ದಲಿತ ಸಮುದಾಯಕ್ಕೆ ಸೇರಿದ 55 ವರ್ಷದ ರಾಮಸಾಮಿ ಮತ್ತು ಅವರ ಪತ್ನಿ 48 ವರ್ಷದ ಅರುಕ್ಕಾಣಿಯನ್ನು ಶನಿವಾರ ಮುಂಜಾನೆ ಹತ್ಯೆ ಮಾಡಿದ ಘಟನೆ ತಮಿಳುನಾಡಿನ ಕೊಡುಮುಡಿಯಲ್ಲಿ ಜರುಗಿದೆ. ಕೊಲೆಯ ಆರೋಪಿ ನಾಡಾರ್ ಸಮುದಾಯದ ಸೂರಿಯಾ ಎಂಬ ವ್ಯಕ್ತಿಯನ್ನು ಈರೋಡ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕೊಡುಮುಡಿಯ ಸೂರಿಯಾ ಎಂಬ ಯುವಕ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ಈ ದಂಪತಿಗಳು ಪ್ರಶ್ನಿಸಿದ್ದರು. ಇದರ ನಂತರ ಆರೋಪಿ ಇಬ್ಬರನ್ನೂ ಹತ್ಯೆಗೈದಿದ್ದಾನೆ.
ಈರೋಡ್ ಪೊಲೀಸರ ಪ್ರಕಾರ, “ಶುಕ್ರವಾರ ರಾತ್ರಿ, ಕೊಲೆಯಾದ ದಂಪತಿಯ ಮಗಳು, ಸೊಸೆ ಮತ್ತು ಮೊಮ್ಮಕ್ಕಳು ದಾರಿಯಲ್ಲಿ ಹೋಗುತ್ತಿರುವಾಗ ಸೂರಿಯಾ ಮತ್ತು ಅವನ ಕೆಲವು ಸ್ನೇಹಿತರು ಪಟಾಕಿ ಸಿಡಿಸುತ್ತಿದ್ದರು. ಸೂರಿಯಾ ಮತ್ತು ಅವನ ಸ್ನೇಹಿತರು ದಲಿತ ಕುಟುಂಬಕ್ಕೆ ಸೇರಿದ ಈ ಮಹಿಳೆಯ ಬಗ್ಗೆ ಲೈಂಗಿಕ ಮಾತುಗಳಿಂದ ಚುಡಾಯಿಸಿದ್ದಾನೆ. ಇದರಿಂದ ಕುಪಿತಗೊಂಡ ಕುಟುಂಬವರ್ಗ ಮೇಲುಜಾತಿಯ ಈ ಯುವಕರನ್ನು ಪ್ರಶ್ನಿಸಿದೆ. ಆಗ ಜಗಳ ಆರಂಭವಾಗಿದೆ. ನಂತರ ಜಗಳ ತೀವ್ರವಾಗಿ ರಾಮಸಾಮಿ ಕುಟುಂಬದ ಸಂಬಂಧಿಕರು ಮತ್ತು ನೆರೆಹೊರೆಯವರು ಜೊತೆಯಾಗಿ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇರಳ: ದಲಿತ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್!
ಸೂರಿಯ ತನ್ನ ಮನೆಗೆ ಹಿಂತಿರುಗಿ ತನ್ನ ತಂದೆಗೆ ವಿಷಯ ತಿಳಿಸಿದ್ದಾನೆ. ಆತನ ತಂದೆ ಸೂರಿಯನನ್ನು ಪ್ರಚೋದಿಸಿ, “ದಲಿತ ಕುಟುಂಬದವರಿಂದ ಥಳಿತಕ್ಕೊಳಗಾಗಿದ್ದಕ್ಕೆ ನಾಚಿಕೆಯಾಗಬೇಕು” ಎಂದು ಹೇಳಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. “ಸೂರಿಯ ತನ್ನ ಕೆಲವು ಸ್ನೇಹಿತರೊಂದಿಗೆ ಆಯುಧಗಳನ್ನು ತೆಗೆದುಕೊಂಡು ರಾಮಸಾಮಿಯ ಮನೆಗೆ ಹೋಗಿ, ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ದಂಪತಿಗಳ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ” ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಸೂರಿಯನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಆತನ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇತರರನ್ನು ಹುಡುಕುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್: ಬ್ರಾಹ್ಮಣ ವಿರೋಧಿ ಬರಹಕ್ಕೆ ದಲಿತ ವಕೀಲನ ಹತ್ಯೆ – SIT ತನಿಖೆಯಲ್ಲಿ ಬಹಿರಂಗ