೀರರು ವಿಜಯನಗರದವರೆಗೆ ಹೋಗಿ ಅಲ್ಲೇ ನೆಲೆನಿಂತು, ನಿಧಾನವಾಗಿ ‘ತುಳುವ ವಂಶ’ವನ್ನು ಸ್ಥಾಪಿಸಿ, ಅಲ್ಲಿ ಮೆರೆದದ್ದುಂಟು. ‘ಕರ್ನಾಟಕ ರಾಜ್ಯರಮಾರಮಣ’ ನಾದ ಶ್ರೀ ಕೃಷ್ಣ ದೇವರಾಯನು ತುಳುವ ವಂಶದವನಾಗಿದ್ದ. ಕಾರ್ಕಳದ ಭೈರರಸರು ಮತ್ತು ವೇಣೂರಿನ ಅಜಿಲರು ಕೆತ್ತಿಸಿದ ಎರಡು ಏಕಶಿಲಾ ಗೊಮ್ಮಟ ಮೂರ್ತಿಗಳು ತುಳುನಾಡಿನ ಇತಿಹಾಸದ ಮೈಲಿಗಲ್ಲುಗಳು. ರಾಣಿ ಅಬ್ಬಕ್ಕಳು ಪೋರ್ಚುಗೀಸರ ಆಕ್ರಮಣದ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ. ಟಿಪ್ಪೂವಿನ ಮರಣಾನಂತರ (1799) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ತುಳುನಾಡು ಆಧುನಿಕತೆಗೆ ವೇಗವಾಗಿ ಒಳಗಾದ ಪ್ರದೇಶಗಳಲ್ಲೊಂದು. ಕಾರಣ ತುಳು ಜನರು ಉದ್ಯಮಶೀಲತೆ ಮತ್ತು ವ್ಯವಹಾರ ನೈಪುಣ್ಯತೆಗೆ ಹೆಸರಾದರು. ಹೀಗಿದ್ದರೂ ತುಳುವರು ತಮ್ಮ ಭಾಷೆಯನ್ನು ಮಾತ್ರ ಮರೆಯಲಿಲ್ಲ. ಕಾರಣ ತುಳು ನಶಿಸುತ್ತಿರುವ ಭಾಷೆಗಳ ಸಾಲಲ್ಲಿ ಇಲ್ಲ. 2011ರ ಜನಗಣತಿಯ ಪ್ರಕಾರ ತುಳು ಶೇಕಡಾ ಆರರ ಪ್ರಗತಿಯನ್ನು ತೋರಿಸುತ್ತಿದೆ (ಕನ್ನಡವು ಶೇಕಡಾ 3.75).ತುಳು ಒಂದು ಜೀವಂತ ಭಾಷೆಯಾದ್ದರಿಂದ ಅದರಲ್ಲಿ ಅನೇಕ ಪ್ರಾದೇಶಿಕ ಮತ್ತು ಸಾಮಾಜಿಕ ಪ್ರಬೇಧಗಳು ಕಾಣಿಸಿಕೊಳ್ಳುತ್ತಿವೆ. ಭಾಷಾಭ್ಯಾಸಿಗಳಿಗೆ ತುಳುನಾಡು ಒಂದು ಅದ್ಭುತವಾದ ‘ಪ್ರಯೋಗ ಶಾಲೆ’. ತುಳುನಾಡಿನ ಕೇಂದ್ರವಾದ ಮಂಗಳೂರನ್ನು ತುಳುವರು ‘ಕುಡಲ’, ‘ಕುಡ್ಲ’ ಎಂದು ಕರೆದರೆ ಮಲೆಯಾಳಿಗಳಿಗೆ ಅದು ‘ಮೈಕೆಲ್’, ಇನ್ನು ಕೆಲವರಿಗೆ ‘ಮಂಗಳಾವರಂ’. ಪೋರ್ಚುಗೀಸರಿಗೆ ‘ಮಂಜರೂನ್’

ಕರ್ನಾಟಕದ ಬೇರೆ ಪ್ರದೇಶಗಳನ್ನು ಗಮನಿಸಿದರೆ, ತುಳುನಾಡನ್ನು ಆಧುನಿಕತೆ ಬಹಳ ಬೇಗ ಆವರಿಸಿಕೊಂಡಿತ್ತು. ಟಿಪ್ಪೂವಿನ ಮರಣಾನಂತರ (1799) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಈ ಪ್ರದೇಶವು ಮತ್ತೆಂದೂ ತಿರುಗಿ ನೋಡಲಿಲ್ಲ. ಬಾಸೆಲ್ ಮಿಶನ್ನಿನ ಪಾದ್ರಿಗಳು ಮುದ್ರಣ ಯಂತ್ರ, ಹಂಚಿನ ಕಾರ್ಖಾನೆಗಳನ್ನು ಮಂಗಳೂರಲ್ಲಿ ಆರಂಭಿಸುವುದರೊಂದಿಗೆ ಜನರಿಗೆ ‘ಉದ್ಯಮಶೀಲತೆ’, ಮತ್ತು ‘ವ್ಯವಹಾರ ನೈಪುಣ್ಯ’ವನ್ನು ಕಲಿಸಿಕೊಟ್ಟರು. ಇಲ್ಲಿನ ಮುಸ್ಲಿಂ ವ್ಯಾಪಾರಿಗಳು ಕರಾವಳಿಯನ್ನು ಜಗತ್ತಿನ ಇತರ ಭಾಗಗಳಿಗೆ ಜೋಡಿಸಿದರು. 20ನೇ ಶತಮಾನದ ಆರಂಭಕ್ಕೆ ಈ ಜಿಲ್ಲೆ ‘ಆಧುನಿಕವಿದ್ಯೆ’ಗೆ ತನ್ನನ್ನು ತೆರೆದುಕೊಂಡಿತು. ಕನ್ನಡದ ಮೊದಲ ಕಾದಂಬರಿಗಳಾದ ಇಂದಿರಾ, ಇಂದಿರಾ ಬಾಯಿ ಮತ್ತು ವಾಗ್ದೇವಿಯನ್ನು ಓದಿದರೆ, ಈ ಆಧುನಿಕತೆಯ ಸ್ವರೂಪ ಹೇಗಿತ್ತೆಂಬುದು ಸ್ಪಷ್ಟವಾಗುತ್ತದೆ. ಇಲ್ಲಿನ ಹುಡುಗರು ಕಷ್ಟಪಟ್ಟು ನಾಲ್ಕಕ್ಷರ ಕಲಿತರು. ಮುಂಬೈ ತಲುಪಿದರು, ದುಬೈಗೆ ಹಾರಿದರು. ಹೋದಲ್ಲೆಲ್ಲ ತಮಗಾದ ಅವಮಾನಗಳನ್ನು ಸಹಿಸಿಕೊಂಡು, ತುಂಬಾ ಕಷ್ಟಪಟ್ಟು ದುಡಿದರು, ಹಂತಹಂತವಾಗಿ ಮೇಲೇರಿದರು. ಹೀಗೆ ತುಳುನಾಡಿನ ಜನರು ವಿದ್ಯೆಯ ಮೂಲಕ ಪ್ರವರ್ಧಮಾನಕ್ಕೆ ಬಂದಕತೆ ಅತ್ಯಂತ ರೋಚಕವಾದುದು. ಮಕ್ಕಳು ವಿದ್ಯೆಕಲಿತು ಮುಂಬೈಗೆ ವಲಸೆ ಹೋದ ಆನಂತರ ಅವರು ವರುಷಕ್ಕೊಮ್ಮೆ ಹಿಂದೆ ಬರುವುದನ್ನು ಕಾಯುತ್ತಾ ಕುಳಿತಿರುವ ವೃದ್ಧತಂದೆ-ತಾಯಿ, ಅಜ್ಜ-ಅಜ್ಜಿಯರ ಮೌನರೋದನಕ್ಕೆ ಕಿವಿಗೊಟ್ಟವರು ಡಾ. ಶಿವರಾಮ ಕಾರಂತರು.

ಅವರ ಕಾದಂಬರಿಗಳು ಕರಾವಳಿ ಕರ್ನಾಟಕದ ಜೀವನ ಮತ್ತು ರೋದನಗಳ ಅಸಾಮಾನ್ಯ ಕಥನಗಳು. ಬೆಟ್ಟದಜೀವ ಕಾದಂಬರಿಯ ಗೋಪಾಲಯ್ಯ ಶಂಕರಿಯರನ್ನು ನೆನೆಸಿಕೊಂಡರೂ ಸಾಕು, ಈ ಲೋಕ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇವುಗಳ ಜೊತೆಗೆ ಸಾಮಾನ್ಯ ಜನರ ಕಥನ ನಿರೂಪಣೆಗಳಿಗೆ ಗಮನ ಹರಿಸಬೇಕು. ಈ ಪುಟ್ಟ ಊರಿನಲ್ಲಿ ಇಂದಿಗೂ ಜನಪ್ರಿಯವಾಗಿರುವ ಸುಮಾರು 500ಕ್ಕೂ ಹೆಚ್ಚಿನ ಭೂತಗಳು ಹೇಳುವ ಪಾಡ್ದನಗಳಿಗೆ ಕಿವಿಕೊಡಬೇಕು. ತುಳುನಾಡಿನ ಉದ್ಯಮಶೀಲತೆಗೆ ಅಲ್ಲಿ ಹುಟ್ಟಿಕೊಂಡ ಬ್ಯಾಂಕುಗಳೇ ಒಳ್ಳೆಯ ಉದಾಹರಣೆ. ಇಲ್ಲಿ ಸುಮಾರು 21 ಬ್ಯಾಂಕ್‍ಗಳು ಜನ್ಮ ತಾಳಿವೆ. ಇದರ ಜೊತೆಗೆ ಅಡಿಕೆ, ಬೀಡಿ ಉದ್ಯಮ, ಗೇರುಬೀಜ ಕಾರ್ಖಾನೆ, ಕೈಮಗ್ಗಗಳ ಕಾರ್ಖಾನೆ, ರಬ್ಬರ್, ಕೋಕೋ ಬೆಳೆ ಮತ್ತಿತರ ಉದ್ಯಮಗಳು ಜಿಲ್ಲೆಯ ಸಾವಿರಾರು ಮಂದಿಯ ಬದುಕನ್ನು ಹಸನುಗೊಳಿಸಿವೆ. ಪ್ರಖ್ಯಾತವಾದ ಉಡುಪಿ ಹೊಟೇಲ್‍ಗಳು ಜಗತ್ತಿನಾದ್ಯಂತ ಪ್ರಸಿದ್ಧವಾಗಿವೆ. ತುಳುನಾಡಿನ ‘ಬುದ್ಧಿವಂತ’ ಜನರಿಗೆ ‘ಪುರುಸೊತ್ತು’ ಎಂದರೇನೆಂದೇ ತಿಳಿಯದು. 20ನೇ ಶತಮಾನದ ಮೊದಲ ಎರಡು ತಲೆಮಾರುಗಳು ಆ ಪ್ರದೇಶಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿವೆ. 70ರ ದಶಕದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬಂದ ಭೂಮಸೂದೆಯು ಆ ಕಾಲದ ಗೇಣೀದಾರರನ್ನೂ, ಭೂಮಾಲಕರನ್ನೂ ಜಾಗ್ರತೆಯಾಗಿ ಬದುಕುವಂತೆ ಮಾಡಿತು.

ತುಳು ಭಾಷೆಯನ್ನು ಶೈಕ್ಷಣಿಕವಾಗಿ ಬೆಳೆಸಿದವರೆಲ್ಲರೂ ಕನ್ನಡ ಅಧ್ಯಾಪಕರು ಅಥವಾ ಕನ್ನಡ ಪಂಡಿತರು. ಮಂಜೇಶ್ವರ ಗೋವಿಂದ ಪೈ, ಸೇಡಿಯಾಪು ಕೃಷ್ಣ ಭಟ್ಟ, ಕಡೆಂಗೋಡ್ಲು ಶಂಕರ ಭಟ್ಟ, ಮುಳಿಯ ತಿಮ್ಮಪ್ಪಯ್ಯ, ಕೊಳಂಬೆ ಪುಟ್ಟಣ್ಣಗೌಡ, ಅಮೃತ ಸೋಮೇಶ್ವರ, ರಾಮಚಂದ್ರ ಉಚ್ಚಿಲ, ಕು ಶಿ ಹರಿದಾಸ ಭಟ್ಟ, ವಿವೇಕ ರೈ, ಚಿನ್ನಪ್ಪಗೌಡ, ವಾಮನ ನಂದಾವರ, ಪಾಲ್ತಾಡಿ ರಾಮಕೃಷ್ಣ ಆಚಾರ್, ಉಪ್ಪಂಗಳ ರಾಮ ಭಟ್ಟ, ಮೊದಲಾದವರೆಲ್ಲರೂ ಕನ್ನಡಕ್ಕೆ ಪ್ರಧಾನ ಕೊಡುಗೆ ನೀಡಿದವರೇ ಹೌದು. ಯಕ್ಷಗಾನದ ಪಿತಾಮಹ ಕುಂಬಳೆಯ ಪಾರ್ತಿಸುಬ್ಬನೂ ಬರೆದದ್ದೂ ಕನ್ನಡ ಪ್ರಸಂಗಗಳನ್ನೇ. ಸಾಮಾಜಿಕ ಉನ್ನತಿಗೆ ದುಡಿದ ಕಾರ್ನಾಡ್ ಸದಾಶಿವ ರಾವ್, ಕುದ್ಮುಲ್ ರಂಗರಾವ್, ಕಮಲಾದೇವಿ ಚಟ್ಟೋಪಾಧ್ಯಾಯ, ಉಳ್ಳಾಲ ಶ್ರೀನಿವಾಸ ಮಲ್ಯ, ಡಾ ಶಿವರಾಮ ಕಾರಂತ, ಮೊಳಹಳ್ಳಿ ಶಿವರಾವ್, ಏರ್ಯ ಲಕ್ಷ್ಮೀನಾರಾಯಣ ಆಳ್ವ ಮೊದಲಾದವರು ಕರ್ನಾಟಕ ಕಟ್ಟಿದ ತುಳುವರು. ಇವತ್ತಿನ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿಯೂ ಸಾಕಷ್ಟು ತುಳುವರು ಕೆಲಸ ಮಾಡುತ್ತಾ ಹೆಸರು ಮಾಡುತ್ತಿದ್ದಾರೆ. ಎಂ ವೀರಪ್ಪ ಮೊಯಿಲಿ ಹಾಗೂ ಸದಾನಂದ ಗೌಡರು ಕರ್ನಾಟಕದ ಮುಖ್ಯಮಂತ್ರಿಗಳಾಗಿಯೂ ಕಾರ್ಯ ನಿರ್ವಹಿಸಿದ ಪ್ರಮುಖ ರಾಜಕಾರಣಿಗಳು.

PC : Nearbuy

ಆದರೆ 80ರ ದಶಕದ ಆನಂತರದ ಕಾಲಘಟ್ಟದಲ್ಲಿ ಕಾರಣಾಂತರದಿಂದ ಹೊರನಾಡಿನ ವಲಸೆ ಕಡಿಮೆ ಅಥವಾ ಇಲ್ಲವಾಯಿತು. ಹೊಸ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸರಕಾರ ವಿಫಲವಾಯಿತು. ಇದೇ ಕಾಲಘಟ್ಟದಲ್ಲಿ ಕಾಣಿಸಿಕೊಂಡ ವ್ಯಾಪಾರಿ ಮನೋಭಾವದ ಶಿಕ್ಷಣ ಸಂಸ್ಥೆಗಳು ಅನೇಕರಿಗೆ ಶಿಕ್ಷಣ ನೀಡಿದರೂ ಅದರ ಫಲವೋ ಎಂಬಂತೆ, ನಿರುದ್ಯೋಗವೂ ಹೆಚ್ಚಿತು. ಅನೇಕರಿಗೆ ಈ ಶಿಕ್ಷಣ ದೊರಕಲೂ ಇಲ್ಲ. ಹೀಗೆ ಒಂದೆಡೆ ಉದ್ಯೋಗವಿಲ್ಲದೆ ಒದ್ದಾಡುತ್ತಿದ್ದ, ಇನ್ನೊಂದೆಡೆ ಉನ್ನತ ಶಿಕ್ಷಣಕ್ಕೆ ಅವಕಾಶ ದೊರಕದೆ ಕೊರಗುತ್ತಿದ್ದ ಹೊಸ ತಲೆಮಾರನ್ನು ಕೋಮುವಾದಿಗಳು ತಡಮಾಡದೆ ಅಪ್ಪಿಕೊಂಡರು. ಕಾರಣ ಅಮಾಯಕ ಹುಡುಗರು ಜಾತಿವಾದಿಗಳೂ, ಕೋಮುವಾದಿಗಳೂ ಆಗುತ್ತಾ, ಮೇಲ್ವರ್ಗ ಮತ್ತು ಮೇಲ್ಜಾತಿ ಜನರ ಕೈಯ ಸಾಧನಗಳಾಗಿ ಬೆಳೆಯಲಾರಂಭಿಸಿದರು. ಇದು ತುಳುನಾಡಿನ ಆಧುನಿಕ ತಲೆಮಾರು ಸ್ವಯಂ ವಿನಾಶದಕಡೆಗೆ ಚಲಿಸುತ್ತಿರುವುದರ ಸಂಕೇತ.

ಇವತ್ತು ತುಳು ಬಾಷೆಯಲ್ಲಿ ನೂರಾರು ಪುಸ್ತಕಗಳು ಪ್ರಕಟವಾಗುತ್ತಿವೆ. ಮಂದಾರ ರಾಮಾಯಣದಂತಹ ತುಳು ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಪೀಠವೊಂದು ಕಾರ್ಯನಿರ್ವಹಿಸುತ್ತಿದೆ. ಅಲ್ಲಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ತುಳುವನ್ನು ಒಂದು ವಿಷಯವಾಗಿ ಆಯ್ದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳಿಗಾಗಿ ತುಳು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಗಂಭೀರವಾದ ಅಧ್ಯಯನಗಳು ನಡೆಯುತ್ತಿವೆ. ಮಂಗಳೂರಿನ ಬಾಸೆಲ್ ಮಿಶನ್ ತನ್ನ ತುಳು ಮೋಹವನ್ನು ಇಂದಿಗೂ ಬಿಟ್ಟುಕೊಟ್ಟಿಲ್ಲ. ಕಣ್ಣೂರು, ಕಲ್ಲಿಕೋಟೆ, ಚೆನ್ನೈ, ಅಣ್ಣಾಮಲೈ, ಮಧುರೈ, ಕುಪ್ಪಂ, ಒಸ್ಮಾನಿಯಾ, ಹೈದರಾಬಾದ್, ಮತ್ತು ಮುಂಬೈಗಳಲ್ಲಿ ತುಳುವಿನ ಕುರಿತಾದ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ಜರ್ಮನಿಯ ಟ್ಯೂಬಿಂಜನ್ ವಿವಿ ಮತ್ತು ಫಿನ್ಲೆಂಡಿನ ತುರ್ಕು ವಿವಿಗಳಲ್ಲಿ ತುಳುವಿನ ಕುರಿತಾದ ಸಂಶೋಧನೆಗಳಿಗೆ ಅವಕಾಶವಿದೆ. ಟೋಫೆಲ್ ಪರೀಕ್ಷೆಗಾಗಿ ಪಟ್ಟಿಮಾಡಿದ ಜಗತ್ತಿನ 133 ಭಾಷೆಗಳಲ್ಲಿ ಭಾರತದ 17 ಭಾಷೆಗಳು ಸೇರ್ಪಡೆಗೊಂಡಿದ್ದು ಅದರಲ್ಲಿ ತುಳುವೂ ಒಂದು. 1994ರಲ್ಲಿ ಸ್ಥಾಪಿತಗೊಂಡ ತುಳು ಸಾಹಿತ್ಯ ಅಕಾಡೆಮಿಯು ನೂರಾರು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದೆ. ತುಳು ಚಲನಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಹೊರತಂದ ತುಳು ನಿಘಂಟುವಿಗೆ ಅಂತಾರಾಷ್ಟ್ರೀಯ ಮನ್ನಣೆ ಪ್ರಾಪ್ತಿಸಿದೆ. ಡಾ. ಪೀಟರ್‌ಕ್ಲಾಸ್, ಡಾ. ಮಾರ್ತಾ ಆಷ್ಟನ್, ಪ್ರೊ. ಹೈಡ್ರೂನ್ ಬ್ರೂಕ್ನರ್, ಪ್ರೊ. ಲಾರಿ ಹಾಂಕೊ ಮೊದಲಾದ ಅಂತಾರಾಷ್ಟ್ರೀಯ ಖ್ಯಾತಿಯ ಸಂಶೋಧಕರು ತುಳುವಿನ ಬಗ್ಗೆ ನಡೆಸಿದ ಸಂಶೋಧನೆಗಳು ತುಳು ಭಾಷೆಯನ್ನು ಜಗತ್ತಿನ ಎಲ್ಲೆಡೆ ಜನಪ್ರಿಯಗೊಳಿಸಿವೆ. ಹೀಗೆ ತುಳುವಿನ ಹಿರಿಮೆ ಬಹಳ ದೊಡ್ಡದಾದರೂ ಭಾರತೀಯ ಸಂವಿಧಾನವು ತುಳು ಭಾಷೆಯನ್ನು ಮಾನ್ಯ ಮಾಡಿಲ್ಲ. ಅದರ ಎಂಟನೇ ಪರಿಚ್ಛೇದಕ್ಕೆ ತುಳು ಇನ್ನೂ ಸೇರಿಲ್ಲ.

ಇವತ್ತು ತುಳುವಿನ ಮುಂದೆ ಕೆಲವು ಸವಾಲುಗಳಿವೆ. ಅದನ್ನು ಕರ್ನಾಟಕ ರಾಜ್ಯವು ಅಧಿಕೃತ ಭಾಷೆಯೆಂದು ಇದುವರೆಗೂ ಘೋಷಿಸಿಲ್ಲ. ಆಂಧ್ರ ಪ್ರದೇಶವು ತೆಲುಗುವಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು, ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ದೆಹಲಿ ಸರಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿದ ಹಾಗೆ ಕರ್ನಾಟಕವು ತುಳುವನ್ನು ಅಧಿಕೃತ ಭಾಷೆಯೆಂದು ಮಾನ್ಯಮಾಡಿಲ್ಲದಿರುವುದು ತುಳುವರ ಅಸಮಾಧಾನಕ್ಕೆ ಕಾರಣವಾಗಿದೆ.

ತುಳುವರು ಕರ್ನಾಟಕದ ಭಾಗವಾಗಿಯೇ ಬೆಳೆಯುತ್ತಾ ಬೆಳೆಯುತ್ತಾ, ತಾವು ಬೆಳೆದಿರುವುದು ಗಮನಾರ್ಹ.


ಡಾ. ಪುರುಷೋತ್ತಮ ಬಿಳಿಮಲೆ

ಜನಪದ, ಯಕ್ಷಗಾನ ಮತ್ತು ಸಾಂಸ್ಕೃತಿಕ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಡಾ. ಪುರುಷೋತ್ತಮ ಬಿಳಿಮಲೆ ಅವರದ್ದು ಚಿರಪರಿಚಿತ ಹೆಸರು. ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಜೆಎನ್‍ಯುವಿನಲ್ಲಿ ಕನ್ನಡ ಪೀಠದ ಪ್ರಥಮ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಮತ್ತು ಸಂಪಾದಿಸಿರುವ ಬಿಳಿಮಲೆ ಅವರ ‘ಕಾಗೆ ಮುಟ್ಟಿದ ನೀರು’ ಆತ್ಮಕಥೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ
ಡಾ. ಪುರುಷೋತ್ತಮ ಬಿಳಿಮಲೆ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial