Homeಅಂಕಣಗಳುಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ

ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ

- Advertisement -
- Advertisement -

ಹತ್ತಾರು ವರ್ಷಗಳ ಓದು, ಹುಡುಕಾಟ, ಚಿಂತನ-ಮಂಥನದಿಂದ ಮೂಡಿದ ಕೃತಿ “ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ”. ಜಿ ಎನ್ ನಾಗರಾಜ್ ಅವರು ಇಲ್ಲಿ ಅಪಾರ ಚಾಕಚಕ್ಯತೆಯಿಂದ ಹೆಣೆದ ಸ್ವೋಪಜ್ಞ ಒಗರಿನ ಮೂರು ಪ್ರಬಂಧಗಳಲ್ಲಿ “ಕರ್ನಾಟಕದಲ್ಲಿ ವರ್ಣ ಜಾತಿ ವ್ಯವಸ್ಥೆಯ ಉಗಮ” ಮತ್ತು “ಪೌರಾಣಿಕ ಹಿಂದೂ ಧರ್ಮ” ಪ್ರಬಂಧಗಳು ಈಗಾಗಲೇ “ಕರ್ನಾಟಕದ ಸಾಮಾಜಿಕ ಹಾಗು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು” (ಕುವೆಂಪು ಭಾಷಾ ಭಾರತಿ) ಸರಣಿಯಲ್ಲಿ ಪ್ರಕಟಗೊಂಡಿದ್ದವು. ಇವುಗಳೊಂದಿಗೆ “ಕರ್ನಾಟಕದಲ್ಲಿ ಅಸ್ಪೃಶ್ಯತೆಯ ಉಗಮ” ಪ್ರಬಂಧವೂ ಸೇರಿ, ಕರ್ನಾಟಕದಲ್ಲಿ ಜಾತಿಗಳ ಹುಟ್ಟು, ಬೆಳಮೆ ಹಾಗು ಸಂಕೀರ್ಣ ಮಾರ್ಪಾಟುಗಳ ಕುರಿತು ಒಂದು ಸಮಗ್ರ, ಕಾರ್ಯ-ಕಾರಣ ಸಂಬಂಧದ ಬಂಧದಲ್ಲಿ ಜೋಡಿಸಲಾದ ಚಿತ್ರಣ ಈ ಪುಸ್ತಕದಲ್ಲಿ ದೊರಕಿದಂತಾಗಿದೆ.

ಇತಿಹಾಸ ಹಾಗು ಸಮಾಜಶಾಸ್ತ್ರದ ನಿಯತ ಹಾಗು ಶಿಸ್ತುಬದ್ಧ ಓದಿನ ಕೊರತೆಯುಳ್ಳ ನಾನು ಈ ಕೃತಿಯ ವಿಮರ್ಶೆ ಮಾಡುವುದು ಎಷ್ಟು ಸರಿ ಎಂಬ ಅಳುಕು ಇದ್ದರೂ, ಭಾರತೀಯ ಹಾಗು ಕರ್ನಾಟಕದ ಸಮಾಜದ ಅಚ್ಚಳಿಯದ ಹೆಗ್ಗುರುತಾಗಿರುವ ಜಾತಿ ಏರ್ಪಾಡಿನ ಕುರಿತು ಯಾವುದೇ ಸಂಶೋಧನಾ ಕೃತಿ ಮೂಡಿದರೂ ಅದನ್ನು ಓದಿ ವಿಮರ್ಶಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಭಾವಿಸಿಯಾದರೂ ಈ ಸಾಹಸಕ್ಕೆ ಕೈಹಾಕುತ್ತಿದ್ದೇನೆ.

ಇದನ್ನೂ ಓದಿ: ಜಾತಿ ದ್ವೇಷ: ದಲಿತ ಕುಟುಂಬವನ್ನು ಕೊಲ್ಲಲು ತಂದೆಯಿಂದಲೇ ಮಗನಿಗೆ ಪ್ರಚೋದನೆ! 

“ಜಾತಿ” ಎಂದ ಕೂಡಲೆ ಹುಟ್ಟುವ ಕೆಲವು ಪ್ರಶ್ನೆಗಳನ್ನು ಮುಂದೊಡ್ಡಿ, ಈ ಕೃತಿಯಲ್ಲಿ ಅವುಗಳಿಗೆ ಯಾವ ಬಗೆಯ ಸಮಾಧಾನಕರ ಉತ್ತರಗಳು ಸಿಗುತ್ತವೆ, ಯಾವೆಲ್ಲ ಮಸುಕುನೋಟಗಳನ್ನು ತಿಳಿಗೊಳಿಸಲಾಗಿದೆ ಹಾಗು ಯಾವೆಲ್ಲ ಪ್ರಶ್ನೆಗಳು ಅಥವಾ ಸಂಶೋಧನಾ ಸಾಧ್ಯತೆಗಳನ್ನು ಹಾಗೆಯೇ ಉಳಿಸಲಾಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ಇಲ್ಲಿ ನೋಡಬಯಸುವೆ. ಇತಿಹಾಸವನ್ನು ಕೆಲವು ನಿರ್ದಿಷ್ಟ ಸೂತ್ರಗಳಲ್ಲಿ, ಏಕಾಭಿಮುಖಿ ಕಾಲಪ್ರವಾಹದ ಗ್ರಹಿಕೆಯಲ್ಲಿ ಕಟ್ಟುವುದನ್ನು ಒಂದಿಷ್ಟು ಸಂಶಯಗಳಿಂದ ಕಾಣುತ್ತಲೇ ಈ ವಿಧಾನದ ಅಗತ್ಯ ಹಾಗು ಮಹತ್ವ; ಎರಡನ್ನೂ ಮನಗಂಡು ಈ ಕೆಳಗಿನ ಪ್ರಶ್ನೆಗಳಿಗೆ ಪ್ರಸ್ತುತ ಕೃತಿಯನ್ನು ಒಡ್ಡಬೇಕಾಗಿದೆ.

1. ವರ್ಣ, ಜಾತಿ ಮತ್ತು ಕುಲ: ಇವುಗಳ ನಡುವಿನ ವ್ಯತ್ಯಾಸವೇನು? ಸಂಬಂಧವೇನು?

2. ಕರ್ನಾಟಕದ ಮೂಲೆಮೂಲೆಯಲ್ಲೂ ಜಾತಿ ಶ್ರೇಣೀಕರಣ ಏರ್ಪಾಡು ನೆಲೆಯೂರಿದ್ದು ಹೇಗೆ?

3. ಸ್ವಾಯಂಭುವ ಮನುರಚಿತ ಮನುಧರ್ಮಶಾಸ್ತ್ರವು ನಿಜಕ್ಕೂ ಕರ್ನಾಟಕದ ಸಮಾಜ ಸಂರಚನೆಯನ್ನು ಪ್ರಭಾವಿಸಿದೆಯೇ? ಹೌದಾದರೆ, ಎಷ್ಟರಮಟ್ಟಿಗೆ?

4. ಅಸ್ಪೃಶ್ಯತೆ ಎಂಬ ಪರಿಕಲ್ಪನೆ ಹಾಗು ಕರ್ನಾಟಕದಲ್ಲಿ ಅದರ ಆಚರಣೆಯ ಹಿಂದಿನ ಕಾರಣಗಳು ಯಾವುವು?

ಮೇಲಿನ ಪ್ರಶ್ನೆಗಳಿಗೆ ಕೃತಿಯು ಎದುರಾಗುವ ಬಗೆ

ಕುಲಗಳೆಂಬ ಸಾಮಾಜಿಕ ಸಂರಚನೆಯು ವಿಶ್ವದ ಬಹುತೇಕ ಬುಡಕಟ್ಟು ಹಾಗು ಆದಿಮ ಕೃಷಿಯಾಧಾರಿತ ಸಮಾಜಗಳ ಲಕ್ಷಣ. ಆದರೆ, ಆರ್ಯರು ಭರತ ಖಂಡವನ್ನು ಪ್ರವೇಶಿಸುವ ಹೊತ್ತಿಗಾಗಲೇ ಅವರ ಸಾಮಾಜಿಕ ಸಂರಚನೆಯು ಕುಲಕ್ಕಿಂತ ಕೊಂಚ ಭಿನ್ನವಾಗತೊಡಗಿತ್ತು ಎಂದು ನಾಗರಾಜ್ ಅವರು ಗುರುತಿಸುತ್ತಾರೆ. ಆರ್ಯರದ್ದು, ಒಂದೇ ಕುಲವನ್ನಲ್ಲದೆ ಹಲವು ಕುಲಗಳನ್ನು ಆಳುವ ‘ರಾಜನ್ಯ’ವೆಂಬ ರಾಜಪ್ರಭುತ್ವದ ಪರಿಕಲ್ಪನೆಯು ಮೊಳಕೆಯೊಡೆದಿದ್ದ ಸಮುದಾಯವಾಗಿತ್ತು. ಒಂದೇ ಕುಲಕ್ಕೆ ಸೀಮಿತರಾಗಿದ್ದ ಕುಲಪುರೋಹಿತರು ಈಗ ಒಂದು ರಾಜಪ್ರಭುತ್ವದ ಹಾಗು ಹಲವು ಅಧೀನ ಕುಲಗಳ ಪುರೋಹಿತರಾಗಿದ್ದರು.

ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯಗಳಲ್ಲಿ 19% ಹೆಚ್ಚಳ!

ಅಲೆಮಾರಿಗಳು ನೆಲೆಯೂರಿಗರಾಗುವ ಹಾಗು ಕೃಷಿ ಚಟುವಟಿಕೆಯಲ್ಲಿ ಅವರು ಹೆಚ್ಚೆಚ್ಚು ತೊಡಗಲಾರಂಭಿಸಿದ ಆ ಸಂಕ್ರಮಣ ಕಾಲದಲ್ಲಿ ಕುಲ ಎಂಬ ಸಂರಚನೆಯು ಮರೆಗೆ ಸರಿದು ವರ್ಣ ಎಂಬ ಸಂರಚನೆ ರೂಪುಗೊಂಡಿದ್ದನ್ನು ಈ ಕೃತಿಯು ವಿಸ್ತೃತವಾಗಿ ವಿವರಿಸುತ್ತದೆ. ಹೀಗೆ, ಅಪ್ಪಟ ವೈದಿಕ ಪರಿಕಲ್ಪನೆಯಾದ ವರ್ಣಗಳು ಮೊದಲಲ್ಲಿ ಮೂರೇ ಆಗಿದ್ದು, ಆರ್ಯೇತರ ಜನರೊಂದಿಗೆ ಸಂಪರ್ಕ ಹೆಚ್ಚಾದಂತೆ ಶೂದ್ರವೆಂಬ ನಾಲ್ಕನೆಯ ಅಂಗವನ್ನೂ ಪಡೆದುಕೊಂಡಿತು. “ಈ ಜನ ವಿಭಾಗಗಳು ಆ ಹೊತ್ತಿಗೆ ಹುಟ್ಟಿನಿಂದಲೇ ಬೇರೆ ಬೇರೆಯಾಗಿ ಗುರುತಿಸಲ್ಪಡುತ್ತಿದ್ದರೆಂಬುದನ್ನು” (ಪುಟ 44) ಹಾಗು ಆ ಜನ ವಿಭಾಗಗಳಲ್ಲಿ ಇದ್ದ ಮೇಲು-ಕೀಳಿನ ಶ್ರೇಣೀಕರಣವನ್ನು ನಾಗರಾಜರು ವೇದಗಳ ಹಾಗು ಬ್ರಾಹ್ಮಣಗಳ ಆಂತರಿಕ ಆಧಾರಗಳಿಂದ ತೋರಿಸಿಕೊಡುತ್ತಾರೆ. ಪರಿಶುದ್ಧ ಬ್ರಹ್ಮಜ್ಞಾನದ ಕೈದೀವಿಗೆ ಎಂದು ಭಾವಿಸಲಾದ ಉಪನಿಷತ್ತುಗಳೂ ಹೇಗೆ ಈ ಶ್ರೇಣೀಕರಣದ ತಾತ್ವಿಕತೆಯನ್ನು ಮುಂದುಮಾಡುತ್ತವೆ ಎಂದು ಸೋದಾಹರಣವಾಗಿ ವಿವರಿಸಿದ್ದಾರೆ. ಅಲೆಮಾರಿ ಬದುಕಿನ ಪಶು ಸಂಗೋಪನೆಯ ಕಾಲದ ಸರಳ ಪದ್ಧತಿಯಾಗಿದ್ದ ಆಶ್ವಮೇಧವು ಒಂದು ಯಾಗವಾಗಿ ಮಾರ್ಪಟ್ಟ ಸಂಕ್ರಮಣ ಕಾಲದ ಹಾಗು ತದನಂತರದ ಉತ್ತರಭಾರತೀಯ ವ್ಯವಸ್ಥೆಯನ್ನು ಎಳೆಯೆಳೆಯಾಗಿ ಈ ಕೃತಿಯಲ್ಲಿ ಬಿಚ್ಚಿಡಲಾಗಿದೆ.

ವರ್ಣಗಳಿಂದಲೇ ಜಾತಿಗಳು ಹುಟ್ಟಿದವು ಎಂಬ ಏಕಮುಖಿ ಸರಳ ವ್ಯಾಖ್ಯಾನಕ್ಕೆ ಜೋತುಬೀಳದೆ, ವರ್ಣಗಳಿಗೂ ಜಾತಿಗಳಿಗೂ ಸಂಬಂಧವೇ ಇಲ್ಲ ಎಂಬ ಅಪ್ರಾಮಾಣಿಕ ನಿರಾಕರಣೆಯನ್ನೂ ತಾಳದೆ ನಾಗರಾಜರು, ಜಾತಿಗಳು ರೂಪುಗೊಂಡ ಸಂಕೀರ್ಣ ಪರಿಸರ ಹಾಗು ಪ್ರಕ್ರಿಯೆಗಳನ್ನು ಸೂಕ್ಷ್ಮ ಹಾಗು ವಿಸ್ತೃತ ಸಂಶೋಧನೆಯಿಂದ ಗುರುತಿಸಿದ್ದಾರೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಈ ಪ್ರಕ್ರಿಯೆಯಲ್ಲಿ ಪ್ರಧಾನವಾದದ್ದು ಮೂರು: ಆರ್ಯೇತರ ಕುಲಗಳಲ್ಲಿ ರಾಜಪ್ರಭುತ್ವದ ಬೆಳವಣಿಗೆ, ಆ ಚಲನೆಯಲ್ಲಿ ಗಂಗಾ ಬಯಲಿನಿಂದ ವಲಸೆ ಬಂದ ಬ್ರಾಹ್ಮಣರ ಪಾತ್ರ ಹಾಗು ಆ ಪಾತ್ರದ ದೆಸೆಯಿಂದಾಗಿಯೇ ಹುಟ್ಟು ಪಡೆದ ಸ್ಥಳೀಯ ಬ್ರಾಹ್ಮಣ ಉಪ-ಪಂಗಡಗಳು. ವೈದಿಕ ಸಂಪರ್ಕ ಪೂರ್ವದ ದಕ್ಷಿಣಭಾರತದ ಸಾಮಾಜಿಕ ರಚನೆಯ ಸ್ವರೂಪ, ಸಂಪರ್ಕದ ದೆಸೆಯಿಂದುಂಟಾದ ಆಂತರಿಕ ಹಾಗು ಬಾಹ್ಯ ಒತ್ತಡಗಳು, ಅವುಗಳಿಂದಾಗಿ ನಡೆದ ಸಾಮಾಜಿಕ ಮರುರಚನೆ, ಇದರ ಪ್ರಮುಖ ವಿದ್ಯಮಾನಗಳಾದ ಸ್ಥಳೀಯ ಬ್ರಾಹ್ಮಣರ ಹುಟ್ಟು, ಕುಲಾಧಿಪತಿಗಳು ಶಾಸ್ತ್ರಬದ್ಧ ಕ್ಷತ್ರಿಯರಾದ ಮೇಲ್ಚಲನೆ ಹಾಗು ಶೂದ್ರ ವರ್ಣದೊಳಗೆ ಘಟಿಸುತ್ತಿದ್ದ ಸ್ಥಿತ್ಯಂತರಗಳು; ಇವಿಷ್ಟನ್ನು ಚರ್ಚಿಸುತ್ತಲೇ ನಾಗರಾಜರು ಕರ್ನಾಟಕದಲ್ಲಿ ಜಾತಿಗಳ ಉಗಮದ ಸಂಕೀರ್ಣ ಕಥೆಯನ್ನು ಹೇಳುತ್ತಾರೆ.

ಇದನ್ನೂ ಓದಿ: ಜಾತಿಕಾರಣ: ಗ್ರಾಮಪಂಚಾಯಿತಿ ಅಧ್ಯಕ್ಷೆಯನ್ನು ನೆಲದ ಮೇಲೆ ಕೂರಿಸಿದ ಸದಸ್ಯರು!

ಈ ನಿರೂಪಣೆಯಲ್ಲಿ ಬಳಸಲಾದ “ಬ್ರಾಹ್ಮಣ ಪುರುಷರು ಒಂದು ಬುಡಕಟ್ಟಿನೊಡನೆ ನಿರಂತರ ಸಂಬಂಧ ಬೆಳೆಸಿರುವುದು ಇಡೀ ಬುಡಕಟ್ಟನ್ನು ಬ್ರಾಹ್ಮಣ ಸುಮುದಾಯವೆಂದು ಪರಿಗಣಿಸುವುದಕ್ಕೆ ಕಾರಣವಾಗಿರಬಹುದು” (ಪುಟ 91) ಇಂತಹಾ ಒಳನೋಟಗಳು ವಿಮರ್ಶಾರ್ಹವೂ ಆಗಿವೆ. ಹೀಗೆ ನಿರೂಪಿಸುತ್ತ ಹಾಗು ಪ್ರಮೇಯಗಳನ್ನು ಮಂಡಿಸುತ್ತ, ಕರ್ನಾಟಕದಲ್ಲಿ ಕುಲಗಳೇ ಜಾತಿಗಳಾದವೆಂದೋ, ಮೊದಲ ಸಹಸ್ರಮಾನದ ಚರಿತ್ರೆಯಲ್ಲಿ ವರ್ಣ ವ್ಯವಸ್ಥೆಯು ಕುಸಿದಿತ್ತೆಂದೋ, ವರ್ಣ-ಜಾತಿ ವ್ಯವಸ್ಥೆಯು ಕೇವಲ ಗ್ರಾಂಥಿಕ ಜ್ಞಾನವಾಗಿತ್ತೆಂದೋ ಹೇಳುವ ಕೆಲವು ಹೆಸರಾಂತ ವಿದ್ವಾಂಸರ ನಿಲುವುಗಳಿಗೆ ಎದುರುಬದುರುಗೊಂಡು ಸವಾಲುಗಳನ್ನು ಎಸೆಯುತ್ತಾರೆ. ಈ ಮಂಥನ-ಕರ್ಷಣದಿಂದ ಅವರು, ಕೆಲವು ವಿದ್ವಾಂಸರ ಹೊಳಹುಗಳನ್ನೂ ಆಧರಿಸಿ ಕಂಡುಕೊಂಡ ಸತ್ಯವೆಂದರೆ, ಕರ್ನಾಟಕದ ವರ್ಣವ್ಯವಸ್ಥೆಯಲ್ಲಿ ಗುರುತಿಸಬಹುದಾದದ್ದು ಮೂರೇ ವಿಭಾಗಗಳು ಎಂಬುದಾಗಿದೆ. ಅವು ಬ್ರಾಹ್ಮಣ, ಶೂದ್ರ ಹಾಗು ಅಸ್ಪೃಶ್ಯ.

ಜಾತಿ ಶ್ರೇಣೀಕರಣವು ಕರ್ನಾಟಕದ ಮೂಲೆಮೂಲೆಗೂ ಪಸರಿಸಿದ್ದು ಹೇಗೆ ಎಂಬುದನ್ನು ಈ ಕೃತಿಯು ಮೂರು ಹಿನ್ನೆಲೆಗಳಿಂದ ಚರ್ಚಿಸುತ್ತದೆ – ಪೌರಾಣಿಕ ಹಿಂದೂ ಧರ್ಮವೆಂದು ಕರೆಯಲಾಗುವ ಕಾಲಮಾನದಲ್ಲಿ ರಚನೆಗೊಂಡ ಧರ್ಮಶಾಸ್ತ್ರಗಳು, ಆ ಕಾಲದ ಯುಗಧರ್ಮವನ್ನು ರೂಪಿಸಿದ ಆರ್ಯೇತರ ದೇವತೆಗಳ ಆರ್ಯೀಕರಣ ಹಾಗು ಪುರಾಣೀಕರಣದ ಪ್ರಕ್ರಿಯೆಗಳು ಮತ್ತು ಈ ಧಾರ್ಮಿಕ-ಸಾಮಾಜಿಕ ಸಂರಚನೆಯನ್ನು ಬಲಪಡಿಸಲು ನೆರವಾದ ದೇಗುಲಗಳು. ಈ ಎಲ್ಲದರಲ್ಲೂ ಬ್ರಾಹ್ಮಣರು ಸಾಮಾಜಿಕ ಸಂರಚನೆಯ ಮೇಲ್ಪಂಕ್ತಿಯಲ್ಲಿರುವಂತೆ ಹಾಗು ರಾಜಪ್ರಭುತ್ವವು ಈ ಸಂರಚೆಯನ್ನು ಕಾಯ್ದಿಟ್ಟುಕೊಳ್ಳುವಂತೆ ನೋಡಿಕೊಳ್ಳಲಾಗಿದೆ. ಧರ್ಮಶಾಸ್ತ್ರಗಳ ಭಾಷೆಯನ್ನರಿಯದ ಜನರಲ್ಲಿ ಧರ್ಮಶಾಸ್ತ್ರಗಳು ವಿವರಿಸುವ ಜೀವನ ತಾತ್ವಿಕತೆಯನ್ನು ಬಿತ್ತುವಲ್ಲಿ ಪುರಾಣಗಳು ಮತ್ತು ದೇಗುಲಗಳು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದವು ಎಂಬುದುನ್ನು ನಾಗರಾಜರು ಮನೋಜ್ಞವಾಗಿ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಬಹುಸಂಖ್ಯಾತ ಜಾತಿಗಳನ್ನು ಅಸ್ಪೃಶ್ಯ ಜಾತಿಗಳೊಂದಿಗೆ ಸೇರಿಸಿರುವುದು ರಾಜಕೀಯ ಷಡ್ಯಂತ್ರ!

ಗ್ರಾಮಗಳ ಗೌಡ-ಶಾನುಭೋಗ ಆಡಳಿತ ವ್ಯವಸ್ಥೆಯೂ ಈ ತಾತ್ವಿಕತೆಯ ಪ್ರಸರಣಕ್ಕೆ ಪೂರಕವಾಗೇ ಇದ್ದಿತ್ತು. ಹೀಗೆ ಎಲ್ಲೆಡೆಗೊಂಡ ಈ ಶ್ರೇಣೀಕರಣ ವ್ಯವಸ್ಥೆಯು ಸ್ವಾಯಂಭುವನ ಮನುಧರ್ಮಶಾಸ್ತ್ರದಿಂದ ಪ್ರೇರಣೆ ಪಡೆದಿದೆಯೇ? ಪ್ರಾಚೀನ ಭಾರತೀಯ (ತನ್ಮೂಲಕ ಕರ್ನಾಟಕದ) ಜೀವನದಲ್ಲಿ ಮನುಧರ್ಮಶಾಸ್ತ್ರದ ಪಾತ್ರವೇ ಇರಲಿಲ್ಲ ಅಥವಾ ಅದರ ಪ್ರಭಾವವು ಗೌಣವಾಗಿತ್ತು ಎಂಬ ಅಭಿಪ್ರಾಯವು ಮುನ್ನೆಲೆಗೆ ಬರುತ್ತಿರುವ ಸಂದರ್ಭದಲ್ಲಿ ಈ ಪ್ರಶ್ನೆಯು ಪ್ರಾಮುಖ್ಯತೆಯನ್ನು ಪಡೆದಿದೆ. ನಾಗರಾಜ್ ಅವರು ಈ ಪ್ರಶ್ನೆಯನ್ನು ಧೈರ್ಯವಾಗಿಯೇ ಸ್ವೀಕರಿಸಿ, ಶಾಸನಗಳು ಹಾಗು ಕಾವ್ಯಗಳಿಂದ ಉಲ್ಲೇಖಗಳನ್ನು ನೀಡುತ್ತ, ಪ್ರಾಚೀನ ಕರ್ನಾಟಕದ ಜನಜೀವನದಲ್ಲಿ ಸ್ವಾಯಂಭುವ ಮನುಧರ್ಮಶಾಸ್ತ್ರದ ಪ್ರಸ್ತುತತೆ ಹಾಗು ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ.

ತಮ್ಮ ಕೊನೆಯ ಪ್ರಬಂಧದಲ್ಲಿ ನಾಗರಾಜರು ಕರ್ನಾಟಕದಲ್ಲಿ ಅಸ್ಪೃಶ್ಯತೆಯ ಉಗಮ ಹಾಗು ಅದರ ಹಿಂದಿನ ಕಾರಣಗಳನ್ನು ಚರ್ಚಿಸಿದ್ದಾರೆ. ಪ್ರಾಚೀನ ಹಾಗು ಮುಖ್ಯವಾಗಿ ಮಧ್ಯಕಾಲೀನ ಕರ್ನಾಟಕದಲ್ಲಿ ಇದ್ದ ಅಸ್ಪೃಶ್ಯತೆಯ ಆಚರಣೆ ಹಾಗು ಪಂಚಮರ ಜೀವನಾವಸ್ಥೆಯನ್ನು ಹಲವು ಆಧಾರಗಳನ್ನು ಒದಗಿಸುತ್ತ ಚರ್ಚಿಸುವ ಇವರು, ಅಸ್ಪೃಶ್ಯತೆ ಎಂಬ ಪರಿಕಲ್ಪನೆಯ ಹುಟ್ಟಿಗೆ ಕಾರಣವಾದವುಗಳು ಎಂದು ಮಡಿ-ಮೈಲಿಗೆ ವ್ಯಾಖ್ಯಾನ, ಆಹಾರ ಪದ್ಧತಿ ಹಾಗು ದೇವರುಗಳು ಮತ್ತವರ ಪೂಜಾ ಪದ್ಧತಿಗಳನ್ನು ಗುರುತಿಸುತ್ತಾರೆ. ಈ ಪ್ರಬಂಧ ಮಂಡನೆಯ ಶಕ್ತಿಯಿರುವುದು, ಪಂಚಮರು ಹೊಲಸಾಗಿದ್ದುದ್ದರಿಂದಲೇ ಅವರನ್ನು ನಾವು ಮುಟ್ಟಿಸಿಕೊಳ್ಳುತ್ತಿರಲಿಲ್ಲ ಎಂಬ ಕೆಲ ಸ್ವಘೋಷಿತ ‘ಸುಧಾರಿತ’ ಮೇಲ್ವರ್ಗದವರ ವಾದವನ್ನು ತಾತ್ವಿಕವಾಗಿಯೇ ಮುರಿದುಹಾಕುವುದರಲ್ಲಿ. ಅಂದರೆ, ಅಸ್ಪೃಶ್ಯತೆಯ ತಾತ್ವಿಕ ಪರಿಕಲ್ಪನೆ, ಅದರ ಅನುಷ್ಠಾನ ಮತ್ತು ಇದರಿಂದಾಗಿ ಉಂಟಾದ ಸಂಪನ್ಮೂಲಗಳ ಕೊರತೆ ಹಾಗು ಭೌತಿಕ ಒತ್ತಡಗಳೇ ಮೇಲ್ವರ್ಗದವರ ಕಣ್ಣಲ್ಲಿ ‘ಅಸ್ಪೃಶ್ಯ’ ಎನ್ನಬಹುದಾದ ಜೀವನಕ್ರಮವು ಪಂಚಮರಲ್ಲಿ ರೂಪುಗೊಂಡಿತು.

ಇದನ್ನೂ ಓದಿ: ತಮಿಳುನಾಡು ಶಾಸಕನ ಅಂತರ್ಜಾತಿ ವಿವಾಹದ ವಿಡಿಯೋ ವೈರಲ್: ಯುವತಿಯ ತಂದೆ ಆತ್ಮಹತ್ಯೆಗೆ ಯತ್ನ!

ಹೀಗೆ, ಅಸ್ಪೃಶ್ಯತೆ ಎಂಬ ಪಕ್ಷಪಾತಿ ದೃಷ್ಟಿಕೋನ ಹಾಗು ಅನುಷ್ಠಾನ; ಇವೆರಡೂ ಹೇಗೆ ನೂರಾರು ವರ್ಷಗಳು ಬಹುಸಂಖ್ಯಾತ ಜನಸಮುದಾಯವನ್ನು ಆರ್ಥಿಕ, ಸಾಮಾಜಿಕ ಹಾಗು ಸಾಂಸ್ಕೃತಿಕ ಅಂಚಿಗೆ ತಳ್ಳಿತ್ತು ಎಂಬುದನ್ನು ನಾಗರಾಜರು ವಿಸ್ತಾರವಾಗಿ ಚರ್ಚಿಸುತ್ತಾರೆ.

ಉಳಿಯುವ ಕೆಲವು ಪ್ರಶ್ನೆಗಳು: ಕರ್ನಾಟಕದಲ್ಲಿ ಜಾತಿ ಏರ್ಪಾಡಿನ ಮತ್ತು ಅಸ್ಪೃಶ್ಯತೆಯ ಉಗಮವನ್ನು ಒಂದು ಸಮಷ್ಠಿ ದೃಷ್ಟಿಯಲ್ಲಿ ಕಟ್ಟಿಕೊಡಲು ಪ್ರಯತ್ನಿಸುವ ಈ ಕೃತಿಯು, ತಾನು ಸಾಧಿಸಲು ಬಯಸಿದ ಆ ಸಮಷ್ಠಿಗೆ ಬಳಸಲಾದ ಸರಳೀಕರಣಗಳಿಂದಾಗಿಯೇ ಕೆಲವು ಪ್ರಶ್ನೆಗಳನ್ನು ಉತ್ತರಿಸದೆ ಹಾಗೆಯೇ ಹೋಗುತ್ತದೆ. ಶೂದ್ರರ ಹಾಗು ಅಸ್ಪೃಶ್ಯರ ನಡುವೆ ಸ್ಪಷ್ಟವಾದ ಪ್ರತ್ಯೇಕ ಗೆರೆ ಯಾವಾಗ ಮತ್ತು ಹೇಗೆ ಉಂಟಾಯಿತು? ಎಂಬ ಪ್ರಶ್ನೆಯೂ ಅವುಗಳಲ್ಲೊಂದು. ಅಸ್ಪೃಶ್ಯರಿಗಿಂತ ತಾವು ಮೇಲೆ ಎಂದು ಜಾತಿವ್ಯವಸ್ಥೆಯು ಶೂದ್ರರಲ್ಲಿ ಮೂಡಿಸಿದ ಭಾವವೊಂದೇ ಈ ಪ್ರತ್ಯೇಕತೆಯನ್ನು ನೂರಾರು ವರ್ಷಗಳು ಸೃಷ್ಟಿಸಿರಲಾರದು. ಇನ್ನು, ಅವರ ಸಮಷ್ಠಿ ದೃಷ್ಟಿ ಎಳೆಸಿದ ಸರಳೀಕರಣವು ಕೆಲವು ಹೊಸ ಪ್ರಶ್ನೆಗಳನ್ನೂ, ಸಂಶಯಗಳನ್ನೂ ಹುಟ್ಟುಹಾಕುತ್ತದೆ. ಎತ್ತುಗೆಗೆ, ಬ್ರಾಹ್ಮಣ ವರ್ಣದೊಳಗೇ ರೂಪುಗೊಂಡ ಒಳಪಂಗಡಗಳು ಹಾಗು ಉಪಜಾತಿಗಳು, ಇತರೆ ವರ್ಣಗಳೊಳಗೆ ಜಾತಿ – ಉಪಜಾತಿಗಳು ಮೂಡುವಲ್ಲಿ ಪ್ರಭಾವ ಬೀರಿತು ಎಂಬ ನಾಗರಾಜರ ನಿಲುವು. ಆದರೆ, ಸಮಷ್ಠಿಭಾವ ಅಪೇಕ್ಷಿಸುವ ಸರಳೀಕರಣದ ಸಮಸ್ಯೆಗಳು, ಇತಿಹಾಸದ ಎಲ್ಲಾ ವಿದ್ವತ್ಪೂರ್ಣ ಸಂಕಥನಗಳ ಗರ್ಭದಲ್ಲೇ ಭ್ರೂಣರೂಪದಲ್ಲಿ ಅಡಗಿರುತ್ತವೆ, ಅಲ್ಲವೇ?

ಇದನ್ನೂ ಓದಿ: ’ಜಾತ್ಯಾತೀತರು’ ಎಂದ ದಲಿತ ಕುಟುಂಬಕ್ಕೆ ಜಾತಿ ಪ್ರಮಾಣಪತ್ರ ನಿರಾಕರಣೆ!

ಈ ಕೃತಿಯ ಕಸುವು: ಈ ಕೃತಿಯು ಪಸ್ತುತ ಹಾಗು ವಿಶಿಷ್ಟ ಎನಿಸಿಕೊಳ್ಳುವುದು ಮೂರು ಕಾರಣಗಳಿಗೆ. ಒಂದು- ಕರ್ನಾಟಕದ ಜಾತಿ ಪದ್ಧತಿಯ ಉಗಮದ ಕುರಿತು ವಸ್ತುನಿಷ್ಠ ಸಂಶೋಧನೆಯ ಮೂಸೆಯಿಂದ ಮೂಡಿದ ಮೊಟ್ಟಮೊದಲ ಸಮಗ್ರ ಅಧ್ಯಯನವಿದು. ಇಲ್ಲಿ ಮಂಡಿಸಲಾದ ಬಹುತೇಕ ವಿಚಾರಗಳನ್ನು ಹಲವು ವಿದ್ವಾಂಸರು ತಮ್ಮ ಬಿಡಿ ಬಿಡಿ ಲೇಖನಗಳಲ್ಲಿ, ಪುಸ್ತಕಗಳ ಬಿಡಿ ಭಾಗಗಳಲ್ಲಿ ಈಗಾಗಲೇ ಮಂಡಿಸಿದ್ದಾರೆ ಹಾಗು ನಾಗರಾಜರು ಅವೆಲ್ಲವನ್ನೂ ಗುರುತಿಸಿ, ಸೂಕ್ತವಾಗಿ ಉಲ್ಲೇಖಿಸಿದ್ದಾರೆ ಕೂಡ. ಆದರೆ, ನಾಗರಾಜರ ನೈಪುಣ್ಯ ಕಾಣುವುದು, ಆ ಎಲ್ಲಾ ವಿಚಾರಗಳನ್ನು ಸಮಷ್ಠಿಯ ಪರಿಪ್ರೇಕ್ಷ್ಯದೊಳಗೆ ತಂದು ಒಂದು ಸಂಕಥನವನ್ನು ಕಟ್ಟುವುದರಲ್ಲಿ. ಈ ಕೆಲಸವನ್ನು ಬಹುಶಃ ಕನ್ನಡದಲ್ಲಿ ಯಾರೂ ಇಲ್ಲಿಯವರೆಗೆ ಮಾಡಿರಲಿಲ್ಲ. ಎರಡು – ಈ ಕೃತಿಯು ನಾಗರಾಜರ ಅಪಾರ ಓದು, ಪಾಂಡಿತ್ಯ ಹಾಗು ವಿಶ್ಲೇಷಣಾ ಸಾಮರ್ಥ್ಯದ ದ್ಯೋತಕವಾಗಿರುವುದು. ಈ ಕೃತಿಯ ಟಿಪ್ಪಣಿ ಹಾಗು ಉಲ್ಲೇಖ ಪಟ್ಟಿಯಲ್ಲಿರುವ ವಿಚಾರಗಳನ್ನೂ, ಪುಸ್ತಕಗಳನ್ನೂ ಅರಸುತ್ತಾ ಹೋದರೆ ಪಾಮರನೂ ಈ ಪ್ರಯತ್ನದಿಂದಲೇ ವಿದ್ವಾಂಸನಾದಾನು! ಮೂರು – ವಸ್ತುನಿಷ್ಠತೆ ಹಾಗು ವಿಚಾರ ಮಂಡನೆಯಲ್ಲಿ ತರ್ಕಶುದ್ಧತೆಗೆ ಆದ್ಯತೆ ನೀಡಿರುವುದು.

ಮುಗಿಸುವ ಮುನ್ನ : ಪ್ರಸ್ತುತ ವಿಮರ್ಶೆಯು ತೌಲನಿಕ ಅಧ್ಯಯನವನ್ನು ಮಾಡಿಲ್ಲ. ಮಾಡಬೇಕಿತ್ತು ಅನಿಸುತ್ತದೆ. ಬಹುಮುಖ್ಯವಾಗಿ ಅಂಬೇಡ್ಕರ್, ಎಡ ಪಂಥದ ಇನ್ನೊಂದು ತುದಿಯಲ್ಲಿ ಕಾಣಿಸಿಕೊಂಡಿದ್ದ ಸಾಕಿ ಹಾಗು ಅನುರಾಧಾ ಗಾಂಧಿ ಮತ್ತು ಜಾತಿಯ ಕುರಿತು ಸರಣಿಗಳನ್ನು ಪ್ರಸ್ತುತ ಹೊರತರುತ್ತಿರುವ ಖ್ಯಾತ ಇತಿಹಾಸತಜ್ಞ ಮನು ವಿ ದೇವದೇವನ್ – ಇವರ ಚಿಂತನೆಗಳೊಂದಿಗೆ ಹೋಲಿಸಿ ನೋಡುವ ಅಗತ್ಯವಂತೂ ಇತ್ತು. ಇದು ಆಗದೇ ಇರುವುದು ಪ್ರಸ್ತುತ ವಿಮರ್ಶೆಯ ಬಹುದೊಡ್ಡ ಕೊರತೆ ಎಂದೇ ಭಾವಿಸಿದ್ದೇನೆ.
ಕೊನೆಯದಾಗಿ ಎರಡು ಮಾತುಗಳು. ಜಿ ಎನ್ ನಾಗರಾಜ್ ಅವರು ಓದಿನ ಬಕಾಸುರ ಇದ್ದಂತೆ. ಬಲಪಂಥೀಯರ ಕಣ್ಣಿಗೆ ಇವರು ಅಸುರರಾಗಿ ಕಾಣಬಹುದು. ಇಷ್ಟು ದಿನ ಮೈಸೂರಿನಲ್ಲಿ ಮಹಿಷಾಸುರನ ಪೂಜೆಗೆ ಅವಕಾಶವಿತ್ತು. ಈ ವರ್ಷದಿಂದ ಮೈಸೂರಿನಲ್ಲಿ ಮಹಿಷನ ಹೆಸರು ಹೇಳುವುದೂ ಅಪಾಯಕಾರಿಯಾಗಿದೆ. ಇಂತಹಾ ಸಂದರ್ಭದಲ್ಲಿ ನಾಗರಾಜ್ ಅಂಥವರ ಓದಿನ ಬಕಾಸುರರನ್ನು ಗಮನಿಸುವ, ಚರ್ಚಿಸುವ ಹಾಗು ರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಿದೆ.

ಅಮರ ಬಿ

(ಎಂಜಿನಿಯರಿಂಗ್ ಪದವೀಧರರಾದ ಅಮರ, ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಹೇಳಿಕೊಡುವುದರ ಜೊತೆಗೆ ಕರ್ನಾಟಕ-ಕನ್ನಡ ಕೇಂದ್ರಿತ ಹೋರಾಟಗಳಲ್ಲಿ ಆಸಕ್ತಿ ವಹಿಸಿದ್ದವರು. ಈಗ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ)


ಇದನ್ನೂ ಓದಿ: ನಾವೆಲ್ಲರು ಓದಲೇಬೇಕಾದ ಪುಸ್ತಕ: ‘ಎಲ್ಲರಿಗಾಗಿ ಸ್ತ್ರೀವಾದ – ಆಪ್ತತೆಯ ರಾಜಕಾರಣ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ಗೆ ಯಾರೂ ದೇಶ ಪ್ರೇಮದ ಪಾಠ ಹೇಳಿ ಕೊಡುವ ಅಗತ್ಯವಿಲ್ಲ: ಸಚಿವ ಪರಮೇಶ್ವರ್

0
ರಾಜ್ಯಸಭೆ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ನಾಸಿರ್ ಹುಸೇನ್ ಬೆಂಬಲಿಗರು 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. ಇಂದು...