ತಮಿಳುನಾಡು-ಕೇರಳ ಗಡಿಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಫೋಟಕಗಳನ್ನು ಪಾಲಕ್ಕಾಡ್‌ನ ವಲಯಾರ್‌ನಲ್ಲಿ ವಶಪಡಿಸಿಕೊಳ್ಳಲಾಗಿದ್ದು, 7,500 ಡಿಟೋನೇಟರ್‌ಗಳು ಮತ್ತು 7,000 ಜೆಲಾಟಿನ್ ಸ್ಟಿಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಲಯಾರ್ ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನ ಈರೋಡ್‌ನಿಂದ ಎರ್ನಾಕುಲಂ ಜಿಲ್ಲೆಯ ಅಂಗಮಾಲಿಗೆ ಸಾಗಿಸಲಾಗುತ್ತಿದ್ದ ಟೊಮೆಟೊ ಸಾಗಣೆಯ ವಾಹನದಲ್ಲಿ ಅಡಗಿಸಿಟ್ಟು ಸ್ಫೋಟಕಗಳನ್ನು ಸಾಗಿಸಲಾಗುತ್ತಿತ್ತು. ತಮಿಳುನಾಡು ಮೂಲದ ಇಬ್ಬರನ್ನು ಬಂಧಿಸಲಾಗಿದ್ದು, ಬಂಧಿತರನ್ನು ಟ್ರಕ್‌ನ ಮಾಲೀಕರೂ ಆಗಿರುವ ಪ್ರಭು (38) ರವಿ(30) ಎಂದು ಗುರುತಿಸಲಾಗಿದೆ. ಸ್ಫೋಟಕ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ್ದ ಫೇಸ್‌ಬುಕ್‌ನ ಅಂಖಿದಾಸ್: ವಾಲ್ ಸ್ಟ್ರೀಟ್ ಜರ್ನಲ್ ತೆರೆದಿಟ್ಟ ಸ್ಪೋಟಕ ಸತ್ಯ!
ಘಟನೆಯ ವೀಡಿಯೊ ಕ್ಲಿಪಿಂಗ್‌ನಲ್ಲಿ ಜಿಲೆಟಿನ್‌ಗಳು, ತಿಳಿ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಹಾಳೆಗಳಲ್ಲಿ ಸುತ್ತಿರುವುದನ್ನು ತೋರಿಸುತ್ತದೆ. ಟೊಮೆಟೊ ಸಾಗಿಸುವ ಪ್ಲಾಸ್ಟಿಕ್ ಪೆಟ್ಟಿಗೆಗಳ ನಡುವೆ, ಸ್ಫೋಟಕಗಳನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ಸಾಗಿಸಲಾಗುತ್ತಿತ್ತು.
ಮಿನಿ ಲಾರಿಯಿಂದ ಒಟ್ಟು 35 ಪೆಟ್ಟಿಗೆಗಳ ಭಾರಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಭಾನುವಾರ ಮುಂಜಾನೆ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಹೇಳಿಕೆಗಳನ್ನು ದಾಖಲಿಸಿದ್ದೇವೆ ಹಾಗೂ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ತನಿಖೆ ಮಾಡುತ್ತಿದ್ದೇವೆ” ಎಂದು ವಲಯಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಮಾತನ್ನು ಉಲ್ಲೇಖಿಸಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಇದನ್ನೂ ಓದಿ: ಬಿಜೆಪಿ-ಫೇಸ್‌ಬುಕ್ ಸಖ್ಯ: ಹುದ್ದೆ ತ್ಯಜಿಸಿದ ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖಿದಾಸ್!